ಕಾಡಾನೆ ಸಮಸ್ಯೆ ಶೀಘ್ರ ಬಗೆಹರಿಸಿ: ದೇವೇಗೌಡ
ಕ.ಪ್ರ.ವಾರ್ತೆ ಹಾಸನ ನ. 6
ಸಾರ್ವಜನಿಕ ಸಮಸ್ಯೆ ಕುರಿತು ಗಂಭೀರ ಚರ್ಚೆ ನಡೆಯಬೇಕಾಗಿರುವುದು ಹೀಗೇನೆ. ಅಲ್ಲಿ ಆರೋಪ, ಪ್ರತ್ಯಾರೋಪ ಇರಲಿಲ್ಲ. ಬದಲಿಗೆ ಸಮಸ್ಯೆಗಳ ಪರಿಹಾರಕ್ಕೆ ಗಂಭೀರ ಚರ್ಚೆ ನಡೆದು ಪರಸ್ಪರ ವಿಚಾರ ವಿನಿಮಯ ನಡೆಯಿತು.
ಬುಧವಾರ ಜಿಪಂನ ಹೇಮಾವತಿ ಸಭಾಂಗಣದಲ್ಲಿ ಕಾಡಾನೆಗಳ ಸಮಸ್ಯೆಗೆ ಪರಿಹಾರ, ಖಾಸಗಿ ಭೂಮಿಯಲ್ಲಿ ಮರ ಕಡಿದು ರೈತರು ಮಾರಾಟ ಮಾಡಿಕೊಳ್ಳಲು ಅಡಚಣೆಯಾಗಿರುವ ಕಾನೂನುಗಳು, ಕಾಡು ಪ್ರಾಣಿ ಹಾವಳಿ ತಡೆ ಇತರೆ ವಿಚಾರಗಳ ಬಗ್ಗೆ ನಡೆದ ಸಭೆ ಮಾದರಿಯಾಗಿತ್ತು.
ಸ್ಥಳೀಯ ಲೋಕಸಭಾ ಸದಸ್ಯರೂ ಆದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಅರಣ್ಯ ಸಚಿವ ರಮಾನಾಥ ರೈ ಅವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಯ ಶಾಸಕರಲ್ಲದೆ, ಅರಣ್ಯ ಇಲಾಖೆಯ ಉನ್ನತಾಧಿಕಾರಿಗಳು ಭಾಗವಹಿಸಿದ್ದರು. ಮಾತನಾಡಿದ ಎಲ್ಲರೂ ಸಮಸ್ಯೆ ಬಗ್ಗೆ ಟೀಕೆ, ಟಿಪ್ಪಣೆ ಮಾಡದೇ ಸಮಸ್ಯೆಯ ಮಜಲುಗಳನ್ನು ಸಚಿವರ ಗಮನಕ್ಕೆ ತಂದರಲ್ಲದೆ, ಕಾನೂನಿನ ಚೌಕಟ್ಟಿನಲ್ಲಿ ತ್ವರಿತವಾಗಿ ಬಗೆಹರಿಸಬೇಕು, ವಿಳಂಬ ಬೇಡ ಎಂದು ಆಗ್ರಹಿಸಿದರು.
