ಜೆಡಿಎಸ್ ಅಧಿಕಾರಕ್ಕೆ ಬಂದರೆ ಎಲ್ಲ ರೈತರ ಸಾಲ ಸಂಪೂರ್ಣ ಮನ್ನಾ: ರೇವಣ್ಣ
ಕ.ಪ್ರ ವಾರ್ತೆ ಹೊಳೆನರಸೀಪುರ ಮಾ.22
ಎಚ್.ಡಿ.ಕುಮಾರಸ್ವಾಮಿ ತಮ್ಮ ಅಧಿಕಾರದ ಅವಧಿಯಲ್ಲಿ ನೀಡಿದ ಜನಪರ ಕಾರ್ಯಕ್ರಮಗಳನ್ನು ನಂತರದಲ್ಲಿ ಅಧಿಕಾರಕ್ಕೆ ಬಂದ ಸರ್ಕಾರಗಳೊಂದಿಗೆ ಸಮೀಕರಿಸಿ, ಚಿಂತನೆ ನಡೆಸಿ ಮತದಾರ ಬಂಧುಗಳು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ಗೆ ಮರಳಿ ಅಧಿಕಾರ ನೀಡಿದಲ್ಲಿ ರಾಜ್ಯದಲ್ಲಿನ ಎಲ್ಲಾ ರೈತರ ಸಾಲ ಮನ್ನಾ ಮಾಡಲಾಗುವುದು ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ರೇವಣ್ಣ ಭರವಸೆ ನೀಡಿದರು. ಶುಕ್ರವಾರ ಪಟ್ಟಣದ ಗುತ್ತಮ್ಮ ತಮ್ಮೇಗೌಡ ಕಲ್ಯಾಣ ಮಂದಿರದಲ್ಲಿ ಜೆಡಿಎಸ್ ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪಪಂ ನೂತನ ಸದಸ್ಯರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದರು. ತಾಲೂಕಿನಲ್ಲಿ ಕಾಂಗ್ರೆಸ್ನ ವ್ಯಾಪಕ ಅಪಪ್ರಚಾರದ ನಡುವೆಯೂ ಪಟ್ಟಣದ ಪುರಸಭೆಗೆ ನಡೆದ ಚುನಾವಣೆಯಲ್ಲಿ 16 ಜೆಡಿಎಸ್ ಅಭ್ಯರ್ಥಿಗಳಿಗೆ ಗೆಲವು ನೀಡುವ ಮೂಲಕ ಜೆಡಿಎಸ್ ಮೇಲೆ ವಿಶ್ವಾಸವಿರಿಸಿ ಮತನೀಡಿದ ಜನತೆಗೆ ಎಚ್.ಡಿ.ರೇವಣ್ಣ ಇದೆ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಿದರು. ಪುರಸಭೆಯ ಚುನಾವಣೆಯಲ್ಲಿ ಮತದಾರರು ನೀಡಿರುವ ಯಶಸ್ಸು ಜೆಡಿಎಸ್ ಕಾರ್ಯಕರ್ತರ ಒಗ್ಗಟ್ಟಿನಿಂದ ಕೆಲಸ ನಿರ್ವಹಿಸಿದ ಕಾರಣಕ್ಕಾಗಿ ನೀಡಿರುವ ಗೆಲವಾಗಿದೆ ಎಂದರು.
ನೀತಿ ಸಂಹಿತೆ ಉಲ್ಲಂಘನೆ: ಆರೋಪ
ಚನ್ನರಾಯಪಟ್ಟಣ: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಿಗೆ ನೀಡಿರುವ ಸರ್ಕಾರಿ ವಾಹನ ಸರ್ಕಾರ ವಾಪಸ್ ಪಡೆಯದಿರುವುದರಿಂದ ವಾಹನಗಳ ದುರುಪಯೋಗವಾಗುತ್ತಿದೆ ಎಂದು ಜಿಪಂ ಸದಸ್ಯ ಕಿಶೋರ್ ಆಪಾದಿಸಿದರು.
ಈ ಸಂಬಂಧ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಸನ ಜಿಪಂ ಅಧ್ಯಕ್ಷರು ಹಾಗೂ ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷರಿಗೆ ನೀಡಿರುವ ವಾಹನವನ್ನು ಸರ್ಕಾರ ವಾಪಸ್ ಪಡೆಯದಿರುವ ಕಾರಣ, ಅವರು ಅದೆ ಸರ್ಕಾರಿ ವಾಹನದಲ್ಲಿ ಸಂಚರಿಸುತ್ತಿದ್ದು, ರಾಜ್ಯದಲ್ಲೊಂದು ಕಾನೂನಾದರೆ ಹಾಸನ ಜಿಲ್ಲೆಯಲ್ಲೊಂದು ಕಾನೂನಾಗಿದೆ ಎಂದು ಆರೋಪಿಸಿದರು. ವಾಹನ ದುರುಪಯೋಗದ ಕುರಿತು ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿದರೆ ಅವರು ಕರೆ ಸ್ವೀಕರಿಸುತ್ತಿಲ್ಲ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ದೂರು ನೀಡಿದ್ದರೂ, ಯಾವುದೇ ಕ್ರಮ ತೆಗೆದುಕೊಳ್ಳದಿರುವ ಕಾರಣ ಅಧಿಕಾರ ದುರುಪಯೋಗ ಮಾಡಿಕೊಳ್ಳಲು ಅವಕಾಶ ನೀಡಿದ್ದಾರೆ ಎಂದು ತಿಳಿಸಿದರು.
