ಹಾಸನ

ಜೈಕರ್ನಾಟಕ ಕಾರ್ಯಕರ್ತರ ಪಾದಯಾತ್ರೆ

Published On :

ಹಾಸನ: ಜಿಲ್ಲೆಯ ಕಾಡಾನೆ ಸಮಸ್ಯೆ ಸೇರಿದಂತೆ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಂತೆ ಆಗ್ರಹಿಸಿ ಸೋಮವಾರ ಆಲೂರಿನಿಂದ ಹಾಸನದವರೆಗೆ ಜೈಕರ್ನಾಟಕ ಕಾರ್ಯಕರ್ತರು ಪಾದಯಾತ್ರೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ನಾಲ್ಕೈದು ವರ್ಷಗಳಿಂದ ಆಲೂರು ಹಾಗೂ ಸಕಲೇಶಪುರ ತಾಲೂಕಿನಾದ್ಯಂತ ಕಾಡಾನೆಗಳ ಹಾವಳಿ ಅಧಿಕಗೊಂಡು ಅಪಾರ ಪ್ರಮಾಣದ ಪ್ರಾಣ ಹಾನಿ ಹಾಗೂ ಬೆಳೆ ಹಾನಿಯನ್ನು ಉಂಟು ಮಾಡಿದೆ. ಅನೇಕ ರೈತರು, ಕೂಲಿ ಕಾರ್ಮಿಕರು ತಮ್ಮ ಜೀವ ಕಳೆದುಕೊಂಡಿದ್ದು, ಈ ಭಾಗದ ರೈತರು ತಮ್ಮ ಜೀವನವನ್ನು ನಡೆಸಲು ಕಷ್ಟಕರವಾಗಿದ್ದು, ಭಯದಿಂದ ಜೀವನ ನಡೆಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.
ಸಕಲೇಶಪುರ-ಆಲೂರು ಭಾಗದಲ್ಲಿ ಕಾಡಾನೆಗಳ ಸಮಸ್ಯೆ ಉಲ್ಬಣಗೊಂಡಿದ್ದು, ಅದನ್ನು ತಡೆಗಟ್ಟುವಲ್ಲಿ ಸರ್ಕಾರಗಳು ಸಂಪೂರ್ಣವಾಗಿ ವಿಫಲವಾಗಿವೆ. ಹಲವು ಬಾರಿ ಆನೆ ಕಾರಿಡಾರ್ ನಿರ್ಮಾಣ ಮಾಡುವ ಬಗ್ಗೆ ಹಾಗೂ ಸ್ಥಳಾಂತರ ಮಾಡುವ ಬಗ್ಗೆ ಹಲವು ಸಲ ಚರ್ಚೆಗಳು ಸಭೆಗಳನ್ನು ನಡೆಸಿದ್ದರೂ ಸಹ ಅದು ಕಾರ್ಯರೂಪಕ್ಕೆ ಬರಲಿಲ್ಲ ಎಂದು ದೂರಿದ ಅವರು, ಈ ನಿಟ್ಟಿನಲ್ಲಿ ಕರ್ನಾಟಕ ಹಾಗೂ ಕೇಂದ್ರ ಸರ್ಕಾರಗಳು ಅನೇಕ ಯೋಜನೆಗಳನ್ನು ರೂಪಿಸಿ ರೈತರ ಹಾಗೂ ಕೂಲಿ ಕಾರ್ಮಿಕರ ಸಂಕಷ್ಟಗಳಿಗೆ ಸ್ಪಂದಿಸಿದ್ದು ಕೇವಲ ಕಣ್ಣೋರೆಸುವ ನಾಟವಾಗಿದೆ ಎಂದು ಕಿಡಿಕಾರಿದರು.