ದುಡ್ಡು ಕೊಟ್ರೆ ಹೋದ ಪ್ರಾಣ ಬರುತ್ತಾ?: ಮಾಜಿ ಪಿಎಂ ದೇವೇಗೌಡರು ಮಾತನಾಡಿ, ಜಿಲ್ಲೆಯ ಸಕಲೇಶಪುರ, ಆಲೂರು, ಅರಕಲಗೂಡು ತಾಲೂಕು ಸೇರಿದಂತೆ ಹಲವೆಡೆ ಕಾಡಾನೆ ಹಾವಳಿ ವಿಪರೀತವಾಗಿದೆ. ನಾನು ಕಾಡಾನೆಯಿಂದ ಪ್ರಾಣ ಕಳೆದುಕೊಂಡ ಕುಟುಂಬವನ್ನು ಭೇಟಿ ಮಾಡಲು ಹೋಗಿದ್ದಾಗ ರೈತರು, 5 ಲಕ್ಷ ಕೊಟ್ರೆ ಹೋದ ಪ್ರಾಣ ಬರೋದಿಲ್ಲ. ಶಾಶ್ವತ ಪರಿಹಾರ ಬೇಕು. ನಮ್ ಜಮೀನನ್ನು ಬಿಟ್ಟುಕೊಡ್ತೀವಿ. ಬೇರೆ ಕಡೆ ಪುನರ್ವಸತಿ ಕಲ್ಪಿಸಿ ಎಂದು ಅವಲತ್ತುಕೊಳ್ಳುತ್ತಾರೆ. ಮಕ್ಕಳು ಶಾಲೆಗೆ ಹೋಗಲಾಗುತ್ತಿಲ್ಲ. ರೈತರು ಜಮೀನಿಗೆ ಹೋಗಿ ಬರಲು ಸಾಧ್ಯವಾಗುತ್ತಿಲ್ಲ ಎಂದು ಸಮಸ್ಯೆ ಮಜಲನ್ನು ಎಳೆ ಎಳೆಯಾಗಿ ಬಿಡಿಸಿಟ್ಟರು.
ಮುಖ್ಯಮಂತ್ರಿಗಳ ಜಿಲ್ಲೆ ಎಚ್.ಡಿ.ಕೋಟೆಯಿಂದ ಹಿಡಿದು ಬೆಂಗಳೂರಿನವರೆಗೂ ಕಾಡಾನೆಗಳ ಕಾಟ ಇದೆ. ಇಂದಿನ ಸರ್ಕಾರ, ಹಿಂದಿನ ಸರ್ಕಾರ ಸಮಸ್ಯೆ ಪರಿಹಾರಕ್ಕೆ ಪ್ರಯತ್ನ ಮಾಡಲಿಲ್ಲ ಎನ್ನುವುದಿಲ್ಲ. ಕಾಡಾನೆಗಳ ಹಾವಳಿಯಿಂದ ರೈತರು ಹತ್ತು ಹಲವು ಸಮಸ್ಯೆಗಳಿಗೆ ತುತ್ತಾಗಿದ್ದಾರೆ. ಎಲ್ಲ ಕಾಡಾನೆಗಳನ್ನು ಒಂದೇ ಬಾರಿ ಹಿಡಿದು ಸ್ಥಳಾಂತರಿಸುವುದು ಕಷ್ಟ ಎಂದು ಗೊತ್ತಿದೆ. ಹಂತ ಹಂತವಾಗಿ ಆನೆಗಳನ್ನು ಸ್ಥಳಾಂತರಿಸುವ ಕಾರ್ಯಾರಂಭ ತ್ವರಿತವಾಗಿ ಆಗಬೇಕಾಗಿದೆ ಎಂದರು.
ಅನಾವೃಷ್ಟಿಯಿಂದ ಕಾಫಿ, ಮೆಣಸು, ಏಲಕ್ಕಿ ನಷ್ಟವಾಗಿದೆ. ಇದಕ್ಕೆ ಪರಿಹಾರವನ್ನು ರಾಜ್ಯ ಸರ್ಕಾರ ನೀಡಲಾಗುವುದಿಲ್ಲ. ಕೇಂದ್ರದ ವಾಣಿಜ್ಯ ಸಚಿವರ ಮೇಲೆ ಒತ್ತಡ ಹಾಕಬೇಕು. ಇತ್ತ ಅರಣ್ಯ ಸಚಿವರು ಒತ್ತು ನೀಡಿದರೆ ತಾವು ಸಹಕಾರ ನೀಡುವುದಾಗಿ ಹೇಳಿದ ಗೌಡರು, ಖಾಸಗಿ ಜಮೀನಿನಲ್ಲಿ ರೈತರೇ ಮರಗಳನ್ನು ಕಡಿದುಕೊಂಡು ಮಾರಾಟ ಮಾಡಬಹುದೆಂದು ಹೈಕೋರ್ಟ್ ಹೇಳಿದೆ. ಆದ್ದರಿಂದ ಸುಪ್ರಿಂಕೋರ್ಟ್ಗೆ ಸಲ್ಲಿಸಿರುವ ರಿಟ್ ಅರ್ಜಿಯನ್ನು ಹಿಂಪಡೆದು ಮತ್ತು ಖಾಸಗಿ ಜಮೀನಿನಲ್ಲಿ ಮರ ಕಡಿದು ಸಾಗಿಸಲು ಕಾನೂನು ಅಡಚಣೆಗಳಿದ್ದರೆ ಕೂಡಲೇ ಬಗೆಹರಿಸಿಕೊಳ್ಳಬೇಕು ಎಂದರು.