ಹೊಸಬರಿಗೆ ಟಿಕೆಟ್ ಬೇಡ: ರಾಜಪ್ಪ
ಚನ್ನರಾಯಪಟ್ಟಣ: ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದಿಂದ ಹೊಸಬರಿಗೆ ಹಾಗೂ ವಲಸಿಗರಿಗೆ ಟಿಕೆಟ್ ನೀಡದಂತೆ ಕಾಂಗ್ರೆಸ್ ಹೈಕಮಾಂಡ್ಗೆ ಮನವಿ ಸಲ್ಲಿಸಲಾಗಿದೆ ಎಂದು ಕೆಪಿಸಿಸಿ ಸದಸ್ಯ ಸಿ.ವಿ ರಾಜಪ್ಪ ತಿಳಿಸಿದರು. ಈ ಸಂಬಂಧ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಶಾಸಕ ಸಿ.ಎಸ್. ಪುಟ್ಟೇಗೌಡರು ಅಧಿಕಾರಕ್ಕಾಗಿ ರಾಜಿನಾಮೆ ನೀಡಿ ಕಾಂಗ್ರೆಸ್ ಮನೆ ಬಾಗಿಲು ತಟ್ಟುತ್ತಿದ್ದು, ಅವರಿಗೆ ಬಿ.ಫಾರಂ ನೀಡದಂತೆ ದೆಹಲಿಯಲ್ಲಿ ಪಕ್ಷದ ಹೈಕಮಾಂಡ್ಗೆ ಹಿರೀಸಾವೆ ಹಾಗೂ ಚನ್ನರಾಯಪಟ್ಟಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮತ್ತು ಮುಖಂಡರು ಇದ್ದ ನಿಯೋಗದಿಂದ ಕಾಂಗ್ರೆಸ್ ವರಿಷ್ಠರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಈ ಸಂಬಂಧ ಪರಿಶೀಲನೆ ನಡೆಸುವುದಾಗಿ ವರಿಷ್ಠರು ಭರವಸೆ ನೀಡಿದ್ದಾರೆ ಎಂದು ಅವರು ತಿಳಿಸಿದರು.
'ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ಬೆಳೆಸಿ'
ಕನ್ನಡಪ್ರಭ ವಾರ್ತೆ ಆಲೂರು ಮಾ. 21
ಶಿಕ್ಷಕರು ವಿದ್ಯಾರ್ಥಿಗಳಿಗೆ ಶಿಕ್ಷಣದ ಜತೆಯಲ್ಲಿ ಆತ್ಮಸ್ಥೈರ್ಯ ಬೆಳೆಯುವಂತಹ ಮಾರ್ಗದರ್ಶನ ನೀಡಬೇಕು. ಇದರಿಂದ ವಿದ್ಯಾರ್ಥಿಗಳು ಮುಂದೆ ಅವರ ಆಯ್ಕೆಯ ಕ್ಷೇತ್ರದಲ್ಲಿ ಗಣನೀಯ ಯಶಸ್ಸು ಗಳಿಸುವರು ಎಂದು ತಾಲೂಕು ಕ್ಷೇತ್ರ ಸಮನ್ವಯಾಧಿಕಾರಿ ರವಿಪ್ರಕಾಶ್ ಹೇಳಿದರು.
ಪಟ್ಟಣದ ಎನ್ಎಚ್ಪಿಎಸ್ ಶಾಲೆಯಲ್ಲಿ ಏರ್ಪಡಿಸಿದ್ದ ಶಾಲಾ ವಾರ್ಷಿಕೋತ್ಸವ ಹಾಗೂ ಶಾರದ ಪೂಜಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಮಾರಂಭ ಉದ್ಘಾಟಿಸಿದ ತಾಪಂ ಅಧ್ಯಕ್ಷೆ ಯಶೋಧ ಹರೀಶ್ ಮಾತನಾಡಿ, ಪೋಷಕರು ತಮ್ಮ ಮಕ್ಕಳನ್ನು ಒಳ್ಳೆಯ ಪರಿಸರದಲ್ಲಿ ಬೆಳೆಸಿದರೆ ಶಿಕ್ಷಕರು ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವನೆ ಬೆಳೆಸಬೇಕು ಹಾಗೂ ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುವ ಪ್ರಯತ್ನ ಮಾಡಬೇಕೆಂದರು. ಮುಖ್ಯ ಶಿಕ್ಷಕ ಎಂ.ಪಿ.ನಾಗರಾಜೇಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು.
ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಕೆ.ನಾಗರಾಜ್, ಶಿಕ್ಷಣ ಸಂಯೋಜಕ ಸಿ.ಕೆ.ವಿರೂಪಾಕ್ಷಪ್ಪ, ಕೆ.ವಿ.ಮಲ್ಲಿಕಾರ್ಜುನ್, ಎಸ್ಡಿಎಂಸಿ ಅಧ್ಯಕ್ಷೆ ಮೀನಾಕ್ಷಿ, ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ವಿ.ರಾಘವೇಂದ್ರ ಸಿಆರ್ಪಿ ಪ್ರಮೀಳ, ಡಾ.ಗಿರೀಶ್ ಬಸಪ್ಪ, ಕವಿತಾ ಗಿರೀಶ್ ಬಸಪ್ಪ, ಶಿಕ್ಷಕಿ ಬಿ.ಎಸ್.ಗಾಯತ್ರಿ ಇತರರು ಇದ್ದರು. ಶಿಕ್ಷಕಿ ಜಬೀನ್ತಾಜ್ ನಿರೂಪಿಸಿದರು. ಹಿರಿಯ ಶಿಕ್ಷಕ ಎ.ಟಿ.ಮಲ್ಲೇಶ್ ಸ್ವಾಗತಿಸಿದರು.
'ಬಡ ರೋಗಿಗಳಿಗೆ ಉಚಿತ ಡಯಾಲಿಸಿಸ್'
ಕನ್ನಡಪ್ರಭ ವಾರ್ತೆ ಹಾಸನ ಮಾ. 21
ಶೃಂಗೇರಿ ಶಂಕರ ಮಠದ ವತಿಯಿಂದ ಬೆಂಗಳೂರಿನಲ್ಲಿ ಆರಂಭಿಸಿರುವ ಸುಸಜ್ಜಿತ ಆಸ್ಪತ್ರೆಯಲ್ಲಿ ಪ್ರತಿ ನಿತ್ಯವೂ ಸುಮಾರು 100 ಜನರಿಗೆ ಕೇವಲ 550 ರು.ಗಳಿಗೆ ಹಾಗೂ ಹಲವು ಸಂದರ್ಭದಲ್ಲಿ ಅತ್ಯಂತ ಕಡು ಬಡವರಿಗೆ ಉಚಿತವಾಗಿ ಡಯಾಲಿಸಿಸ್ ಮಾಡುತ್ತಿರುವುದಾಗಿ ಶಂಕರ ಮಠದ ಆಡಳಿತಾಧಿಕಾರಿ ಹಾಗೂ ಪದ್ಮಶ್ರೀ ಪುರಸ್ಕೃತ ಡಾ. ವಿ.ಆರ್. ಗೌರಿಶಂಕರ್ ತಿಳಿಸಿದರು.
