ಕಾಡಾನೆ ದಾಳಿ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳ ಭೇಟಿ
ಕ.ಪ್ರ.ವಾರ್ತೆ ರಾಮನಾಥಪುರ ಡಿ. 21
ಇಲ್ಲಿಗೆ ಸಮೀಪದ ಹಂಡ್ರಂಗಿ ಪಂಚಾಯ್ತಿ ವ್ಯಾಪ್ತಿಗೆ ಬರುವ ಕಾರಗಲ್ಲು ಗ್ರಾಮದ ರೈತ ಆನಂದ ಎಂಬುವರ ಮೆಕ್ಕೆ ಜೋಳ ಫಸಲನ್ನು ನಾಶ ಮಾಡಿರುವ ಬಗ್ಗೆ ಕನ್ನಡ ಪ್ರಭ ಶುಕ್ರವಾರ ಸುದ್ದಿ ಪ್ರಕಟಿಸಿದ್ದು, ಈ ಹಿನ್ನೆಲೆಯಲ್ಲಿ ಜಾಗೃತರಾದ ಅರಣ್ಯ ಇಲಾಖೆಯ ವಲಯ ಅರಣ್ಯ ಅಧಿಕಾರಿ ವಿ.ಪಿ. ಹಡ್ಲಗಿರಿ ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿದರು.
ಬೆಳೆ ನಾಶದಿಂದ ಕಂಗಾಲಾದ ರೈತ ಆನಂದನಿಂದ ಹಾಗೂ ರೈತ ಸಂಘದವರಿಂದ ಮಾಹಿತಿ ಪಡೆದು ಕೂಡಲೆ ಸೂಕ್ತ ಪರಿಹಾರ ನೀಡುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡುವುದಾಗಿ ಭರವಸೆ ನೀಡಿದರು.
ಹತೋಟಿಗೆ ಪ್ರಯತ್ನ: ಸುತ್ತಮುತ್ತಲ ರೈತರ ಜಮೀನುಗಳಲ್ಲಿ ಕಾಡಾನೆ ಹಾವಳಿಯಿಂದಾಗಿ ಬೆಳೆ ನಾಶವಾಗಿರುವುದನ್ನು ವೀಕ್ಷಿಸಿ ಕೊಡಗಿನ ಗಡಿಗೆ ಹೊಂದಿಕೊಂಡಂತಿರುವ ಅರಣ್ಯದಿಂದ ಕಾಡಾನೆಗಳ ಹಿಂಡು ಸಂಜೆ 6 ಗಂಟೆ ಆಯಿತೆಂದರೆ ಗ್ರಾಮಗಳತ್ತ ಬರುವುದಾಗಿ ಅದರಲ್ಲೂ ಒಂಟಿ ಸಲಗ ಮನುಷ್ಯರ ಮೇಲೆ ದಾಳಿ ಮಾಡುವ ಮಟ್ಟಿಗೆ ಹಾವಳಿ ಮಾಡುತ್ತಿದ್ದು, ಇವುಗಳನ್ನು ಅರಣ್ಯಕ್ಕೆ ಓಡಿಸುವಂತೆ ಹಾಗೂ ಈ ಹಿಂದೆ ರಾತ್ರಿ ವೇಳೆ ಕಾಡಾನೆಗಳ ಉಪಟಳವನ್ನು ಹತೋಟಿಗೆ ತರುವಂತೆ ಅರಣ್ಯ ಇಲಾಖೆಯಿಂದ ನೇಮಿಸಲ್ಪಟ್ಟಿದ್ದ ಆಯಾ ಗ್ರಾಮಗಳ ಗುತ್ತಿಗೆ ನೌಕರರು ತಮ್ಮ ಜೀವದ ಹಂಗು ತೊರೆದು ರಾತ್ರಿ ವೇಳೆ ಬೆಂಕಿ, ಪಟಾಕಿ, ತಮಟೆ ಸದ್ದು ಮಾಡಿ ಕಷ್ಟಪಟ್ಟು ಕಾಡಾನೆಗಳನ್ನು ಓಡಿಸಲು ರಾತ್ರಿಯಿಡೀ ಕಸರತ್ತು ನಡೆಸಿ ತಕ್ಕಮಟ್ಟಿಗೆ ಹತೋಟಿಗೆ ತರಲು ಪ್ರಯತ್ನಿಸುತ್ತಿದ್ದರು.
