ಹಾಸನ

ನಮ್ ಕ್ಷೇತ್ರದಲ್ಲಿ ಕಾಡುಪ್ರಾಣಿ ಹಾವಳಿ ನಿಲ್ಲಿಸಿ ಸ್ವಾಮಿ..

Published On :

ಕ.ಪ್ರ.ವಾರ್ತೆ     ಹಾಸನ     ನ. 6
ಸ್ವಾಮಿ.. ನಮ್ ಕ್ಷೇತ್ರಗಳಲ್ಲಿ ಕರಡಿ, ಚಿರತೆಗಳ ಕಾಟ ವಿಪರೀತವಾಗಿದೆ. ಹಗಲೊತ್ತೇ ಜನರ ಮೇಲೆ ಎರಗಿ ಕಚ್ಚುತ್ತಿವೆ. ಈ ಸಮಸ್ಯೆಗೆ ದಯವಿಟ್ಟು ಗಮನಹರಿಸಿ...
ಬುಧವಾರ ಜಿಪಂ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಅರಣ್ಯ ಸಚಿವರ ಬಳಿ ಹೊಳೆನರಸೀಪುರ ಕ್ಷೇತ್ರದ ಶಾಸಕ ಎಚ್.ಡಿ.ರೇವಣ್ಣ ಮತ್ತು ಅರಸೀಕೆರೆ ಕ್ಷೇತ್ರದ ಶಾಸಕ ಕೆ.ಎಂ.ಶಿವಲಿಂಗೇಗೌಡರು ಅವಲತ್ತುಕೊಂಡಿದ್ದು ಹೀಗೆ.
ಕಾಡಾನೆಗಳ ಸಮಸ್ಯೆ ಬಗ್ಗೆ ಚರ್ಚಿಸುತ್ತಿದ್ದ ಸಂದರ್ಭದಲ್ಲಿ ಮಾತನಾಡಿದ ರೇವಣ್ಣ, ನನ್ನ ಕ್ಷೇತ್ರದಲ್ಲಿ ಚಿರತೆಗಳ ಹಾವಳಿ ವಿಪರೀತವಾಗಿದೆ. ಹಳೆ ಕೋಟೆ ಸಮೀಪ ಮತ್ತು ಹರದನಹಳ್ಳಿಯಲ್ಲಿ ಮೂವರು ರೈತರನ್ನು ಹಗಲೊತ್ತಿನಲ್ಲಿ ಚಿರತೆಗಳು ಕೊಂದು ತಿಂದಿವೆ. ಅಲ್ಲಿರುವ ಬೆಟ್ಟಗುಡ್ಡಗಳಲ್ಲಿ ಪವನ ವಿದ್ಯುತ್ ಯಂತ್ರಗಳಿಂದ ಬರುವ ಶಬ್ದಕ್ಕೆ ಹೆದರಿ ಚಿರತೆಗಳು ಹೊರ ಬಂದು ರೈತರ ಮೇಲೆ ದಾಳಿ ಮಾಡುತ್ತಿವೆ. ಚಿರತೆಗಳು ಗುಹೆಯೊಳಗೆ ಮನುಷ್ಯರನ್ನು ಎಳೆದುಕೊಂಡು ಹೋಗಿ ತಿಂದ ನಂತರ ಉಳಿದ ಮೂಳೆಗಳ ಮೇಲೆ ಸೊಪ್ಪು ಮುಚ್ಚುತ್ತವೆ. ಜನರು ಭಯಭೀತರಾಗಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಇದಲ್ಲದೇ, ಶಾಂತಿಗ್ರಾಮದ ಸಮೀಪ 50 ವರ್ಷದಿಂದ ರೈತರು ಕೃಷಿ ಮಾಡುತ್ತಿರುವ ಜಮೀನನ್ನು ಬಿಡುವಂತೆ ಅರಣ್ಯಾಧಿಕಾರಿಗಳು ರೈತರಿಗೆ ಕಿರುಕುಳ ನೀಡುತ್ತಿದ್ದಾರೆ. ಇದು ಸರಿಯಲ್ಲ. ಉಳುವವರಿಗೆ ಜಮೀನು ನೀಡಬೇಕು. ಈ ಬಗ್ಗೆ ಶೀಘ್ರ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.