ನಗರದ ನವೀಕೃತ ಶಂಕರ ಮಠವನ್ನು ಇತ್ತೀಚೆಗೆ ಜ್ಯೋತಿ ಬೆಳಗುವುದರ ಮೂಲಕ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಶಂಕರ ಮಠದ ಸಾಮಾಜಿಕ ಕಳಕಳಿಯ ಬಗ್ಗೆ ವಿವರಿಸಿದರು.
ಶಾಲಾ ಮಕ್ಕಳಿಗೆ ಮಧ್ಯಾಹ್ನದ ಊಟ ಒದಗಿಸುವ ಯೋಜನೆಯನ್ನು ದೇಶದಲ್ಲೇ ಪ್ರಪ್ರಥಮ ಬಾರಿಗೆ 1995 ರಲ್ಲೇ ಆರಂಭಿಸಿದ ಕೀರ್ತಿ ಶಂಕರ ಮಠಕ್ಕೆ ಸಲ್ಲಬೇಕು. 1995 ರಲ್ಲೇ ಶೃಂಗೇರಿ ಸುತ್ತಮುತ್ತಲಿನ ಪ್ರದೇಶಕ್ಕೆ ನೀರು ಸರಬರಾಜು ವ್ಯವಸ್ಥೆಗಾಗಿ 10 ಲಕ್ಷ ರು.ಗಳನ್ನು ಶ್ರೀಮಠದಿಂದಲೇ ನೀಡಲಾಗಿದೆ. ಹಲವು ಸಂದರ್ಭಗಳಲ್ಲಿ ಸರ್ಕಾರವೇ ಧನ ಸಹಾಯ ಮಾಡಲು ಬಂದಾಗಲೆಲ್ಲಾ ವಿನಯವಾಗಿಯೇ ಅದನ್ನು ನಿರಾಕರಿಸಲಾಗಿದೆ ಎಂದು ತಿಳಿಸಿದರು.12 ಶತಮಾನಗಳ ಇತಿಹಾಸ ಹೊಂದಿರುವ ಶ್ರೀಮಠವು ಕಳಂಕ ರಹಿತವಾಗಿದ್ದು, ಲಕ್ಷಾಂತರ ಭಕ್ತರ ನೆಮ್ಮದಿಯ ಕೇಂದ್ರವಾಗಿದೆ. ಹಾಸನ ಜನತೆ ಶಂಕರಮಠದ ನವೀಕೃತ ಕಟ್ಟಡದ ಪ್ರಯೋಜನ ಪಡೆಯಬೇಕೆಂದು ಕೋರಿದ ಅವರು, ಹಾಸನ ಶಂಕರ ಮಠದಿಂದ ಮುಂದೆಯೂ ಹಲವಾರು ಚಟುವಟಿಕೆಗಳನ್ನು ಯೋಜಿಸುವುದಾಗಿ ತಿಳಿಸಿದರು.
ಹಾಸನ ಶಂಕರ ಮಠದ ಧರ್ಮಾಧಿಕಾರಿ ಎಂ.ಎಸ್. ಶ್ರೀಕಂಠಯ್ಯ ಪ್ರಾಸ್ತಾವಿಕ ನುಡಿಗಳನ್ನಾಡಿ, ಹಾಸನದ ಜನತೆಯ ಅವಶ್ಯಕತೆಗೆ ತಕ್ಕಂತೆ ವಿಸ್ತಾರ ಮಾಡಿರುವ ಶಂಕರ ಮಠದಲ್ಲಿನ ಸೌಲಭ್ಯಗಳ ಬಗ್ಗೆ ವಿವರಿಸಿದರು. ಈಗಾಗಲೇ ಮಠದಿಂದ ನಡೆಯುತ್ತಿರುವ ಆಧ್ಯಾತ್ಮಿಕ ಚಟುವಟಿಕೆಗಳನ್ನು ಇನ್ನೂ ಹೆಚ್ಚಿಸುವುದಾಗಿ ಘೋಷಿಸಿದರು. ಮೊದಲಿಗೆ ಶಂಕರ ಭಜನಾ ಮಂಡಳಿಯಿಂದ ಭಜನೆ ನಡೆಯಿತು. ವಿದ್ವಾನ್ ಮುರುಳಿ ಅವರ ಸಂಗೀತ ಕಚೇರಿ ಏರ್ಪಡಿಲಾಗಿತ್ತು.
ಬ್ಲಾಕ್ಬೆಲ್ಟ್: ಪದವಿ ಪಡೆದ ಕರಾಟೆ ಪಟುಗಳು
ಕನ್ನಡಪ್ರಭ ವಾರ್ತೆ ಸಕಲೇಶಪುರ ಮಾ. 20
ಇತ್ತೀಚೆಗೆ ಪಟ್ಟಣದಲ್ಲಿ ಪ್ರಥಮ ಬಾರಿಗೆ ದಿವರ್ಲ್ಡ್ ಶೋಟಕಾ ಕರಾಟೆ ಫೆಡೆರೇಷನ್ ವತಿಯಿಂದ ನಡೆದ
ಬ್ಲಾಕ್ಬೆಲ್ಟ್ ಪರೀಕ್ಷೆಯಲ್ಲಿ ಸಕಲೇಶಪುರದ ವರ್ಲ್ಡ್ ಶೋಟಕಾನ್ ವಿದ್ಯಾರ್ಥಿ ಮಂಜುನಾಥ, ಶಂಸುದ್ದೀನ್, ಮಾನಸ ಶಾಲೆಯ ವಿದ್ಯಾರ್ಥಿ ರಕ್ಷಿತ್ ಬ್ಲಾಕ್ಬೆಲ್ಟ್ ಪದವಿ ಹಾಗೂ ತರಬೇತುದಾರ ಹರೀಶ್ ಹಾಗೂ ಖಲಂದರ್ ಬಾಬಾ ಬ್ಲಾಕ್ಬೆಲ್ಟ್ ಸೆಕೆಂಡ್ ಡಿಗ್ರಿ ಪದವಿ ಪಡೆದರು.ಈ ಸಂದರ್ಭದಲ್ಲಿ 2 ಬಾರಿ ರಾಷ್ಟ್ರ ಹಾಗೂ 6 ಬಾರಿ ರಾಜ್ಯ ಪ್ರಶಸ್ತಿ ಪಡೆದ ಸಂತಜೋಸೆಫ್ ಶಾಲೆ ವಿದ್ಯಾರ್ಥಿನಿ ಬಿ.ಪಿ.ಹರ್ಷಿತರನ್ನು ಸನ್ಮಾನಿಸಲಾಯಿತು. ಡಾ.ಕಿಶೋರ್, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಜೈಮಾರುತಿ ದೇವರಾಜ್, ಜೆಡಿಎಸ್ ಮುಖಂಡ ಪ್ರಜ್ವಲ್ಗೌಡ, ಎನ್.ಆರ್.ಲಕ್ಷ್ಮಣ್, ಮಾಗೇರಿ ಸುರೇಶಗೌಡ ಪ್ರಶಾಂತ್, ನ್ಯಾಯವಾದಿ ಕೆ.ಎಸ್.ಕವನ ಜಾನೆಕೆರೆ ಆರ್. ಪರಮೇಶ್, ಭಾಗೀರಥಿ, ಪವನ್ಕುಮಾರ್, ಬಿ.ಕೆ.ಪರಮೇಶ್, ಕೆ.ಜೆ. ಅನಂತ್ಕುಮಾರ್ ಇದ್ದರು.
