ಅಪರಿಚಿತ ವಾಹನ ಡಿಕ್ಕಿ, ಪಾದಚಾರಿ ಸಾವು
ಹಾಸನ: ಅಪರಿಚಿತ ವಾಹನ ಡಿಕ್ಕಿ ಮಾಡಿದ ಪರಿಣಾಮ ಪಾದಚಾರಿ ಸಾವನ್ನಪ್ಪಿರುವ ಘಟನೆ ತಾಲೂಕಿನಲ್ಲಿ ಶುಕ್ರವಾರ ನಡೆದಿದೆ. ತಾಲೂಕಿನ ಶಾಂತಿಗ್ರಾಮ ಹೋಬಳಿ, ರಾಗಿಮುದ್ದನಹಳ್ಳಿ ಗ್ರಾಮದ ವಾಸಿ ತಿಮ್ಮಪ್ಪ ಸಾವನ್ನಪ್ಪಿದ ದುರ್ದೈವಿ. ತಿಮ್ಮಪ್ಪ ಅವರು ಕೆಲಸ ನಿಮಿತ್ತ ಹಾಸನಕ್ಕೆ ಬಂದಿದ್ದು, ಹಾಸನದಿಂದ ಶಾಂತಿಗ್ರಾಮಕ್ಕೆ ಬಸ್ಸಿನಲ್ಲಿ ಬಂದು ತಮ್ಮ ಗ್ರಾಮಕ್ಕೆ ಹೋಗಲು ಬಿ.ಎಂ. ರಸ್ತೆ ಮಡೆನೂರು ಗ್ರಾಮದ ಅಣ್ಣೇಗೌಡ ರವರ ಮನೆಯ ಹತ್ತಿರ ಹೋಗುತ್ತಿದ್ದಾಗ ಹಿಂಬದಿಯಿಂದ ಬಂದ ವಾಹನದ ಚಾಲಕನ ನಿರ್ಲಕ್ಷ್ಯತೆಯಿಂದ ಡಿಕ್ಕಿ ಹೊಡೆದ ಪರಿಣಾಮ ತಿಮ್ಮಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪುತ್ರ ವೆಂಕಟೇಶ್ ಅವರು ಶಾಂತಿಗ್ರಾಮ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಜೂಜು: 9 ಜನರ ಬಂಧನ, ನಗದು ವಶ
ಪ್ರತ್ಯೇಕ ಪ್ರಕರಣದಲ್ಲಿ ಆಲೂರಿನ ಅಕ್ರಮವಾಗಿ ಜೂಜಾಡುತ್ತಿದ್ದ 9 ಜನರನ್ನು ಬಂಧಿಸಿರುವ ಘಟನೆ ಇತ್ತೀಚೆಗೆ ನಡೆದಿದೆ. ಆಲೂರು ತಾಲ್ಲೂಕಿನ ದಿಂಡಘಟ್ಟ ಗ್ರಾಮದ ಚನ್ನಹಳ್ಳಿ ಜಗದೀಶ್ರವರ ಜಮೀನಿನಲ್ಲಿ ಅಂದರ್ ಬಾಹರ್ ಜೂಜಾಟಾಡುತ್ತಿದ್ದಾಗ ಆಲೂರು ಪೊಲೀಸ್ ಠಾಣೆ ಇನ್ಸ್ಪೆಕ್ಟರ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ದಾಳಿ ನಡೆಸ ಜೂಜಾಡುತ್ತಿದ್ದ ಪರಮಶಿವಯ್ಯ (50), ನಯನ (40), ಶಿವಪ್ಪ (38), ಮಂಜಚಾರಿ (40) ಮತ್ತು ಶಿವಪ್ಪ (45) ಎಂಬವರನ್ನು ಬಂಧಿಸಿದ್ದು, ಜೂಜಾಟಾದಲ್ಲಿ ಪಣಕ್ಕಿಟ್ಟದ್ದ ಸುಮಾರು ರು. 6,250 ನಗದನ್ನು ವಶಪಡಿಸಿಕೊಂಡಿದ್ದಾರೆ. ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮತ್ತೊಂದು ಪ್ರಕರಣದಲ್ಲಿ ತಾಲ್ಲೂಕಿನ ಕಣತ್ತೂರು ಗ್ರಾಮದ ವಾಸಿ ಸೋಮಣ್ಣ ರವರ ಮನೆಯ ಹಿಂಭಾಗದಲ್ಲಿ ಅಂದರ್ ಬಾಹರ್ ಜೂಜಾಟಾಡುತ್ತಿದ್ದಾಗ, ಪಿಎಸ್ಐ ತಿಮ್ಮಶೆಟ್ಟಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ದಾಳಿ ನಡೆಸಿ ಕೃಷ್ಣೇಗೌಡ (58), ರವಿಚಂದ್ರ (40), ಸೋಮಣ್ಣ (56) ಮತ್ತು ರಾಜೇಶ್ (23) ಎಂಬವರನ್ನು ಬಂಧಿಸಿದ್ದು, ಜೂಜಾಟಾದಲ್ಲಿ ಪಣಕ್ಕಿಟ್ಟದ್ದ ಸುಮಾರು 760 ರು. ನಗದನ್ನು ವಶಪಡಿಸಿಕೊಂಡಿದ್ದಾರೆ. ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟ್ಕಾ: ಬಂಧನ
