ಸೆಸ್ಕ್ ಔದಾರ್ಯ: 6 ತಿಂಗಳಿಂದ ಬಿಲ್ ನೀಡೇ ಇಲ್ಲ!
ಎಚ್.ಡಿ.ಗುರುಪ್ರಸಾದ್
ಹೊಳೆನರಸೀಪುರ: ರಾಜ್ಯದಲ್ಲಿ ಪ್ರತಿ ತಾಲೂಕಿನ ಆಯ್ದ ಎರಡು ಗ್ರಾಮಗಳಿಗೆ ಉಚಿತ ವಿದ್ಯುತ್ ಸರಬರಾಜು. ಇದು ರಾಜ್ಯ ಸರ್ಕಾರ ಘೋಷಿಸಿರುವ ನೂತನ ಯೋಜನೆ ಇರಬಹುದೆಂದು ಹುಬ್ಬೇರಿಸಬೇಡಿ. ಇದು ಹೊಳೆನರಸೀಪುರ ತಾಲೂಕಿನಲ್ಲಿ ಸೆಸ್ಕ್ ಇಲಾಖೆ ಎರಡು ಗ್ರಾಮಗಳ 600ಕ್ಕೂ ಅಧಿಕ ಮನೆಗಳಿಗೆ ಕಳೆದ ಆರು ತಿಂಗಳಿಗೂ ಹೆಚ್ಚು ಕಾಲದಿಂದ ವಿದ್ಯುತ್ ಬಿಲ್ ನೀಡದೆ ಇರುವ ಕಾರಣ ಉಚಿತ ವಿದ್ಯುತ್ ಸರಬರಾಜಾಗುತ್ತಿದೆ. ಇದನ್ನು ವಿದ್ಯುತ್ ಇಲಾಖೆಯ ಔದಾರ್ಯ ಎನ್ನಬೇಕೋ ಇಲ್ಲ ನಿರ್ಲಕ್ಷ ಎನ್ನಬೇಕೋ ತಿಳಿಯದು.
ಇತ್ತೀಚಿನ ದಿನಗಳಲ್ಲಿ ವಿದ್ಯುತ್ ದರ ದಿನದಿಂದ ದಿನಕ್ಕೆ ತುಟ್ಟಿಯಾಗುತ್ತಲೇ ಇದೆ. ಅಲ್ಲದೇ ವಿದ್ಯುತ್ ಸೋರಿಕೆಯನ್ನು ತಡೆಗಟ್ಟಲು ಇಲಾಖೆ ಕೂಡ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಆದರೂ ಇಲ್ಲಿನ ಸೆಸ್ಕ್ ವಿಭಾಗವು ತಾಲೂಕಿನ ಐಚನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿರುವ ದೊಡ್ಡ ಗ್ರಾಮವಾದ ಚಿಟ್ಟನಹಳ್ಳಿ ಹಾಗೂ ವಡೆಯರಕೊಪ್ಪಲು(ಹುಚ್ಚನಕೊಪ್ಪಲು) ಗ್ರಾಮಗಳಲ್ಲಿನ ಅಷ್ಟೂ ವಿದ್ಯುತ್ ಸಂಪರ್ಕಗಳಿಗೆ ಕಳೆದ ಆರು ತಿಂಗಳಿಗೂ ಹೆಚ್ಚು ಕಾಲದಿಂದ ವಿದ್ಯುತ್ ಬಿಲ್ ನೀಡುವ ಗೋಜಿಗೆ ಹೋಗದೆ ಇರುವುದು ಅಚ್ಚರಿ ಮೂಡಿಸಿದೆ.
ತಾಲೂಕಿನ ಚಿಟ್ಟನಹಳ್ಳಿ ಗ್ರಾಮದಲ್ಲಿ 425ಕ್ಕೂ ಹೆಚ್ಚಿನ ಮನೆಗಳಿದ್ದು, 1565ಕ್ಕೂ ಹೆಚ್ಚಿನ ಜನಸಂಖ್ಯೆಯಿರುವ ದೊಡ್ಡ ಗ್ರಾಮ. ಇದೇ ರೀತಿ ವಡೆಯರಕೊಪ್ಪಲು(ಹುಚ್ಚನಕೊಪ್ಪಲು) ಗ್ರಾಮ ಕೂಡ ಸರಿಸುಮಾರು 300ಮನೆಗಳಿರುವ ಹಾಗೂ ಸುಮಾರು 600ಕ್ಕೂ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ಗ್ರಾಮ.