ಅರಸೀಕೆರೆ: ತೆಂಗಿನ ಮರಗಳಿಗೆ ಬೆಂಕಿ
ಕನ್ನಡಪ್ರಭ ವಾರ್ತೆ ಅರಸೀಕೆರೆ ಮಾ.22
ತೋಟದಲ್ಲಿ ಸಂಗ್ರಹಿಸಿಟ್ಟ ಸುಮಾರು 6 ಟ್ರ್ಯಾಕ್ಟರ್ನಷ್ಟು ಸೌದೆ ರಾಶಿಗೆ ದುಷ್ಕರ್ಮಿಗಳು ತಡರಾತ್ರಿ ಬೆಂಕಿ ಇಟ್ಟ ಪರಿಣಾಮ, ಸಮೀಪದಲ್ಲಿಯೇ ಇದ್ದ 8-10 ತೆಂಗಿನ ಮರಗಳು ಬೆಂಕಿಗೆ ಆಹುತಿಯಾಗಿದ್ದು, ಸಾವಿರಾರು ರುಪಾಯಿ ನಷ್ಟ ಸಂಭವಿಸಿದ ಘಟನೆ ತಾಲೂಕಿನ ಯಾಚಗೊಂಡನಹಳ್ಳಿ ಸಂಭವಿಸಿದೆ.
ಗ್ರಾಮದ ನೀಲಕಂಠಪ್ಪ ಎಂಬುವರಿಗೆ ಸೇರಿದ ತೋಟದಲ್ಲಿ ಈ ಘಟನೆ ಸಂಭವಿಸಿದ್ದು ಬೆಂಕಿ ಬಿದ್ದ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಗ್ರಾಮಸ್ಥರು ಬೆಂಕಿ ನಂದಿಸುವ ಪ್ರಯತ್ನ ನಡೆಸಿದರಾದರೂ, ಯಾವುದೇ ಪ್ರಯೋಜನವಾಗಿಲ್ಲ. ಸೌದೆ ರಾಶಿ ತೆಂಗಿನ ತೋಟದ ಮಧ್ಯೆ ಇದ್ದುದ್ದರಿಂದಾಗಿ ಬೆಂಕಿಯ ಕೆನ್ನಾಲಿಗೆ ತೆಂಗಿನ ಮರಗಳಿಗೆ ಆವರಿಸಿದೆ. ಮರದಲ್ಲಿದ್ದ ಕಾಯಿ, ಎಳನೀರು ಸುಟ್ಟು ಹೋಗಿದ್ದು ನಷ್ಟ ಸಂಭವಿಸಿದೆ.ತೋಟದ ಮಾಲೀಕರು ಘಟನೆಯ ಸಂಬಂಧ ಬಾಣಾವರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.
ಮೂರು ಬೈಕ್ ಕಳವು
ಚನ್ನರಾಯಪಟ್ಟಣ: ಪ್ರತ್ಯೇಕ ಪ್ರಕರಣಗಳಲ್ಲಿ ಮೂರು ಬೈಕ್ಗಳು ಕಳವಾಗಿರುವ ಘಟನೆ ಗುರುವಾರ ನಡೆದಿದೆ. ಹಾಸನ ನಗರದ ಅಡ್ಲಿಮನೆ ರಸ್ತೆವಾಸಿ ಮಂಜುನಾಥ ಮೋಟಾರ್ ಸೈಕಲನ್ನುಚನ್ನರಾಯಪಟ್ಟಣ ಹೊಸ ಬಸ್ ನಿಲ್ದಾಣದ ಹೋಟೆಲ್ ಹಿಂಭಾಗದಲ್ಲಿ ನಿಲ್ಲಿಸಿ ಹೋಟೆಲ್ಗೆ ಹೋಗಿ ಕೆಲಸ ಮುಗಿಸಿಕೊಂಡು ವಾಪಸ್ ಬಂದು ನೋಡಿದಾಗ 30,000 ರು. ಬೆಲೆಯ ಮೋಟಾರ್ ಸೈಕಲ್ ಕಳವಾಗಿದೆ. ಮಂಜುನಾಥ್ ಚನ್ನರಾಯಪಟ್ಟಣ ನಗರ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ರ35,000 ರು. ಬೆಲೆಯ ಡಿಸ್ಕವರಿ ಮೋಟಾರ್ ಬೈಕ್ ಕಳವಾಗಿದೆ.
ಸರ ಅಪಹರಣ
ಹಾಸನ: ಅಪರಿಚಿತ ವ್ಯಕ್ತಿಗಳಿಬ್ಬರು ಮಹಿಳೆಯ ಮಾಂಗಲ್ಯ ಸರ ಕಿತ್ತಕೊಂಡು ಪರಾರಿಯಾಗಿರುವ ಘಟನೆ ನಗರದಲ್ಲಿ ನಡೆದಿದೆ.
