ಯುವಕರು ಕೃಷಿ ಚಟುವಟಿಕೆಯಿಂದ ದೂರ: ತಹಸೀಲ್ದಾರ್ ವಿಷಾದ
ಚನ್ನರಾಯಪಟ್ಟಣ: ಗ್ರಾಮೀಣ ಯುವಕರು ನಾನಾ ದುಶ್ಚಟಗಳಿಗೆ ಬಲಿಯಾಗಿ ಕೃಷಿ ಚಟುವಟಿಕೆಯಿಂದ ದೂರವಾಗುತ್ತಿದ್ದಾರೆ ಎಂದು ತಹಸೀಲ್ದಾರ್ ಡಾ.ಎಚ್.ಎಲ್.ನಾಗರಾಜ್ ವಿಷಾದಿಸಿದರು.
ತಾಲೂಕಿನ ಶೆಟ್ಟಿಹಳ್ಳಿ ಡೇರಿಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಹಾಗೂ ಪ್ರತಿಮಾ ಪರಿಸರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಯುವಕರು ಶಿಕ್ಷಿತರಾಗುತ್ತಿದ್ದಂತೆ ಮಾದಕ ವ್ಯಸನಗಳಿಗೆ ಬಲಿಯಾಗಿ, ಕೃಷಿಯಲ್ಲಿ ತೊಡಗಿಸಿ ಕೊಳ್ಳುವುದನ್ನು ಮರೆಯುತ್ತಿದ್ದಾರೆ ಎಂದರು.
ಯುವ ಸಮೂಹ ಸೋಮಾರಿಗಳಾಗದೆ ಕೃಷಿ ಜತೆಯಲ್ಲಿಯೇ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡರೆ ಉತ್ತಮ ಆದಾಯ ಗಳಿಸಬಹುದು. ಹೆಚ್ಚು ರಾಸಾಯನಿಕ ಹಾಗೂ ಔಷಧಿ ಬಳಸದೆ ಸಾವಯವ ಹಾಗೂ ಪರಿಸರ ಸ್ನೇಹಿ ಕೃಷಿ ಮಾಡಬೇಕು. ಅಗತ್ಯ ಗೊಬ್ಬರವನ್ನು ತಾವೇ ತಯಾರು ಮಾಡಿಕೊಳ್ಳವುದರಿಂದ ಉತ್ತಮ ಇಳುವರಿಯನ್ನೂ ಪಡೆಯಬಹುದು. ಸಾವಯವ ಕೃಷಿಯಲ್ಲಿ ಬೆಳೆದ ಫಸಲು ಹೆಚ್ಚು ಗುಣಮಟ್ಟದಿಂದ ಕೂಡಿರುತ್ತದೆ ಎಂದು ಸಲಹೆ ನೀಡಿದರು. ದೇಶದ ಶೇ.67 ಮಂದಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದರೂ ಈ ಕ್ಷೇತ್ರದ ರಾಷ್ಟ್ರೀಯ ಆದಾಯ ಕೇವಲ ಶೇ. 14.5 ಇದೆ. ಕೈಗಾರಿಕಾ ಕ್ಷೇತ್ರದಿಂದ ಶೇ. 27, ವ್ಯಾಪಾರ ಮತ್ತು ಸೇವಾ ಕ್ಷೇತ್ರದಿಂದ ಶೇ. 60 ರಷ್ಟು ಆದಾಯವಿದ್ದು ಕೃಷಿಯಲ್ಲಿ ಹೆಚ್ಚು ಆದಾಯ ಬರುವಂತಾಗಲು ಯುವ ಸಮೂಹ ಮತ್ತು ರೈತರು ಹೆಚ್ಚು ಕೃಷಿಯತ್ತ ಗಮನಹರಿಸ ಬೇಕೆಂದರು.
