ಅರಸೀಕೆರೆ: ಹಾರನಹಳ್ಳಿಯಲ್ಲಿ 5 ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಲಾಗಿರುವ ನೂತನ ಮಾಸ್ತಮ್ಮ ದೇವಾಲಯವನ್ನು ಶುಕ್ರವಾರ ಉದ್ಘಾಟಿಸಲಾಯಿತು.
ಜೇನುಕಲ್ ಸಿದ್ದೇಶ್ವರ ಸ್ವಾಮಿ, ಧೂತರಾಯಸ್ವಾಮಿ, ವೀರಭದ್ರಸ್ವಾಮಿ, ಕೋಡಮ್ಮ ದೇವಿ ಸಮ್ಮುಖದಲ್ಲಿ ಹೋಮ, ಹವನ ವಿಶೇಷ ಪೂಜೆ, ಅಭಿಷೇಕ ಇತ್ಯಾದಿ ಧಾರ್ಮಿಕ ಕಾರ್ಯಕ್ರಮ ನೆರವೇರಿಸಲಾಯಿತು. ನಂತರ ಮಾಸ್ತಮ್ಮ ದೇವಿ ವಿಗ್ರಹ ಪ್ರತಿಷ್ಠಾಪನೆಯೊಂದಿಗೆ ದೇವಾಲಯವನ್ನು ವಿದ್ಯುಕ್ತವಾಗಿ ಉದ್ಘಾಟಿಸಲಾಯಿತು.
ಇದೇ ಸಂದರ್ಭದಲ್ಲಿ ಮಡಿವಾಳ ಸಮಾಜದ ತಾಲೂಕು ಮುಖಂಡ ರಾಮಚಂದ್ರಪ್ಪ ಮಾತನಾಡಿ, ಪುರಾತನ ದೇವಾಲಯಗಳ ಸಂರಕ್ಷಣೆಯಿಂದ ಗ್ರಾಮದ ಜನತೆಗೆ ಒಳಿತಾಗಲಿದೆ. ಇಂತಹ ಲೋಕ ಕಲ್ಯಾಣ ಕಾರ್ಯಕ್ರಮಗಳಲ್ಲಿ ಭಕ್ತರು, ಗ್ರಾಮಸ್ಥರು ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ದೇವಿ ಕೃಪೆಗೆ ಪಾತ್ರರಾಗಬೇಕಿದೆ ಎಂದರು.