ಶಾಸಕ ಶಿವಲಿಂಗೇಗೌಡರು ಮಾತನಾಡಿ, ಅರಸೀಕೆರೆ ತಾಲೂಕಿನಲ್ಲಿ ಕರಡಿಗಳ ಹಾವಳಿ ವಿಪರೀತವಾಗಿದೆ. ಕಾಡಿನಲ್ಲಿ ನೀರಿನ ಸಮಸ್ಯೆ ಉಂಟಾಗಿರುವುದರಿಂದ ಜಮೀನುಗಳತ್ತ ಬರುವ ಕರಡಿಗಳು ಹಗಲಿನ ವೇಳೆಯೇ ಎದುರಿಗೆ ಸಿಕ್ಕ ರೈತರನ್ನು ಕಚ್ಚುತ್ತಿವೆ. ಕಾಡಾನೆಗಳು ದಾಳಿ ನಡೆಸಿದರೆ ಒಂದೇ ಬಾರಿ ಪ್ರಾಣ ಹೋಗುತ್ತದೆ. ಆದರೆ ಕರಡಿಗಳು ಕಚ್ಚಿದರೆ ಜೀವನ ಪರ್ಯಾತ ರೈತರು ಕುರೂಪಿಗಳಾಗಿ ಬದುಕಬೇಕಾಗುತ್ತದೆ. ಆದ್ದರಿಂದ ಬೆಟ್ಟಗಳಲ್ಲಿ ಚೆಕ್ ಡ್ಯಾಂಗಳನ್ನು ನಿರ್ಮಿಸಬೇಕು. ಅದಕ್ಕಾಗಿ ಕೇಂದ್ರದಿಂದ ಹಣ ಬಿಡುಗಡೆ ಮಾಡಲಾಗಿದೆ. ಆದರೆ ಡ್ಯಾಂ ನಿರ್ಮಿಸುತ್ತಿಲ್ಲ. ನಾಗಪುರಿ ಅರಣ್ಯದಲ್ಲಿ ಇರುವ ದೇವಾಲಯಕ್ಕೆ ಹೋಗಲು ಮಾರ್ಗ ಕಲ್ಪಿಸಲಾಗಿದೆ. ಈ ರಸ್ತೆಯನ್ನು ಡಾಂಬರೀಕರಣ ಮಾಡಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ಉತ್ತರಿಸಿದ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಲಕ್ಷಣ್ ಅವರು, ಚೆಕ್ ಡ್ಯಾಂ ನಿರ್ಮಿಸಲು ಮತ್ತು ರಸ್ತೆಗೆ ಡಾಂಬರೀಕರಣ ಮಾಡಲು ಒಪ್ಪಿಗೆ ಪಡೆದುಕೊಳ್ಳುವ ಕಡತವನ್ನು ಬೆಂಗಳೂರಿಗೆ ಕಳುಹಿಸಲಾಗಿದೆ. ಒಪ್ಪಿಗೆ ಪಡೆದ ನಂತರ ಕಾಮಗಾರಿ ಆರಂಭಿಸಲಾಗುವುದು ಎಂದರು. ಮಧ್ಯೆ ಮಾತನಾಡಿದ ರೇವಣ್ಣ, ಅರಣ್ಯ ಇಲಾಖೆಯೇ ಚೆಕ್ ಡ್ಯಾಂ ಕಾಮಗಾರಿಯನ್ನು ಕೈಗೆತ್ತಿಕೊಳ್ಳಬೇಕು ಎಂದು ಹೇಳಿದರು.
ಅರಣ್ಯ ಇಲಾಖೆ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ದೀಪಕ್ ಶರ್ಮ ಮಾತನಾಡಿ, ಚೆಕ್ ಡ್ಯಾಂ ನಿರ್ಮಿಸಲು ಮತ್ತು ರಸ್ತೆ ಡಾಂಬರೀಕರಣ ಕಾಮಗಾರಿಯನ್ನು ತಮ್ಮ ಇಲಾಖೆಯಿಂದ ನಡೆಸುವ ಬಗ್ಗೆ ಕೂಡಲೇ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.