ಹಾಸನ

ಈರುಳ್ಳಿಗೆ ಸೆಡ್ಡು ಹೊಡೆದ ಆಲೂಗಡ್ಡೆ!

Published On :

-ದಯಾಶಂಕರ ಮೈಲಿ
ಹಾಸನ:
ಇದೀಗ ಈರುಳ್ಳಿಯೊಂದಿಗೆ ಆಲೂಗಡ್ಡೆಯೂ ಗ್ರಾಹಕರ ಕಣ್ಣಲ್ಲಿ ನೀರು ತರಿಸುತ್ತಿದೆ!
ಹೌದು, ತಿಂಗಳ ಹಿಂದಷ್ಟೇ ಕೆಜಿಗೆ 10ರಿಂದ 15ಕ್ಕೆ ಮಾರಾಟವಾಗುತ್ತಿದ್ದ ಆಲೂಗಡ್ಡೆ ಬೆಲೆ ಈಗ 40ರಿಂದ 45 ರುಪಾಯಿಗೆ ಏರಿದೆ.
ದೀಪಾವಳಿ ಹೊತ್ತಿಗೆ ಹಾಸನದ ಆಲೂಗಡ್ಡೆ ಮಾರಾಟವಾಗಿ ಮಾರುಕಟ್ಟೆಗೆ ಇತರೆ ಜಿಲ್ಲೆಗಳ ಮತ್ತು ಹೊರ ರಾಜ್ಯಗಳ ಆಲೂಗಡ್ಡೆ ಆಗಮಿಸಬೇಕಿತ್ತು. ಆದರೆ ಬಾರದ ಕಾರಣ ಆಲೂಗಡ್ಡೆ ಬೆಲೆ ಗಗನಕ್ಕೆ ಏರಿದೆ. 1990ರಲ್ಲಿ ಮಾತ್ರ ಕೆಜಿ ಆಲೂಗಡ್ಡೆ ಬೆಲೆ 25ಕ್ಕೇರಿತ್ತು. ಅದು ಬಿಟ್ಟರೆ ಈ ಪ್ರಮಾಣದಲ್ಲಿ ಬೆಲೆ ಏರಿಕೆ ಇದೇ ಮೊದಲು.
ಅತಿವೃಷ್ಟಿ ಮತ್ತು ಅನಾವೃಷ್ಟಿ: ಇದರಿಂದ ಮುಂದಿನ ದಿನಗಳಲ್ಲಿ ಆಗಮಿಸಲಿರುವ ಚುಮು ಚುಮು ಚಳಿಗೆ ಬೇಕಾದ ಬೆಚ್ಚನೆ ಮತ್ತು ಗರಂ ಗರಂ ಆಲೂಗಡ್ಡೆ ಚಿಪ್ಸ್ ಮತ್ತು ಆಲೂಗಡ್ಡೆ ಆಧಾರದ ತಿಂಡಿಗಳ ಬೆಲೆಯಲ್ಲಿ ಏರಿಕೆಯಾಗುವ ಸಾಧ್ಯತೆಗಳಿವೆ. ರಾಜ್ಯಾದ್ಯಂತ ಈ ವರ್ಷ 4 ಲಕ್ಷ ಟನ್ ಆಲೂಗಡ್ಡೆ ಮಾರಾಟವಾಗಿದೆ. ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಬಿತ್ತನೆ ಮಾಡಿದ್ದ ಆಲೂಗಡ್ಡೆ ಅತಿಯಾದ ಮಳೆಯಿಂದ ನಷ್ಟವಾಗಿದೆ. ಇದಕ್ಕೆ ಹೆದರದೆ ಅಲ್ಲಿ ರೈತರು ಮತ್ತೆ ಆಲೂಗಡ್ಡೆ ಬಿತ್ತನೆ ಮಾಡಿದ್ದಾರೆ.
ಇದಲ್ಲದೆ ಪಂಜಾಬ್, ಉತ್ತರ ಪ್ರದೇಶ, ಬಿಹಾರ, ದೆಹಲಿಯಲ್ಲಿ ಸುರಿದ ಭಾರಿ ಮಳೆಯಿಂದ ನಿರೀಕ್ಷಿತ ಪ್ರಮಾಣದಲ್ಲಿ ಆಲೂಗಡ್ಡೆ ಉತ್ಪಾದನೆ ಆಗಿಲ್ಲ.
ಕೆಲವೆಡೆ ಕಡಿಮೆ ಮಳೆಯಿಂದಲೂ ಆಲೂಗಡ್ಡೆ ನಷ್ಟವಾಗಿದೆ. ಆದ್ದರಿಂದ ಕರ್ನಾಟಕಕ್ಕೆ ಬರಬೇಕಾಗಿದ್ದ ಆಲೂಗಡ್ಡೆ ಬಂದಿಲ್ಲ. ಬೇಡಿಕೆಗೆ ಅನುಗುಣವಾಗಿ ಇಲ್ಲದ ಕಾರಣ ಆಲೂ ಬೆಲೆ ಮಾರುಕಟ್ಟೆಯಲ್ಲಿ ಯದ್ವಾತದ್ವಾ ಹೆಚ್ಚಾಗಿದೆ.
ಕ್ವಿಂಟಲ್ ಆಲೂಗೆ 3,500!: ಈಗ ಮಾರುಕಟ್ಟೆಯಲ್ಲಿ ಕ್ವಿಂಟಲ್ ಆಲೂಗಡ್ಡೆ ಬೆಲೆ 3 ಸಾವಿರದಿಂದ ಮೂರುವರೆ ಸಾವಿರ ಇದೆ. ಸಗಟು ವ್ಯಾಪಾರಸ್ಥರು ಕೆಜಿ ಆಲೂಗಡ್ಡೆಯನ್ನು 35ಕ್ಕೆ ಮಾರಾಟ ಮಾಡಿದರೆ ಚಿಲ್ಲರೆ ಮಾರಾಟಗಾರರು ಕೆಜಿಗೆ 40ರಿಂದ 45ಕ್ಕೆ ಮಾರಾಟ ಮಾಡುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.