ಸುಳ್ಳಾದ ಕಾಡಾನೆಗಳ ಸ್ಥಳಾಂತರ ವಾಗ್ದಾನ
ಹಾಸನ: ಕಾಡಾನೆಗಳನ್ನು ಹಿಡಿದು ಬೇರೆಡೆ ಸ್ಥಳಾಂತರಿಸಿ ಬೆಳೆ ಪ್ರಾಣ ರಕ್ಷಿಸಿ ಎಂಬ ಘೋಷಣೆಗಳು ಅಪ್ಪಟ್ಟ ಮಲೆನಾಡು ತಾಲೂಕುಗಳಾದ ಆಲೂರು, ಸಕಲೇಶಪುರಗಳಲ್ಲಿ ಐದಾರು ವರ್ಷಗಳಿಂದ ನಿರಂತರವಾಗಿ ಮೊಳಗುತ್ತಿವೆ. ಆದರೆ ಅದಕ್ಕೆ ತಕ್ಕ ಪ್ರತಿಫಲ ಈ ಭಾಗದ ಜನರಿಗೆ ಸಿಕ್ಕಿಲ್ಲ.
ಕಾಡಾನೆಗಳ ದಾಳಿಯಿಂದ ಬೆಳೆ ಹಾನಿಯಾದ ಹಾಗೂ ಪ್ರಾಣ ಕಳೆದುಕೊಂಡ ರೈತರ ಕುಟುಂಬಗಳಿಗೆ ಸಾಂತ್ವನ ಹೇಳಲು ಬಂದ ಮಂತ್ರಿಗಳಿಗೆ, ಅರಣ್ಯಾಧಿಕಾರಿಗಳಿಗೆ ಲಿಖಿತವಾಗಿ, ಮೌಖಿಕವಾಗಿ ಸಲ್ಲಿಸಿದ ಮನವಿಗಳಂತೂ ಲೆಕ್ಕಕ್ಕೆ ಸಿಗುವುದಿಲ್ಲ. ಆ ಪ್ರಮಾಣದಲ್ಲಿ ಮನವಿಗಳನ್ನು ನೀಡಿ ಆಳುವವರ ಮೇಲೆ ಒತ್ತಡ ಹೇರಿದ್ದಾರೆ.
ಜಿಲ್ಲೆಯಲ್ಲಿ ನಿರಂತರವಾಗಿ ಬೆಳೆನಷ್ಟ ಮತ್ತು ಜೀವಹಾನಿ ಮಾಡುತ್ತಿರುವ ಕಾಡಾನೆಗಳ ಸಾಮೂಹಿಕ ಸ್ಥಳಾಂತರ ಮಾಡುವುದಾಗಿ ನೀಡಿದ ವಾಗ್ದಾನ ಮತ್ತು ಶಾಶ್ವತ ಪರಿಹಾರ ಭರವಸೆ, ಹುಸಿಯಾಗುತ್ತಲೇ ಇದೆ. ಪರಿಣಾಮ ಮಲೆನಾಡು ಭಾಗದ ಜನರ ಅರಣ್ಯರೋದನ ಮುಂದುವರಿದಿದೆ.
ಆನೆ ಹಾವಳಿಯಿಂದಾಗಿ ಕೈಗೆ ಬಂದ ಬೆಳೆ ಹಟ್ಟಿಗೆ ಸೇರದಂತಾಗಿದೆ ಎಂದು ಅನ್ನದಾತ ಕಣ್ಣೀರಿಡುತ್ತಿದ್ದರೆ, ಸಾಮಾನ್ಯ ಜನಕ್ಕೆ ಜೀವಭಯ ಎದುರಾಗಿದೆ. ಕೂಡಲೇ ಹೈಕೋರ್ಟ್ ಮತ್ತು ರಾಜ್ಯ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳುವ ಮೂಲಕ ಗಜಗಳಿಂದಾಗುತ್ತಿರುವುದಕ್ಕೆ ಪರಿಹಾರ ಕಂಡುಹಿಡಿಯುವಂತೆ ಈ ಭಾಗದ ಜನ ಆಗ್ರಹಿಸಿದ್ದಾರೆ.
ಕಾಡಾನೆಗಳ ನಿತ್ಯ ಉಪಟಳ: ತೀವ್ರ ಒತ್ತಡ ಮತ್ತು ನಿರಂತರ ಹೋರಾಟದ ನಂತರ ಮಲೆನಾಡು ಭಾಗದಲ್ಲಿ ನಿತ್ಯ ಉಪಟಳ ನೀಡುತ್ತಿರುವ ಸುಮಾರು 25ಕ್ಕೂ ಹೆಚ್ಚು ಕಾಡಾನೆಗಳನ್ನು ಸಾಮೂಹಿಕವಾಗಿ ಸೆರೆ ಹಿಡಿದು ಬೇರೆಡೆಗೆ ಸ್ಥಳಾಂತರ ಮಾಡಲು ಕೇಂದ್ರ ಸರಕಾರ ಅನುಮತಿ ನೀಡಿತ್ತು.
