ಹಾಸನ

ಪ್ರತಿ ಜಿಲ್ಲೆಯಲ್ಲೂ ಹಿಂದುಳಿದವರಿಗೆ ಯುಪಿಎಸ್‌ಸಿ ತರಬೇತಿ ಕೇಂದ್ರ

Published On :

ಕನ್ನಡಪ್ರಭವಾರ್ತೆ ಹಾಸನ ಮಾ. 20
ಹಿಂದುಳಿದ ವರ್ಗದ ಯುವಕರಿಗೆ ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಕೇಂದ್ರ ಲೋಕಸೇವಾ ಆಯೋಗ ಪರೀಕ್ಷೆ (ಯುಪಿಎಸ್‌ಸಿ ) ಎದುರಿಸಲು ಅನುಕೂಲವಾಗುವಂತೆ ತರಬೇತಿ ಕೇಂದ್ರಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ ಎಂದು ಡಿ. ದೇವರಾಜು ಅರಸು ಅಭಿವೃದ್ಧಿ ನಿಗಮ ಅಧ್ಯಕ್ಷ ಅಶೋಕ್‌ಗಸ್ತಿ ತಿಳಿಸಿದ್ದಾರೆ.
  ಬುಧವಾರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ತರಬೇತಿ ಕೇಂದ್ರ ತೆರೆಯುವುದರಿಂದ ಯುಪಿಎಸ್‌ಸಿ ಪರೀಕ್ಷೆ ಎದುರಿಸಲು ಆರ್ಥಿಕವಾಗಿ ಹಿಂದುಳಿದ ವರ್ಗದ ವಿದ್ಯಾವಂತ ಯುವಕರಿಗೆ ಸಾಧ್ಯವಾಗುತ್ತದೆ. ನಿಗಮದಿಂದ 45 ವಿದ್ಯಾರ್ಥಿ ನಿಲಯಗಳನ್ನು ಸಹ ಆರಂಭಿಸಲಾಗುತ್ತಿದೆ ಎಂದರು.
  ಮುಂದಿನ ದಿನಗಳಲ್ಲಿ ವೃತ್ತಿಪರ ಬಿ.ಇ. ಎಂಬಿಬಿಎಸ್ ಮತ್ತಿತರ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಲವನ್ನು ಸುಲಭವಾಗಿ ನೀಡಲಾಗುತ್ತದೆ ಎಂದು ತಿಳಿಸಿದರು.
  ಈಗ ವೃತ್ತಿ ಪರ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು ತಮ್ಮ ಸ್ಥಿರ ಆಸ್ತಿಯ ದಾಖಲೆಗಳನ್ನು ಪರಭಾರೆ ಮಾಡಿ ಸಾಲ ಪಡೆಯಬೇಕಾಗಿದ್ದು, ಅದನ್ನು ಸಡಿಲಗೊಳಿಸಬೇಕೆಂದು ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗಿದೆ. ಅದಕ್ಕೆ ಮುಖ್ಯಮಂತ್ರಿಗಳು ಒಪ್ಪಿದ್ದಾರೆ ಎಂದು ತಿಳಿಸಿದರು.
  ಹಾಸನ ಜಿಲ್ಲೆಯಲ್ಲಿ 19,092 ಫಲಾನುಭವಿಗಳಿಗೆ 19.68 ಕೋಟಿ ರು. ಸಾಲ ನೀಡಲಾಗಿದೆ. ಜಿಲ್ಲೆಯಲ್ಲಿ ಫೆಬ್ರವರಿ ಅಂತ್ಯಕ್ಕೆ 841 ಕೊಳವೆ ಬಾವಿಗಳನ್ನು ಕೊರೆಯಲಾಗಿದೆ. 640 ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿದ್ದು, ಇನ್ನೂ 202ಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕಾಗಿದೆ ಎಂದು ಹೇಳಿದರು.
  ಯೋಜನೆಗಳ ಲಾಭ ಅರ್ಹ ಫಲಾನುಭವಿಗಳಿಗೆ ತಲುಪುತ್ತಿರುವ ಮತ್ತು ಹಣ ಸದ್ವಿನಿಯೋಗ ಆಗುತ್ತಿದೆಯೇ ಎಂಬ ಬಗ್ಗೆ ಸೂಕ್ತ ರೀತಿಯಲ್ಲಿ ಗಮನಹರಿಸಲಾಗಿದೆ ಎಂದರು. ಹಾಸನ ನಗರಾಭಿವೃದ್ಧಿ ಅಧ್ಯಕ್ಷ ನವಿಲೆ ಅಣ್ಣಪ್ಪ ಇದ್ದರು.

