ಹಾಸನ

ಎಬಿವಿಪಿ ಕಾರ್ಯಕರ್ತರ ಪ್ರತಿಭಟನೆ

Published On :

ಹಾಸನ: ಹೈದರಾಬಾದ್ ನಗರದಲ್ಲಿ ನಡೆದ ಬಾಂಬ್ ಸ್ಫೋಟ ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ, ನಂತರ ಜಿಲ್ಲಾಧಿಕಾರಿ ಕಚೇರಿಗೆ ಬಂದು ಕೆಲ ಸಮಯ ಧರಣಿ ನಡೆಸಿ ಜಿಲ್ಲಾಧಿಕಾರಿಗೆ ಮನವಿ ನೀಡಿದರು.
ಕೇಂದ್ರ ಗುಪ್ತಚರ ಇಲಾಖೆ ಹಾಗೂ ಪೊಲೀಸರ ಬೇಜವಾಬ್ದಾರಿ ಈ ಸ್ಫೋಟಕ್ಕೆ ಕಾರಣ. ಕಸಬ್, ಅಫ್ಜಲ್‌ಗುರುವನ್ನು ನೇಣಿಗೆ ಏರಿಸಿದ್ದಕ್ಕೆ ಪ್ರತಿಕಾರ ಭಯೋತ್ಪಾದಕರು, ಈ ಕೃತ್ಯ ಎಸಗಿದ್ದಾರೆ. ಸ್ಫೋಟದಲ್ಲಿ 22 ಮಂದಿ ಅಮಾಯಕರು ಸಾವನ್ನಪ್ಪಿದ್ದಾರೆ. ಸೂಕ್ತ ರಕ್ಷಣೆ ಇಲ್ಲದೇ ಇಂತಹ ಅನಾಹುತಗಳು ಹೆಚ್ಚಾಗುತ್ತಿವೆ ಎಂದು ಪ್ರತಿಭಟನಾಕಾರರು ದೂರಿದರು.
ಮೂರು ಕಡೆಗಳಲ್ಲಿ ಸ್ಫೋಟ ಗೊಂಡು ಸುಮಾರು 50 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಹೈದರಾಬಾದ್‌ನ ಜನನಿಬಿಡ ಪ್ರದೇಶವಾದ ದಿಲ್ಸುಖ್, ಕೋನಾರ್ಕ್ ಮತ್ತು ವೆಂಕಟಾದ್ರಿ ಥಿಯೇಟರ್ ಬಳಿ ಸ್ಫೋಟ ಸಂಭವಿಸಿವೆ. ಇದರಿಂದ ಹೈದರಾಬಾದ್ ಜನರಲ್ಲಿ ಆತಂಕ ಹೆಚ್ಚಾಗಿದೆ. ಮತ್ತೆಲ್ಲಿ ಸ್ಪೋಟಗೊಳ್ಳುತ್ತದೆ ಎಂಬ ಭಯ ಜನರಲ್ಲಿ ಆವರಿಸತೊಡಗಿದೆ.
ತಮ್ಮದಲ್ಲದ ತಪ್ಪಿಗೆ ಸ್ಫೋಟದಲ್ಲಿ ಸಾವನ್ನಪ್ಪಿರುವ ಕುಟುಂಬಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸೂಕ್ತ ಪರಿಹಾರ ನೀಡಬೇಕು. ಅಲ್ಲದೆ ಸ್ಫೋಟಕ್ಕೆ ಕಾರಣರಾದ ಭಯೋತ್ಪಾದಕರನ್ನು ಹಿಡಿದು ಕಾನೂನು ರೀತಿಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ಇನ್ನೂ ಮುಂದೆ ಈ ರೀತಿಯ ಅಹಿತಕರ ಪ್ರಕರಣಗಳು ನಡೆಯದಂತೆ ಕಟ್ಟೇಚರವನ್ನು ವಹಿಸಬೇಕು ಎಂದು ಒತ್ತಾಯಿಸಿದರು.
