ಪ್ರಜ್ಞಾವಂತ ಮತದಾರರ ಕ್ಷೇತ್ರ
-ದಯಾಶಂಕರ ಮೈಲಿ
ಹಾಸನ: ಶ್ರವಣಬೆಳಗೊಳ ಐತಿಹಾಸಿಕ ಹಿನ್ನೆಲೆಯುಳ್ಳ ಕ್ಷೇತ್ರ. ಇಲ್ಲಿನ ಇಂದ್ರಗಿರಿ ಬೆಟ್ಟದಲ್ಲಿ ಸಹಸ್ರ ವರ್ಷಗಳಿಂದ ಅಚಲವಾಗಿ ಆಕಾಶಕ್ಕೆ ತಲೆಚಾಚಿ ನಿಂತಿರುವ ಬೃಹತ್ ಸ್ವರೂಪಿ ಗೊಮ್ಮೇಟೇಶನ ನೆಲವೀಡು ಇದು. ಅಪ್ಪಟ ಬಯಲು ಸೀಮೆ. ಹೇಮಾವತಿ ಜಲಾಶಯ ನಂತರ ನೀರಾವರಿ ಪ್ರದೇಶ ಹೊಂದಿರುವ ಈ ಕ್ಷೇತ್ರದಲ್ಲಿ ತೆಂಗು ಪ್ರಮುಖ ಬೆಳೆ. ರಾಜಕೀಯವಾಗಿ ಪ್ರಜ್ಞಾವಂತ ಮತದಾರರ ಕ್ಷೇತ್ರ.
ಕರ್ನಾಟಕ ರಾಜಕಾರಣದಲ್ಲಿ ಮೌಲ್ಯಾಧಾರಿತ ರಾಜಕಾರಣಕ್ಕೆ ಭದ್ರ ಬುನಾದಿ ಹಾಕಿದ ಕಾಂತರಾಜಪುರ ಎಸ್. ಶಿವಪ್ಪ ಇದೇ ಕ್ಷೇತ್ರದಿಂದ 1962 ಮತ್ತು 1967 ರಲ್ಲಿ ವಿಧಾನಸಭೆಗೆ ಆಯ್ಕೆಯಾಗಿ, ನಂತರ ವಿಧಾನ ಸಭಾಧ್ಯಕ್ಷರಾಗಿದ್ದರು. ಮಾಜಿ ಪ್ರಧಾನಿ ದೇವೇಗೌಡರಿಗೆ ಶಿವಪ್ಪ ರಾಜಕೀಯ ಗುರು ಕೂಡ. ಇಂತಹ ಉನ್ನತ ರಾಜಕಾರಣಿಯನ್ನು ಆಯ್ಕೆ ಮಾಡಿದ ಕ್ಷೇತ್ರದಿಂದ 1983 ರಲ್ಲಿ ರಾಜ್ಯದ ಸಿಎಂ ಆಗುವ ಮಟ್ಟಕ್ಕೆ ಏರಿದ್ದ ಮಾಜಿ ಸಚಿವ ದಿವಂಗತ ಎಚ್.ಸಿ. ಶ್ರೀಕಂಠಯ್ಯ ಕೂಡ ಇದೇ ಕ್ಷೇತ್ರದಿಂದ 3 ಬಾರಿ ಆಯ್ಕೆಯಾಗಿದ್ದರು.
ಹೀಗೆ ರಾಜ್ಯ ರಾಜಕಾರಣಕ್ಕೆ ಎಸ್. ಶಿವಪ್ಪ, ಎಚ್.ಸಿ. ಶ್ರೀಕಂಠಯ್ಯರಂತಹ ಘಟಾನುಘಟಿ ರಾಜಕಾರಣಿಗಳನ್ನು ನೀಡಿದ ಈ ಕ್ಷೇತ್ರದ ಮತದಾರರು ಅರ್ಹರನ್ನೇ ಆಯ್ಕೆ ಮಾಡಿಕೊಂಡು ಬಂದಿದ್ದಾರೆ.
ಜನತಾದಳದಿಂದ ಸಿ.ಎಸ್. ಪುಟ್ಟೇಗೌಡರು ಇಲ್ಲಿಂದಲೇ 3 ಬಾರಿ ವಿಧಾನಸಭೆ ಪ್ರವೇಶ ಮಾಡಿದ್ದಾರೆ. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಶಾಸಕ ಪುಟ್ಟೇಗೌಡರು ಕಾಂಗ್ರೆಸ್ ಸೇರಿ ಟಿಕೆಟ್ ಪಡೆಯಲು ಯತ್ನಿಸುತ್ತಿದ್ದರೆ, ಮೂಲ ಕಾಂಗ್ರೆಸಿಗರು ಗೌಡರಿಗೆ ಟಿಕೆಟ್ ನೀಡುವುದು ಬೇಡವೇ ಬೇಡ ಎಂದು ಬಂಡಾಯದ ಬಾವುಟ ಹಾರಿಸಿದ್ದಾರೆ.