ಈ ಹಿಂದೆ ಬಂಡಿಶೆಟ್ಟಿಹಳ್ಳಿ ವಿಭಾಗದಿಂದ ಈ ಎರಡೂ ಗ್ರಾಮಗಳ ಮೀಟರ್ ರೀಡಿಂಗ್ ಮಾಡಿಸಲಾಗುತ್ತಿತ್ತು. ಆಗ ಪ್ರತಿ ಎರಡು ತಿಂಗಳಿಗೊಮ್ಮೆ ಸರಿಯಾಗಿ ಪ್ರತಿ ಮನೆಗಳಿಗೂ ವಿದ್ಯುತ್ ಬಿಲ್ ತಲುಪುವ ವ್ಯವಸ್ಥೆ ಇತ್ತು ಎನ್ನುತ್ತಾರೆ ಗ್ರಾಮಸ್ಥರು.
ಆದರೆ ಇದ್ದಕ್ಕಿದ್ದಂತೆಯೇ ಚಿಟ್ಟನಹಳ್ಳಿ ಹಾಗೂ ವಡೆಯರಕೊಪ್ಪಲು ಗ್ರಾಮಗಳಲ್ಲಿನ ಅಷ್ಟೂ ಮನೆಗಳಿಗೆ ಕಳೆದ ಆರು ತಿಂಗಳಿಗೂ ಹೆಚ್ಚು ಕಾಲದಿಂದ ವಿದ್ಯುತ್ ಬಿಲ್ ನೀಡಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ವಿದ್ಯುತ್ ಬಿಲ್ಲನ್ನು ಮಾತ್ರ ಬಂಡಿಶೆಟ್ಟಿಹಳ್ಳಿ ವಿಭಾಗದ ಕಡೆಯಿಂದ ನೀಡುತ್ತಿದ್ದ ಸೆಸ್ಕ್ , ಸದರಿ ಗ್ರಾಮಗಳಲ್ಲಿನ ವಿದ್ಯುತ್ ಸಮಸ್ಯೆ, ಬಿಲ್ ಪಾವತಿಯನ್ನು ಮಾತ್ರ ಈ ಎರಡೂ ಗ್ರಾಮಗಳೂ ಪಟ್ಟಣಕ್ಕೆ ಅನತಿ ದೂರದಲ್ಲೇ ಇರುವ ಕಾರಣದಿಂದಾಗಿ ಪಟ್ಟಣದಲ್ಲಿಯೇ ನಿರ್ವಹಿಸಲಾಗುತ್ತಿತ್ತು ಎನ್ನಲಾಗಿದೆ.
ವಿದ್ಯುತ್ ಸಂಪರ್ಕಕ್ಕೆ ತೊಂದರೆಯಾಗಿಲ್ಲ: ಇಷ್ಟೊಂದು ದೀರ್ಘ ಸಮಯದಿಂದಲೂ ಸದರಿ ಗ್ರಾಮಗಳಲ್ಲಿನ ಯಾವುದೇ ಮನೆಗಳಿಗೂ ವಿದ್ಯುತ್ ಬಿಲ್ ನೀಡದಿದ್ದರೂ, ಇದುವರೆವಿಗೂ ಯಾರ ಮನೆಯ ವಿದ್ಯುತ್ ಸಂಪರ್ಕಕ್ಕೂ ಯಾವುದೇ ತೊಂದರೆಯಾಗಿಲ್ಲ.
ಒಂದು ತಿಂಗಳು ವಿದ್ಯುತ್ ಬಿಲ್ ಕಟ್ಟದಿದ್ದರೆ ಮನೆ ಬಾಗಿಲಿಗೆ ಬರುವ ವಿದ್ಯುತ್ ಇಲಾಖೆಯ ಸಿಬ್ಬಂದಿ ವಿದ್ಯುತ್ ಸಂಪರ್ಕ ಕಡಿದು ಹಾಕಲು ಮುಂದಾಗುತ್ತಾರೆ.
ಇಲ್ಲವೇ ಕಟ್ಟದೇ ಇರುವ ಬಾಕಿ ಹಣಕ್ಕೆ ಇಂತಿಷ್ಟು ಎಂದು ಬಡ್ಡಿ ವಿಧಿಸಿ ವಸೂಲು ಮಾಡಲಾಗುತ್ತದೆ.
