ಹಾಸನ

ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಕವಿ ಡಾ. ಶೇಖರ್

Published On :

ಕ.ಪ್ರ. ವಾರ್ತೆ೤ ಹಾಸನ೤ ಮಾ. 10
ಕಸಾಪ ಭವನದಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ 13ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಸಾಹಿತಿ, ಕವಿ ಡಾ.ಎಂ.ಎಸ್. ಶೇಖರ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಎಚ್.ಎಲ್. ಜನಾರ್ದನ್ ತಿಳಿಸಿದ್ದಾರೆ.
  ಮಾ. 30, 31ರಂದು ಸಮ್ಮೇಳನವನ್ನು ಜಿಲ್ಲಾ ಕಸಾಪ ಆವರಣ ಮತ್ತು ಹಾಸನಾಂಬ ಕಲಾಕ್ಷೇತ್ರದಲ್ಲಿ ನಡೆಸಲು ತೀರ್ಮಾಸಲಾಗಿದೆ. ಹಾಗೂ ಪ್ರಮುಖವಾಗಿ 13ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಮಂಡ್ಯ ಜಿಲ್ಲೆಯ ತೂಬಿನಕೆರೆಯ ಸರ್‌ಎಂ.ವಿ. ಸ್ನಾತಕೋತ್ತರ ಕೇಂದ್ರದ  ಡಾ. ಎಂ.ಎಸ್.ಶೇಖರ್ ಅವರ ಸಾಹಿತ್ಯ ಸೇವೆ, ಸಾಧನೆ ಪರಿಗಣಿಸಿ ಸಭೆ ಸರ್ವಾನುಮತದಿಂದ ಆಯ್ಕೆ ಮಾಡಿದೆ ಎಂದು ಹೇಳಿದರು.
ಸಮ್ಮೇಳನಾಧ್ಯಕ್ಷರ ಕಿರುಪರಿಚಯ:
ತಾಲೂಕು ಕಟ್ಟಾಯ ಹೋಬಳಿ ಮಲ್ಲಿಗೆವಾಳು ಗ್ರಾಮದ ಸಿದ್ದಯ್ಯ - ದೇವಮ್ಮ ದಂಪತಿ ಪುತ್ರರಾದ ಡಾ.ಶೇಖರ್ ಮೈಲೂರು ವಿವಿಯಲ್ಲಿ ಎಂ ಎ ಪದವಿ ಪೂರೈಸಿ, ಪಿಎಚ್‌ಡಿ ಪದವಿ ಮತ್ತು ಡಿಪ್ಲೋಮ ಇನ್ ಗಾಂಧಿಯನ್ ಸ್ಟಡೀಸ್ ಅಧ್ಯಯನ ಮುಗಿಸಿದರು.
  ನಂತರ ಮೈಸೂರು ವಿವಿ ವ್ಯಾಪ್ತಿಯ ಹಾಸನ, ಮೈಸೂರು ಮಾನಸಗಂಗೋತ್ರಿ ಮತ್ತು ಮಂಡ್ಯಗಳಲ್ಲಿ ಕನ್ನಡ ಪ್ರಾಧ್ಯಾಪಕರಾಗಿ, ರೀಡರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಪತ್ನಿ ಅಮ್ಮಯ್ಯ ಶೇಖರ್ ಸಹ ಕವಯಿತ್ರಿ ಆಗಿದ್ದು, ಮೈಸೂರು ಮಹಾರಾಜ ಜ್ಯೂನಿಯರ್ ಕಾಲೇಜಿನಲ್ಲಿ ಅಧ್ಯಾಪಕರು. ಪುತ್ರಿಯರು ನಿಖಿಲ ಹಾಗೂ ಚರಿತಾ.
  ಶೇಖರ್ ಕವನ ಸಂಕಲನ, ವಿಮರ್ಶಾ ಗ್ರಂಥ, ಸಂಪಾದನ ಕೃತಿ, ಜಾನಪದ ಕೃತಿಗಳು, ಜೀವನ ಚರಿತ್ರೆ ಸೇರಿದಂತೆ 15ಕ್ಕೂ ಹೆಚ್ಚು ಕೃತಿಗಳನ್ನು ಹೊರತಂದಿದ್ದಾರೆ. ಈ ಪೈಕಿ ಗರಿಕೆ ಕವನ ಸಂಕಲನಕ್ಕೆ ಅನೇಕ ಪ್ರಶಸ್ತಿಗಳು ಲಭಿಸಿವೆ.
ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರಾಗಿದ್ದಾಗ ಆಧುನಿಕ ಕನ್ನಡ ಸಾಹಿತ್ಯದ ಮೊದಲ ತಲೆಮಾರಿನ ದಲಿತ ಸಾಹಿತಿಗಳು, ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಮಾನವ ಪರ ಧೋರಣೆಗಳು, ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಮಹಿಳಾಪರ ಕಾಳಜಿಗಳು, ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಜಾನಪದ ಪ್ರಜ್ಞೆ ಕೃತಿಗಳನ್ನು ಸಂಪಾದಿಸಿದ್ದಾರೆ.
