ಹಾಸನ

ಮಕ್ಕಳಿಂದ ಗಾಳಿ ಪಟ ಉತ್ಸವ

Published On :

ಕನ್ನಡಪ್ರಭ ವಾರ್ತೆ, ಹಾಸನ, ನ. 13
ಮಕ್ಕಳ ದಿಚಾರಣೆ ಅಂಗವಾಗಿ ಮುನ್ನಾದಿನವಾದ ಬುಧವಾರ ಎಚ್.ಕೆ.ಎಸ್.ಅಂತಾರಾಷ್ಟ್ರೀಯ ಶಾಲೆವತಿಯಿಂದ ಮಕ್ಕಳ ದಿನಾಚರಣೆಯನ್ನು ವಿನೂತನವಾಗಿ ಆಚರಿಸಲಾಯಿತು. ನಗರದ ಹೊರವಲಯದ ಬೂವನಹಳ್ಳಿಯ ಏರ್‌ಫೀಲ್ಡ್‌ನಲ್ಲಿ ಮಕ್ಕಳಿಗೆ ಪ್ಯಾರಾಸೇಲಿಂಗ್ ಹಾಗೂ ಗಾಳಿಪಟ ಉತ್ಸವ ಹಮ್ಮಿಕೊಳ್ಳಲಾಗಿತ್ತು. ಮಕ್ಕಳಲ್ಲಿ ಭಾತೃತ್ವ ಭಾವನೆ ಬೆಳೆಸುವ ನಿಟ್ಟಿನಲ್ಲಿ ಎಂ.ಕೃಷ್ಣ ಅಂಧ ಶಾಲೆಯ ಮಕ್ಕಳು ಹಾಗೂ ಚೈತನ್ಯ ವೃದ್ಧಾಶ್ರಮ ಶಾಲೆಯ ಮಕ್ಕಳಿಗೆ ಗಾಳಿಪಟ ಉತ್ಸವ ನಡೆಸಲಾಯಿತು. ಇಬ್ಬರು ಅಂಧಮಕ್ಕಳನ್ನು ಪ್ಯಾರಾಸೇಲಿಂಗ್ ಮಾಡಿಸಲಾಯಿತು ಮತ್ತು ಸಚಿನ್ ಸಾಧನೆಯನ್ನು ಗಾಳಿಪಟದಲ್ಲಿ ಚಿತ್ರಿಸಲಾಗಿತ್ತು. ಮತ್ತೊಂದು ವಿಶೇಷ ಅಂದರೆ ದೊಡ್ಡದಾದ ಕರ್ನಾಟಕ ಭೂಪಟದ ಗಾಳಿಪಟ ಹಾರಿಸುವ ಮೂಲಕ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.ಶಾಲೆಯ ಸಂಸ್ಥಾಪಕ ಎಚ್.ಕೆ.ಸುರೇಶ್, ಪ್ರಾಂಶುಪಾಲ ರವಿಕುಮಾರ್ ಇತರರು ಇದ್ದರು.
ಮೈನಹಳ್ಳಿಯಲ್ಲಿ 100 ಕರುಗಳ  ಆರೋಗ್ಯ ತಪಾಸಣೆ
ಹಾಸನ: ಹಾಸನದ ಪಶು ವೈದ್ಯಕೀಯ ಮಹಾವಿದ್ಯಾಲಯದ ವಿಸ್ತರಣಾ ಶಿಕ್ಷಣ ಕೇಂದ್ರದ ವತಿಯಿಂದ ಕರುಗಳ ಉಚಿತ ತಪಾಸಣಾ ಶಿಬಿರವನ್ನು ಹಾಸನ ತಾಲೂಕಿನ ಎಚ್.ಮೈನಹಳ್ಳಿಯಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿತ್ತು.ಕರುಗಳಲ್ಲಿ ಜಂತುಹುಳುಗಳ ಬಾಧೆ ಹಾಗು ವಿವಿಧ ರೋಗಗಳ ತಪಾಸಣೆಯನ್ನು ಮಾಡಿ ಔಷಧೋಪಚಾರ ಮಾಡಲಾಯಿತು. ಕರುಗಳ ವೈಜ್ಞಾನಿಕ ಪಾಲನೆ, ಲಸಿಕೆಗಳ ಮಹತ್ವ ಮಾಹಿತಿಯನ್ನುಳ್ಳ ಕರುಗಳ ತಪಾಸಣಾ ಚೀಟಿ ವಿತರಿಸಿ ಸಲಹೆ ನೀಡಲಾಯಿತು.