ಯಂತ್ರೋಪಕರಣ ಬಳಸಿ ಖಾತ್ರಿ ಕಾಮಗಾರಿ: ಪ್ರತಿಭಟನೆ
ಕನ್ನಡಪ್ರಭವಾರ್ತೆ ಚನ್ನರಾಯಪಟ್ಟಣ ಮಾ.20
ತಾಲೂಕಿನ ಡಿ.ಕಾಳೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಯಂತ್ರೋಪಕರಣ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ರೈತ ಸಂಘದ ಕಾರ್ಯಕರ್ತರು ಹಾಗೂ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಚೋಳೇನಹಳ್ಳಿ ಜಯರಾಂ ನೇತೃತ್ವದಲ್ಲಿ ಧರಣಿ ನಡೆಸಿದರು.
  ತಾಲೂಕು ರೈತ ಸಂಘದ ಅಧ್ಯಕ್ಷ ಸತ್ತಿಗೌಡ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚೋಳೇನಹಳ್ಳಿ ಜಯರಾಂ ನೇತೃತ್ವದಲ್ಲಿ ರೈತ ಸಂಘದ ಕಾರ್ಯಕರ್ತರು ಮಳ್ಳೇನಹಳ್ಳಿ ಗ್ರಾಮಸ್ಥರು ಖಾತ್ರಿ ಯೋಜನೆಯನ್ನು ದುರುಪಯೋಗಪಡಿಸಿ ಕೊಳ್ಳುತ್ತಿರುವುದಲ್ಲದೆ ಯಂತ್ರೋಪಕರಣ ಬಳಸಿ ಕಾಮಗಾರಿ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
  ಯಂತ್ರೋಪಕರಣ ಬಳಸಿ ಕಾಮಗಾರಿ ನಡೆಸುತ್ತಿರುವುದು ಅನ್ಯಾಯವೆಂದು ಕಾರ್ಯದರ್ಶಿ ಹಾಗೂ ಗ್ರಾಮ ಪಂಚಾಯಿತಿ ಪಿಡಿಒ ಅವರನ್ನು ಪ್ರಶ್ನಿಸಿದರೆ ಅದಕ್ಕೆ ತೇಲಿಕೆ ಉತ್ತರ ನೀಡಿದ ಹಿನ್ನೆಲೆಯಲ್ಲಿ ಕಾಮಗಾರಿಯನ್ನು ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಲಾಗುತ್ತಿದೆ ಎಂದು ತಿಳಿಸಿದರು. ಡಿ.ಕಾಳೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮನೆಗಳಿರುವವರಿಗೆ ಹಾಗೂ ಈಗಾಗಲೇ ಕಟ್ಟಿರುವ ಮನೆಗಳಿಗೆ ಬಿಲ್ ನೀಡುತ್ತಿದ್ದು, ಇದೇ ಪರಿಸ್ಥಿತಿ ಮುಂದುವರಿದರೆ ಧರಣಿ ನಡೆಸಲಾಗುವುದು ಎಂದು ತಿಳಿಸಿದರು.