ಪದೇ ಪದೇ ದೇಶದಲ್ಲಿ ಇಂಥ ಪ್ರಕರಣಗಳು ಮರುಕಳಿಸುತ್ತಿದ್ದು, ಕೇಂದ್ರ ಹಾಗೂ ಕೇಂದ್ರ ಗೃಹ ಇಲಾಖೆ ಕಣ್ಣುಮುಚ್ಚಿ ಕುಳಿತಿರುವುದು ಭಾರತೀಯರಲ್ಲಿ ಆತಂಕವನ್ನು ಹೆಚ್ಚು ಮಾಡಿದೆ. ಈ ಸ್ಫೋಟದ ಬಗ್ಗೆ ಕೇಂದ್ರ ಗೃಹ ಇಲಾಖೆಗೆ ಎರಡು ದಿನಗಳ ಹಿಂದೆಯೇ ಮಾಹಿತಿ ಇದ್ದರೂ ಗುಪ್ತಚರ ಇಲಾಖೆ, ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳದಿದ್ದ ಕಾರಣ ಇಂಥ ಅನಾಹುತ ಉಂಟಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ದಿನದ 24 ತಾಸುಗಳು ಗುಪ್ತಚರ ಇಲಾಖೆ ಸಕ್ರಿಯವಾಗಿ ಕಾರ್ಯನಿರ್ವಹಿಸಿ ಮಾಹಿತಿ ಕಲೆಹಾಕಬೇಕು ಹಾಗೂ ಈ ರೀತಿಯ ಪ್ರಕರಣಗಳು ಮುಂದೆ ನಡೆಯದಂತೆ ಜಾಗ್ರತೆವಹಿಸಬೇಕು ಎಂದು. ಹಲವು ವರ್ಷಗಳಿಂದ ಭಯೋತ್ಪಾದಕರು ದೇಶದ ಮೇಲೆ ದಾಳಿ ನಡೆಸಿ ಅಹಿತಕರ ಘಟನೆಗಳನ್ನು ಮಾಡುತ್ತಿದ್ದಾರೆ. ಆದರೆ ದೇಶದಲ್ಲಿ ಭಯೋತ್ಪಾದಕರ ನಿಗ್ರಹಕ್ಕೆ ಕೇಂದ್ರದಲ್ಲಿ ಯಾವುದೇ ರೀತಿಯ ಕ್ರಮಕೈಗೊಳ್ಳದಿರುವುದು ದುರದೃಷ್ಟಕರ ಸಂಗತಿ ಎಂದು ಹೇಳಿದರು.
ಹೈದರಾಬಾದ್, ದೆಹಲಿ, ಮುಂಬೈ, ಬೆಂಗಳೂರು ಸೇರಿದಂತೆ ಇತರೆ ಕಡೆಗಳಲ್ಲಿ ಭಯೋತ್ಪಾಕರ ಅಟ್ಟಹಾಸ ಹೆಚ್ಚಾಗಿದ್ದು, ಪದೇ ಪದೇ ಬಾಂಬ್ ಸ್ಫೋಟಗಳು ಹೆಚ್ಚಾಗುತ್ತಿವೆ.
ಪ್ರಮುಖ ನಗರದಲ್ಲಿ ಭಯೋತ್ಪಾದಕರ ದಾಳಿಗೆ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರಮುಖ ನಗರಗಳಲ್ಲಿ ಬಿಗಿ ಪೊಲೀಸ್ ಬಂದೋ ಬಸ್ತ್ ವ್ಯವಸ್ಥೆಗೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಎಬಿವಿಪಿ ರಾಜ್ಯ ಸಹಕಾರ್ಯದರ್ಶಿ ಮಹಿಪಾಲ್, ನಗರ ಸಹ ಕಾರ್ಯದರ್ಶಿ ಚೈತ್ರ, ನರೇಶ್, ಯತಿರಾಜ್, ಜಿ.ಎಂ.ಲೋಕೇಶ್, ಇಂದು, ಸೌಮ್ಯ, ರಮ್ಯಾ, ಮನು ಹಾಗೂ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.