ಅನುಷ್ಠಾನಗೊಳ್ಳುವ ಲಕ್ಷಣ ಕಾಣುತ್ತಿಲ್ಲ:  ಆದರೆ ಆ ಯೋಜನೆಗಳು ಕಾರ್ಯರೂಪಕ್ಕೆ ಬರುವ ಮುನ್ನವೇ ಪರಿಸರವಾದಿಗಳು ಆನೆಗಳಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ನ್ಯಾಯಾಂಗದ ಮೊರೆ ಹೋಗಿದ್ದಾರೆ. ಒಟ್ಟಿನಲ್ಲಿ ಅಲ್ಲಿಯ ರೈತರ ಹಾಗೂ ಕೂಲಿ ಕಾರ್ಮಿಕರು ಸಂಕಷ್ಟಗಳು ಬಗೆಹರಿಯುವ ಕಾರ್ಯಗಳು ಅನುಷ್ಠಾನಗೊಳ್ಳುವ ಯಾವುದೇ ಲಕ್ಷಣ ಕಾಣುತ್ತಿಲ್ಲ ಎಂದು ದೂರಿದರು. ಸುಮಾರು 50 ವರ್ಷಗಳಿಂದ ಕಾವೇರಿ ಕಣಿವೆಯ ಜನತೆಯ ಕಾವೇರಿ ನೀರಿನ ಉಪಯೋಗದ ಬಗ್ಗೆ ಅನ್ಯಾಯವಾಗುತ್ತಾ ರೈತರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಹೀಗಿರುವಾಗ ಹಿಂದೆ ಬಂದಂತಹ ಎಲ್ಲಾ ಸರ್ಕಾರಗಳು ಸರ್ವೋಚ್ಛ ನ್ಯಾಯಾಲಯದಲ್ಲಿ ಹೋರಾಟ ಮಾಡುತ್ತಲೇ ಬಂದಿವೆ. ಆದರೆ ಮಾನವೀಯತೆ ದೃಷ್ಟಿಯಲ್ಲಿ ಕಾವೇರಿ ನ್ಯಾಯಾಧೀಕರಣ ನೀಡಿರುವ ತೀರ್ಪು ರಾಜ್ಯಕ್ಕೆ ಮಾರಣಾಂತಿಕವಾಗಿ ಹೊರ ಹೊಮ್ಮಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾವೇರಿ ನದಿ ನೀರು ಹಂಚಿಕೆಯಲ್ಲಿ ಪದೇ ಪದೇ ರಾಜ್ಯಕ್ಕೆ ಅನ್ಯಾಯವಾಗುತ್ತಿದ್ದು, ಜಿಲ್ಲೆಯ ಜಲಾಶಯಗಳಿಂದ ನೀರನ್ನು ಹರಿಸುತ್ತಿರುವುದರಿಂದ ಜಿಲ್ಲೆಯಲ್ಲಿ ಸಾಕಷ್ಟ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ. ಮೈಸೂರು, ಮಂಡ್ಯ, ಹಾಸನ ಹಾಗೂ ತುಮಕೂರು ಜಿಲ್ಲೆಯ ರೈತರ ಬದುಕು ಬಹಳ ದುಸ್ಥಿತಿಯಲ್ಲಿದೆ. ರಾಜ್ಯದಲ್ಲಿ ಬೀಳುವ ಮಳೆ ಹಾಗೂ ಜಲಾಶಯಗಳನ್ನು ನಂಬಿ ಬದುಕುತ್ತಿರುವ ಈ ಭಾಗದ ರೈತರ ಪರವಾದ ಹೋರಾಟಗಳು ಫಲ ನೀಡುತ್ತಿಲ್ಲ. ನಿರಂತರವಾಗಿ ನಮ್ಮ ಜಲಾಶಯಗಳಿಂದ ತಮಿಳುನಾಡಿಗೆ ನೀರು ಹರಿಯುತ್ತಿದೆ ಎಂದು ಆರೋಪಿಸಿದರು.
ಹೈಟೆಕ್ ಬಸ್ ನಿಲ್ದಾಣಕ್ಕೆ ಸ್ಥಳಾಂತರ: ಹಾಸನ ನಗರದ ಹೃದಯ ಭಾಗದಲ್ಲಿದ್ದ ಬಸ್ ನಿಲ್ದಾಣವನ್ನು ಚನ್ನಪಟ್ಟಣದ ಕೆರೆ ಅಂಗಳದಲ್ಲಿ ನೂತನವಾಗಿ ನಿರ್ಮಿಸಿರುವ ಹೈಟೆಕ್ ಬಸ್ ನಿಲ್ದಾಣಕ್ಕೆ ಸ್ಥಳಾಂತರಿಸಲಾಗಿದೆ. ಆದರೆ ನಗರದಿಂದ ಆ ಬಸ್ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಅತ್ಯಂತ ಕಿರಿದಾಗಿದೆ. ಜೊತೆಗೆ ಮಧ್ಯದಲ್ಲಿ ರೈಲ್ವೆ ಹಳಿ ಹಾದು ಹೋಗಿರುವುದು ಮತ್ತಷ್ಟು ಜಂಜಾಟಕ್ಕೆ ಕಾರಣವಾಗಿದೆ. ದಿನ ನಿತ್ಯ ಬಸ್ ನಿಲ್ದಾಣಕ್ಕೆ ಹೋಗಿ ಬರುವವರ ಬವಣೆ ಹೇಳತೀರದಾಗಿದೆ.