ನೆಲ, ಜಲದ ಸಂರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯ, ಹಳ್ಳಿ ಸೊಗಡು ಇಲ್ಲದಂತಾಗಿದೆ ಮಹಿಳೆಯರು ಟಿ.ವಿ. ಗಳಿಗೆ ದಾಸರಾಗಿ ಸೋಮಾರಿಗಳಾಗುತ್ತಿರುವುದಲ್ಲದೆ ಕುಟುಂಬವನ್ನೇ ವಿಭಜಿಸುತ್ತಿದ್ದಾರೆ ಎಂದರು. ಜೈವಿಕ ಇಂಧನ ದೊರೆಯುವಂತಹ ಗಿಡ ಮರಗಳನ್ನು ಹೆಚ್ಚು ಬೆಳೆಸಬೇಕು, ಪ್ರತಿಮಾ ಪರಿಸರ ಟ್ರಸ್ಟ್ ನಿಗಮ ಗ್ರಾಮದ ದೇವಸ್ಥಾನದ 3.5 ಎಕರೆ ಜಾಗದಲ್ಲಿ ಗಿಡ ಮರಗಳನ್ನು ಬೆಳೆಸಲು ಬಂದಿರುವುದು ಹೆಮ್ಮೆಯ ವಿಚಾರ. ಗ್ರಾಮದ ಪ್ರತಿಯೊಬ್ಬರೂ ತಮ್ಮ ಜಮೀನಿನಲ್ಲಿ ಒಂದೊಂದು ಮರ ಬೆಳೆಸಿ. ಸ್ವದೇಶಿ ವಸ್ತುಗಳನ್ನು ಪ್ರೋತ್ಸಾಹಿಸಿ, ಹಳ್ಳಿ ಸಂಸ್ಕೃತಿ ಸೊಗಡನ್ನು ಎತ್ತಿ ಹಿಡಿಯಿರಿ. ವೃತ್ತಿಯಲ್ಲಿ ತಾರತಮ್ಯ ಮಾಡದೆ ನಿಷ್ಠೆಯಿಂದ ದುಡಿಯಿರಿ, ಮಾಯವಾಗುತ್ತಿರುವ ಜನಪದ ಕಲೆ, ಸೋಬಾನೆ ಪದಗಳನ್ನು ಉಳಿಸಿ ಎಂದರು. ಅಧ್ಯಕ್ಷತೆ ವಹಿಸಿದ್ದ ಪ್ರತಿಮಾ ಟ್ರಸ್ಟ್ ಅಧ್ಯಕ್ಷ ತೆಂಕನಹಳ್ಳಿ ಉಮೇಶ್ ಸುಮಾರು 10 ವರ್ಷದಿಂದ ಜಾನಪದ ಸೊಗಡನ್ನು ಪಸರಿಸಲು ಶ್ರಮಿಸುತ್ತಿದ್ದೇವೆ. ಇದರ ಜೊತೆಗೆ ಶೆಟ್ಟಿಹಳ್ಳಿ ಗ್ರಾಮದ ಮೂರೂವರೆ ಎಕರೆ ದೇವಸ್ಥಾನದ ಆವರಣದಲ್ಲಿ ಗಿಡಗಳನ್ನು ನೆಟ್ಟು ಬೆಳೆಸಲು ಗ್ರಾಮಸ್ಥರ ನೆರವನ್ನು ಕೋರಿದರು.
ಉದಯಪುರದ ಪ್ರಭಾರಿ ಪ್ರಾಂಶುಪಾಲ ನಂಜುಂಡಸ್ವಾಮಿ, ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಗುರುವೇಗೌಡ, ಮಾಜಿ ಸದಸ್ಯ ದೇವರಾಜೇಗೌಡ, ಗ್ರಾಮಸ್ಥರಾದ ಅಣ್ಣಪ್ಪಶೆಟ್ಟಿ, ಸೀನ್ಸ್ ಜಯಣ್ಣ, ಜ್ಞಾನದರ್ಶನ ಸಂಸ್ಥೆಯ ಮಹದೇವ್ ಗ್ರಾಮಸ್ಥರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