ಆದರೆ ಇಲ್ಲಿನ ಸೆಸ್ಕ್ ಇಲಾಖೆ ಮಾತ್ರ ಕಳೆದ ಆರು ತಿಂಗಳಿಗೂ ಹೆಚ್ಚು ಕಾಲದಿಂದಲೂ ಚಿಟ್ಟನಹಳ್ಳಿ ಮತ್ತು ವಡೆಯರಕೊಪ್ಪಲು ಗ್ರಾಮಗಳಿಗೆ ವಿದ್ಯುತ್ ಬಿಲ್ ನೀಡದಿರಲು ಕಾರಣ ಮಾತ್ರ ಯಾರಿಗೂ ತಿಳಿದಿಲ್ಲ. ಜೊತೆಗೆ ಇನ್ನೊಂದು ತಮಾಷೆಯೆಂದರೆ ಈ ಗ್ರಾಮಗಳ ಜನರೂ ಬಿಲ್ ಕೊಡದಿರುವ ಕಾರಣವನ್ನೂ ಕೇಳಲು ಮುಂದಾಗಿಲ್ಲ.
ಈ ನಿರ್ಲಕ್ಷ್ಯಕ್ಕೆ ಯಾರು ಹೊಣೆ: ಒಂದು ಅಂದಾಜಿನ ಪ್ರಕಾರವಾಗಿ ಈ ಎರಡೂ ಗ್ರಾಮಗಳ ಒಟ್ಟು ವಿದ್ಯುತ್ ಬಿಲ್ ಏನಿಲ್ಲವೆಂದರೂ ಲಕ್ಷ ರು. ದಾಟುತ್ತದೆ. ಇಷ್ಟು ದೊಡ್ಡ ಮೊತ್ತದ ಬಾಕಿಯನ್ನು ವಸೂಲು ಮಾಡದೇ ಇರುವುದು ಇಲಾಖೆಯ ನಿರ್ಲಕ್ಷ್ಯವನ್ನು ಎತ್ತಿ ತೋರುತ್ತದೆ. ಆದರೆ ಈ ನಿರ್ಲಕ್ಷ್ಯಕ್ಕೆ ಯಾರು ಹೊಣೆ ಹಾಗೂ ನಷ್ಟದ ಹೊಣೆ ಹೊರುವವರು ಯಾರು ಎಂಬುದು ಪ್ರಶ್ನೆಯಾಗಿದೆ.
ಇಲ್ಲಿನ ಸೆಸ್ಕ್ ಇಲಾಖೆಯ ಔದಾರ್ಯತೆ ಎಷ್ಟಿದೆ ಎಂದರೆ ಪಟ್ಟಣದಲ್ಲಿನ ಸೆಸ್ಕ್ ಕಚೇರಿ ಹಿಂಬದಿಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಇಲಾಖೆಯ 8 ವಸತಿ ಗೃಹಗಳಿಗೆ ಕಳೆದ ಮೂರ್ನಾಲ್ಕು ತಿಂಗಳಿನಿಂದಲೂ ವಿದ್ಯುತ್ ಮೀಟರ್ ಅಳವಡಿಸದೆ ಇಲಾಖೆಯ ಸಿಬ್ಬಂದಿಗಳಿಗೆ ನೀಡಿ ವಿದ್ಯುತ್ ಸೋರಿಕೆಗೆ ಪರೋಕ್ಷವಾಗಿ ಕಾರಣವಾಗಿರುವ ವಿದ್ಯುತ್ ಇಲಾಖೆ, ಈಗ ಇನ್ನೂ ಮುಂದೆ ಹೋಗಿ ತಾಲೂಕಿನ ಎರಡು ದೊಡ್ಡ ಗ್ರಾಮಗಳ ಅಷ್ಟೂ ಮನೆಗಳಿಗೆ ಬಿಲ್ಲನ್ನು ಕಳೆದ ಆರು ತಿಂಗಳಿನಿಂದಲೂ ನೀಡಲು ಹೋಗದೆ ಇರುವುದನ್ನು ಈಗಲಾದರೂ ಇಲಾಖೆಯ ಮೇಲಾಧಿಕಾರಿಗಳು ಹಾಗೂ ಇಂಧನ ಸಚಿವರು ಇತ್ತ ಗಮನಹರಿಸುವರೇ ಎಂಬುದನ್ನು ಕಾದು ನೋಡಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

