ಹಾಸನ

82ನೇ ದನಗಳ ಜಾತ್ರೆಗೆ ಭರದ ಸಿದ್ಧತೆ

Published On :

ಚನ್ನರಾಯಪಟ್ಟಣ: ತಾಲೂಕಿನ ಪವಿತ್ರ ಕ್ಷೇತ್ರ ಪಂಚಲಿಂಗಗಳ ಬೀಡಾಗಿರುವ ಕಬ್ಬಳಿ ಬಸವೇಶ್ವರ ಸ್ವಾಮಿಯ ಕ್ಷೇತ್ರದಲ್ಲಿ  82ನೇ ದನಗಳ ಜಾತ್ರೆಗೆ ಸಿದ್ಧತೆ ಭರದಿಂದ ನಡೆಯುತ್ತಿದೆ.
ಆದಿಚುಂಚನಗಿರಿ ಮಠಕ್ಕೆ ಕ್ಷೇತ್ರವನ್ನು ವಹಿಸಿಕೊಟ್ಟ ನಂತರ ಕ್ಷೇತ್ರದಲ್ಲಿ ಜಾತ್ರೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಅದ್ದೂರಿಯಾಗಿ ಜರುಗುತ್ತಿದ್ದು, 82ನೇ ದನಗಳ ಜಾತ್ರೆಗೆ 1ಲಕ್ಷ ಭಕ್ತಾದಿಗಳು ಕ್ಷೇತ್ರಕ್ಕೆ ಆಗಮಿಸುವ ನಿರೀಕ್ಷೆಯಲ್ಲಿ ಆದಿಚುಂಚನಗಿರಿ ಮಠ ಸಿದ್ದತೆಗಳನ್ನು ನಡೆಸುತ್ತಿದೆ.
ನ.17ರಿಂದ ಆರಂಭವಾಗಲಿರುವ ಜಾತ್ರೆಗೆ ನ.18ರ ಸೋಮವಾರ 50ಸಾವಿರಕ್ಕೂ ಹೆಚ್ಚು ಭಕ್ತಾದಿಗಳು ಆಗಮಿಸುವ ನಿರೀಕ್ಷೆಯಿಟ್ಟುಕೊಂಡು ಕ್ಷೇತ್ರಕ್ಕೆ ಆಗಮಿಸುವ ಭಕ್ತರಿಗೆ ಸರಾಗವಾಗಿ ಬಸವೇಶ್ವರ ಸ್ವಾಮಿಯ ದರ್ಶನ ಹಾಗೂ ದಾಸೋಹ ಹಂಚಿಕೆಗೆ ಮಠ ಸಿದ್ದತೆಗಳನ್ನು ನಡೆಸಿಕೊಳ್ಳುತ್ತಿದೆ.
ಬಸವೇಶ್ವರ ಸ್ವಾಮಿಯ ಉತ್ಸವ ಮೂರ್ತಿಯನ್ನು ಕಬ್ಬಳಿ ಗ್ರಾಮದಿಂದ ವಿವಿದ ವಾದ್ಯಗೋಷ್ಠಿಯೊಂದಿಗೆ ಆದಿಚುಂಚನಗಿರಿ ಮಠಾಧೀಶ ನಿರ್ಮಲನಂದನಾಥ ಸ್ವಾಮೀಜಿ ಮಾರ್ಗದರ್ಶನದಲ್ಲಿ ಕ್ಷೇತ್ರಕ್ಕೆ ಉತ್ಸವದಲ್ಲಿ ಕರೆತಂದು ವಿವಿದ ಪೂಜೆಗಳನ್ನು ನೆರವೇರಿಸಲಾಗುವುದು ಎಂದು ಹಾಸನ ಶಾಖಾ ಮಠದ ಶಂಭುನಾಥ ಸ್ವಾಮಿಜಿ ತಿಳಿಸಿದರು.
18ರಂದು ಬೆಳಗ್ಗೆಯಿಂದ ಸ್ವಾಮಿಗೆ ವಿವಿದ ಪೂಜೆಗಳು ಜರುಗಲಿದ್ದು, ಕ್ಷೇತ್ರಕ್ಕೆ ಹೊಂದಿಕೊಂಡಂತಿರುವ ಹಾಸನ, ಮಂಡ್ಯ ಹಾಗೂ ತುಮಕೂರು ಜಿಲ್ಲೆಯ ರೈತರು ತಮ್ಮ ರಾಸುಗಳೊಂದಿಗೆ ಆಗಮಿಸಿ ದೇವರ ಹರಕೆ ತೀರಿಸಿದ ನಂತರ ಪ್ರದಕ್ಷಣೆ ಮಾಡಿಸಿ ತಮ್ಮ ಊರಿಗೆ ತೆರಳಲಿದ್ದಾರೆ ಎಂದು ತಿಳಿಸಿದರು.
