ಹಾಸನ

ಜಿಎಸ್‌ಎಸ್ ಸ್ಮರಣಾರ್ಥ ಸ್ಮಾರಕ ವೃಕ್ಷವಾಗಿಸುವ ನಿರ್ಧಾರ

Published On :

ಹೊಳೆನರಸೀಪುರ: ಕನ್ನಡ ಸಾರಸ್ವತ ಲೋಕವನ್ನು ಬಿಟ್ಟು ಬಾರದ ಲೋಕಕ್ಕೆ ತೆರಳಿದ ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪ ಅವರ ನೆನಪುಗಳು ಚಿರಸ್ಥಾಯಿಯಾಗಿ ಉಳಿಯಲು ಅವರ ನೆನಪಿಗಾಗಿ ನಾನಾ ಸಂಘ-ಸಂಸ್ಥೆಗಳು ತಾಲೂಕು ಆಡಳಿತದ ಜತೆಯಲ್ಲಿ ತಹಸೀಲ್ದಾರರ ನೇತೃತ್ವದಲ್ಲಿ ಪಟ್ಟಣದ ಹೃದಯ ಭಾಗದಲ್ಲಿರುವ ಉದ್ಯಾನವನದಲ್ಲಿ ಗಿಡ ನೆಟ್ಟು ಅವುಗಳನ್ನು ಸ್ಮಾರಕ ವೃಕ್ಷವಾಗಿ ಉಳಿಸುವ ಅರ್ಥಪೂರ್ಣ ನಿರ್ಧಾರ  ಕೈಗೊಂಡವು.
 ಇಲ್ಲಿನ ತಾಲೂಕು ಕಚೇರಿಯಲ್ಲಿ ಸಭೆ ಸೇರಿದ್ದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ನಾನಾ  ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ನಾಗರಿಕರು ಸಾಹಿತ್ಯ ಲೋಕದಿಂದ ಅಸ್ತಂಗತವಾದ ಹಿರಿಯ ಚೇತನಕ್ಕೆ ಶ್ರದ್ಧಾಂಜಲಿ ಅರ್ಪಿಸಿ, ಮೌನಾಚರಣೆ ನಡೆಸಿದ್ದಲ್ಲದೇ, ನುಡಿ ಹಾಗೂ ಗೀತ ನಮನ ಸಲ್ಲಿಸಿತ್ತು. ನಂತರ ಸಭೆಯಲ್ಲಿ ರಾಷ್ಟ್ರಕವಿ ಹೆಸರು ಸದಾಕಾಲವೂ ಸಾಹಿತ್ಯ ಪ್ರೇಮಿಗಳ ಸ್ಮತಿಪಟಲದಲ್ಲಿ ಹಸಿರಾಗಿಡುವ ಉದ್ದೇಶದಿಂದ ಗಿಡವನ್ನು ನೆಟ್ಟು ಅದನ್ನು ಸ್ಮಾರಕ ವೃಕ್ಷವಾಗಿ ಕಾಯ್ದುಕೊಳ್ಳಲು ತೀರ್ಮಾನಿಸಿತ್ತು.
 ಈ ನಿಟ್ಟಿನಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಲಯನ್ಸ್, ರೋಟರಿ, ತಾಲೂಕು ಸರ್ಕಾರಿ ನೌಕರರ ಸಂಘ, ತಾಲೂಕು ಪತ್ರಕರ್ತರ ಸಂಘ ಮೊದಲಾದ ಸಂಸ್ಥೆಗಳು ತಹಸೀಲ್ದಾರ ಆರ್.ಬಿ.ಶಿವಶಂಕರಪ್ಪ ಅವರೊಡಗೂಡಿ ಪುರಸಭಾ ಉದ್ಯಾನವನದಲ್ಲಿ ಡಾ.ಜಿ.ಎಸ್.