ದಿನನಿತ್ಯ ಅಪಘಾತಗಳು ಸಂಭವಿಸುತ್ತಿದ್ದು, ಮನುಷ್ಯರ ಜೀವಕ್ಕೆ ಬೆಲೆ ಇಲ್ಲದಂತಾಗಿದೆ. ಆದ್ದರಿಂದ ಈ ಕೂಡಲೇ ಸಂಪರ್ಕ ಸೇತುವೆ ಹಾಗೂ ರಸ್ತೆ ಅಗಲೀಕರಣ ಮಾಡಬೇಕು ಎಂದು ಪಟ್ಟ ಹಿಡಿದರು.
ಸರ್ಕಾರ ಆ ಭಾಗದ ಜನರ ಸಂಕಷ್ಟಗಳನ್ನು ದೂರ ಮಾಡುವ ನಿಟ್ಟಿನಲ್ಲಿ ಪ್ರತಿನಿಧಿಗಳು ಹಾಗೂ ಪರಿಸರವಾದಿಗಳು ಸಭೆ ನಡೆಸಿ ಸೂಕ್ತ ಪರಿಹಾರ ಕಂಡು ಹಿಡಿಯಬೇಕು ಹಾಗೂ ಕಾವೇರಿ ಕಣಿವೆಯ ರೈತರ ಹಿತದೃಷ್ಟಿ ಕಾಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ತುರ್ತಾಗಿ ಸಭೆಗಳನ್ನು ನಡೆಸಿ ಹಾಗೂ ಕಾನೂನಿನ ಅಡಿಯಲ್ಲಿ ಸೂಕ್ತ ಹೋರಾಟ ನಡೆಸಿ ಈ ಭಾಗದ ರೈತರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು.
ಪಾದಯಾತ್ರೆಯಲ್ಲಿ ರಾಜ್ಯಾಧ್ಯಕ್ಷ ಬಿ.ಎನ್.ಜಗದೀಶ್, ರಾಜ್ಯ ಕಾರ್ಯಾಧ್ಯಕ್ಷ ಪ್ರಕಾಶ್, ಜಿಲ್ಲಾಧ್ಯಕ್ಷ ಉಮೇಶ್, ಹರೀಶ್, ಹನುಮಂತೇಗೌಡ, ಸುಪ್ರಜೀತ್‌ಜಾಮಾನ್, ಜಗದೀಶ್, ಅರುಣಕುಮಾರ್, ಪ್ರದೀಪ್, ಹೇಮಂತ್, ಪ್ರವೀಣಕುಮಾರ್, ಸಂದೀಪ್, ಮಹೇಶ್, ಮಂಜುನಾಥ್, ರಾಜು, ಮೋಹನ್, ಶೇಖರ್, ಪವನ್, ಸುರೇಶ್, ರಾಂಗೇಗೌಡ, ಮನು, ಚಂದ್ರು, ಕಿರಣ್, ಕುಮಾರ್, ನಿರಂಜನ್ ಇತರರು ಇದ್ದರು.

ಕಾಲ್ನಡಿಗೆ ಜಾಥಾ
ಆಲೂರು: ಕಾಡಾನೆ ಹಾವಳಿಗೆ ತುತ್ತಾಗಿರುವ ಆಲೂರು-ಸಕಲೇಶಪುರ ತಾಲೂಕನ್ನು ಆನೆ ಹಾವಳಿ ಸಮಸ್ಯೆಯಿಂದ ಪಾರು ಮಾಡುವಲ್ಲಿ ಸರ್ಕಾರ ವಿಫಲವಾಗಿರುವುದನ್ನು ಖಂಡಿಸಿ ಈ ಬಗ್ಗೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲು ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಆಲೂರಿನಿಂದ ಹಾಸನಕ್ಕೆ ಕಾಲ್ನಡಿಗೆ ಜಾಥಾದಲ್ಲಿ ತೆರಳಿದರು. ಪ್ರತಿಭಟನೆಯ ನೇತೃತ್ವವನ್ನು ಜೈಕರ್ನಾಟಕ ತಾ ಅಧ್ಯಕ್ಷ ಹನುಮಂತೇಗೌಡ, ಕಾರ್ಯದರ್ಶಿ ಪ್ರದೀಪ್ ಇತರರು ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.