ಹಾಸನ

ಎಲ್ಲ ಇಲಾಖೆ ಸಹಕಾರ ಕೋರಿದ ಜಿಲ್ಲಾಧಿಕಾರಿ

Published On :

ಹಾಸನ: ಬರುವ ನಗರ, ಸ್ಥಳೀಯ ಸಂಸ್ಥೆ ಚುನಾವಣೆಯನ್ನು ನಿಷ್ಪಕ್ಷಪಾತವಾಗಿ ನೆರವೇರಿಸಲು ಎಲ್ಲಾ ಇಲಾಖಾ ಅಧಿಕಾರಿಗಳು ಸಂಪೂರ್ಣ ಸಹಕಾರ ನೀಡಬೇಕೆಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಕೆ.ಪಿ. ಮೋಹನರಾಜ್ ಕೋರಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಕುರಿತು ಚುನಾವಣಾಧಿಕಾರಿ, ಸಹಾಯಕ ಚುನಾವಣಾಧಿಕಾರಿ, ತಹಸೀಲ್ದಾರರು, ಪೊಲೀಸ್, ಅಬಕಾರಿ ಇಲಾಖಾ ಅಧಿಕಾರಿಗಳ ಸಭೆ ನಡೆಸಿದ ಅವರು ಯಾವುದೇ ಲೋಪದೋಷಗಳು ಉಂಟಾಗದಂತೆ ಚುನಾವಣಾ ಪ್ರಕ್ರಿಯೆ ನಡೆಸಲು ಸೂಚಿಸಿದರು.
ಈಗಾಗಲೇ ನೀತಿ ಸಂಹಿತೆ ಜಾರಿಯಲ್ಲಿದ್ದು, ಜಿಲ್ಲೆಯಲ್ಲಿ ಚುನಾವಣೆ ನಡೆಸಲು ತಲಾ 24 ಮಂದಿ ಚುನಾವಣಾಧಿಕಾರಿಗಳು 24 ಮಂದಿ ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಿಸಲಾಗಿದೆ. ಆಯೋಗ ಸೂಚನೆಗಳನ್ವಯ ಸಂಪೂರ್ಣ, ಸ್ವತಂತ್ರವಾಗಿ ಮತ್ತು ಮುಕ್ತ ಹಾಗೂ ನ್ಯಾಯಸಮ್ಮತವಾಗಿ ಚುನಾವಣೆ ನಡೆಸುವ ಹೊಣೆಗಾರಿಕೆ ಅವರದ್ದೇ ಆಗಿದೆ. ಹಾಗಾಗಿ ಅತ್ಯಂತ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಿ, ಅನುಮಾನ ಗೊಂದಲಗಳಿದ್ದರೆ ತಮ್ಮ ಅಥವಾ ಚುನಾವಣಾ ಆಯೋಗದ ಗಮನಕ್ಕೆ ತಂದು ಪರಿಹರಿಸಿಕೊಳ್ಳಿ ಎಂದು ತಿಳಿಸಿದರು.
ಪೋಸ್ಟರ್, ಬ್ಯಾನರ್, ಬಂಟಿಂಗ್ಸ್ ತೆರವು:  ಚುನಾನಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಹಾಕಲಾಗಿರುವ ರಾಜಕೀಯ ಪಕ್ಷ ಮತ್ತು ವ್ಯಕ್ತಿಗಳ ಪೋಸ್ಟರ್, ಬ್ಯಾನರ್, ಬಂಟಿಂಗ್ಸ್‌ಗಳನ್ನು  ತೆರವುಗೊಳಿಸಲು ಕ್ರಮ ವಹಿಸುವಂತೆ ಆಯಾಯ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ ನುಡಿದರು.