ಮಟ್ಕಾ ಜೂಜಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿರುವ ಘಟನೆ ಅರಸೀಕೆರೆಯಲ್ಲಿ ನಡೆದಿದೆ. ಪಟ್ಟಣದ ಹುಳಿಯಾರ್ ವೃತ್ತದಲ್ಲಿ ಮಟ್ಕಾ ಜೂಜಾಟಾಡುತ್ತಿದ್ದಾಗ ನಗರ ಠಾಣೆಯ ಇನ್ಸ್ಪೆಕ್ಟರ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ದಾಳಿ ನಡೆಸಿ ಮಟ್ಕಾ- ಜೂಜಾಡುತ್ತಿದ್ದ ಅಪ್ಸರ್ (48)ಎಂಬವನನ್ನು ಬಂಧಿಸಿದ್ದು, ಮಟ್ಕಾ-ಜೂಜಾಟದಲ್ಲಿ ಪಣಕ್ಕಿಟ್ಟಿದ್ದ ಸುಮಾರು ರು. 1025 ನಗದನ್ನು ವಶಪಡಿಸಿಕೊಂಡಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯಮಟ್ಟದ ವಸ್ತು ಪ್ರದರ್ಶನ ಮುಕ್ತಾಯ
ಹಾಸನ: ರಾಜ್ಯ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಮತ್ತು ಶಿಕ್ಷಕರ ವಿಜ್ಞಾನ ವಸ್ತು ಪ್ರದರ್ಶನ ಶನಿವಾರ ಮುಕ್ತಾಯಗೊಂಡಿತು. ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ನಿರ್ದೇಶನಾಲಯ, ಜಿಲ್ಲಾ ಪಂಚಾಯ್ತಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ, ರಾಜ್ಯ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಮತ್ತು ಶಿಕ್ಷಕರ ವಿಜ್ಞಾನ ವಸ್ತು ಪ್ರದರ್ಶನಗಳ ಸಂಯುಕ್ತಾಶ್ರಯದಲ್ಲಿ ಕಳೆದ ಗುರುವಾರ ನಗರದ ಗಂಧದಕೋಠಿಯ ಪ್ರಧಾನ ಮತ್ತು ವಿಭಜಿತ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ರಾಜ್ಯಮಟ್ಟದ ವಿಜ್ಞಾನ ವಸ್ತುಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮೈಸೂರು, ದಾರಾವಾಡ, ಹುಬ್ಬಳಿ, ಬೆಂಗಳೂರು, ಮಂಡ್ಯ, ಚಿಕ್ಕಮಗಳೂರು, ಕೊಡಗು, ರಾಮನಗರ, ತುಮಕೂರು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳ ಶಾಲೆಗಳಿಂದ ಮಕ್ಕಳು ಭಾಗವಹಿಸಿ ವಸ್ತುಪ್ರದರ್ಶನ ನಡೆಸಿದರು.
ನಾಳೆ ಪ್ರತಿಭಾ ಕಾರಂಜಿ
ಹಾಸನ: ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ಡಿಸೆಂಬರ್ 23ರಂದು ಬೆಳಗ್ಗೆ 10.30ಕ್ಕೆ ಕನ್ನಡ ಸಾಹಿತ್ಯ ಪರಿಷತ್ ಭವನದ ಪಕ್ಕ ಇರುವ ಶಾಸ್ತಾ ಪಬ್ಲಿಕ್ ಶಾಲೆಯಲ್ಲಿ ನಡೆಯಲಿದೆ.