ಕಾಯಕಯೋಗಿ ಪ್ರಶಸ್ತಿ ಪ್ರದಾನ
ಹಾಸನ: ಜಿಲ್ಲಾ ಸಾಂಸ್ಕೃತಿಕ ವೇದಿಕೆಯಿಂದ ಕಾಯಕಯೋಗಿ ಪ್ರಶಸ್ತಿ ಪ್ರದಾನ ಸಮಾರಂಭ ನ.14 ರಂದು  ಬೆಳಗ್ಗೆ 9.30ಕ್ಕೆ ಹಾಸನಾಂಬ ಕಲಾಕ್ಷೇತ್ರದಲ್ಲಿ ಏರ್ಪಡಿಸಲಾಗಿದೆ. ಜಾನಪದ ತಜ್ಞ ಡಾ.ಹಿ.ಶಿ. ರಾಮಚಂದ್ರೇಗೌಡ ಕಾರ್ಯಕ್ರಮ ಉದ್ಘಾಟಿಸುವರು. ಜಾನಪದ ಗಾಯಕಿ ಸುಕ್ರಿ ಬೊಮ್ಮಗೌಡ ಪ್ರಶಸ್ತಿ ಪ್ರದಾನ ಮಾಡುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಎಸ್ಪಿ ರವಿ ಡಿ. ಚನ್ನಣ್ಣನವರ್, ಸಾಹಿತಿ ಸುಬ್ಬುಹೊಲೆಯಾರ್, ಪತ್ರಕರ್ತ ಆರ್.ಪಿ.ವೆಂಕಟೇಶಮೂರ್ತಿ ಭಾಗವಹಿಸುವರು. ವೇದಿಕೆ ಅಧ್ಯಕ್ಷ ತಿರುಪತಿಹಳ್ಳಿ ಶಿವಶಂಕರಪ್ಪ ಅಧ್ಯಕ್ಷತೆ ವಹಿಸುವರು.
ಇಂದು- ನಾಳೆ  ಕ್ಯಾಂಪಸ್ ಸೆಲೆಕ್ಷನ್
ಹಾಸನ: ನಗರದ ರಾಜೀವ್ ಇನ್‌ಸ್ಟಿಟ್ಯೂಷನ್ ಆಫ್ ಟೆಕ್ನಾಲಜಿ  ಕಾಲೇಜಿನಲ್ಲಿ ನ.14 ಮತ್ತು 15 ರಂದು  ಬೆಂಗಳೂರಿನ ಗ್ಲೋಬಲ್ ಸಾಫ್ಟ್‌ವೇರ್ ಕಂಪನಿಯವರು ಕ್ಯಾಂಪಸ್ ಸೆಲೆಕ್ಷನ್ ಆಯೋಜಿಸಿದ್ದಾರೆ.