ಉದಯಗಿರಿ ಬಡಾವಣೆ, ಆಡಿಟರ್ ಕಾಲೋನಿ ವಾಸಿ ಸುಮಾ ತಮ್ಮ ಮನೆಯ ಮುಂದೆ ಮಗು ಆಡಿಸುತ್ತಿದ್ದಾಗ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಬೈಕಿನಲ್ಲಿ ನಿಧಾನವಾಗಿ ಬಂದು ಬೈಕ್ ಹಿಂಬದಿಯಲ್ಲಿ ಕುಳಿತ್ತಿದ್ದ ಒಬ್ಬ ವ್ಯಕ್ತಿಯು ಸುಮಾ ಅವರ ಕುತ್ತಿಗೆಗೆ ಕೈ ಹಾಕಿ 40,000 ರು. ಬೆಲೆಯ 15 ಗ್ರಾಂ. ಚಿನ್ನದ ಮಾಂಗಲ್ಯ ಸರವನ್ನು ಅರ್ಧ ಕಿತ್ತುಕೊಂಡು ಪರಾರಿಯಾಗಿದ್ದಾರೆ.ಈ ಸಂಬಂಧ ಹಾಸನ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂತೆ ಸುಂಕ ಹರಾಜು ರದ್ಧು
ಜಾವಗಲ್: ಜಾವಗಲ್ ಗ್ರಾಮ ಪಂಚಾಯ್ತಿಯಲ್ಲಿ ಮಾ.24ರಂದು ನಡೆಯ ಬೇಕಾಗಿದ್ದ ಸಂತೆ ಸುಂಕ ಹರಾಜು ಕಾರ್ಯಕ್ರಮವನ್ನು ಚುನಾವಣೆ ನೀತಿ ಸಂಹಿತೆ ಪ್ರಯುಕ್ತ ರದ್ಧು ಮಾಡಲಾಗಿದೆ ಎಂದು ಗ್ರಾಪಂ ಪಿಡಿಒ ಕೆಂಚಪ್ಪ ತಿಳಿಸಿದ್ದಾರೆ.
'ಯಾದವರಲ್ಲಿ ಅನಿಷ್ಠ ಪದ್ಧತಿ ಆಚರಣೆ'
ಕನ್ನಡಪ್ರಭವಾರ್ತೆ ಅರಸೀಕೆರೆ ಮಾ. 21
ಯಾದವ ಸಮುದಾಯ ತಲೆತಲಾಂತರಗಳಿಂದ ಮೂಢನಂಬಿಕೆಯಿಂದ ದೇವರ ಹೆಸರಿನಲ್ಲಿ ಕೆಲವೊಂದು ಅನಿಷ್ಠ ಪದ್ಧತಿಗಳನ್ನು ಆಚರಿಸಿಕೊಂಡು ಬರುತ್ತಿದೆ ಎಂದು ಗ್ರಾಮಾಂತರ ಠಾಣೆ ಎಸ್ಐ ಗಂಗಾಧರಪ್ಪ ವಿಷಾದ ವ್ಯಕ್ತಪಡಿಸಿದರು. ತಾಲೂಕಿನ ನಾಗಸಮುದ್ರ ಗೊಲ್ಲರಹಟ್ಟಿಯಲ್ಲಿ ಏರ್ಪಡಿಸಿದ್ದ ಯಾದವ ಸಮುದಾಯದಲ್ಲಿ ಮಹಿಳೆಯರ ಬಗ್ಗೆ ಇರುವ ಕಂದಾಚಾರಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮೂಢನಂಬಿಕೆಯ ಆಚರಣೆಗಳನ್ನು ಮಹಿಳೆಯರ ಮೇಲೆ ಬಲವಂತವಾಗಿ ಹೇರುವುದರಿಂದ ಅವರಲ್ಲಿ ಕೀಳರಿಮೆ ಉಂಟಾಗುತ್ತದೆ. ಇದರಿಂದಾಗಿಯೇ ಅನೇಕ ಅವಘಡಗಳು ಸಂಭವಿಸುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು. ಋತುಮತಿಯಾಗುವುದು, ತಿಂಗಳಾಂತ್ಯದ ಋತುಚಕ್ರ ಹಾಗೂ ಹೆರಿಗೆಯಂತಹ ಚಟುವಟಿಕೆಗಳು ಹೆಣ್ಣುಮಕ್ಕಳಿಗೆ ಎದುರಾಗುವ ಸಹಜ ಪ್ರಕ್ರಿಯೆಗಳು. ಆದರೆ ಕೆಲ ಸಮುದಾಯಗಳಲ್ಲಿ ಇಂತಹ ವೇಳೆ ಮಹಿಳೆಯನ್ನು ಊರಿನಿಂದ ಹೊರಗಿಡುವುದು ಅಥವಾ ಮನೆಗೆ ಸೇರಿಸದಿರುವುದು ಸರಿಯಲ್ಲ. ಇಂತಹ ಸಂದರ್ಭಗಳಲ್ಲಿ ಆ ಮಹಿಳೆಗೆ ತಾನು ಒಬ್ಬಂಟಿ ಎಂಬ ಭಾವನೆ ಉಂಟಾಗುತ್ತದೆ ಅಲ್ಲದೇ ಬದುಕು ಬೇಸರವೆನಿಸುತ್ತದೆ. ಇದು ಕಾನೂನಿಗೆ ವಿರುದ್ಧವಾಗಿದ್ದು ಇಂತಹ ಚಟುವಟಿಕೆಗಳ ಬಗ್ಗೆ ಯಾರಾದರೂ ದೂರು ನೀಡಿದರೆ ಶಿಕ್ಷಾರ್ಹ ಅಪರಾಧವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಎದುರಾಗುವ ಅಪಾಯಗಳ ಬಗ್ಗೆ ಅರಿವು ಮೂಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು. ಪ್ರೌಢಾವಸ್ಥೆಯ ಹೆಣ್ಣುಮಕ್ಕಳನ್ನು ಕೆಲ ವೇಳೆ ಮನೆಯಿಂದ ದೂರವಿಡುವುದು ಅತ್ಯಾಚಾರದಂತಹ ಘಟನೆಗಳಿಗೆ ಆಸ್ಪದ ಮಾಡಿಕೊಡುತ್ತದೆ. ಈ ಬಗ್ಗೆ ಎಚ್ಚರಿಕೆ ವಹಿಸಬೇಕು. ಅಲ್ಲದೇ ಕುಟುಂಬ ಸದಸ್ಯರಿಗೆ ಹಾಗೂ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಕಂದಾಚಾರಕ್ಕೆ ತಿಲಾಂಜಲಿ ಹಾಡಬೇಕೆಂದು ಹೇಳಿದರು. ಬಾಣಾವರ ಪಿಎಸ್ಐ ನರೇಂದ್ರಕುಮಾರ್, ಯಾದವ ಸಮುದಾಯದ ಮಹಿಳೆಯರು, ಗ್ರಾಮಸ್ಥರು ಇದ್ದರು.