ಶಿವರುದ್ರಪ್ಪ  ಸ್ಮರಣಾರ್ಥ ಸಂಪಿಗೆ ಗಿಡವನ್ನು ಹಾಗೂ ಇದೇ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಲೋಕದಲ್ಲಿ ರಾಷ್ಟ್ರಕವಿ ಪುರಸ್ಕೃತ ದಿ.ಗೋವಿಂದಪೈ ಅವರ ಸ್ಮರಣಾರ್ಥ ಹೊಂಗೆ ಗಿಡ ಹಾಗೂ ರಸಋಷಿ ಕುವೆಂಪು ಸ್ಮರಣಾರ್ಥ ಮಾವಿನ ಗಿಡವನ್ನು ಇದೇ ಸಂದರ್ಭದಲ್ಲಿ ನೆಟ್ಟು ನೀರೆರೆಯಲಾಯಿತು.
 ನಂತರ ರಾಷ್ಟ್ರಕವಿಗಳ ಸವಿನೆನಪಿಗಾಗಿ ನೆಡಲಾಗಿರುವ ಗಿಡಗಳನ್ನು ಉದ್ಯಾನವನದಲ್ಲಿ ಜತನದಿಂದ ಕಾಪಾಡಿ ಸ್ಮಾರಕ ವೃಕ್ಷವಾಗಿ ಉಳಿಸುವ ನಿರ್ಧಾರವನ್ನು ಸಂಘ-ಸಂಸ್ಥೆಗಳು ಕೈಗೊಂಡವಲ್ಲದೇ, ಸದರಿ ಗಿಡಗಳನ್ನು ರಕ್ಷಿಸಲು ಸೂಕ್ತವಾದ ರಕ್ಷಣಾ ಬೇಲಿಯನ್ನು ನಿರ್ಮಿಸಿ ಅಳವಡಿಸಲು ತೀರ್ಮಾನಿಸಿದವು. ನಂತರ ಗಿಡಗಳು ಬೆಳೆದ ನಂತರದಲ್ಲಿ ವೃಕ್ಷಕ್ಕೆ ಸೂಕ್ತವಾದ ಸ್ಮಾರಕ ಜಗುಲಿ ನಿರ್ಮಿಸಲು ತೀರ್ಮಾನಿಸಲಾಯಿತು.
  ತಹಸೀಲ್ದಾರ್ ಆರ್.ಬಿ.ಶಿವಶಂಕರಪ್ಪ, ತಾಲೂಕು ಕಸಾಪ ಅಧ್ಯಕ್ಷ ಎಚ್.ಎಸ್.ಪುಟ್ಟಸೋಮಪ್ಪ, ಎಂ.ಎನ್.ಜೈಪ್ರಕಾಶ್, ರೋಟರಿ ಅಧ್ಯಕ್ಷ ಆರ್.ಬಿ.ಪುಟ್ಟೇಗೌಡ ಹಾಗೂ ಕಾರ್ಯದರ್ಶಿ ಶಿವಕುಮಾರ್, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷರಾದ ಟಿ.ಎಸ್.ಕುಮಾರಸ್ವಾಮಿ, ಆಹಾರ ಇಲಾಖೆಯ ರಾಮಚಂದ್ರ, ಮಂಜುನಾಥ್, ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಪ್ರೇಮಾ ಮಂಜುನಾಥ್, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ  ಎನ್.ಎಸ್.ರಾಧಾಕೃಷ್ಣ ಹಾಗೂ ಹಿರಿಯ ಪತ್ರಕರ್ತ  ಎಚ್.ವಿ.ಸುರೇಶ್‌ಕುಮಾರ್, ಡಾ.ಕೆ.ಸಿ.ಮರಿಯಪ್ಪ, ಪುರಸಭೆ ಮಾಜಿ ಉಪಾಧ್ಯಕ್ಷೆ ಲಕ್ಷ್ಮೀನಾಗರಾಜ್, ಪುರಸಭೆ ಆರೋಗ್ಯಾಧಿಕಾರಿ ವಸಂತಕುಮಾರ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.