ಶಾಸಕರಿಂದ ತರಾತುರಿ ಶಂಕುಸ್ಥಾಪನೆ ಹಿಂದೆ ಚುನಾವಣಾ ಗಿಮಿಕ್: ಸಣ್ಣಸ್ವಾಮಿ ಆರೋಪ
ಕಪ್ರ ವಾರ್ತೆ ಸಕಲೇಶಪುರ ಮಾ.20
ಚುನಾವಣೆ ಹತ್ತಿರ ಬರುತ್ತಿದ್ದಂತೆ ತರಾತುರಿಯಲ್ಲಿ ಕಾಮಗಾರಿಗಳ ಶಂಕುಸ್ಥಾಪನೆ ಮಾಡುತ್ತಿರುವ ಶಾಸಕ ಕುಮಾರಸ್ವಾಮಿ ಚುನಾವಣಾ ಗಿಮಿಕ್ ಮಾಡುತ್ತಿದ್ದಾರೆ ಎಂದು ರಾಜ್ಯ ಎಸ್ಸಿಎಸ್ಟಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡಿ.ಸಿ. ಸಣ್ಣಸ್ವಾಮಿ ಆರೋಪಿಸಿದ್ದಾರೆ.
ಪಟ್ಟಣದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಬಿಡುಗಡೆಯಾಗಿದ ಹಣ ತನ್ನ ಕೊಡುಗೆ ಹಾಗೂ ಬೈಕೆರೆ ನಾಗೇಶ್ ಅವರ ಪ್ರಯತ್ನದ ಫಲವಾಗಿ ಬಿಡುಗಡೆಯಾಗಿದ್ದ ದೊಡ್ಡಕೆರೆ ಅಭಿವೃದ್ಧಿ ಯೋಜನೆಯೂ ತನ್ನ ಶ್ರಮ ಎಂದು ಭ್ರಮಿಸಿ ಗುದ್ದಲಿ ಪ್ರಜೆ ನೆರವೇರಿಸಿದ ಶಾಸಕರು ಸತ್ಯ ಮರೆ ಮಾಚಿದ್ದಾರೆ ಎಂದರು.
ತಾಲೂಕಿನಾದ್ಯಂತ ಕುಡಿಯುವ ನೀರಿಗೆ ತೊಂದರೆ ಅನುಭವಿಸುತ್ತಿರುವ ಜನ ಖಾಲಿ ಕೊಡ ಹಿಡಿದು ಬೀದಿಗಿಳಿದು ಹೋರಾಟ ನಡೆಸಿದರೂ ಯಾವುದೇ ಕ್ರಮಕ್ಕೆ ಮುಂದಾಗದ ಶಾಸಕರು ಕಳೆದ 20 ವರ್ಷಗಳಿಂದ ಅನುಭವಿಸಿದ ಅಧಿಕಾರದ ಹುಂಬತನದಿಂದ ಮೆರೆಯುತ್ತಿದ್ದಾರೆ ಎಂದು ದೂರಿದರು.
ಪಟ್ಟಣದ ರಸ್ತೆಗಳ ಕಾಮಗಾರಿ ಗುತ್ತಿಗೆ ನೀಡುವ ವೇಳೆ ಸ್ಥಳೀಯ ಗುತ್ತಿಗೆದಾರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಹೊರಗಿನವರಿಗೆ ಗುತ್ತಿಗೆ ನೀಡಿರುವುದಲ್ಲಿ ಭಾರಿ ಭ್ರಷ್ಟಾಚಾರದ ಹುನ್ನಾರ ನಡೆದಿದೆ ಹಾಗೂ ಚುನಾವಣಾ ವೆಚ್ಚಕ್ಕಾಗಿ ದೇಣಿಗೆ ಪಡೆದಿರಬಹುದು ಎಂದು ದೂರಿದರು.
ಉದಯವಾರ ಗ್ರಾಪಂ ಮಾಜಿ ಅಧ್ಯಕ್ಷ ದೊಡ್ಡೀರಯ್ಯ, ಮುಖಂಡರಾದ ಮನ್ಸೂರ್, ಸುಂದರಮ್ಮ, ಗಿರೀಶ್, ಸ್ವಾಮಿ ಇತರರು ಇದ್ದರು.
ಆಲೂರು: ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ
ಕನ್ನಡಪ್ರಭವಾರ್ತೆ ಆಲೂರು ಮಾ.20
ಪಟ್ಟಣ ಚಿಕ್ಕದಾಗಿರಲಿ, ದೊಡ್ಡದಾಗಿರಲಿ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಹೊಂದಿ ಅಭಿವೃದ್ಧಿ ಕಾಣಬೇಕೆಂದು ಶಾಸಕ ಎಚ್.ಕೆ.ಕುಮಾರಸ್ವಾಮಿ ಹೇಳಿದರು.ಅವರು ಪಟ್ಟಣದ ಕೆಇಬಿ ವೃತ್ತದಲ್ಲಿ ಪಟ್ಟಣ ಪಂಚಾಯ್ತಿ ನಗರೋತ್ಥಾನ, ಮುಖ್ಯ ಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣ ಅಭಿವೃದ್ಧಿ ಯೋಜನೆಯ ಕಾಮಗಾರಿಗೆ ಶಂಕುಸ್ಥಾಪನಾ ಸಮಾರಂಭದ ಅಂಗವಾಗಿ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು. ಬಸ್ ನಿಲ್ದಾಣ ಹಾಗೂ ಸಾರ್ವಜನಿಕ ಶೌಚಾಲಯ ಕಾಮಗಾರಿ ಆರಂಭಿಸಬೇಕಿದೆ. ಫೈರ್ ಸ್ಟೇಷನ್, ಬಸ್ ಡಿಪೋಗೆ ಸ್ಥಳದ ಕೊರತೆಯಿದ್ದು, ಶೀಘ್ರದಲ್ಲೇ ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದರು. ತಾಲೂಕು ಜೆಡಿಎಸ್ ಅಧ್ಯಕ್ಷ ಕೆ.ಎಸ್.ಮಂಜೇಗೌಡ, ತಹಸೀಲ್ದಾರ್ ಶಾರದಾಂಬ, ಪಪಂ ಮಾಜಿ ಅಧ್ಯಕ್ಷ ಎಚ್.ಬಿ.ಧರ್ಮರಾಜ, ಮಾಜಿ ಸದಸ್ಯ ಎ.ಎಚ್.ಲಕ್ಷ್ಮಣ್, ಈಶ್ವರ್, ಪಪಂ ಮುಖ್ಯಾಧಿಕಾರಿ ರಾಮಚಂದ್ರಪ್ಪ, ನಂದೀಶ್, ಜಯಣ್ಣ, ಆಶಾ, ಜಯಮ್ಮ, ಎ.ಎಸ್.ಬೇಗಂ, ಎಚ್.ಪಿ.ದಿನೇಶ್, ನಾಗರತ್ನ, ಸಂದೇಶ್ ಇತರರಿದ್ದರು.
