ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಮಂಜು ಚಾಲನೆ
ಕ.ಪ್ರವಾರ್ತೆ ಹೊಳೆನರಸೀಪುರ ಮಾ.19
ಕ್ಷೇತ್ರಕ್ಕೆ ಪರಿಚಯವೇ ಇಲ್ಲದಿದ್ದರೂ ಕಳೆದ ವಿಧಾನಸಭಾ ಚುನಾವಣೆಯಲ್ಲಿ ನನ್ನ ಮೇಲೆ ವಿಶ್ವಾಸವಿರಿಸಿ ಅತ್ಯಧಿಕ ಮತಗಳನ್ನು ನೀಡಿ ನನ್ನನ್ನು ಶಾಸಕನನ್ನಾಗಿ ಮಾಡಿದ್ದೀರಿ, ನೀವು ಆಶೀರ್ವದಿಸಿ ನೀಡಿದ ಮತಗಳಿಂದಲೇ ಇಂದು ಅರಕಲಗೂಡು ಹಾಗೂ ಹಳ್ಳಿಮೈಸೂರು ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡು ನಿಮ್ಮ ಋಣ ತೀರಿಸಲು ಸಾಧ್ಯವಾಯಿತು ಎಂದು ಅರಕಲಗೂಡು ಶಾಸಕ ಎ.ಮಂಜು ಇಲ್ಲಿ ಮತದಾರರ ಸಹಕಾರವನ್ನು ವಿನಮ್ರಪೂರ್ವಕವಾಗಿ ನೆನೆದರು.
ಅವರು ಸೋಮವಾರ ತಾಲೂಕಿನ ಹಳ್ಳಿಮೈಸೂರು ಗ್ರಾಮದಲ್ಲಿ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು. ಸದ್ಯವೇ ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟವಾಗಲಿದ್ದು, ಕ್ಷೇತ್ರದ ಮತದಾರರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿಯೂ ಆಶೀರ್ವದಿಸಿ ತಮ್ಮ ಸೇವೆ ಮಾಡಲು ಮತ್ತೊಂದು ಅವಕಾಶ ನೀಡಬೇಕೆಂದು ಮನವಿ ಮಾಡಿದರು.
ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಗಳಿಸುವುದರ ಜತೆಗೆ ಸಿದ್ದರಾಮಯ್ಯ ಅವರಂತಹ ನಾಯಕರು ಈ ರಾಜ್ಯದಲ್ಲಿ ಮುಖ್ಯಮಂತ್ರಿ ಆಗುವುದು ಖಚಿತವೆಂದು ಶಾಸಕ ಎ.ಮಂಜು ಭವಿಷ್ಯ ನುಡಿದರು.
ಇದೇ ಸಂದರ್ಭದಲ್ಲಿ ಶಾಸಕರ ಹಳ್ಳಿಮೈಸೂರು ಕನಕ ಸಮುದಾಯ ಭವನ, ಆನೆಕನ್ನಾಂಬಾಡಿ ಗ್ರಾಮದಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗಗಳ ವಿದ್ಯಾರ್ಥಿ ನಿಲಯಕ್ಕೆ ಶಂಕುಸ್ಥಾಪನೆ, ಹಾಗೂ ನಗರನಹಳ್ಳಿಯಲ್ಲಿ ಕೋಟಿ ವೆಚ್ಚದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಶಂಕುಸ್ಥಾಪನೆ ನೇರವೇರಿಸಿದರು.
ಪ್ರಸ್ತುತ ಉದ್ಘಾಟನೆ ಮಾಡುತ್ತಿರುವ ಕಾಮಗಾರಿಗಳಿಗೆ ಈ ಹಿಂದಿನ ಸರಕಾರ ಅನುದಾನ ನೀಡಿದ್ದಲ್ಲ, ಈ ಹಣವನ್ನು ತಾವು ಶಾಸಕರಾದ ನಂತರ ಯೋಜನೆ ರೂಪಿಸಿ, ಇದಕ್ಕೆ ಸುವರ್ಣ ಗ್ರಾಮದಡಿಯಲ್ಲಿ ಹದಿಮೂರು ಲಕ್ಷ ಹಾಗು ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ 34 ಲಕ್ಷಗಳಲ್ಲಿ ಭವನ ಪೂರ್ಣಗೊಳಿಸಲಾಗಿದೆ. ನೆಲ ಅಂತಸ್ತಿನ ಅಂತಿಮ ಕಾಮಗಾರಿಗಳು ಭರದಿಂದ ನಡೆಯುತ್ತಿದ್ದು ವಾರದೊಳಗೆ ಪೂರ್ಣಗೊಳ್ಳಲಿದೆ ಎಂದರು.