ಭಾರತ ಮತ: ತಮಿಳರ ಸಂಘ ಸಂತಸ
ಅರಸೀಕೆರೆ: ಶ್ರೀಲಂಕಾ ತಮಿಳರ ಮೇಲಿನ ದೌರ್ಜನ್ಯದ ವಿರುದ್ಧ ಭಾರತ ವಿಶ್ವಸಂಸ್ಥೆಯಲ್ಲಿ ಮತ ನೀಡಿರುವುದನ್ನು ಸ್ವಾಗತಿಸಿ, ಪಟ್ಟಣದ ತಮಿಳರ ಸಂಘ ಪಟಾಕಿ ಸಿಡಿಸಿ, ಸಿಹಿ ವಿತರಿಸಿ ಸಂತಸ ವ್ಯಕ್ತಪಡಿಸಿದರು.
ಪಟ್ಟಣದ ಬಸವೇಶ್ವರ ವೃತ್ತಕ್ಕೆ ಆಗಮಿಸಿದ್ದ ತಮಿಳರ ಸಂಘದ ಪದಾಧಿಕಾರಿಗಳು ಹಾಗೂ ಅಭಿಮಾನಿಗಳು ದೇಶದ ಪರ ಘೋಷಣೆ ಕೂಗುತ್ತಾ ವಿಜಯೋತ್ಸವ ಆಚರಿಸಿದರು. ತಾಲೂಕು ತಮಿಳರ ಸಂಘದ ಅಧ್ಯಕ್ಷ ದಿನೇಶ್, ಪುರಸಭಾ ಸದಸ್ಯರಾದ ಬಾಲಮುರುಗನ್, ಸುರೇಶ್, ಮಂಜುನಾಥ್, ದಲಿತ ಸಂಘರ್ಷ ಸಮಿತಿಯ ಆನಂದ್, ಮಾಜಿ ಪುರಸಭಾ ಸದಸ್ಯ ಶಿವನ್ರಾಜ್, ವಿಕ್ರಮ್ ಇತರರು ಇದ್ದರು.
ವಿಷಪೂರಿತ ಕಾಯಿ ಸೇವಿಸಿ ನಾಲ್ವರು ಅಸ್ವಸ್ಥ
ಕ.ಪ್ರ.ವಾರ್ತೆ, ಮದ್ದೂರು, ಮಾ.22
ವಿಷಪೂರಿತ ಕಾಯಿ ಸೇವಿಸಿ ನಾಲ್ವರು ಬಾಲಕರು ಅಸ್ವಸ್ಥಗೊಂಡಿರುವ ಘಟನೆ ತಾಲೂಕಿನ ಚಾಪುರದೊಡ್ಡಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಗ್ರಾಮದ ರಂಗೇಶ್, ಬಸವರಾಜು, ಮಹದೇವು ಹಾಗೂ ಚಿಕ್ಕಸ್ವಾಮಿ ಅಸ್ವಸ್ಥಗೊಂಡ ಬಾಲಕರು. ಮದ್ದೂರು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನಂತರ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ರಂಗೇಶ್ ಮತ್ತು ಬಸವರಾಜು ದೇಶಹಳ್ಳಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು. ಶಾಲೆಗೆ ರಜೆ ಇದ್ದ ಹಿನ್ನೆಲೆಯಲ್ಲಿ ಇವರು ತಮ್ಮ ಸ್ನೇಹಿತರಾದ ಮಹದೇವು ಮತ್ತು ಚಿಕ್ಕಸ್ವಾಮಿ ಅವರೊಂದಿಗೆ ಆಟವಾಡುತ್ತಿದ್ದ ವೇಳೆ ಮಾವಿನ ಕಾಯಿ ಎಂದು ಭಾವಿಸಿ ವಿಷಪೂರಿತ ಕಾಯಿಯೊಂದನ್ನು ಸೇವಿಸಿದ್ದಾರೆ. ಕೆಲಹೊತ್ತಿನಲ್ಲಿ ನಾಲ್ವರು ಬಾಲಕರು ಅಸ್ವಸ್ಥಗೊಂಡಿದ್ದಾರೆ. ಇದನ್ನು ಕಂಡ ಗ್ರಾಮಸ್ಥರು ಪೋಷಕರಿಗೆ ವಿಷಯ ತಿಳಿಸಿ ನಂತರ ಮದ್ದೂರು ತಾಲೂಕು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ನಂತರ ವೈದ್ಯರ ಸಲಹೆ ಮೇರೆಗೆ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂದು ನಾಟಕ
ಭಾರತೀನಗರ: ಸಮೀಪದ ಕ್ಯಾತಘಟ್ಟ ಗ್ರಾಮದಲ್ಲಿ ಮಾರಮ್ಮನ ಹಬ್ಬದ ಪ್ರಯುಕ್ತ ಮಾ. 23ರಂದು ರಾತ್ರಿ 9.30ಕ್ಕೆ ಬಸವೇಶ್ವರ ಕೃಪಾಪೋಷಿತ ನಾಟಕ ಮಂಡಳಿ ವತಿಯಿಂದ ಹೇಮಾವತಿ ಕಲ್ಯಾಣ ಎಂಬ ಪೌರಾಣಿಕ ನಾಟಕ ಪ್ರದರ್ಶನವಾಗಲಿದೆ. ಮಠದದೊಡ್ಡಿ ಶಿವಕ್ಷೇತ್ರದ ದೊಡ್ಡ ಸಂಘ ಒಡೆಯರ್ ಸಾನ್ನಿಧ್ಯ ವಹಿಸುವರು.
ಕುಡಿವ ನೀರಿನ ಸಮಸ್ಯೆ: ಖಾಲಿ ಕೊಡ ಪ್ರದರ್ಶಿಸಿ ಆಕ್ರೋಶ
ಕ.ಪ್ರ ವಾರ್ತೆ ಆಲೂರು ಮಾ.22
ಆಲೂರು ತಾಲೂಕಿನ ಕದಾಳು ಗ್ರಾಮ ಪಂಚಾಯ್ತಿಯ ಚಾಕನಹಳ್ಳಿ ಗ್ರಾಮಸ್ಥರು 4 ತಿಂಗಳಿನಿಂದ ನೀರಿನ ತೀವ್ರ ಸಮಸ್ಯೆ ಎದುರಿಸುತ್ತಿದ್ದು, ಪಟ್ಟಣದ ಜಿಲ್ಲಾ ಪಂಚಾಯ್ತಿ ಕಚೇರಿ ಎದುರು ಮಹಿಳೆಯರೂ ಸೇರಿದಂತೆ ಗ್ರಾಮಸ್ಥರು ಖಾಲಿ ಕೊಡ ಹಿಡಿದು ಶುಕ್ರವಾರ ಪ್ರತಿಭಟನೆ ನಡೆಸಿದರು.