  ಗ್ರಹಿಕೆ, ಕಣ್ಣು ಕಂಡಷ್ಟು ಇವರ ವಿಮರ್ಶಾ ಕೃತಿಗಳು. ನಾರಾಯಣ ಗುರುವಿನ ನಾಡಿನಲ್ಲಿ ಎಂಬ ಪ್ರವಾಸ ಕಥನ, ನಮ್ಮ ಮುಸ್ಲಿಂ ಹಿನ್ನೆಲೆಯ ಜನಪದ ಕಥೆಗಳು. ಜನಪದ ಜಾದೂಗಾರ ಸಯೀದ್‌ಹುಸೇನ್ ಎಂಬ ಜನಪದ ಕೃತಿಗಳು, ಶ್ರೀ ಕೃಷ್ಣ ಆಲನಹಳ್ಳಿಯವರ ಸಾಹಿತ್ಯ ಸಂಶೋಧನಾ ಕೃತಿ, ಡಿ. ಗೋವಿಂದ ದಾಸ್ ಅವರ ಸಮಗ್ರ ಸಾಹಿತ್ಯ ಸಂಪುಟಗಳು ಹೊರಬಂದಿವೆ. ಹಾಸನ ಜಿಲ್ಲಾ ಹೊಯ್ಸಳ ಮಹೋತ್ಸವ ನೆನಪಿನ ಸಂಪುಟ ಹೊಯ್ಸಳ ದರ್ಪಣ, ಹೊಯ್ಸಳ ದೀಪ್ತಿ ಕೃತಿಗಳು ಶೇಖರ್ ಸಂಪಾದಕತ್ವದಲ್ಲಿ ಹೊರಬಂದಿವೆ.
 ಕುದ್ಮುಲ್‌ರಂಗರಾಯರ ಜೀವನ ಚರಿತ್ರೆ, ಪ್ರಬುದ್ಧ ಕರ್ನಾಟಕ ತ್ರೈಮಾಸಿಕ ನಿರ್ವಹಣೆ ಮಾಡಿದ್ದಾರೆ. ಬೂದಿ ಮತ್ತು ಹಂಬು, ರಾಮನ ಕಟ್ಟೆಯೋ ರೆಹಮಾನ್ ಕಟ್ಟೆಯೋ, ಮಾರ, ಐದು ಹೂಗಳ ರಾಣಿ (ಜನಪದ ಕಥೆ), ಕಳ್ಳನ ಕಥೆ, ಕಲ್ದೇವತೆ ಕತೆ(ಜನಪದ ಕತೆ), ಸ್ಕೂಲು ಪ್ರಕಟಿತ ಸಣ್ಣ ಕತೆಗಳು, ಚಪ್ಗೋಡು, ಜಲಗಾರ್ತಿ, ಹಡಬೆ ಕಡಸುಗಳು ಪ್ರಕಟಿತ ಬಿಡಿ ಕವಿತೆಗಳಾಗಿವೆ.
ಕೆಎಸ್‌ನ ಕಾವ್ಯ ಪ್ರಶಸ್ತಿ:   ಹಾಗೂ ಜನಪದ ಜಾದೂಗಾರ ಸಯೀದ್ ಹುಸೇನ್ ಕೃತಿಗೆ ಪುಸ್ತಕ ಪ್ರಶಸ್ತಿ-2003, ಗರಿಕೆ ಕವನ ಸಂಕಲನಕ್ಕೆ ದಿನಕರ ದೇಸಾಯಿ ಕಾವ್ಯ ಪ್ರಶಸ್ತಿ-2010, ಅದೇ ಕವನ ಸಂಕಲನಕ್ಕೆ ಕೆಎಸ್‌ನ ಕಾವ್ಯ ಪ್ರಶಸ್ತಿ-2012, ದಲಿತ ಸಾಹಿತ್ಯ ಪರಿಷತ್‌ನಿಂದ ಇದೇ ಕವನ ಸಂಕಲನಕ್ಕೆ ಕಾವ್ಯ ಪ್ರಶಸ್ತಿ-2010 ಪಡೆದಿದ್ದಾರೆ.
 ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಸಂಚಾಲಕನಾಗಿ ಭಾರತೀಯ ಭಾಷಾ ಸಂಸ್ಥಾನ, ಮೈಸೂರು ಇವರ ಸಹಯೋಗದಲ್ಲಿ ಕನ್ನಡ ಕಾದಂಬರಿ ಮತ್ತು ಕಥಾನಕ ಸಿದ್ದಾಂತಗಳು ಎಂಬ ರಾಷ್ಟ್ರಮಟ್ಟದ ಕಮ್ಮಟವನ್ನು ಸಂಘಟಿಸಿದ ಕೀರ್ತಿಯೂ ಇವರಿಗಿದೆ.
  ಡಾ.ಎಂ.ಎಸ್. ಶೇಖರ್ ಅವರ ಅನೇಕ ವೈಚಾರಿಕ, ಸಾಹಿತ್ಯ ಲೇಖನ ಹಾಗೂ ಸಂದರ್ಶನಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಆಕಾಶವಾಣಿಯಲ್ಲೂ ಇವರ ಭಾಷಣಗಳು ಪ್ರಸಾರವಾಗಿವೆ. ಅನೇಕ ವಿಚಾರಗೋಷ್ಠಿಯಲ್ಲಿ ಪ್ರಬಂಧಮಂಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.