ಆದರೆ, ಪರಿಸರವಾದಿಗಳ ಕೊಕ್ಕೆಯಿಂದಾಗಿ ಕಾಡಾನೆಗಳನ್ನು ಒಂದೇ ಬಾರಿಗೆ ಹಿಡಿದು ಬೇರೆಡೆಗೆ ಸಾಗಿಸುವ ನಿರ್ಧಾರಕ್ಕೆ ಹೈಕೋರ್ಟ್ ತಡೆ ನೀಡಿತು. ಈ ಬೆಳವಣಿಗೆ ನಡೆದು ಹೆಚ್ಚು ಕಡಿಮೆ ಒಂದು ವರ್ಷ ಕಳೆದಿದೆ. ಆದರೂ ತಡೆ ತೆರವುಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವೂ ಒತ್ತಡ ಹೇರಿಲ್ಲ, ಹೈಕೋರ್ಟ್ ಸಹ ಶೀಘ್ರ ವಿಲೇವಾರಿಗೆ ಮುಂದಾಗಿಲ್ಲ. ಯಾವುದೇ ಅಂಕುಷ ಇಲ್ಲದ ಕಾರಣ ಗಜಪಡೆ ಗಲಾಟೆ ಮುಂದುವರಿದಿದೆ. ಪರಿಣಾಮ ಭತ್ತ, ಕಾಫಿ, ಬಾಳೆ, ತೆಂಗು ಮೊದಲಾದ ಬೆಳೆಗಳು ದಿನನಿತ್ಯ ಮಣ್ಣುಪಾಲಾಗುತ್ತಿದೆ.
ಎಲಿಫೆಂಟ್ ಟಾಸ್ಕ್ ಫೋರ್ಸ್ ತಂಡ ಭೇಟಿ: ಜಿಲ್ಲೆಯೊಂದರಲ್ಲೇ ಕಳೆದ ವರ್ಷ ಐವರು ಕಾಡಾನೆ ದಾಳಿಗೆ ಸಿಕ್ಕಿ ಮೃತಪಟ್ಟಿದ್ದು, 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸಮಸ್ಯೆಗೆ ಪರಿಹಾರ ಕಂಡುಹಿಡಿಯಿರಿ ಎಂದು ನಾನಾ ರೀತಿಯ ಪ್ರತಿಭಟನೆಗಳು ನಡೆದಿವೆ. ಈ ಮಧ್ಯೆ ಹೈಕೋರ್ಟ್ ನಿಯೋಜಿತ ಎಲಿಫೆಂಟ್ ಟಾಸ್ಕ್ ಫೋರ್ಸ್ ತಂಡವೂ ಜಿಲ್ಲೆಗೆ ಭೇಟಿ ನೀಡಿ ಆನೆ ಅಟ್ಟಹಾಸದ ಪರಿಣಾಮ ನೋಡಿ ಹೋಗಿದೆ ಅಷ್ಟೇ.
ಆದರೂ ಯಾವುದೇ ಲಾಭವಾಗಿಲ್ಲ. ಇನ್ನಾದರೂ ಹೈಕೋರ್ಟ್ ಮತ್ತು ರಾಜ್ಯ ಸರ್ಕಾರ ಆನೆಗಳ ಸಾಮೂಹಿಕ ಸ್ಥಳಾಂತರಕ್ಕೆ ಸೂಕ್ತ ಮಾರ್ಗೋಪಾಯ ಸೂಚಿಸುವ ಮೂಲಕ ಆನೆ-ಮಾನವರ ನಡುವಿನ ಸಂಘರ್ಷಕ್ಕೆ ಕೊನೆ ಹಾಡುವ ಕೆಲಸ ಮಾಡಬೇಕು ಅನ್ನೋದು ಸ್ಥಳೀಯರ ಆಗ್ರಹವಾಗಿದೆ.
ಆಲೂರು-ಸಕಲೇಶಪುರ ಭಾಗದ ಅರಣ್ಯ ಆನೆ ನೆಲೆ ಮತ್ತು ಸಂತಾನೋತ್ಪತ್ತಿಗೆ ಯೋಗ್ಯವಾದ ಸ್ಥಳ. ಆದರೆ ಅರಣ್ಯ ಕಿರಿದಾಗಿರುವುದರಿಂದ ಕಾಡಾನೆ ಹಿಂಡು ನಾಡಿಗೆ ಮುಖಮಾಡಿ ದಾಂಧಲೆಯಲ್ಲಿ ತೊಡಗಿವೆ. ಸಮಸ್ಯೆ ಇನ್ನಷ್ಟು ಬಿಗಡಾಯಿಸುವ ಮುನ್ನ ಇದಕ್ಕೆ ಅಂತ್ಯ ಹಾಡುವ ಕಾರ್ಯ ಸಂಬಂಧಪಟ್ಟವರಿಂದ ತುರ್ತಾಗಿ ಆಗಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