ಇದೇ ರೀತಿ ಆನೆಕನ್ನಂಬಾಡಿ ಗ್ರಾಮದಲ್ಲಿ 98 ಲಕ್ಷ ವೆಚ್ಚದಲ್ಲಿ ಪರಿಶಿಷ್ಟ ಜಾತಿ ವರ್ಗದ ವಸತಿ ನಿಲಯಕ್ಕೆ ಶಂಕುಸ್ಥಾಪನೆ, ನಗರನಹಳ್ಳಿ ಗ್ರಾಮದಲ್ಲಿ ಒಂದು ಕೋಟಿ ವೆಚ್ಚದ ಸಮುದಾಯ ಆರೋಗ್ಯ ಕೇಂದ್ರದ ಕಾಮಗಾರಿಗೆ ಶಂಕು ಸ್ಥಾಪನೆ ನೇರವೇರಿಸಿದ್ದು, ನಾನು ಶಾಸಕನಾದ ನಂತರ ಹೋಬಳಿ ಕೇಂದ್ರ ಹಳ್ಳಿಮೈಸೂರು ಗ್ರಾಮದ ಪ್ರಥಮದರ್ಜೆ ಕಾಲೇಜು, ಪದವಿ ಪೂರ್ವ ಕಾಲೇಜಿಗೆ ಹೆಚ್ಚುವರಿ ಕೊಠಡಿಗಳು, ಹಳ್ಳಿಮೈಸೂರು ಗ್ರಾಮದ ಎಡಿ ಕಾಲೋನಿ, ಗೋಹಳ್ಳಿ ಹಾಗೂ ಮಂಗಳವಾಡಿ ಗ್ರಾಮಗಳಲ್ಲಿ ಕಾಂಕ್ರಿಟ್ ಚರಂಡಿ ಮತ್ತು ರಸ್ತೆಗೆ ತಲಾ ಹತ್ತು ಲಕ್ಷ ರು.ಗಳ ಕಾಮಗಾರಿಗೆ ಇಂದು ಚಾಲನೆ ನೀಡಲಾಗುತ್ತಿದೆ ಎಂದು ಶಾಸಕ ಎ.ಮಂಜು ತಿಳಿಸಿದರು.
ಮಾಜಿ ಶಾಸಕ ದಿ.ಎ.ದೊಡ್ಡೇಗೌಡರ ಪುತ್ರ ಹಾಗೂ ಕಾಂಗ್ರೆಸ್ ಮುಖಂಡ ಎ.ಡಿ.ಚಂದ್ರಶೇಖರ್ ಮಾತನಾಡಿದರು. ಹಳ್ಳಿಮೈಸೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಾಂಬಶಿವಪ್ಪ ಮಾತನಾಡಿ, ಶಾಸಕ ಮಂಜು ಅವರು ತಾವು ನೀಡಿದ ಭರವಸೆಗಳನ್ನು ಈಡೇರಿಸಿದ್ಧಾರೆ ಜೊತೆಗೆ ಇಂತಹ ಮುಖಂಡರ ನಾಯಕತ್ವ ನಮ್ಮ ಹಳ್ಳಿಮೈಸೂರು ಹೋಬಳಿಗೆ ಅತ್ಯವಶ್ಯವಾಗಿ ಬೇಕಾಗಿದೆ. ಬರುವ ಚುನಾವಣೆಯಲ್ಲಿ ಎ.ಮಂಜು ಅವರನ್ನು ಬೆಂಬಲಿಸಿ ಅಧಿಕ ಮತಗಳನ್ನು ನೀಡಿ ಜಯ ನೀಡಿದಲ್ಲಿ ಮುಂದಿನ ಸಚಿವ ಸಂಪುಟದಲ್ಲಿ ಮಂಜು ಸಚಿವರಾಗುವ ಸಾಧ್ಯತೆ ಹೆಚ್ಚಾಗಿರುವ ಕಾರಣದಿಂದ ಮಂಜು ಅವರನ್ನು ಬೆಂಬಲಿಸ ಬೇಕೆಂದರು. ಕೆಪಿಸಿಸಿ ಸದಸ್ಯ ಪುಟ್ಟೇಗೌಡ, ಹಳ್ಳಿಮೈಸೂರು ಹೋಬಳಿಯ ಕಾಂಗ್ರೆಸ್ ಮುಖಂಡರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

