ಹೆಣ್ಣು ಭ್ರೂಣ ಹತ್ಯೆ ನಾಗರಿಕ ಸಮಾಜಕ್ಕೆ ಕಳಂಕ
ಕ.ಪ್ರ ವಾರ್ತೆ ಬೇಲೂರು ಮಾ.22
ಇಂದಿನ ಆಧುನಿಕ ಜಗತ್ತಿನಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ತಮ್ಮ ಪ್ರಾಬಲ್ಯವನ್ನು ಮೆರೆಯುತ್ತಿದ್ದು, ಇಂತಹ ಸಂದರ್ಭದಲ್ಲಿ ಹೆಣ್ಣು ಮಗುವಿನ ಭ್ರೂಣಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿರುವುದು ವಿಷಾದನೀಯ ಎಂದು ಭವಾನಿ ರೇವಣ್ಣ ಅಸಮಾಧಾನ ವ್ಯಕ್ತಪಡಿಸಿದರು.
ಚಿಕ್ಕಮಗಳೂರು ವಿವಿಧೋದ್ದೇಶ ಸಮಾಜ ಸೇವಾ ಸಂಸ್ಥೆ, ಹಾಸನ, ಗಂಗೋತ್ರಿ ಮಹಿಳಾ ಒಕ್ಕೂಟ ಹಾಗೂ ಬೇಲೂರು ಪ್ರಗತಿ ಪರ ಸಂಘಟನೆಗಳ ಒಕ್ಕೂಟದ ಆಶ್ರಯದಲ್ಲಿ ಇತ್ತೀಚೆಗೆ ನಡೆದ ಅಂತಾರಾಷ್ಟ್ರೀಯ ಪರಿಸರ ಸಮ್ಮೇಳನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಇಂದು ಮಹಿಳೆಯರು ನಾನಾ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತಿದ್ದಾರೆ. ಇಂದು ನಡೆಯುತ್ತಿರುವ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ವೇದಿಕೆಯಲ್ಲಿ ವೈದ್ಯರು, ಅಬಕಾರಿ, ಶಿಕ್ಷಣ, ರಾಜಕೀಯ,ಸಾಮಾಜಿಕ. ತಂತಜ್ಞಾನ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಮಹಿಳೆಯರು ಇದ್ದಾರೆ. ಹೆಣ್ಣು ಯಾರಿಗೂ ಕಡಿಮೆಯಿಲ್ಲ ಎಂಬ ಸ್ಥಿತಿ ನಿರ್ಮಾಣವಾಗಿರುವ ಸಂದರ್ಭದಲ್ಲೂ ಹೆಣ್ಣು ಮಕ್ಕಳ ಭ್ರೂಣಹತ್ಯೆ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಹೆಣ್ಣು ಸಂತತಿ ಕಾಣದಾಗಬಹುದಾದ ಸಂದರ್ಭ ಬರಬಹುದು ಎಂದರು.
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಹಿಂದು, ಮುಸ್ಲಿಂ ಹಾಗೂ ಕ್ರೈಸ್ತರು ಸೇರಿದಂತೆ ಸಾವಿರಾರು ಮಹಿಳೆಯರು ಪಾಲ್ಗೊಂಡಿರುವುದು ವಿಶೇಷವಾಗಿದ್ದು, ಇದೇ ರೀತಿಯಲ್ಲಿ ಮಹಿಳೆಯರು ಒಗ್ಗಟ್ಟಾಗಿದ್ದರೆ ಸಮಾಜದಲ್ಲಿ ಸಾಧನೆ ಮಾಡಬಹುದು. ತಂದೆ ತಾಯಿಯ ನೆರಳಲ್ಲಿ ಬೆಳೆಯುವ ಹೆಣ್ಣು ಮಗಳು ನಂತರ ತನಗೆ ಗೊತ್ತಿರದ ಮನೆಗೆ ಸೊಸೆಯಾಗಿ ಹೋಗಿ ಅಲ್ಲಿಯ ವಾತಾವರಣಕ್ಕೆ ಹೊಂದಿಕೊಂಡು ಅಲ್ಲಿನ ಸಂಸಾರದಲ್ಲಿ ಗೃಹಣಿಯಾಗಿ, ತಾಯಿಯಾಗಿ ಮನೆಗೆ ಮಾದರಿಯಾಗಿರುತ್ತಾಳೆ ಎಂದರು.