ಹೇಮಾವತಿ ಸಹಕಾರಿ ಸಕ್ಕರೆ ಕಾರ್ಖಾನೆ ನಿರ್ದೇಶಕರಾಗಿ ಆಯ್ಕೆ ಆಗುವ ರಾಜಕೀಯಕ್ಕೆ ಎಂಟ್ರಿ ಪಡೆದ ಹಾಲಿ ಎಚ್ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಿ.ಎನ್. ಬಾಲಕೃಷ್ಣ ಜೆಡಿಎಸ್ನಿಂದ ಅಖಾಡಕ್ಕೆ ಇಳಿಯುತ್ತಿದ್ದು, ಉತ್ತಮ ಸಂಘಟಕರಾಗಿರುವ ಅವರು ವಿರೋಧಪಕ್ಷಗಳ ಅಭ್ಯರ್ಥಿಗಳಿಗೆ ಪ್ರಬಲ ಪೈಪೋಟಿ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಕ್ಷೇತ್ರದ ಒಟ್ಟು 1,81,633 ಮತದಾರರು ಇದ್ದಾರೆ.
ಹಾಲಿ ಎಂಎಲ್ಎ ಸಿ.ಎಸ್.ಪುಟ್ಟೇಗೌಡ (ಮೊದಲು ಜೆಡಿಎಸ್, ಈಗ ಕಾಂಗ್ರೆಸ್ ಸೇರಿದ್ದಾರೆ)
ಶ್ರವಣಬೆಳಗೊಳ ಕ್ಷೇತ್ರ ಜಿಲ್ಲೆಯಲ್ಲೇ ಜಿದ್ದಾಜಿದ್ದಿ ಪಡೆದಿರುವ ವಿಧಾನಸಭಾ ಕ್ಷೇತ್ರ. ಕಳೆದ 3 ಚುನಾವಣೆಯಲ್ಲಿ ಜೆಡಿಎಸ್ನಿಂದ ಗೆದ್ದಿದ್ದ ಸಿ.ಎಸ್.ಪುಟ್ಟೇಗೌಡ ಈ ಬಾರಿ ಕಾಂಗ್ರೆಸ್ಗೆ ಹಾರಿದ್ದು, ಅವರೇ ಅಭ್ಯರ್ಥಿಯೂ ಆಗಿದ್ದಾರೆ. ಜೆಡಿಎಸ್ನಿಂದ ಎಚ್ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಿ.ಎನ್.ಬಾಲಕೃಷ್ಣ ಮೊದಲ ಬಾರಿ ಚುನಾವಣಾ ಅಖಾಡಕ್ಕೆ ಧುಮುಕಿದ್ದಾರೆ.
ವಿಶ್ವವಿಖ್ಯಾತ ಗೊಮ್ಮಟನ ನೆಲೆಯಲ್ಲಿ ಬಿಜೆಪಿ ಮತ್ತು ಕೆಜೆಪಿಗೆ ನೆಲೆಯಿಲ್ಲ. ಕ್ಷೇತ್ರದಲ್ಲಿ ಒಟ್ಟು 7 ಜಿಲ್ಲಾ ಪಂಚಾಯ್ತಿ ಕ್ಷೇತ್ರಗಳಿದ್ದು, 5 ಹೋಬಳಿಗಳಿವೆ. ಬಹುತೇಕ ಸ್ಥಳೀಯ ಸಂಸ್ಥೆಗಳ ಆಡಳಿತ ಜೆಡಿಎಸ್ ಕೈಯಲ್ಲಿದೆ.
