ಹಾಸನ

ಜಾವಗಲ್ ಹೋಬಳಿಯಲ್ಲಿ ನೀರಿಗೆ ಹಾಹಾಕಾರ

Published On :

ಜಾವಗಲ್: ಜಾವಗಲ್ ಹೊಬಳಿಯ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿಗೆ ತತ್ವಾರ ಉಂಟಾಗಿ ಜನತೆ ನೀರಿಲ್ಲದೆ ಪರಿತಪಿಸುವಂತಾಗಿದೆ.
ಹೋಬಳಿಯ ಬಂದೂರು ಗ್ರಾಮ ಪಂಚಾಯ್ತಿಗೆ ಸೇರಿದ ಧನಂಜಯಪುರ ಗ್ರಾಮದಲ್ಲಿನ ಕೈಪಂಪುಗಳೆಲ್ಲಾ ಕೆಟ್ಟುಹೋಗಿವೆ. ಅಂತರ್ಜಲ ಮಟ್ಟ ಕುಸಿದಿದ್ದು ಕೈಪಂಪುಗಳಲ್ಲಿ ನೀರು ಬರುತ್ತಿಲ್ಲ. ಇರುವ ಒಂದೇ ಕೊಳವೆ ಬಾವಿಯಿಂದ ಇಡೀ ಗ್ರಾಮಕ್ಕೆ ನೀರು ಸರಬರಾಜು ಮಾಡಬೇಕಾದ ಪರಿಸ್ಥಿತಿ ಉಂಟಾಗಿದೆ.  
ಬಿಸಿಲಿನ ಬೇಗೆ ಜತೆಗೆ ವಿದ್ಯುತ್ ಚೆಲ್ಲಾಟದಿಂದ ದಿನನಿತ್ಯವೂ ದೈನಂದಿನ ಚಟುವಟಿಕೆಗಳನ್ನು ಬದಿಗಿರಿಸಿ ನೀರಿಗಾಗಿ ನಲ್ಲಿಯ ಮುಂದೆ ಗಂಟೆಗಟ್ಟಲೆ ಕಾಯುವಂತಾಗಿದೆ ಎಂದು ಮಹಿಳೆಯರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.  
ಬಂದೂರು ಗ್ರಾಪಂನ ಮತ್ತೊಂದು ಗ್ರಾಮವಾದ ಹೊಸೂರಿನಲ್ಲಿ ಇದೇ ಪರಿಸ್ಥಿತಿ ಉಂಟಾಗಿದ್ದು, ಕೂಡಲೆ ಈ ಗ್ರಾಮದಲ್ಲಿ ಹೊಸದಾಗಿ ಬೋರ್‌ವೆಲ್ ಕೊರೆಸಿ ನೀರಿನ ಬವಣೆ ತಪ್ಪಿಸುವಂತೆ ಗ್ರಾ.ಪಂ ಅಧ್ಯಕ್ಷ ಕರಿರಯ್ಯ ಒತ್ತಾಯಿಸಿದ್ದಾರೆ.  
ಜಾವಗಲ್ ಹೋಬಳಿಯ ಇನ್ನೊಂದು ಗ್ರಾಪಂ ಕೇಂದ್ರವಾದ ಅರಕೆರೆ ಗ್ರಾಮದಲ್ಲಿ ನೀರಿನ ಬವಣೆ ತಲೆದೋರಿದೆ ಎಂದು ಗ್ರಾ.ಪಂ ಅಧ್ಯಕ್ಷೆ ಶೋಭಾರವಿ ತಿಳಿಸಿದ್ದಾರೆ.
ಸುಮಾರು 25000 ಜನಸಂಖ್ಯೆ ಇರುವ ಗ್ರಾಮದಲ್ಲಿ ಕೊಳವೆ ಬಾವಿ ಕೊರೆಸಿ ವಿದ್ಯುತ್ ಸಂಪರ್ಕ ಕಲ್ಪಿಸಲು ಸತತವಾಗಿ ಒಂದು ವಾರದಿಂದ ಪ್ರಯತ್ನಿಸುತ್ತಿದ್ದರೂ ಕೊಳವೆ ಬಾವಿಯೊಳಗೆ ಪೈಪ್ ಹೋಗದೆ ಮೋಟಾರ್ ಇಳಿಸಲಾಗದೆ ತುಂಬಾ ತೊಂದರೆಯಾಗುತ್ತಿದೆ ಎಂದು ತಿಳಿಸಿದರು.  
ಇರುವ ಒಂದೇ ಒಂದು ಕೊಳವೆ ಬಾವಿಯಿಂದ ಇಡೀ ಗ್ರಾಮಕ್ಕೆ ನೀರು ಒದಗಿಸಲು ತುಂಬಾ ತೊಂದರೆಯಾಗುತ್ತಿದ್ದು ಹೊಸದಾಗಿ ಕೊಳವೆ ಬಾವಿ ಕೊರೆಸಿ ಟ್ಯಾಂಕ್‌ಗೆ ಸರಬರಾಜು ಮಾಡಿಸಿಕೊಡುವಂತೆ ಸಂಬಂಧಪಟ್ಟ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.  
ಗ್ರಾಮಸ್ಥರಾದ ಅನಂತು ಮಂಜುನಾಥ್, ವಿಶ್ವನಾಥ್, ತಮ್ಮಪ್ಪ, ಜಯಣ್ಣ ನೀರಿನ ಬವಣೆ ನೀಗಿಸುವಂತೆ ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.