ಶಾಂತಿಗ್ರಾಮದಲ್ಲಿ ಸಂತಸದ ಬೆಳಕು ಚೆಲ್ಲಿದ ತಿಂಗಳ ಮಾವನ ಹಬ್ಬ
ಕ.ಪ್ರ. ವಾರ್ತೆ ಟಿ ಹಾಸನ ಟಿ ಮಾ.5
ಕರ್ನಾಟಕ ಜಾನಪದ ಅಕಾಡಮಿ, ಬೆಂಗಳೂರು ಹಾಗೂ ಗ್ರಾಮ ಸಂಸ್ಕೃತಿ ಅಧ್ಯಯನ ಕೇಂದ್ರ, ಶಾಂತಿಗ್ರಾಮ ಆಶ್ರಯದಲ್ಲಿ ಶಾಂತಿಗ್ರಾಮದಲ್ಲಿ ನಡೆದ ಗ್ರಾಮ ಸಂಸ್ಕೃತಿ ಜಾನಪದ ಸಂಭ್ರಮ ಮತ್ತು ಬೆಳದಿಂಗಳ ತಿಂಗಳ ಮಾವನ ಹಬ್ಬ ಗ್ರಾಮೀಣ ಬದುಕಿನ ನೈಜ ಕಲೆ, ಸಂಸ್ಕೃತಿ ಆಚರಣೆ, ಅಲ್ಲಿನ ಜನರ ನಡುವಿನ ಸಾಮರಸ್ಯ, ಕೃಷಿ ಬಗೆಗಿನ ಪ್ರೀತಿ ಮತ್ತಿತರ ಅಂಶಗಳನ್ನು ಅನಾವರಣಗೊಳಿಸಲು ಯಶಸ್ವಿಯಾಯಿತು.
ಇಡೀ ಗ್ರಾಮಕ್ಕೆ ಗ್ರಾಮವೇ ತಮ್ಮ ಸುತ್ತೂರಿನ ಬಂದು ಬಳಗದೊಂದಿಗೆ ಹರ್ಷದಿಂದ ಅಭಿಮಾನದಿಂದ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂಭ್ರಮಿಸಿತು.
ಮರೆತು ಹೋಗುತ್ತಿದ್ದ ಕಲೆ ಸಂಸ್ಕೃತಿ ಆಚರಣೆಗಳನ್ನು ಹಿರಿಯರು ಪ್ರದರ್ಶಿಸುವ ಮೂಲಕ ಯುವಕರಿಗೆ ಪರಿಚಯಿಸಿ, ತನ್ಮೂಲಕ ಮುಂದಿನ ತಲೆಮಾರಿಗೆ ಅದನ್ನು ಪ್ರೇರಣಾ ಪೂರ್ವಕವಾಗಿ ಹಸ್ತಾಂತರಿಸುವ ಪ್ರಯತ್ನ ಮಾಡಿದರು.
ಚಿಕ್ಕ ಮಕ್ಕಳಿಬ್ಬರಿಗೆ ಸಾಂಕೇತಿಕವಾಗಿ ಮದುವೆ ಮಾಡುವುದರೊಂದಿಗೆ ಮೂಲಕ ಭೂಮಿಗೆ ಬಂದ ಚಂದ್ರನಿಗೆ (ಮೋಜಿನ ಮದುವೆ) ತಿಂಗಳ ಮಾವನ ಮದುವೆ ನಡೆಯಿತು. ನೋಡುಗರಿಗೆ ಇದೊಂದು ವಿಭಿನ್ನ ಅನುಭವ ನೀಡಿತು. ಗ್ರಾಮದ ಮಹಿಳೆಯರು ದೊಡ್ಡ ದೊಡ್ಡ ಚುಕ್ಕಿ ರಂಗೋಲಿ ಹಾಕಿ ತಿಂಗಳ ಮಾವನಿಗೆ ರಂಗೋಲಿ ತೇರಿನ ಮೆರುಗು ನೀಡಿದರು.