ಆದರೆ, ಅರಣ್ಯ ಇಲಾಖೆಯವರು ಈ ಗುತ್ತಿಗೆ ನೌಕರರಿಗೆ ಸರಿಯಾಗಿ ಸಂಬಳವನ್ನು ನೀಡದೆ ಸತಾಯಿಸುತ್ತಿದ್ದ ಕಾರಣ ಗುತ್ತಿಗೆ ನೌಕರರು ಕೆಲಸ ಬಿಟ್ಟಿರುವುದರಿಂದ ಇನ್ನಷ್ಟು ಉಪದ್ರವ ಹೆಚ್ಚಾಗಿದೆ ಎಂದು ತರಗಳಲೆ ಗ್ರಾಮದ ಮುಖಂಡ ಉಮೇಶ್ ಅಧಿಕಾರಿಗಳಿಗೆ ತಿಳಿಸಿದರು. ಮತ್ತು ಕೆಲವು ಜಮೀನುಗಳಲ್ಲಿ ರಾತ್ರಿ ವೇಳೆ ವಿದ್ಯುತ್ ನ್ನು ತಂತಿ ಬೇಲಿಗೆ ನೀಡುತ್ತಿರುವುದು ಕಂಡು ಬಂತು.
ಆನೆಗಳಿಗೆ ದಾರಿ ಸರಾಗ: ಅರಣ್ಯದಿಂದ ರಾತ್ರಿ ವೇಳೆ ಕಾಡಾನೆಗಳ ಹಿಂಡು ಗ್ರಾಮಗಳತ್ತ ಹೆಚ್ಚಾಗಿ ಸಂಚರಿಸುವ ಮಾರ್ಗಗಳನ್ನು ಸ್ಥಳ ಪರಿಶೀಲಿಸಿದರು. ಈ ಹಿಂದೆ ಅರಣ್ಯ ಇಲಾಖೆಯವರು ನಿರ್ಮಿಸಿದ ತಡೆ ಕಂದಕಗಳು ಕೆಲವು ಕಡೆ ಮುಚ್ಚಿದ್ದು, ಮತ್ತೆ ಕೆಲವು ಕಡೆ ಸ್ಥಳೀಯ ರೈತರು ತಮ್ಮ ಜಮೀನಿನ ಉಳುಮೆಗೆ ಅಡ್ಡಿಪಡಿಸುವ ಕಲ್ಲುಗಳನ್ನು ಕಿತ್ತು ಈ ಕಂದಕದಲ್ಲಿ ತುಂಬಿರುವುದರಿಂದ ಕಾಡಾನೆಗಳು ಬಂದು ಹೋಗಲು ದಾರಿ ಸರಾಗವಾಗಿದ್ದು ಕಂಡು ಬಂತು.
ಶೀಘ್ರದಲ್ಲೇ ವರದಿ:ವಲಯ ಅರಣ್ಯಾಧಿಕಾರಿಗಳು ಕಾಡಾನೆಗಳು ಬರುವ ಮಾರ್ಗದಲ್ಲಿ ಸೋಲಾರ್ ತಂತಿ ಜೋಡಣೆ ಮತ್ತು ಹೊಸದಾಗಿ ತಡೆ ಕಂದಕಗಳನ್ನು ನಿರ್ಮಿಸುವ ಬಗ್ಗೆ ಹಾಗೂ ಮತ್ತು ಕೆಲ ರೈತರುಗಳಿಗೆ ಪಟಾಕಿ ನೀಡಿ, ಗುತ್ತಿಗೆ ನೌಕರರನ್ನು ಪುನಃ ಕೆಲಸಕ್ಕೆ ನೇಮಿಸುವಂತೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ವರದಿ ನೀಡುವುದಾಗಿ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