ತೀವ್ರ ಆಕ್ರೋಶಗೊಂಡ ಪ್ರತಿಭಟನಕಾರರು ಮಾತನಾಡಿ, 70 ಮನೆಗಳಿರುವ ತಮ್ಮ ಗ್ರಾಮಕ್ಕೆ ಹಸಗನೂರಿನಿಂದ ನೀರಿನ ಸಂಪರ್ಕ ಕಲ್ಪಿಸಿದ್ದು ಈಗ ಸಂಪೂರ್ಣ ನಿಲ್ಲಿಸಲಾಗಿದೆ. ಗ್ರಾಮದಲ್ಲಿ ಕೊಳಕು ನೀರು ಬರುತ್ತಿದ್ದು, ಬಳಕೆಗೆ ಯೋಗ್ಯವಾಗಿಲ್ಲ ಎಂದು ಬಾಟಲಿಯಲ್ಲಿ ತಂದಿದ್ದ ಕೊಳೆ ನೀರನ್ನು ಪ್ರದರ್ಶಿಸಿದರು. ಜಿಪಂ ಅಧಿಕಾರಿಗಳು ಈ ಹಿಂದೆ ನೀರಿನ ಸಮಸ್ಯೆ ಕುರಿತು ಜಿಲ್ಲಾ ಪಂಚಾಯ್ತಿ ಬಳಿ ಪ್ರತಿಭಟನೆ ನಡೆಸಿದಾಗ, ಈ ಸಂಬಂಧ ಭರವಸೆ ನೀಡಿ ತಿಂಗಳುಗಳೇ ಕಳೆದಿದ್ದು, ಯಾವುದೇ ಪ್ರಯೋಜನವಾಗಿಲ್ಲ. ಪಿಡಿಒ ಮಂಜುನಾಥ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಬೇಜವಾಬ್ದಾರಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕ ಪ್ರತಿಭಟನಕಾರರು ಒತ್ತಾಯಿಸಿದರು.
'ಮಹಿಳೆ ಪರಾವಲಂಬನೆಯಿಂದ ಹೊರಬರಲಿ'
ಕ.ಪ್ರ ವಾರ್ತೆ ಹಾಸನ ಮಾ.22
ಸಮಾಜದಲ್ಲಿ ಹೆಣ್ಣಿಗೆ ಅಭದ್ರತೆ ಕಾಡುತ್ತಿರುವ ಈ ಸಂದರ್ಭದಲ್ಲಿ ಪ್ರತಿ ಹೆಣ್ಣುಮಗಳು ತನ್ನ ಬದುಕನ್ನು ತಾನೇ ರೂಪಿಸಿ ಕೊಳ್ಳುವುದರ ಮೂಲಕ ಸಬಲೀಕರಣ ಹೊಂದಬೇಕು. ಪರಾವಲಂಬನೆ ಮತ್ತು ದಾಸ್ಯದಿಂದ ಹೊರಬರಬೇಕಾದ ಸನ್ನಿವೇಶ ಒದಗಿಬಂದಿದೆ ಎಂದು ಹೈನುಗಾರಿಕೆಯಲ್ಲಿ ಸಾಧನೆ ಮಾಡಿರುವ ಜ್ಯೋತಿ ಮಲ್ಲಾಪುರದ ಕೆ.ಬಿ.ಪ್ರತಿಭಾ ಹೇಳಿದರು.
ನಗರದ ಸರ್ಕಾರಿ ಕಲಾ ಕಾಲೇಜಿನ ಮೈತ್ರೇಯಿ ಮಹಿಳಾ ವೇದಿಕೆಯಿಂದ ಏರ್ಪಡಿಸಲಾಗಿದ್ದ ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಮಾತನಾಡಿದ ಅವರು, ಯಾವುದೇ ಆರ್ಥಿಕ ಚಟುವಟಿಕೆ ನಿರ್ವಹಿಸುವಾಗ ನಿರ್ಧಿಷ್ಟವಾಗಿ ಒಂದೇ ಚಟುವಟಿಕೆಗೆ ಸೀಮಿತವಾಗದೆ, ಅದಕ್ಕೆ ಸಂಬಂಧಿಸಿದ ಇತರ ಎಲ್ಲಾ ಚಟುವಟಿಕೆಗಳನ್ನು ಅಭಿವೃದ್ಧಿ ಪಡಿಸಿ ಉಪವಸ್ತುಗಳ ಬಳಕೆ ಮಾಡಿಕೊಳ್ಳುವುದರಿಂದ ಉತ್ಪಾದನಾ ವೆಚ್ಚ ಕಡಿಮೆಯಾಗುವುದರ ಜೊತೆಗೆ ಲಾಭದ ಪ್ರಮಾಣವೂ ಹೆಚ್ಚಾಗುತ್ತದೆ. ಹಾಗಾಗಿ ಯಾವುದೇ ಋಣಾತ್ಮಕ ಅಂಶಗಳಿಗೆ ಗಮನಹರಿಸದೆ, ಸಕಾರಾತ್ಮಕ ಮನೋಭಾವದಿಂದ ಸ್ವಂತ ದುಡಿಮೆಯಲ್ಲಿ ತೊಡಗಿ, ಉದ್ಯೋಗಾವಕಾಶ ಇತರರಿಗೆ ಕಲ್ಪಿಸಿದರೆ ನಾವುಗಳು ಸಮಾಜಕ್ಕೆ ವಿಶೇಷ ಕೊಡುಗೆ ನೀಡಿದಂತಾಗುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಯುವತಿ ಪ್ರಯತ್ನಿಸಿದಾಗ, ಸಮಾಜದಲ್ಲಿ ನಮ್ಮ ಸ್ಥಾನಮಾನ ಹೆಚ್ಚಾಗುವುದರ ಜೊತೆಗೆ, ಆರ್ಥಿಕವಾಗಿ ಸಬಲರಾಗಬಹುದೆಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.