ಮನೆಯವರು ಕೆಲ ಸಂದರ್ಭದಲ್ಲಿ ದುಡುಕು ನಿರ್ಧಾರ ಕೈಗೊಂಡಾಗ ಪುರಷರಿಗೆ ತಿಳಿಹೇಳಿ ಸರಿದದಾರಿಗೆ ತರಬೇಕಾಗುತ್ತದೆ.ಇಂತಹ ಸಂದರ್ಭದಲ್ಲಿ ತಾಳ್ಮೆಯನ್ನು ಕಳೆದುಕೊಳ್ಳದೆ ಧೈರ್ಯದಿಂದ ಇರಬೇಕಾಗುತ್ತದೆ. ಪಟ್ಟಣದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ವಿವಿಧ ಸಂಘಟನೆಗಳ ಗೌರವಾಧ್ಯಕ್ಷ ಸುದರ್ಶನ್, ಜಾನಿ ಸೇರಿದಂತೆ ಹಲವಾರು ಸಂಘ, ಸಂಸ್ಥೆಗಳು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯವೆಂದರು.
ಫಾದರ್ ವಿಲಿಯಂ ಫೆರೆರಾ ಮಾತನಾಡಿ, ಮಹಿಳೆಯರಿಗೆ ಸರಿ ಸಮಾನ ಸ್ಥಾನವನ್ನು ನೀಡುವ ಕೆಲಸ ಕುಟುಂಬದಿಂದ ಆರಂಭವಾದಾಗ ಮಾತ್ರ ಮಹಿಳಾ ದಿನಾಚರಣೆಗೆ ಅರ್ಥಬರುತ್ತದೆ. ಮಹಿಳೆಯರಿಗೆ ಘನತೆ. ಗೌರವ ಸ್ಥಾನಮಾನ ಇದೆ ಎಂಬುದನ್ನು ಸಾರಲು ಮಹಿಳಾ ದಿನಾಚರಣೆ ಆಚರಿಸಲಾಗುತ್ತಿದೆ. ಸಮಾಜ ಬೆಳವಣಿಗೆಯಾಗಬೇಕಾದರೆ ಮಹಿಳೆಯರು ಹಾಗೂ ಪುರುಷರು ಜತೆಯಾಗಿ ದುಡಿದಾಗ ಮಾತ್ರ ಏಳಿಗೆ ಸಾಧ್ಯ ಎಂದರು.
ಪ್ರಗತಿಪರ ಸಂಘಟನೆಗಳ ಗೌರವಾಧ್ಯಕ್ಷ ಕೆ.ಸುದರ್ಶನ್, ಸಂಯೋಜಕ ಜಾನಿ, ಜಿಲ್ಲಾ ಆರೋಗ್ಯಾಧಿಕಾರಿ ಶ್ಯಾಮಲಾದೇವಿ, ತಾಪಂ ಅಧ್ಯಕ್ಷೆ ನಳಿನ ಶಿವಕುಮಾರ್, ಗಂಗೋತ್ರಿ ಮಹಿಳಾ ಒಕ್ಕೂಟ ಶಾಂತಮ್ಮ, ವೈದ್ಯಾಧಿಕಾರಿ ಸಂಧ್ಯಾ, ಸಿಡಿಪಿಒ ಸರಳಾದೇವಿ, ಅಬಕಾರಿ ಉಪ ನಿರೀಕ್ಷಕ ನೂರ್ ಜಹಾನ್, ಮೀನುಗಾರಿಕಾಧಿಕಾರಿ ಸುಷ್ಮಾ, ಜೀವನ ಜ್ಯೋತಿ ಒಕ್ಕೂಟ ಡಯಾನ ವಕೀಲೆ ಯಶಸ್ವಿನಿ, ಸಂಪಾವತಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಮೆಟ್ರೋ ರೈಲಿನ ಮಹಿಳಾ ಚಾಲಕಿಯಾಗಿರುವ ತಾಲೂಕಿನ ರಶ್ಮಿ, ಭವಾನಿ ರೇವಣ್ಣ, ವೈದ್ಯಾಧಿಕಾರಿ ಶ್ಯಾಮಲಾದೇವಿ ಇವರನ್ನು ಸನ್ಮಾನಿಸಲಾಯಿತು.ಆರ್ಯಭಟ ಪ್ರಶಸ್ತಿಗೆ ಭಾಜನರಾಗಿರುವ ಖ್ಯಾತ ಹಿನ್ನೆಲೆ ಗಾಯಕ ಅನಿಲ್ಕುಮಾರ್ ಅವರಿಂದ ರಸಮಂಜರಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