ಕುಮಾರಯ್ಯ ಮತ್ತು ತಂಡದಿಂದ ಚಿಟ್ಟಿ ಮೇಳ ನಡೆದರೆ, ಮಾರುತಿ ಯುವಕ ಸಂಘದ ತಮಟೆ, ಸಿಂಗಟಗೆರೆಯ ಕೀಲುಕುದುರೆ, ದೊಡ್ಡಳ್ಳಿಯ ರಮೇಶ ತಂಡದ ಜನಪದ ಗೀತೆಗಳು ಎಲ್ಲರನ್ನೂ ರಂಜಿಸಿದರು.
ಎಂ.ವಿ. ಪ್ರಭಾಮಣಿ ಮಂಜುನಾಥ್, ಸ್ಪೂರ್ತಿ ಜೈನ್ ಸಂಗಡಿಗರು, ಸಕಲೇಶಪುರದ ರತ್ನಮ್ಮ ಮತ್ತು ಸಂಗಡಿಗರು ಜಾನಪದ ಗೀತೆಗಳ ಗಾಯನದ ಮೂಲಕ ಜನಪದ ಗೀತೆಗಳ ಗತ್ತು ಗಮ್ಮತ್ತುಗಳನ್ನು ಸಭಿಕರಿಗೆ ಉಣಬಡಿಸಿದರು.
ಪ್ರವಾಸೋದ್ಯಮ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಎಸ್. ಬೋರೇಗೌಡ ಅವರಂತೂ ಹೆಂಗೆಳೆಯರೂ ನಾಚುವಂತೆ ಸೋಬಾನೆ ಪದಗಳನ್ನು ಹಾಡಿ ಚಪ್ಪಾಳೆ ಗಿಟ್ಟಿಸಿದರು. ಶಾಂತಿಗ್ರಾಮದ ಮಹಿಳೆಯರು ಇವರೊಂದಿಗೆ ಧ್ವನಿಗೂಡಿಸಿದರು.
ಶಾಂತಿಗ್ರಾಮದ ಮಕ್ಕಳಿಂದ ಕೋಲಾಟ ನಡೆಯಿತು. ರೊಟ್ಟಿ ಹಾಕುವುದು, ರೊಟ್ಟಿ ಪೂಜೆ, ಗಂಗಾ ಪೂಜೆಗಳು ಮರೆತು ಹೋಗಿದ್ದ ಸಂಭ್ರಮವನ್ನು ನೆನಪಿಸಿದ್ದಲ್ಲದೆ ಅನೇಕ ಅವ್ಯಕ್ತ ಭಾವನೆಗಳು ಕೆದಕಿದವು. ನಗರದ ಬದುಕಿನ ಶೈಲಿಗೆ ಮಾರುಹೋಗುತ್ತಾ ಕಳೆದುಹೋಗುತ್ತಿರುವ ಶ್ರೀಮಂತ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವಂತೆ ಮಾಡಿದವು.
ಒಟ್ಟಾರೆ ಗ್ರಾಮ ಗ್ರಾಮಗಳಲ್ಲಿ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು ಎಂಬ ಹಂಬಲವನ್ನು ಹುಟ್ಟಿಹಾಕಿದವು. ಅದರೆ ಎಲ್ಲಾ ಗ್ರಾಮಗಳಲ್ಲಿ ಇದಕ್ಕೆ ಪ್ರಯತ್ನ ಮಾಡುವವರು ಯಾರು ಬೆಂಬಲ ನೀಡುವವರು ಯಾರು ಎಂಬ ಪ್ರಶ್ನೆ ಜೊತೆಗೆ ಮೂಡುತ್ತದೆ. ಇದಕ್ಕೆ ಗ್ರಾಮಗಳಿಂದಲೇ ಉತ್ತರ ಬರಬಹುದು ಎಂಬುದು ನಿರೀಕ್ಷೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