ತೃತೀಯ ಬಿ.ಎ. ವಿದ್ಯಾರ್ಥಿನಿ ಕೃಪಾ ಮಾನಸ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು. ಸುಮಲತಾ ಸ್ವಾಗತಿಸಿದರು. ಅಶ್ವಿನಿ ವಂದಿಸಿದರು.
'ದೃಢ ಮನಸ್ಸಿನಿಂದ ಉನ್ನತ ಸಾಧನೆ'
ಕ.ಪ್ರ ವಾರ್ತೆ ಹಾಸನ ಮಾ.22
ಮನುಷ್ಯ ಮನಸ್ಸು ಮಾಡಿದರೆ ಯಾವುದೇ ಸಾಧನೆ ಮಾಡಬಹುದು ಎಂದು ಎಚ್ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಿ.ಎನ್.ಬಾಲಕೃಷ್ಣ ಕಿವಿಮಾತು ಹೇಳಿದರು.
ನಗರದ ವಿಜಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ನಡೆದ ಹತ್ತನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು. ವಿದ್ಯಾರ್ಥಿ-ಶಿಕ್ಷಕ -ಪೋಷಕ ಸೌಹಾರ್ದ ಕೂಟದಲ್ಲಿ ಹೈನುಗಾರಿಕೆ ಮೂಲಕ ಸಾಧನೆ ಮಾಡಿರುವ ಜಿಲ್ಲೆಯ ಜ್ಯೋತಿ ಮಲ್ಲಾಪುರ ಗ್ರಾಮದ ಕೆ.ಬಿ. ಪ್ರತಿಭಾ ಅವರನ್ನು ಸನ್ಮಾನಿಸಿ, ಮಾತನಾಡಿ, ಮಕ್ಕಳಿಗೆ ತಮ್ಮ ಸಾಧನೆಯ ಬಗ್ಗೆ ಮಾತನಾಡಿದರು.
ಜಿಪಂ ಸದಸ್ಯೆ ಕುಸುಮಾ ಬಾಲಕೃಷ್ಣ, ಕ್ಷೇತ್ರಶಿಕ್ಷಣಾಧಿಕಾರಿ ಪುಷ್ಪಲತಾ, ಹೆಚ್.ಕೆ, ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ನಾಗರಾಜ್, ಪ್ರೊ.ಸುರೇಶ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ಶಾಲಾ ವಾರ್ಷಿಕೋತ್ಸವ ಅಂಗವಾಗಿ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಇದೆ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು. ಸಂಸ್ಥೆ ಅಧ್ಯಕ್ಷ ಸಿ.ಟಿ. ಮಳಲಿಗೌಡ , ಶಾಲಾ ಆಡಳಿತಾಧಿಕಾರಿ ತಾರಾ ಎಸ್.ಸ್ವಾಮಿ, ವಿಜಯ ವಿದ್ಯಾಸಂಸ್ಥೆಯ ಸದಸ್ಯ ವೈ.ಎನ್.ಸುಬ್ಬಸ್ವಾಮಿ, ಎನ್.ಟಿ ಜಯಮ್ಮ, ಶಾಲಾ ಮುಖ್ಯ ಶಿಕ್ಷಕಿ ರೋಸ್ಮೇರಿ, ಶಾಲಾ ಸಿಬ್ಬಂದಿ ವರ್ಗ ಹಾಗೂ ಹತ್ತನೇ ತರಗತಿವಿದ್ಯಾರ್ಥಿಗಳ ಪೋಷಕರು ಇದ್ದರು. ಶಿಕ್ಷಕಿ ಎಚ್.ಎಂ.ನಾಜಿಮಾ ನಿರೂಪಿಸಿದರು.
'ಮಕ್ಕಳನ್ನು ಸರ್ಕಾರಿ ಶಾಲೆಗಳಿಗೇ ಸೇರಿಸಿ'
ಹಾಸನ: ಸರ್ಕಾರಿ ಶಾಲೆಯಲ್ಲಿ ಉತ್ತಮ ಸೌಲಭ್ಯಗಳಿದ್ದು, ಪೋಷಕರು ತಮ್ಮ ಮಕ್ಕಳನ್ನು ದಾಖಲಿಸಿ ಸರ್ಕಾರಿ ಶಾಲೆ ಉಳಿಸುವಂತೆ ಕಂದಲಿ ಶಿಕ್ಷಣ ಸಂಯೋಜಕ ಶ್ರೀರಂಗಯ್ಯ ಕಿವಿಮಾತು ಹೇಳಿದರು. ಇತ್ತೀಚೆಗೆ ಹಾಸನ ತಾಲೂಕು ಸಾಲಗಾಮೆ ಹೋಬಳಿ ಬೈಲಹಳ್ಳಿ ಕ್ಲಷ್ಟರ್ ವ್ಯಾಪ್ತಿಯ ಗುಂಡಶೆಟ್ಟಿಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸುವರ್ಣ ಮಹೋತ್ಸವ ಹಾಗೂ ಶಾಲಾ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಸಾಹಿತಿ ಗೊರೂರು ಶಿಮೇಶ್, ಗ್ರಾಪಂ ಮಾಜಿ ಅಧ್ಯಕ್ಷೆ ಸಿದ್ದಮ್ಮ, ಜಿಲ್ಲಾ ವಚನ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ, ಶಿಕ್ಷಕ ಕೃಷ್ಣಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.
ಇಂದು ಕರೆಂಟಿಲ್ಲ
ಹಾಸನ: ಬೇಲೂರು ನಗರ ಪ್ರದೇಶ, ಇಬ್ಬೀಡು, ಹೆಬ್ಬಾಳು, ಹನಿಕೆ, ಚೀಕನಹಳ್ಳಿ, ತೊಳಲು, ಮೂಡಿಗೆರೆ, ಗೆಂಡೆಹಳ್ಳಿ, ಸುತ್ತಮುತ್ತಲ ಪ್ರದೇಶಗಳಲ್ಲಿ 4ನೇ ತ್ರೈಮಾಸಿಕ ನಿರ್ವಹಣಾ ಕೆಲಸಗಳನ್ನು ಮಾಡಬೇಕಾಗಿರುವುದರಿಂದ ಮಾ.23ರಂದು ಬೆ.10 ರಿಂದ ಸಂಜೆ 5ರವರೆಗೆ ವ್ಯತ್ಯಯವಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