ಅರ್ಜಿ ಆಹ್ವಾನ
ಹಾಸನ: ದೃಶ್ಯ ಮಾಧ್ಯಮದಲ್ಲಿ ಅಧ್ಯಯನ ಮಾಡುವ 100 ಸಂಖ್ಯೆಯ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಚಿತ್ರಕಲೆ, ಗ್ರಾಫಿಕ್ಸ್ ಕಲೆ, ಶಿಲ್ಪಕಲೆ, ಅನ್ವಯ ಕಲೆಗಳ ಕುರಿತ 5 ದಿನಗಳ ಕಾರ್ಯಾಗಾರವನ್ನು ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು (ಕಾವಾ)ಇಲ್ಲಿ ಜನವರಿ ಅಥವಾ ಫೆಬ್ರವರಿಯಲ್ಲಿ ನಡೆಸಲು ಇಲಾಖೆಯು ಉದ್ದೇಶಿಸಿದೆ. ಈ ಸಂಬಂಧ ಪರಿಶಿಷ್ಟ ಜಾತಿಯ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ಈ ಕಾರ್ಯಾಗಾರಕ್ಕೆ ರಾಜ್ಯದ ಯಾವುದೇ ಕಲಾ ಕಾಲೇಜಿನಲ್ಲಿ ಅಧ್ಯಯನ ಮಾಡುವ ಪರಿಶಿಷ್ಟ ಜಾತಿಗೆ ಸೇರಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಹರು ತಮ್ಮ ಹೆಸರು, ವಯಸ್ಸು, ವಿಳಾಸ, ವಿದ್ಯಾರ್ಹತೆ, ಜಾತಿ ಇತ್ಯಾದಿ ಸ್ವ- ವಿವರವುಳ್ಳ ಮಾಹಿತಿಯನ್ನು ಬಿಳಿ ಹಾಳೆಯ ಮೇಲೆ ಬೆರಳಚ್ಚುಗೊಳಿಸಿ ಅಥವಾ ಕೈಯಿಂದ ಸ್ಪಷ್ಟವಾಗಿ ಭರ್ತಿ ಮಾಡಿ, ತಾವು ವ್ಯಾಸಂಗ ಮಾಡುತ್ತಿರುವ ಕಾಲೇಜಿನ ಮುಖ್ಯಸ್ಥರ ಅನುಮತಿಯ ಪತ್ರದೊಂದಿಗೆ ಭರ್ತಿ ಮಾಡಿದ ಅರ್ಜಿಯನ್ನು ದೃಢೀಕೃತ ಅಗತ್ಯ ದಾಖಲೆಗಳೊಂದಿಗೆ ಡಿ. 31ರ ಸಂಜೆ 5 ಗಂಟೆಯೊಳಗೆ ನಿರ್ದೇಶಕರು, ವಾರ್ತಾ ಇಲಾಖೆ, ವಾರ್ತಾ ಸೌಧ, ನಂ. 17, ಭಗವಾನ್ ಮಹಾವೀರ ರಸ್ತೆ, ಬೆಂಗಳೂರು-560001 ಇಲ್ಲಿಗೆ ಖುದ್ದಾಗಿ ಅಥವಾ ಅಂಚೆ, ಕೊರಿಯರ್ ಮೂಲಕ ಸಲ್ಲಿಸಬೇಕು. ಲಕೋಟೆ ಮೇಲೆ, ದೃಶ್ಯ ಮಾಧ್ಯಮ ಕಾರ್ಯಾಗಾರಕ್ಕಾಗಿ ಅರ್ಜಿ ಎಂದು ನಮೂದಿಸಬೇಕು. ಹೆಚ್ಚಿನ ಮಾಹಿತಿಗಾಗಿ 080-2202805256 ಸಂಪರ್ಕಿಸಬಹುದು.