ಹೀಗಾಗಿ ಇಲ್ಲಿ ಜೆಡಿಎಸ್ - ಕಾಂಗ್ರೆಸ್ ನಡುವೆ ನೇರ ಪೈಪೋಟಿ ಇದ್ದು, ಸದ್ಯ ಜೆಡಿಎಸ್ ಒಂದು ಹೆಜ್ಜೆ ಮುಂದಿದೆ. ಕ್ಷೇತ್ರದ ಒಟ್ಟು ಮತದಾರರ ಪೈಕಿ 89 ಸಾವಿರ ಇರುವ ಒಕ್ಕಲಿಗ ಮತದಾರರೇ ನಿರ್ಣಾಯಕ. ಉಳಿದಂತೆ 35 ಸಾವಿರ ಎಸ್ಸಿ ಮತ್ತು ಎಸ್ಟಿ ಮತದಾರರಿದ್ದಾರೆ. ತೆಂಗು ಹೆಚ್ಚಾಗಿ ಬೆಳೆಯುವ ಈ ಕ್ಷೇತ್ರದಲ್ಲಿ ಸಮಸ್ಯೆಗಳಿಗಿಂತ ವೈಯಕ್ತಿಕ ಪ್ರತಿಷ್ಠೆಯೇ ಚುನಾವಣೆಯಲ್ಲಿ ಪ್ರಮುಖ ಪಾತ್ರವಹಿಸಲಿದೆ.
ಒಂದೆಡೆ ಪಕ್ಷಾಂತರ ಮಾಡಿರುವ ಪುಟ್ಟೇಗೌಡ ಮತ್ತೊಂದೆಡೆ ಚೊಚ್ಚಲ ಚುನಾವಣಾ ಕಣಕ್ಕಿಳಿದಿರುವ ಬಾಲಕೃಷ್ಣ. ಹೀಗಾಗಿ ಯಾರಿಗೆ ಲಾಭ ಯಾರಿಗೆ ನಷ್ಟ ಅನ್ನೋ ಕುತೂಹಲ ಈ ಬಾರಿ ಹೆಚ್ಚಿದೆ.
ಎಚ್ಎಎಲ್ ನೌಕರರಾಗಿ ಅಲ್ಲಿನ ಗೃಹ ನಿರ್ಮಾಣ ಸಂಘದ ಅಧ್ಯಕ್ಷರಾಗಿರುವ ಗೋಪಾಲಸ್ವಾಮಿ, ತಮ್ಮ ಕೆಲಸಕ್ಕೆ ರಾಜಿನಾಮೆ ನೀಡಿ ಸ್ಪರ್ಧಿಸಲು ಮುಂದಾಗಿದ್ದಾರೆ. ಅಲ್ಲದೇ ಶ್ರೀಕಂಠಯ್ಯನವರ ಪುತ್ರ ಎಚ್.ಎಸ್. ವಿಜಯಕುಮಾರ್, ಮುಖಂಡ ಚಂದ್ರೇಗೌಡ, ಸಿ. ವಿ.ರಾಜಪ್ಪ ಮತ್ತಿತರರು ಪುಟ್ಟೇಗೌಡರಿಗೆ ಟಿಕೆಟ್ ನೀಡುವುದಕ್ಕೆ ವಿರೋಧಿಸಿದ್ದಾರೆ. ಬಿಜೆಪಿಯಿಂದ ಪಟೇಲ್ ಶಿವಪ್ಪ ಆಕಾಂಕ್ಷಿಯಾಗಿದ್ದಾರೆ. ಬಿಜೆಪಿ, ಬಿಎಸ್ಆರ್ ಸಾಂಕೇತಿಕ ಸ್ಪರ್ಧೆ ಅಷ್ಟೇ ಇಲ್ಲ. ಕಾಂಗ್ರೆಸ್ - ಜೆಡಿಎಸ್ ನಡುವೆಯೇ ಕದನ.
ನಾಯಕರ ಟೀಕಿಸುವವರಿಗೆ ಸ್ಥಾನವಿಲ್ಲ
ಕನ್ನಡಪ್ರಭವಾರ್ತೆ ಚನ್ನರಾಯಪಟ್ಟಣ ಮಾ.28
ಪಕ್ಷ ವಿರೋಧಿ ಕೆಲಸ ಹಾಗೂ ಪಕ್ಷದ ನಾಯಕರನ್ನು ಟೀಕಿಸುವವರಿಗೆ ಪಕ್ಷದಲ್ಲಿ ಸ್ಥಾನವಿಲ್ಲ. ಅವರನ್ನು ಅಮಾನತು ಮಾಡುವುದು ಸೂಕ್ತ ಕ್ರಮವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಬಿ.ಬಿ ಶಿವಪ್ಪ ತಿಳಿಸಿದರು.
ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ರೇಣುಕಾಚಾರ್ಯ ಅವರನ್ನು ಪಕ್ಷದಿಂದ ಅಮಾನತು ಮಾಡಿರುವುದು ಸ್ವಾಗತಾರ್ಹ ಕ್ರಮವಾಗಿದ್ದು, ಮುಂದಿನ ದಿನಗಳಲ್ಲಿ ಯಾರೇ ಪಕ್ಷ ವಿರೋಧಿ ಅಥವಾ ಪಕ್ಷದ ನಾಯಕರುಗಳ ವಿರುಧ್ದ ಬಹಿರಂಗವಾಗಿ ಟೀಕಿಸುವವರಿಗೆ ಇದೇ ಕ್ರಮ ಜರುಗಿಸಬೇಕು ಎಂದು ಹೇಳಿದರು.
ಗೋಪಾಲಸ್ವಾಮಿಗೆ ಟಿಕೆಟ್: ಒತ್ತಾಯ
ಕನ್ನಡಪ್ರಭವಾರ್ತೆ ಚನ್ನರಾಯಪಟ್ಟಣ ಮಾ.28
ತಾಲೂಕಿನಲ್ಲಿ ಕಾಂಗ್ರೆಸ್ನ್ನು ಸಂಘಟಿಸಿ ಉತ್ತಮ ಮಟ್ಟಕ್ಕೆ ತಂದಿರುವ ಹಿರಿಸಾವೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಾಲಸ್ವಾಮಿ ಅವರಿಗೆ ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ನೀಡಬೇಕೆಂದು ಜಿಪಂ ಸದಸ್ಯ ರಂಗಸ್ವಾಮಿ ಒತ್ತಾಯಿಸಿದರು. ತಾಲೂಕಿನಲ್ಲಿ ಪಕ್ಷ ದುರ್ಬಲವಾಗಿದ್ದ ಸಂದರ್ಭದಲ್ಲಿ ಉತ್ತಮವಾಗಿ ಸಂಘಟಿಸಿ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿಯಲ್ಲಿ ಉತ್ತಮ ಸ್ಥಾನ ಗಳಿಸಲು ಕಾರಣರಾದ ಗೋಪಾಲಸ್ವಾಮಿಗೆ ಟಿಕೆಟ್ ನೀಡಿದರೆ ಕಾಂಗ್ರೆಸ್ ಪಕ್ಷಕ್ಕೆ ಉತ್ತಮ ಭವಿಷ್ಯವಿದೆ ಎಂದು ತಿಳಿಸಿದರು. ಕಾಂಗ್ರೆಸ್ ಟಿಕೆಟ್ ನೀಡಲು ನಿರಾಕರಿಸಿದರೆ ಸ್ವತಂತ್ರವಾಗಿ ಸ್ಪರ್ಧಿಸುವ ಚಿಂತನೆ ನಡೆದಿದ್ದು, ಹೈಕಮಾಂಡ್ ಈ ಬಗ್ಗೆ ಪರಿಶೀಲನೆ ನಡೆಸುವ ಜತೆಗೆ ಕಾರ್ಯಕರ್ತರೊಂದಿಗೆ ಸಮಾಲೋಚಿಸಿ ಟಿಕೆಟ್ ನೀಡಬೇಕೆಂದು ಒತ್ತಾಯಿಸಿದರು.
ಮತದಾರರು ಎಷ್ಟು
- 2011ರ ಜನಗಣತಿ ಪ್ರಕಾರ ಒಟ್ಟು 1,81633 ಜನಸಂಖ್ಯೆ ಇದ್ದು, 91,326 ಪುರುಷರು, 90,307 ಮಹಿಳೆಯರು ಇದ್ದಾರೆ.
- 2008ರ ಚುನಾವಣೆಯಲ್ಲಿ ಸಿ.ಎಸ್.ಪುಟ್ಟೇಗೌಡ (ಜೆಡಿಎಸ್) 9446 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.
- ಶ್ರವಣಬೆಳಗೊಳ ಕ್ಷೇತ್ರದಲ್ಲಿ ಒಕ್ಕಲಿಗರು 89 ಸಾವಿರ, ಕುರುಬರು 10 ಸಾವಿರ, ಲಿಂಗಾಯಿತರು 8 ಸಾವಿರ, ಮುಸ್ಲಿಂರು 10 ಸಾವಿರ, ಜೈನರು 10 ಸಾವಿರ, ಪರಿಶಿಷ್ಟ ಜಾತಿ-ವರ್ಗ 35 ಸಾವಿರ ಇತರೆ 27 ಸಾವಿರ ಇದ್ದಾರೆ.
