ಬೇಲೂರು ಕ್ಷೇತ್ರ: ಸಂಯುಕ್ತದಳದಿಂದ ಚನ್ನೇಗೌಡ ಅಭ್ಯರ್ಥಿ
ಕ.ಪ್ರ.ವಾರ್ತೆ ಬೇಲೂರು ಮಾ. 23
ಬರುವ ವಿಧಾನಸಭಾ ಚುನಾವಣೆಗೆ ಸಂಯುಕ್ತ ಜನತಾದಳದಿಂದ ಚನ್ನೇಗೌಡ ಅವರನ್ನು ಕಣಕ್ಕಿಳಿಸಲಾಗುವುದು ಎಂದು ಸಂಯುಕ್ತ ಜನತಾದಳ ಜಿಲ್ಲಾ ಉಪಾಧ್ಯಕ್ಷ ಅಕ್ಬರ್ಪಾಷಾ ಹೇಳಿದರು. ಪಟ್ಟಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಯುಕ್ತ ಜನತಾದಳ ತಾಲೂಕಿನಲ್ಲಿ ಸದೃಢವಾಗಿದ್ದು ಚುನಾವಣೆ ಎದುರಿಸಲು ಸಿದ್ದವಾಗಿದೆ ಎಂದರಲ್ಲದೆ, ಚುನಾವಣೆಯಲ್ಲಿ ಗೆಲವು ಸಾಧಿಸಲು ಈಗಾಗಲೇ ರಾಜ್ಯ ಮಟ್ಟದಲ್ಲಿ ರೈತ ಸಂಘದ ಪುಟ್ಟಣ್ಣಯ್ಯ ಬಣ ಹಾಗೂ ಬಿಎಸ್ಪಿ ಜೊತೆ ಹೊಂದಾಣಿಕೆ ಮಾಡಲು ಮಾತುಕತೆ ನಡೆಯುತ್ತಿದ್ದು, ಈ ಬಗ್ಗೆ ಸೋಮವಾರ ತೀರ್ಮಾನ ಕೈಗೊಳ್ಳಲಾಗುವುದು ಎಂದರು. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜೆಡಿಯು ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸಿರಲಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅಕ್ಬರ್ ಚುನಾವಣೆಯಲ್ಲಿ ಕೆಲವು ವಾರ್ಡ್ಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದೆವು. ಆದರೆ ಅಧಿಕಾರಿಗಳು ನೀಡಿದ ತಪ್ಪು ಮಾಹಿತಿಯಿಂದ ಜೆಡಿಯು ಎಲ್ಲಾ ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತಗೊಂಡವು ಎಂದು ಹೇಳಿದರು. ಅಭ್ಯರ್ಥಿ ಅಕಾಂಕ್ಷಿ ಚನ್ನೇಗೌಡ ಮಾತನಾಡಿ, ಈ ಹಿಂದೆ ಬಿಜೆಪಿಯಲ್ಲಿ ಕೆಲಸ ನಿರ್ವಹಿಸಿದ್ದು ಬಿಜೆಪಿಯಲ್ಲಿ ಸೈದ್ದಾಂತಿಕ ನೆಲಗಟ್ಟು ಇಲ್ಲದ ಕಾರಣಕ್ಕೆ ಬಿಜೆಪಿ ತೊರೆದು ಜೆಡಿಯು ಸೇರಿರುವುದಾಗಿ ಹೇಳಿದರು. ತಾಲೂಕು ಅಧ್ಯಕ್ಷ ಮಲ್ಲೇಗೌಡ, ಹಿಂದುಳಿದ ವರ್ಗ ಅಧ್ಯಕ್ಷ ಮುಜೀಬುರ್ ರೆಹಮಾನ್ ಇದ್ದರು.