ಸಂಜೆ ಕಬ್ಬಳಿ ಕ್ಷೇತ್ರದ ವತಿಯಿಂದ ನಿರ್ಮಲನಂದನಾಥ ಸ್ವಾಮೀಜಿ ಅವರಿಗೆ ಮುತ್ತಿನ ಪಲ್ಲಕ್ಕಿ ಉತ್ಸವ, ಕಲ್ಯಾಣಿಯಲ್ಲಿ ಬಸವೇಶ್ವರ ಹಾಗೂ ದಸರೀಘಟ್ಟದ ಚೌಡೇಶ್ವರಿ ಅಮ್ಮನವರ ತೆಪ್ಪೋತ್ಸವ ನಡೆಯಲಿದ್ದು, ನಂತರದಲ್ಲಿ ಹಾಸ್ಯ ಕಲಾವಿದ ಕೃಷ್ಣೇಗೌಡ ಅವರಿಂದ ನಗೆ ಸಂಭ್ರಮ ನಡೆಯಲಿದೆ ಎಂದು ತಿಳಿಸಿದರು.
ನ.19ರಿಂದ 23ರವರಗೆ ಬಸವೇಶ್ವರ ಸ್ವಾಮಿಗೆ ಭಕ್ತರಿಂದ ವಿವಿಧ ಪೂಜೆಗಳು ಜರುಗಲಿದ್ದು, ಪ್ರತಿದಿನ ಸಂಜೆ ವಿವಿದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಬಸವೇಶ್ವರ ಸ್ವಾಮಿಯ ದೇವಸ್ಥಾನದ ಹಿಂಭಾಗದಲ್ಲಿ ಮಜ್ಜನದ ಬಾವಿಯಿದ್ದು, ಯಾವ ಬರಗಾಲದಲ್ಲಿಯೂ ಬಾವಿ ಬತ್ತದೆ ಸದಾ ಸ್ವಾಮಿಯ ದರ್ಶನಕ್ಕೆ ಬರುವ ಭಕ್ತರಿಗೆ ತೀರ್ಥ ಬಳಕೆಗೆ ಇದು ಅನುಕೂಲವಾಗಿದ್ದು, ಇಂದಿನ ಬರಗಾಲದಲ್ಲಿಯೂ ಕೇವಲ 5ಅಡಿ ಆಳದಲ್ಲಿ ನೀರಿದ್ದು, ಅಂದಿನ ಕಾಲದಲ್ಲಿಯೇ ಬಾವಿ ತೋಡಿಸುವಲ್ಲಿ ಭಕ್ತರು ತಮ್ಮ ಜಾಣ್ಮೆಯನ್ನು ತೋರಿದ್ದಾರೆ ಎಂದು ಹೇಳಿದರು.
ಮಜ್ಜನ ಬಾವಿಯಿಂದ ತರುವ ತೀರ್ಥ ಕ್ಷೇತ್ರದಲ್ಲಿ ವಿಶೇಷತೆಯನ್ನು ಹೊಂದಿದ್ದು, ಇದನ್ನು ಭಕ್ತರು ಪ್ರಾಶನ ಮಾಡುವುದರಿಂದ ಅವರಲ್ಲಿರುವ ಕಲ್ಮಶಗಳು ದೂರುವಾಗುವುದಲ್ಲದೆ, ಹಲವು ರೋಗಗಳೂ ಕೂಡ ದೂರವಾಗುತ್ತವೆ ಎಂಬ ಪ್ರತೀತಿ ಹಿಂದಿನಿಂದ ಇಂದಿನವರಗೆ ಜನತೆಯಲ್ಲಿ ನಂಬಿಕೆ ಮೂಡಿದೆ.
ಮಜ್ಜನ ಬಾವಿಯಿಂದ ತರುವ ಮಜ್ಜನ ಬಸವೇಶ್ವರ ಸ್ವಾಮಿ ಪೂಜೆ ಹಾಗೂ ತೀರ್ಥಕ್ಕೆ ಹೊರತುಪಡಿಸಿ ಅದರಿಂದ ಒಂದು ಬಿಂದಿಗೆ ನೀರನ್ನು ಬೇರೆ ಉದ್ದೇಶಕ್ಕೆ ಇದುವರಗೂ ಯಾರು ಬಳಸದೆ ಮಜ್ಜನ ಬಾವಿಯ ವೈಶಿಷ್ಟ್ಯವನ್ನು ಕ್ಷೇತ್ರದಲ್ಲಿ ಕಾಪಾಡಿಕೊಂಡು ಬರಲಾಗಿದೆ ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.