ಯಾರು ಯಾವಾಗ ಗೆದ್ದಿದ್ದರು
- 1978 ರ ಚುನಾವಣೆಯಲ್ಲಿ ಇಂದಿರಾ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಎಚ್.ಸಿ. ಶ್ರೀಕಂಠಯ್ಯ 43,045 ಮತ ಪಡೆದು ಆಯ್ಕೆಯಾಗಿದ್ದರು. ಜನತಾಪಕ್ಷದ ಅಭ್ಯರ್ಥಿ ಎನ್.ಗಂಗಾಧರ್ 25,440 ಮತಗಳನ್ನು ಪಡೆದು ಸೋತಿದ್ದರು.
- 1983 ರಲ್ಲಿ ಮತ್ತೆ ಶ್ರೀಕಂಠಯ್ಯನವರೇ 41,164 ಮತ ಪಡೆದು ವಿಜಯಿಯಾಗಿದ್ದರೆ, ಎನ್.ಗಂಗಾಧರ್ ಅವರು ಜನತಾಪಕ್ಷದಿಂದ ಸ್ಪರ್ಧಿಸಿ 29,662 ಮತ ಪಡೆದು ಸೋತಿದ್ದರು.
- 1985ರಲ್ಲಿ ಜನತಾಪಕ್ಷದ ಗಂಗಾಧರ್ ವಿಜಯಿಯಾಗಿದ್ದರೇ, ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಡಾ. ನಂಜಪ್ಪ ಸೋತಿದ್ದರು.
- 1989 ರಲ್ಲಿ ಡಾ. ನಂಜಪ್ಪ 62,350 ಮತ ಪಡೆದು ಗೆದ್ದರೆ, ಜನತಾಪಕ್ಷದ ಅಭ್ಯರ್ಥಿಯಾಗಿದ್ದ ಸಿ.ಎಸ್. ಪುಟ್ಟೇಗೌಡರು 47,711 ಮತಗಳನ್ನು ಪಡೆದು ಸೋತಿದ್ದರು.
- 1994 ರಲ್ಲಿ ಜನತಾದಳದಿಂದ ಕಣಕ್ಕೆ ಇಳಿದಿದ್ದ ಪುಟ್ಟೇಗೌಡರು 66,906 ಮತಗಳನ್ನು ಪಡೆದು ಹಿರಿಯ ರಾಜಕಾರಣಿ ಎಚ್.ಸಿ. ಶ್ರೀಕಂಠಯ್ಯನವರಿಗೆ ಸೋಲಿನ ರುಚಿ ತೋರಿಸಿದ್ದರು. ಶ್ರೀಕಂಠಯ್ಯನವರಿಗೆ 45,871 ಮತಗಳ ಬಂದಿದ್ದವು.
- 1999 ರಲ್ಲಿ ಶ್ರೀಕಂಠಯ್ಯ 65,624 ಮತ ಪಡೆದು ಗೆದ್ದರೇ, ಪುಟ್ಟೇಗೌಡರು 42,576 ಮತಗಳನ್ನು ಪಡೆದು ಸೋತರು.
- 2004ರ ಚುನಾವಣೆಯಲ್ಲಿ ಸಿ.ಎಸ್. ಪುಟ್ಟೇಗೌಡ (ಜೆಡಿಎಸ್) 70,461 ಮತ ಪಡೆದು ಗೆದ್ದಿದ್ದರು. ಇವರ ವಿರುದ್ಧ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಶ್ರೀಕಂಠಯ್ಯ ಪುತ್ರ ಎಚ್.ಎಸ್.ವಿಜಯಕುಮಾರ್ 35,585 ಮತ ಪಡೆದು ಪರಾಭವಗೊಂಡಿದ್ದರು.
- 2008ರ ಚುನಾವಣೆಯಲ್ಲಿ ಸಿ.ಎಸ್.ಪುಟ್ಟೇಗೌಡ (ಜೆಡಿಎಸ್) 65,726 ಮತ ಪಡೆದು ಗೆದ್ದಿದ್ದರು. ಇವರ ವಿರುದ್ಧ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಎಚ್.ಸಿ.ಶ್ರೀಕಂಠಯ್ಯ 56,280 ಮತ ಪಡೆದು ಪರಾಭವಗೊಂಡಿದ್ದರು.
ಹೋಬಳಿಗಳು ಯಾವುವು
- ಚನ್ನರಾಯಪಟ್ಟಣ ಕಸಬಾ, ಹಿರೀಸಾವೆ, ಶ್ರವಣಬೆಳಗೊಳ, ನುಗ್ಗೇಹಳ್ಳಿ ಮತ್ತು ಬಾಗೂರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