ಆನೆಗಳ ಸಂಖ್ಯೆ ಏರಿಕೆ: ಅರಣ್ಯ ಸಚಿವ ರಮಾನಾಥ ರೈ ಮಾತನಾಡಿ, ಹಿಂದೆ ಕರ್ನಾಟಕದಲ್ಲಿ 4 ಸಾವಿರ ಕಾಡಾನೆಗಳಿದ್ದವು. ಈಗ ಅವುಗಳ ಸಂಖ್ಯೆ 6 ಸಾವಿರಕ್ಕೆ ಏರಿದೆ. ಆದ್ದರಿಂದ ಕಾಡಿನಲ್ಲಿ ಆಹಾರ ಮತ್ತು ಕುಡಿಯುವ ನೀರಿನ ಕೊರತೆ ಎದುರಾಗಿದೆ. ಪರಿಣಾಮ ಕಾಡಾನೆಗಳು ನಾಡಿಗೆ ಬರುತ್ತಿವೆ. ಹಾಸನ ಜಿಲ್ಲೆಯಲ್ಲಿ 35 ಕಾಡಾನೆಗಳು ಇದ್ದು, ಜನವರಿಯಿಂದ 25 ಕಾಡಾನೆಗಳನ್ನು ಸೆರೆ ಹಿಡಿದು ಸ್ಥಳಾಂತರಿಸಲಾಗುವುದು. ಪರಿಹಾರದ ಹಣವನ್ನು ಹೆಚ್ಚಿಸುವ ಬಗ್ಗೆ ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದರು.
1986ರಲ್ಲಿ ಹೊರಡಿಸಿದ ಸುತ್ತೋಲೆಯನ್ನು ಮಾರ್ಪಡಿಸಿ ಖಾಸಗಿ ಭೂಮಿಯಲ್ಲಿ ಮರ ಕಡಿದು ರೈತರು ಮಾರಾಟ ಮಾಡಿಕೊಳ್ಳಲು ಅವಕಾಶ ನೀಡಲಾಗುವುದು. ಕಾಡಾನೆಗಳನ್ನು ತಡೆಯಲು ಅವಶ್ಯ ಇರುವ ಕಡೆ ಕಂದಕ ಮತ್ತು ಸೋಲಾರ್ ತಂತಿ ಬೇಲಿ ನಿರ್ಮಿಸಲಾಗುವುದು. ಅರಣ್ಯ ಇಲಾಖೆ ಜನ ಸ್ನೇಹಿಯಾಗಿ ಕೆಲಸ ಮಾಡುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದರು.
ಶಾಸಕರಾದ ಎಚ್.ಡಿ.ರೇವಣ್ಣ, ಕೆ.ಎಂ.ಶಿವಲಿಂಗೇಗೌಡ, ಎಚ್.ಕೆ.ಕುಮಾರಸ್ವಾಮಿ ಮಾತನಾಡಿದರು. ಅರಣ್ಯ ಇಲಾಖೆ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ದೀಪಕ್ ಶರ್ಮ, ಜಿಲ್ಲಾಧಿಕಾರಿ ಅನ್ಬುಕುಮಾರ್, ಜಿಪಂ ಸಿಇಒ ಯು.ಪಿ.ಸಿಂಗ್, ಎಸ್ಪಿ ರವಿ ಡಿ. ಚನ್ನಣ್ಣನವರ, ಡಿಸಿಎಫ್ ಲಕ್ಷ್ಮಣ್ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

