ಶಾಲೆಗಳಲ್ಲಿ ಸಾಹಿತ್ಯಿಕ ವಾತಾವರಣ ನಿರ್ಮಾಣವಾಗಲಿ: ಸಾಹಿತಿ ಅನಂತರಾಜು
ಕ.ಪ್ರ.ವಾರ್ತೆ ಹಾಸನ ಮಾ 24
ಶಾಲೆಯಲ್ಲಿ ಸಾಹಿತ್ಯಿಕ ವಾತಾವರಣ ನಿರ್ಮಾಣವಾದರೆ ಬೇಂದ್ರೆ, ಕುವೆಂಪುರಂತಹ ಕವಿಗಳ ಸೃಷ್ಟಿಯ ಸಾಧ್ಯತೆ ಕಾಣಬಹುದಾಗಿದೆ ಎಂದು ಸಾಹಿತಿ ಗೊರೂರು ಅನಂತರಾಜು ಹೇಳಿದರು.
ತಾಲೂಕಿನ ನಿಡೂಡಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಮಕ್ಕಳ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ಸಾಹಿತಿಗಳಿಗೆ ಮೌಲ್ಯವಿದೆ, ಕವಿಗಳನ್ನು ಹುಟ್ಟುಹಾಕುವ ಈ ಪ್ರಯತ್ನದಿಂದಾಗಿ ಓದುವ ಆಸಕ್ತಿ ಜತೆಗೆ ಭಾಷೆ ಕೂಡ ಬೆಳೆಸಬಹುದು ಎಂದು ಹೇಳಿದರು.
ಮಕ್ಕಳ ಕವಿತೆಗಳನ್ನು ವಿಶ್ಲೇಷಿಸಿದ ಅವರು, ಮಕ್ಕಳ ಕಾವ್ಯದ ವಸ್ತುವಿನ ಆಯ್ಕೆ ವಯಸ್ಸಿಗೆ ಸಹಜವಾಗಿದೆ. ಪ್ರಾಣಿ, ಹೂ, ಶಾಲೆ, ಬಸ್ಸು, ಅಜ್ಜಿ, ಶಾಲೆ, ಚಂದ್ರ ಮುಂತಾದ ಸರಳ ಸುಂದರ ವಸ್ತುಗಳನ್ನು ಕುರಿತು ಮುದ್ದಾಗಿ ಪದ್ಯ ಬರೆದಿದ್ದಾರೆ. ಪಠ್ಯದ ಶಿಶು ಕಾವ್ಯ ಕೂಡ ಅವರ ಮೇಲೆ ಪ್ರಭಾವ ಬೀರಿದೆ. ನಮ್ಮ ಕಾಲದಲ್ಲಿ ಇಂತಹ ಸಾಹಿತ್ಯಿಕ ವಾತಾವರಣ ಸಿಕ್ಕಿರಲಿಲ್ಲ. ಇಂತಹ ವೇದಿಕೆ ಸಿಕ್ಕಿರುವುದು ಈ ಮಕ್ಕಳ ಅದೃಷ್ಟ. ಇದರ ಉಪಯೋಗ ಎಲ್ಲ ಮಕ್ಕಳು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ವಚನ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ನಡೆಯುತ್ತಿರುವ ಈ ವಿನೂತನ ಕಾರ್ಯಕ್ರಮದಿಂದಾಗಿ ಕನ್ನಡ ಭಾಷೆಯನ್ನು ಶಾಲಾ ಹಂತದಲ್ಲಿ ಬೆಳೆಸಲು ಸಾಧ್ಯವಾಗುತ್ತದೆ. ಮಕ್ಕಳ ಪ್ರತಿಭೆ ಹೊರಹೊಮ್ಮಿಸಲು ಶಿಕ್ಷಕರ ಪ್ರೇರಣೆ, ಆಸಕ್ತಿ, ಶ್ರಮ ಅಭಿನಂದನೀಯ ಎಂದರು.