ಹಾಸನದ ರಾಜೀವ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ,  ಮಲ್ನಾಡ್ ಕಾಲೇಜ್ ಆಫ್ ಎಂಜಿನಿಯರಿಂಗ್, ಸರ್ಕಾರಿ ಎಂಜಿನಿಯರಿಂಗ್ ಕಾಲೇಜು, ಯಗಚಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ,  ಚಿಕ್ಕಮಗಳೂರಿನ ಆದಿಚುಂಚನಗಿರಿ  ಇನ್‌ಸ್ಟಿಟ್ಯೂಟ್‌ಆಫ್ ಟೆಕ್ನಾಲಜಿ, ಶ್ರವಣಬೆಳಗೊಳದ ಬಾಹುಬಲಿ ಕಾಲೇಜ್ ಆಫ್ ಎಂಜಿನಿಯರಿಂಗ್ ಹಾಗೂ ಕುಶಾಲನಗರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಬಿಇ ಪದವೀಧರರು  ಭಾಗವಹಿಸಲಿದ್ದಾರೆ. ಬಿಇ ಪದವಿ  ಪಡೆಯುತ್ತಿರುವ ಅಂತಿಮ ವರ್ಷದ ವಿದ್ಯಾರ್ಥಿಗಳು ಕ್ಯಾಂಪಸ್ ಸೆಲೆಕ್ಷನ್‌ನಲ್ಲಿ  ಭಾಗವಹಿಸಲಿದ್ದಾರೆಂದು ರಾಜೀವ್ ಟೆಕ್ನಾಲಜಿ ಪ್ರಾಂಶುಪಾಲ ಡಾ.ರಾಮಕೃಷ್ಣ ಅವರು ತಿಳಿಸಿದ್ದಾರೆ.
ಆರೋಗ್ಯ ರಸಪ್ರಶ್ನೆ, ಒಗಟಿನ ಕಾರ್ಯಕ್ರಮ
ಹಾಸನ: ಪ್ರೇರಣಾ ವಿಕಾಸ ವೇದಿಕೆ ಹಾಗೂ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ ಆಶ್ರಯದಲ್ಲಿ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆ ಅಂಗವಾಗಿ ಆರೋಗ್ಯ ರಸಪ್ರಶ್ನೆ ಹಾಗೂ ಒಗಟಿನ   ಕಾರ್ಯಕ್ರಮವನ್ನು ನ. 20 ಬೆಳಗ್ಗೆ 10 ಕ್ಕೆ ಎಸ್‌ಡಿಎಂ ಕಾಲೇಜು ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಆಸಕ್ತ 6 ರಿಂದ 10ನೇ ತರಗತಿಯಲ್ಲಿ ಓದುತ್ತಿರುವ ಮಕ್ಕಳು 9.30ಕ್ಕೆ ಉತ್ತರ ಬಡಾವಣೆಯ, ಸಂತ ಜೋಸೆಫ್ ಕಾಲೇಜು ರಸ್ತೆಯಲ್ಲಿರುವ ಪ್ರೇರಣಾ ಕಾರ್ಯಾಲಯಕ್ಕೆ ಬಂದರೆ ಅಲ್ಲಿಂದ ಬಸ್ ವ್ಯವಸ್ಥೆ ಮಾಡಲಾಗಿದೆ.  ಆಸಕ್ತ ಮಕ್ಕಳು ನ.18ರೊಳಗೆ ತಮ್ಮ ಹೆಸರುಗಳನ್ನು ದೂ.ಸಂ.08172-263881ರಲ್ಲಿ ನೋಂದಾಯಿಸಬೇಕು. ಪ್ರವೇಶ ಉಚಿತ ಎಂದು  ಪ್ರೇರಣಾ ವಿಕಾಸ ವೇದಿಕೆಯ ಲೇಖಕಿ ರೂಪ ಹಾಸನ ತಿಳಿಸಿದ್ದಾರೆ.