ರಸ್ತೆ, ಚರಂಡಿ ಕಾಮಗಾರಿಗೆ ಶಾಸಕ ಪ್ರಕಾಶ್ ಚಾಲನೆ
ಕನ್ನಡಪ್ರಭವಾರ್ತೆ ಹಾಸನ ಮಾ. 20
ನಗರ ಕಸ್ತೂರಿಬಾ ರಸ್ತೆಯ ವಾಟರ್ಪಂಪ್ ಸಮೀಪ ಭಾನುವಾರ ಸಿಎಂಎಸ್ ಎಂಟಿಡಿಪಿ 2ನೇ ಹಂತದ ಯೋಜನೆಯಡಿ ನಗರದ ವಿವಿಧ ಬಡಾವಣೆಗಳಿಗೆ ಮಂಜೂರಾಗಿರುವ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಚಾಲನೆ ನೀಡಲಾಯಿತು.
ಶಾಸಕ ಎಚ್.ಎಸ್.ಪ್ರಕಾಶ್ ಗುದ್ದಲಿ ಪೂಜೆ ನೆರವೇರಿಸಿ, ಈ ಯೋಜನೆಯಿಂದಾಗಿ ನಗರದ ಬಹುಪಾಲು ರಸ್ತೆಗಳು ಸಂಪೂರ್ಣ ಡಾಂಬರೀಕರಣವಾಗಲಿವೆ ಹಾಗೂ ಚರಂಡಿ ಸಮಸ್ಯೆ ಬಗೆಹರಿಯಲಿದ್ದು, ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ. ಹಾಗೂ ಯಾವುದೇ ಕಾರಣಕ್ಕೂ ಗುಣಮಟ್ಟದಲ್ಲಿ ವ್ಯತ್ಯಾಸವಾಗದಂತೆ ಗಮನಹರಿಸಲು ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಗಿದ್ದು, ಈ ಯೋಜನೆ ನಗರದ ಅಭಿವೃದ್ಧಿಗೆ ಮತ್ತಷ್ಟು ಪೂರಕವಾಗಲಿದೆ ಎಂದು ನುಡಿದರು.
ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ ಮಾತನಾಡಿ, ಯೋಜನೆಗಳು ಮಂಜೂರಾಗುವುದರ ಹಿಂದೆ ಸಾಕಷ್ಟು ಶ್ರಮವಿರುತ್ತದೆ. ಆದರೆ ಗುಣಮಟ್ಟದ ಕಾಮಗಾರಿಗಳಾಗದಿದ್ದಲ್ಲಿ ಅದೆಲ್ಲವೂ ವ್ಯರ್ಥವಾಗುತ್ತದೆ. ಆದ ಕಾರಣ ಸಂಬಂಧಪಟ್ಟ ಗುತ್ತಿಗೆದಾರರು ಗುಣಮಟ್ಟವನ್ನು ಕಾಪಾಡಿಕೊಳ್ಳುವ ಮೂಲಕ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ನಿರ್ವಹಿಸಬೇಕು ಎಂದು ಹೇಳಿದರು.
ನಗರಸಭೆ ಮಾಜಿ ಅಧ್ಯಕ್ಷ ಸಿ.ಆರ್.ಶಂಕರ್ ಮಾತನಾಡಿ, ಕಳೆದ ಅವಧಿಯಲ್ಲಿ ನಗರದಲ್ಲಿ ಹಿಂದೆಂದೂ ಆಗದಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಅದಕ್ಕೆ ಮಾಜಿ ಪ್ರಧಾನಿ ದೇವೇಗೌಡ ಹಾಗೂ ರೇವಣ್ಣನವರ ಕೊಡುಗೆ ಅಪಾರವಾದುದು. ಮಾದರಿ ನಗರವನ್ನಾಗಿಸುವ ಅವರ ಪ್ರಯತ್ನಕ್ಕೆ ಎಲ್ಲರೂ ಕೈಜೋಡಿಸಬೇಕಿದೆ ಎಂದರು. ನಗರಸಭೆ ಸದಸ್ಯ ಡಾ. ಎಚ್.ಎಸ್.ಅನಿಲ್ಕುಮಾರ್, ಗೋಪಾಲ್, ಪ್ರಸನ್ನಕುಮಾರ್, ಪ್ರಸನ್ನ ಕೃಷ್ಣಮೂರ್ತಿ ಹಾಗೂ ನಗರಸಭಾ ಆಯುಕ್ತ ನಾಗಭೂಷಣ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