8 ಜ್ಞಾನ ಪೀಠ ಪ್ರಶಸ್ತಿ ಪಡೆದ ಹೆಮ್ಮೆಯ ಭಾಷೆ ನಮ್ಮದು. ಮೊಟ್ಟಮೊದಲ ಕನ್ನಡ ಶಾಸನ ದೊರೆತ ಸ್ಥಳ ನಮ್ಮ ಜಿಲ್ಲೆ. ಈ ಹಿರಿಮೆ ಅರಿತು ನಮ್ಮ ಭಾಷೆ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಸಿಆರ್ಪಿ ಗೋಪಾಲಕೃಷ್ಣ ಮಾತನಾಡಿ, ಮಕ್ಕಳ ಕವಿತೆಗಳ ಬಗ್ಗೆ ಹೇಳುವುದಾದರೆ ಮಕ್ಕಳ ಮಟ್ಟಕ್ಕೆ ಇವು ಉತ್ತಮ ಕವಿತೆಗಳು. ಜೀವನದಲ್ಲಿ ಸಂತೋಷವಾಗಿರಬೇಕು ಎಂದರೆ ಕವಿಗಳಾಗಿರಬೇಕು. ಇಲ್ಲವೇ ಕಲಾವಿದರಾಗಿರಬೇಕು. ಉತ್ತಮ ಹವ್ಯಾಸಗಳು ಮನಸ್ಸಿಗೆ ಹಿತ ನೀಡುತ್ತವೆ. ನಮ್ಮಲ್ಲಿ ಇರುವ ಕಲೆಯನ್ನು ಯಾರೂ ಕದಿಯಲಾರರು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಲೇಖಕಿ ಶೈಲಜಾ ಹಾಸನ ಮಾತನಾಡಿ, ಮಕ್ಕಳಿಗೆ ಪಠ್ಯದ ಜತೆ ಜತೆಗೆ ಇತರೆ ವಿಚಾರಗಳಲ್ಲೂ ಆಸಕ್ತಿ ಬೆಳೆಸಬೇಕು. ಕನ್ನಡ ಭಾಷೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಇಂತಹ ಪ್ರಯತ್ನಗಳ ಅಗತ್ಯ ಇದೆ. ಗ್ರಾಮೀಣ ಮಕ್ಕಳಿಗೆ ಇಂತಹ ವೇದಿಕೆ ಒದಗಿಸುವ ಸಲುವಾಗಿಯೇ ಈ ಶಾಲೆಯಲ್ಲಿ ಪ್ರತಿ ವರ್ಷ ಸಾಹಿತ್ಯಿಕ ಕಾರ್ಯಕ್ರಮ ನಡೆಸುತ್ತಾ ಬಂದಿದ್ದೇವೆ ಎಂದರು.
ಲೇಖಕಿ ಮಂಜುಳಾ ಪ್ರಸಾದ್ ನಿರೂಪಿಸಿದರು ಚಿತ್ರ ಕಲಾವಿದೆ ಮೀನಾಕ್ಷಿ ವಂದಿಸಿದರು. ಇದೇ ಸಂದರ್ಭದಲ್ಲಿ ಮಕ್ಕಳು ಕ್ಯಾಂಟೀನ್ ಡೇ ನಡೆಸಿ ಮನೆಯಿಂದ ತಯಾರಿಸಿ ತಂದ ತಿಂಡಿಗಳನ್ನು ಪ್ರದರ್ಶಿಸಿ ಮಾರಾಟ ಮಾಡಿದರು. ಉತ್ತಮ ಹಾಗೂ ಗ್ರಾಮ್ಯ ತಿನಿಸಿಗೆ ಬಹುಮಾನ ನೀಡಲಾಯಿತು. ಇದರ ಪ್ರಾಯೋಜಕತ್ವ ಮೀನಾಕ್ಷಿ ವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

