ಕರಡಿ ದಾಳಿ: ಕುರಿಮಂದೆ ಕಾಯುತ್ತಿದ್ದ ವ್ಯಕ್ತಿ ಗಾಯ
ಅರಸೀಕೆರೆ: ತೋಟದಲ್ಲಿ ಬೀಡುಬಿಟ್ಟಿದ್ದ ಕುರಿಮಂದೆ ಕಾಯಲು ಮಲಗಿದ್ದ ರೈತನ ಮೇಲೆ ಕರಡಿಯೊಂದು ದಾಳಿ ನಡೆಸಿ ತೀವ್ರ ಗಾಯಗೊಳಿಸಿರುವ ಘಟನೆ ಶುಕ್ರವಾರ ಮುಂಜಾನೆ ತಾಲೂಕಿನ ಜೆ.ಸಿ.ಪುರ ಸಮೀಪದ ಗೊಲ್ಲರಹಟ್ಟಿಯಲ್ಲಿ ನಡೆದಿದೆ.
ತಾಲೂಕಿನ ಕಣಕಟ್ಟೆ ಹೋಬಳಿ ಜೆ.ಸಿ.ಪುರ ಸಮೀಪದ ಗೊಲ್ಲರಹಟ್ಟಿಯ ಗೋಪಾಲಯ್ಯ ಮತ್ತು ರಾಮಲಿಂಗಯ್ಯ ಎಂಬುವರು ತಮ್ಮ ಕುರಿಮಂದೆ ತೋಟದಲ್ಲಿ ಬೀಡು ಬಿಟ್ಟು ಅವುಗಳನ್ನು ಕಾಯುವ ಸಲುವಾಗಿ ತೋಟದಲ್ಲಿ ಮಲಗಿದ್ದ ವೇಳೆ ತೋಟದೊಳಗೆ ಬಂದ ಕರಡಿಯೊಂದು ಕಂಬಳಿ ಹೊದ್ದು ಮಲಗಿದ್ದ ಗೋಪಾಲಯ್ಯ (55)ನ ಮೇಲೆ ಬಿದ್ದು ಆತನ ತಲೆ, ಮತ್ತು ಎರಡು ಕೈಗಳನ್ನು ಕಚ್ಚಿ ಗಾಯಗೊಳಿಸಿದೆ. ಅಲ್ಲದೆ ಬೆನ್ನಿನ ಹಿಂಭಾಗಕ್ಕೆ ಉಗುರಿನಿಂದ ಪರಚಿ ಗಾಯ ಮಾಡಿದೆ.
ದಾಳಿಯ ಕಿರಿಚಾಟದಿಂದ ಎಚ್ಚೆತ್ತ ರಾಮಲಿಂಗಯ್ಯ ಕೂಗಾಡಿದಾಗ ತೋಟದಲ್ಲಿನ ನಾಯಿ ಬೊಗಳಿದ ಸದ್ದನ್ನು ಕೇಳಿದ ಕರಡಿ ತನ್ನ ಕಾಲಿಗೆ ಬುದ್ದಿ ಹೇಳಿ ಪರಾರಿಯಾದ ಪರಿಣಾಮ ಗೋಪಾಲಯ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ತಕ್ಷಣ ಗಾಯಾಳುವನ್ನು ಜೆ.ಸಿ.ಪುರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಪಟ್ಟಣದ ಸರ್ಕಾರಿ ಜೆ.ಸಿ.ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ.
ದಾಳಿಯಿಂದ ಗಾಯಗೊಂಡು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗೋಪಾಲಯ್ಯರನ್ನು ವಲಯ ಅರಣ್ಯಾಧಿಕಾರಿ ರವಿ ಶುಕ್ರವಾರ ಮಧ್ಯಾಹ್ನ ಭೇಟಿ ಮಾಡಿ ಸಾಂತ್ವನ ಹೇಳಿದರು.
ಅಲ್ಲದೆ ಚಿಕಿತ್ಸೆಗೆ ನೆರವು ನೀಡುವ ಭರವಸೆ ನೀಡಿದರು. ತಾಲೂಕಿನ ಸುತ್ತಲೂಅರಣ್ಯ ಪ್ರದೇಶ ವ್ಯಾಪಿಸಿದ್ದು, ಬೆಟ್ಟಗುಡ್ಡದ ಕೆರೆ ತೊರೆಗಳಲ್ಲಿ ಮಳೆಯ ಅಭಾವದ ಕಾರಣ ಪ್ರಾಣಿಗಳಿಗೆ ಕುಡಿಯಲು ನೀರು ಮತ್ತು ತಿನ್ನಲು ಬೇಕಾದ ಆಹಾರ ಸಿಗುತ್ತಿಲ್ಲದ ಕಾರಣ ಅವುಗಳು ಆಕಸ್ಮಿಕವಾಗಿ ಗ್ರಾಮಕ್ಕೆ ದಾರಿ ತಪ್ಪಿ ಬರುತ್ತಿದ್ದು, ಅವುಗಳು ಬೆಳಗಿನ ಜಾವದಲ್ಲಿ ಕಾಡಿಗೆ ವಾಪಸ್ ಹೋಗುವ ವೇಳೆ ದಾರಿಗೆ ಅಡ್ಡ ಬಂದವರ ಮೇಲೆ ದಾಳಿ ಮಾಡುತ್ತಿವೆ. ತಾವು ಇಲ್ಲಿಗೆ ಬಂದ ಏಳು ತಿಂಗಳಲ್ಲಿ 3 ಕರಡಿ ದಾಳಿಪ್ರಕರಣಗಳು ನಡೆದಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