ಉದಯಪುರ ಪದವಿ ಕಾಲೇಜು ವಿದ್ಯಾರ್ಥಿ ಸಂಘ ಉದ್ಘಾಟನೆ
ಕನ್ನಡಪ್ರಭವಾರ್ತೆ ಚನ್ನರಾಯಪಟ್ಟಣ ಮಾ.20
ವಿದ್ಯಾರ್ಥಿಗಳ ಜೀವನ ಅತ್ಯಮೂಲ್ಯವಾಗಿದ್ದು, ಅದನ್ನು ಉತ್ತಮವಾಗಿ ಬಳಸಿಕೊಂಡು ತಮ್ಮ ಜೀವನದ ಮಾರ್ಗ ಕಂಡುಕೊಳ್ಳಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಮಧುಕರಡೇವು ತಿಳಿಸಿದರು.
 ತಾಲೂಕಿನ ಉದಯಪುರ ಪ್ರಥಮ ದರ್ಜೆ ಕಾಲೇಜು ಹಿರಿಯ ವಿದ್ಯಾರ್ಥಿಗಳ ಸಂಘ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ ಯಾವುದೇ ವಿದ್ಯಾರ್ಥಿ ತಮ್ಮ ಜೀವನದ ಭವಿಷ್ಯ ರೂಪಿಸಿಕೊಳ್ಳಲು ಪದವಿ ಶಿಕ್ಷಣ ಅತ್ಯಂತ ನಿರ್ಣಾಯಕವಾಗಿದ್ದು, ಈ ಸಂದರ್ಭದಲ್ಲಿ ಉತ್ತಮವಾಗಿ ವ್ಯಾಸಂಗ ಮಾಡಬೇಕು ಎಂದರು.
 ವಿದ್ಯಾರ್ಥಿಗಳು ತಾವು ತಮ್ಮ ವಿದ್ಯಾರ್ಥಿ ಜೀವನದ ನಂತರ ಉತ್ತಮ ಪದವಿ ಸಿಕ್ಕಿದ ಸಂದರ್ಭದಲ್ಲಿ ತಾವು ವ್ಯಾಸಂಗ ಮಾಡಿದ ಶಾಲಾ ಕಾಲೇಜುಗಳನ್ನು ಮರೆಯದೆ ಅವುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಕೆಲ ಬಡ ವಿದ್ಯಾರ್ಥಿಗಳ ಸಹಾಯಾರ್ಥಕ್ಕೆ ಮುಂದಾಗಬೇಕು ಎಂದು ನುಡಿದರು.
ಕಾಲೇಜು ಪ್ರಾಂಶುಪಾಲ ರಾಮಕೃಷ್ಣ, ಗಂಗಾಧರಯ್ಯ, ಪ್ರೊ. ಶಿವಕುಮಾರ್, ನಂಜುಂಡಸ್ವಾಮಿ, ಗುತ್ತಿಗೆದಾರ ರವಿ ಉಪಸ್ಥಿತರಿದ್ದರು. ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಗದೀಶ್ ಅಧ್ಯಕ್ಷತೆ ವಹಿಸಿದ್ದರು.

ಉಚಿತ ತರಬೇತಿ
ಅರಸೀಕೆರೆ: ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಹಾಗೂ ಸೈನಿಕ ಶಾಲೆ ಪ್ರವೇಶ ಪರೀಕ್ಷೆಗೆ ಉಚಿತ ತರಬೇತಿ ಯನ್ನು ತಾಲೂಕು ಸಮಾಜ ಕಲ್ಯಾಣ ಇಲಾಖೆಯಿಂದ ಕೈಗೊಳ್ಳಲಾಗಿದೆ. ತರಬೇತಿಯನ್ನು ಹೆಣ್ಣು ಮಕ್ಕಳಿಗೆ ಮಾತ್ರ ನೀಡಲಾಗುತ್ತದೆ ಎಂದು ಸಮಾಜ ಕಲ್ಯಾಣಾಧಿಕಾರಿ ಮಹೇಶ್ ತಿಳಿಸಿದ್ದಾರೆ. ಭಾಗವಹಿಸಿದವರಿಗೆ ಉಚಿತ ಸ್ಟೆಡಿ ಮೆಟೀರಿಯಲ್ ನೀಡಲಾಗುವುದು. ಆಸಕ್ತರು ಮಾ.22ರ ಸಂಜೆ 5 ರೊಳಗೆ  ಅರ್ಜಿಯನ್ನು ತಾಲೂಕು ಸಮಾಜ ಕಲ್ಯಾಣ ಅಧಿಕಾರಿಗಳ ಕಚೇರಿಗೆ ಸಲ್ಲಿಸಲು ತಿಳಿಸಿದೆ. ಹೆಚ್ಚಿನ ಮಾಹಿತಿಗೆ ಸಮಾಜ ಕಲ್ಯಾಣ ಅಧಿಕಾರಿಗಳನ್ನು ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.