ನರೇಂದ್ರ ಮೋದಿ ರ್ಯಾಲಿ: ಬಿಜೆಪಿ ಕಚೇರಿಯಲ್ಲಿ ಸಭೆ
ಸಕಲೇಶಪುರ: ಬೆಂಗಳೂರಿನ ಅರಮನೆ ಮೈದಾನದಲ್ಲಿ  ನ.17 ರಂದು ನಡೆಯಲಿರುವ ನರೇಂದ್ರ ಮೋದಿಯವರ ಭಾರತ ಗೆಲ್ಲಿಸಿ ರ್ಯಾಲಿಯ ಹಿನ್ನೆಲೆಯಲ್ಲಿ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಪೂರ್ವಭಾವಿ ಸಭೆ ನಡೆಯಿತು. ಎಲ್ಲಾ ಭಾಗದಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರನ್ನು ಕರೆತರಲು ನ. 15 ಮತ್ತು 16ರಂದು ಬೈಕ್ ರ್ಯಾಲಿ ನಡೆಸಲು ತೀರ್ಮಾನಿಸಲಾಯಿತು. ಸಕಲೇಶ್ವರಸ್ವಾಮಿ ದೇವಸ್ಥಾನದಿಂದ ಉದ್ಘಾಟನೆ ನೆರವೇರಿಸಿ ಬಾಳ್ಳುಪೇಟೆ,ಯಸಳೂರು, ಚಂಗಡಹಳ್ಳಿ, ಉಚ್ಚಂಗಿ, ವಣಗೂರು(ಕೋಡರಸ್ತೆ), ಹೆತ್ತೂರು.ಶುಕ್ರವಾರಸಂತೆ, ಹಾನುಬಾಳ್, ಮಾರ್ಗವಾಗಿ ಸಂಚರಿಸಿ ಸಕಲೇಶಪರದಲ್ಲಿ ರ್ಯಾಲಿ ಅಂತ್ಯಗೊಳಿಸಲಾಗುವುದು. ರ್ಯಾಲಿಯಲ್ಲಿ ಸುಮಾರು 150 ಬೈಕ್ ಸವಾರರು ಭಾಗವಹಿಸುವರು ಎಂದು ತಾಲೂಕು ಪ್ರಧಾನ ಕಾರ್ಯದರ್ಶಿ ಹೆಬ್ಬನಹಳ್ಳಿ ಸಂದೇಶ ತಿಳಿಸಿದ್ದಾರೆ. ಇತ್ತೀಚೆಗೆ ನಿಧನರಾದ ಪಕ್ಷದ ಮಾಜಿ ಅಧ್ಯಕ್ಷ ಯಡವರಹಳ್ಳಿ ಜಯರಾಜ್‌ಗ ಸಂತಾಪ ಸೂಚಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ತಾಲೂಕು ಅಧ್ಯಕ್ಷ ಕ್ಯಾಮನಹಳ್ಳಿ ಡಿ.ರಾಜಕುಮಾರ್ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಸಾಂಘಿ, ಪುರಸಭೆ ಸದಸ್ಯ ಮೋಹನ್, ವೇದಾವತಿ, ಮುಖಂಡ ಹುಲ್ಲಹಳ್ಳಿ ಜಯೇಂದ್ರಕುಮಾರ್ ಭಾಗವಹಿಸಿದ್ದರು.
ಅಭಿವೃದ್ಧಿ ಕಾರ್ಯಕ್ರಮ
ಹಾಸನ: ಜಿಲ್ಲಾ ನೆಹರು ಯುವಕೇಂದ್ರ ಮುಖ್ಯ ಕಾರ್ಯಕ್ರಮಗಳಲ್ಲಿ ಒಂದಾದ ಯುವ ಸಂಘಗಳ ಅಭಿವೃದ್ಧಿ ಕಾರ್ಯಕ್ರಮವನ್ನು  ನ.17ರವರೆಗೆ ತಾಲೂಕಿನಲ್ಲಿ ವ್ಯವಸ್ಥೆಗೊಳಿಸಿದೆ. ಕಾರ್ಯಕ್ರಮದ ಅನ್ವಯ ನೆಹರು ಯುವ ಕೇಂದ್ರದ ರಾಷ್ಟ್ರೀಯ ಯುವ ದಳ ಕಾರ್ಯಕರ್ತರು ಹಾಗೂ ಯುವ ನಾಯಕರು ತಾಲೂಕಿನಲ್ಲಿ ಅಸ್ತಿತ್ವದಲ್ಲಿರುವ ನೋಂದಾಯಿತ ಹಾಗೂ ನೆಹರು ಯುವಕೇಂದ್ರಕ್ಕೆ ಸಂಯೋಜಿಸಲ್ಪಟ್ಟಿರುವ ಸಂಘ, ಮಂಡಳಿಗಳಿಗೆ ಭೇಟಿ ನೀಡಿ ಯುವ ಜನರ ಸಭೆಯನ್ನು ತಾಲೂಕು ಹಾಗೂ ಹೋಬಳಿ ಕೇಂದ್ರ ಸ್ಥಾನದಲ್ಲಿ ನಡೆಸಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.