ಚುನಾವಣಾಧಿಕಾರಿಗಳು ಕಡ್ಡಾಯವಾಗಿ ಚುನಾವಣಾ ಕಾರ್ಯವಿರುವ ಕೇಂದ್ರ ಸ್ಥಾನದಲ್ಲಿದ್ದು ಪ್ರತಿಯೊಂದನ್ನು ನಿರ್ವಹಿಸಬೇಕು. ಪ್ರತಿ ದಿನ ಸ್ವೀಕರಿಸಿದ ನಾಮಪತ್ರಗಳನ್ನು  ಟ್ರಂಕ್‌ನಲ್ಲಿ ಇರಿಸಿಕೊಂಡು ಆಯಾಯ ತಹಸೀಲ್ದಾರರ ಕಚೇರಿ ಅಥವಾ ಖಜಾನೆಗಳಲ್ಲಿರಿಸಿ ಮರು ದಿನ ಪಡೆಯಬೇಕು. ಚುನಾವಣಾ ಸಂದರ್ಭದಲ್ಲಾಗುವ ತಪ್ಪುಗಳಿಗೆ ಚುನಾವಣಾಧಿಕಾರಿಗಳೇ ಹೊಣೆಗಾರರಾಗುವುದರಿಂದ ಅತ್ಯಂತ ಜಾಗರೂಕತೆ ವಹಿಸಿ ಎಂದು ಸಲಹೆ ನೀಡಿದರು.
ಅಕ್ರಮಗಳ ಮೇಲೆ ಹದ್ದಿನ ಕಣ್ಣಿಡಿ:  ಚುನಾವಣೆ ವೇಳೆ ನಡೆಯುವ ಅಕ್ರಮಗಳ ಮೇಲೆ ಹದ್ದಿನ ಕಣ್ಣಿರಿಸುವಂತೆ ಸೂಚಿಸಿದರು. ಎಲ್ಲಾ ಸರ್ಕಾರಿ ಅತಿಥಿ ಗೃಹಗಳನ್ನು ವಶಕ್ಕೆ ಪಡೆಯುವಂತೆ ತಹಸೀಲ್ದಾರರಿಗೆ ನಿರ್ದೇಶನ ನೀಡಿದ  ಜಿಲ್ಲಾಧಿಕಾರಿ ಅಕ್ರಮ ಮದ್ಯ ಸರಬರಾಜಿನ ಮೇಲೆ ನಿಗಾ ಇರಿಸುವಂತೆ ಹಾಗೂ ಅಗತ್ಯವಿರುವೆಡೆ ಚೆಕ್‌ಪೋಸ್ಟ್ ತೆರೆಯುವಂತೆ ಅಬಕಾರಿ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಎಲ್ಪಿ ಅಮಿತ್‌ಸಿಂಗ್ ಮಾತನಾಡಿ,  ಶಾಂತಿಯುತ ಹಾಗೂ ನಿಷ್ಪಕ್ಷಪಾತ ಚುನಾವಣೆ ನಡೆಸಲು ಪೊಲೀಸ್ ಇಲಾಖೆ ಅಗತ್ಯವಿರುವ ಎಲ್ಲಾ ರೀತಿಯ ನೆರವು ನೀಡಲಾಗುವುದು. ಚುನಾವಣಾ ಆಯೋಗದ ಸೂಚನೆಯನ್ನು ಎಲ್ಲರು ಕಟ್ಟು ನಿಟ್ಟಾಗಿ ಪಾಲಿಸಲೇ ಬೇಕು.ಅಕ್ರಮಗಳ ತಡೆಗೆ ಇಲಾಖಾ ಅಧಿಕಾರಿ ಸಿಬ್ಬಂದಿ ನಿರಂತರವಾಗಿ ಕಾರ್ಯಪ್ರವೃತ್ತರಾಗಿರುತ್ತಾರೆ ಎಂದರು.
ಹೇಗೆ ನಿಭಾಯಿಸಬೇಕು:  ಅಪರ ಜಿಲ್ಲಾಧಿಕಾರಿ ಡಾ. ಗೋಪಾಲಕೃಷ್ಣ ಆಯೋಗದ ಸೂಚನೆ ಹೇಗೆ ನಿಭಾಯಿಸ ಬೇಕು ಎಂಬುದನ್ನು ವಿವರಿಸಿದರು.
ಚುನಾವಣಾ ತಹಸೀಲ್ದಾರ್ ಬಾಬುರಾವ್ ಆಯೋಗದ ಸೂಚನೆಗಳು, ಸುತೋಲೆಗಳು, ಚುನಾವಣಾಧಿಕಾರಿಗಳ ಕೈಪಿಡಿ ಬಗ್ಗೆ ವಿವರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.