ವಿಧಾನಸಭೆ ಚುನಾವಣೆ: ಅಕ್ರಮ ಮದ್ಯ ಪತ್ತೆಗೆ ಸಂಚಾರಿ ದಳ ರಚನೆ
ಕ.ಪ್ರ.ವಾರ್ತೆ ಹಾಸನ ಮಾ. 23
ಮೇನಲ್ಲಿ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆ ಸಂಬಂಧ ಅಬಕಾರಿ ಇಲಾಖೆಯ ಕಾರ್ಯನಿರ್ವಹಣಾ ಸಿಬ್ಬಂದಿಗೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವವರೆಗೂ ಅಕ್ರಮ ಮದ್ಯ ತಯಾರಿಕೆ, ದಾಸ್ತಾನು, ಸಾಗಾಣಿಕೆ ಹಾಗೂ ಸರಬರಾಜನ್ನು ಪತ್ತೆ ಹಚ್ಚಲು ಅನುವಾಗುವಂತೆ ಜಿಲ್ಲೆಯ ಅಬಕಾರಿ ಕಾರ್ಯನಿರ್ವಾಹಕ ಸಿಬ್ಬಂದಿ ದಿನದ 24 ಗಂಟೆಯೂ ಕಾರ್ಯನಿರ್ವಹಿಸುವಂತೆ ಸಂಚಾರಿ ದಳ ರಚಿಸಲಾಗಿದೆ. ಅಕ್ರಮ ಅಬಕಾರಿ ಚಟುವಟಿಕೆ ಕಂಡುಬಂದಲ್ಲಿ ಸಾರ್ವಜನಿಕರು ಮಾಹಿತಿ ನೀಡಲು ಅನುಕೂಲವಾಗುವಂತೆ ಜಿಲ್ಲಾ ಕೇಂದ್ರದಲ್ಲಿ ಕಂಟ್ರೋಲ್ ರೂಂನ್ನು ತೆರೆಯಲಾಗಿದ್ದು, ದೂ- 08172-268706 ಆಗಿದೆ. ತಾಲೂಕು ಮಟ್ಟದಲ್ಲಿ ಅಕ್ರಮ ಮದ್ಯದ ಬಗ್ಗೆ ದೂರು ಸಲ್ಲಿಸಲು ತಾಲೂಕುವಾರು ಅಧಿಕಾರಿಗಳ ಸಂಚಾರಿ ದೂರವಾಣಿ ಸಂಖ್ಯೆಗಳು ಇಂತಿದೆ.
ಮತಪಟ್ಟಿಗೆ ಹೆಸರು ಸೇರ್ಪಡೆ ಬಗ್ಗೆ ಮಾಹಿತಿ ಇಲ್ಲ: ದೂರು
ಕ.ಪ್ರ.ವಾರ್ತೆ ಹಾಸನ ಮಾ. 23
ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆ ಆದ ಹಿನ್ನೆಲೆಯಲ್ಲಿ ಎಲ್ಲಾ ಅರ್ಹರನ್ನು ಮತಪಟ್ಟಿಗೆ ಸೇರ್ಪಡೆಗೊಳಿಸಲು ಆದೇಶಿಸಿರುವ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಕಚೇರಿಗೆ ಹೋದರೆ ಯಾರು ಸರಿಯಾದ ಮಾಹಿತಿ ನೀಡುತ್ತಿಲ್ಲ ಎಂದು ಸಾರ್ವಜನಿಕರ ದೂರಿದ್ದಾರೆ. ಸಹಾಯಕ್ಕಾಗಿ ದೂರಾವಾಣಿ ಸಂಖ್ಯೆಯನ್ನು ತಪ್ಪಾಗಿ ನೀಡಿರುವುದರಿಂದ ಮತದಾರರ ಪಟ್ಟಿಗೆ ಹೊಸದಾಗಿ ಸೇರ್ಪಡೆಗೊಳಿಸಲು ಬಂದಿದ್ದವರು ಪರದಾಡಿದರು.
ಮೂರು ವಿಧಾನ ಸಭಾ ಕ್ಷೇತ್ರಗಳು ಒಳಪಡುವ ಹಾಸನ ತಾಲೂಕಿನ ಎಲ್ಲಾ ಮತಗಟ್ಟೆಗಳಲ್ಲಿ ಎಲ್ಲಾ ಅರ್ಹರನ್ನು ಮತಪಟ್ಟಿಗೆ ಸೇರಿಸಲು ಬೂತ್ ಮಟ್ಟದ ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತರು ಹಾಗೂ ತಾಲೂಕು ಆಡಳಿತದಿಂದ ನೇಮಿಸಲ್ಪಟ್ಟಿರುವ ಸಿಬ್ಬಂದಿ ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ. ಮತಪಟ್ಟಿಯಿಂದ ಹೆಸರು ಬಿಟ್ಟುಹೋಗಿರುವ ಅಥವಾ ಹೊಸದಾಗಿ ಸೇರ್ಪಡೆಗೊಳಿಸಬೇಕಿರುವ ಅರ್ಹರು ಬೂತ್ ಮಟ್ಟದ ಅಧಿಕಾರಿಗಳನ್ನು ಸಂಪರ್ಕಿಸಿ ನಮೂನೆ 6ನ್ನು ಭರ್ತಿ ಮಾಡಿ ನೊಂದಾಯಿಸಿಕೊಳ್ಳಬಹುದು ಅಥವಾ ಹೋಬಳಿ ಕೇಂದ್ರ ಮತ್ತು ತಾಲೂಕು ಕಚೇರಿಯಲ್ಲಿ ಸ್ಥಾಪಿಸಲಾಗಿರುವ ಸಹಾಯ ಕೇಂದ್ರದಲ್ಲೂ ಸೇರ್ಪಡೆಗೊಳಿಸಬಹುದಾಗಿದೆ ಎಂದು ತಹಸೀಲ್ದಾರ್ ಮಂಜುನಾಥ್ ತಿಳಿಸಿದರು. ಆದರೆ ಯಾವುದೇ ಕಾರ್ಯವು ಹೇಳಿದಂತೆ ನಡೆದಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

