18 ರಂದು ಅರಸೀಕೆರೆ ಬಂದ್
ಕ.ಪ್ರ. ವಾರ್ತೆ, ಅರಸೀಕೆರೆ, ನ.13
ರೈತರ ನಾನಾ ಬೇಡಿಕೆಗಳನ್ನು ಈಡೇರಿಸದ ಸರ್ಕಾರದ ನೀತಿಯನ್ನು ಖಂಡಿಸಿ ನ. 18ರಂದು ಅರಸೀಕೆರೆ ಬಂದ್ಗೆ ಕರೆ ನೀಡಲಾಗಿದೆ ಎಂದು ತಾಲೂಕು ರೈತ ಸಂಘದ ಅಧ್ಯಕ್ಷ ಮೇಳೇನಹಳ್ಳಿ ನಾಗರಾಜ್ ತಿಳಿಸಿದ್ದಾರೆ.
ಬುಧವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸತತ ಬರಗಾಲ, ಮಳೆ ಅಭಾವದಿಂದ ಕೆರೆ ಕಟ್ಟೆಗಳು ಖಾಲಿಯಾಗಿ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿರುವ ಹಿನ್ನೆಲೆಯಲ್ಲಿ ತಾಲೂಕಿನ ಎಲ್ಲಾ ಕೆರೆಗಳಿಗೂ ನದಿ ಮೂಲದಿಂದ ನೀರು ತುಂಬಿಸಬೇಕು ಹಾಗೂ ಸುಳಿಬಿದ್ದು ನಾಶವಾಗಿರುವ ತೆಂಗಿನ ಮರಗಳಿಗೆ 15 ಸಾವಿರ ರು. ಪರಿಹಾರ ನೀಡಬೇಕೆಂದು ಬೆಂಗಳೂರಿನ ಫ್ರೀಡಂಪಾರ್ಕ್ನಲ್ಲಿ ಈ ಹಿಂದೆ ಧರಣಿ ನಡೆಸಲಾಗಿತ್ತು. ಅಲ್ಲಿಗೆ ಭೇಟಿ ನೀಡಿದ ಕಾನೂನು ಸಚಿವ ಟಿ.ಬಿ.ಜಯಚಂದ್ರ ರಾಜ್ಯ ರೈತ ಸಂಘದ ಅಧ್ಯಕ್ಷ ಹಾಗೂ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಸಮಕ್ಷಮದಲ್ಲಿ ಕೆರೆಗಳಿಗೆ ನೀರು ಹರಿಸುವ ನಿಟ್ಟಿನಲ್ಲಿ ಆಲೋಚನೆ ಮಾಡಲಾಗುವುದು ಹಾಗೂ ಸುಳಿ ಬಿದ್ದು ನಾಶವಾಗಿರುವ ತೆಂಗಿನ ಮರಗಳಿಗೆ ಕೇರಳ ಮಾದರಿಯಲ್ಲಿ ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ ಈವರೆಗೂ ಅದು ಭರವಸೆಯಾಗಿಯೇ ಉಳಿದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಅಲ್ಲದೇ ಈ ಹಿಂದೆ ಸರ್ವೇ ನಂಬರ್ ಒಂದಕ್ಕೆ ಸರ್ವೇ ಮಾಡಲು 600 ರುಪಾಯಿ ನಿಗದಿಯಾಗಿತ್ತು. ಈಗ ಗ್ರಾಮಾಂತರ ಪ್ರದೇಶದಲ್ಲಿ ಸರ್ವೆಗೆ 2 ಎಕರೆ ಜಮೀನಿಗೆ ಒಂದೂವರೆ ಸಾವಿರ ನಿಗದಿಪಡಿಸಲಾಗಿದ್ದು ನಂತರದ ಒಂದು ಎಕರೆ ಜಮೀನಿಗೆ 200 ರು.ನಂತೆ ಹೆಚ್ಚಿಗೆ ಮಾಡಲಾಗುತ್ತಿದ್ದು ಪಟ್ಟಣ ಪ್ರದೇಶದಲ್ಲಿರುವ ಜಮೀನಿಗೆ 2 ಎಕರೆಗೆ 2 ಸಾವಿರ ನಂತರದ ಒಂದು ಎಕರೆಗೆ ಒಂದು ಸಾವಿರದಂತೆ ಬೆಲೆ ಹೆಚ್ಚಳ ಮಾಡಿದ್ದು ಇದರಿಂದ ರೈತರಿಗೆ ಆರ್ಥಿಕ ತೊಂದರೆ ಎದುರಾಗಿದ್ದು ಹಿಂದಿನಂತೆ 600 ರುಪಾಯಿಗೆ ನಿಗದಿಪಡಿಸಬೇಕು. ಎಂದು ಒತ್ತಾಯಿಸಲಾಗುವುದು.
ತೀವ್ರ ಬರಗಾಲದಿಂದ ತತ್ತರಿಸಿ ಮುಂಗಾರು-ಹಿಂಗಾರು ಎರಡು ಬೆಳೆಯನ್ನು ಕಳೆದುಕೊಂಡಿರುವ ಅರಸೀಕೆರೆ ತಾಲ್ಲೂಕನ್ನು ಬರಪೀಡಿತ ಪಟ್ಟಿಯಿಂದ ಕೈಬಿಡಲಾಗಿದ್ದು ಕೂಡಲೇ ಬರಪ್ರದೇಶ ಎಂದು ಘೋಷಣೆ ಮಾಡಬೇಕು ಹಾಗೂ ಶಾದಿಭಾಗ್ಯ ಯೋಜನೆಯನ್ನು ಎಲ್ಲಾ ಜನಾಂಗಗಳಿಗೆ ವಿಸ್ತರಿಸಬೇಕು.
ತಾಲೂಕಿನಲ್ಲಿ ಕಡುಬಡವರಿಗೆ ಕೂಡಲೇ ಅವರಿಗೆ ಬಿ.ಪಿ.ಎಲ್ ಪಡಿತರ ಚೀಟಿ ನೀಡಬೇಕೆಂದು ಆಗ್ರಹಿಸಿ ಈ ಬಂದ್ಗೆ ಕರೆ ನೀಡಲಾಗಿದೆ ಎಂದು ತಿಳಿಸಿದರು. 18ರಂದು ಪ್ರವಾಸಿ ಮಂದಿರದಿಂದ ಪ್ರತಿಭಟನಾ ಮೆರವಣಿಗೆ ಹೊರಟು ಬಸವೇಶ್ವರ ವೃತ್ತದವರೆಗೆ ಮೆರವಣಿಗೆ ನಡೆಸಿ ತಹಶೀಲ್ದಾರ್ಗೆ ಮನವಿ ಸಲ್ಲಿಸಲಾಗುವುದು. ರೈತ ಮುಖಂಡರು ಹಾಗೂ ರೈತ ಬಾಂಧವರು, ಸಾರ್ವಜನಿಕರು ಹಾಗೂ ಪ್ರಗತಿಪರ ಸಂಘಟನೆಗಳು ಬೆಂಬಲಿಸಬೇಕೆಂದು ಅವರು ಮನವಿ ಮಾಡಿದರು.
ಅಣ್ಣಾಯಕನಹಳ್ಳಿ ಶಿವಮೂರ್ತಿ, ಗೀಜಿಹಳ್ಳಿ ಪ್ರಸಾದ್, ಎಂ.ಎಸ್.ರವೀಶ್ಬಾಬು, ನಿಂಗಪ್ಪ, ಹಸಿರುಸೇನೆ ಅಧ್ಯಕ್ಷ ಶಿವಕುಮಾರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