ತರಬೇತಿ ಶಿಬಿರ
ಹಾಸನ: ಸ್ಟಾಫ್ ಸೆಲೆಕ್ಷನ್ ಕಮೀಷನ್ರವರು ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಮಲ್ಟಿ ಟಾಸ್ಕಿಂಗ್ ಸ್ಟಾಫ್ (ಂ್ಡಟಡ್ಝಿ ಖಿಛಡ್ಞ್ಝಟ್ಜಿ ಖಡಿಛಜಿಜಿ) ನಾನ್ ಟೆಕ್ನಿಕಲ್ ಹಾಗೂ ಹುದ್ದೆಗಳ ನೇಮಕಾತಿಗಾಗಿ ಆನ್ಲೈನ್ ಮತ್ತು ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗಾಗಿ ಲಿಖಿತ ಪರೀಕ್ಷಾ ಪೂರ್ವಭಾವಿ ತರಬೇತಿ ಶಿಬಿರವನ್ನು ಉಚಿತವಾಗಿ ಹಾಸನ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಇಲಾಖೆಯ ಮಹತ್ವಾಕಾಂಕ್ಷಿ ಕಾರ್ಯಕ್ರಮವಾದ ಸ್ಟಡಿ ಸರ್ಕಲ್ ವತಿಯಿಂದ ಹಮ್ಮಿಕೊಳ್ಳಲಾಗಿದೆ. ಶಿಬಿರದ ಸದುಪಯೋಗವನ್ನು ಪಡೆಯಲು ಇಚ್ಚಿಸುವ ಅಭ್ಯರ್ಥಿಗಳು ಡಿ.31 ರವರೆಗೆ ನಡೆಯುವ ತರಬೇತಿ ಶಿಬಿರದಲ್ಲಿ ಪಾಲ್ಗೊಂಡು ಹೆಚ್ಚಿನ ಅನುಭವ ಪಡೆಯುವಂತೆ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಉದ್ಯೋಗಾಧಿಕಾರಿ, ಜಿಲ್ಲಾ ಉದ್ಯೋಗ ವಿನಿಮಯ ಕ:ಕೇರಿ ಹಾಸನ ಇವರನ್ನು ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ: 08172-268374 ಅನ್ನು ಸಂಪರ್ಕಿಸಿ ಮಾಹಿತಿ ಪಡೆಯಲು ಸಹಾ ಕೋರಿದೆ.
ಮಕ್ಕಳೊಂದಿಗೆ ತಾಯಿ ನಾಪತ್ತೆ
ಹಾಸನ: ತಾಯಿಯೊಬ್ಬಳು ತನ್ನ ಮಕ್ಕಳೊಂದಿಗೆ ನಾಪತ್ತೆಯಾಗಿರುವ ಘಟನೆ ಇತ್ತೀಚೆಗೆ ನಡೆದಿದೆ. ಹೊಳೆನರಸೀಪುರ ತಾಲ್ಲೂಕಿನ ಹಳೇಕೋಟೆ ಹೋಬಳಿಯ ಮಾವಿನಕೆರೆ ಗ್ರಾಮದ ವಾಸಿ ಪುಟ್ಟರಾಜು ರವರ ಪತ್ನಿ ಮಮತಾ (28) ಮಕ್ಕಳಾದ ವರುಣ್ ಮತ್ತು ವರ್ಷಿತ್ ಅವರೊಂದಿಗೆ ಮನೆಯಿಂದ ಹೊರಗೆ ಹೋದವರು ಇದುವರೆವಿಗೂ ಮನೆಗೆ ಬಾರದೆ ಕಾಣೆಯಾಗಿದ್ದಾರೆ. ಚಹರೆ: 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣ ಮೈಕಟ್ಟು, ಮನೆಯಿಂದ ಹೋಗುವಾಗ ಕೆಂಪು ಬಣ್ಣದ ಸೀರೆ ಮತ್ತು ಹಳದಿ ಬಣ್ಣದ ರವಿಕೆ ಧರಿಸಿರುತ್ತಾರೆ. ಕನ್ನಡ ಭಾಷೆ ಮಾತನಾಡುತ್ತಾರೆ. ಪತಿ ಪುಟ್ಟರಾಜುರವರು ಹೊಳೆನರಸೀಪುರ ನಗರ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಬಸ್ಪಾಸ್ ನವೀಕರಣ
ಹಾಸನ: ರಾಜ್ಯ ರಸ್ತೆ ಸಾರಿಗೆ ನಿಗಮವು 2013ನೇ ಸಾಲಿಗೆ ವಿಲಕಚೇತನರಿಗೆ ರಿಯಾಯಿತಿ ದರದ ಬಸ್ ಪಾಸ್ಗಳನ್ನು ನೀಡಿದ್ದು, ಡಿ. 31ರವರೆಗೆ ಮಾನ್ಯತೆ ಇರುವ ವಿಕಲಚೇತನರ ಪಾಸ್ಗಳನ್ನು ನವೀಕರಿಸದೆ ಮುಂದಿನ ಫೆ. 28ರವರೆಗೆ ಮಾನ್ಯ ಮಾಡಲಾಗುವುದು. ಅಷ್ಟರೊಳಗೆ ಹಳೆಯ ಪಾಸುಗಳನ್ನು ನವೀಕರಿಸಿಕೊಳ್ಳುವುದು. ಹಳೆಯ ಪಾಸ್ನೊಂದಿಗೆ ರು. 660 ಪಾವತಿಸಿ ಹಾಸನ ತಾಲ್ಲೂಕಿನವರು ಹಾಸನ ಘಟಕದಲ್ಲಿ) ಫೆ. 28ರೊಳಗಾಗಿ ನವೀಕರಿಸಿಕೊಳ್ಳುವುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

