ಹಾಸನ

ಉತ್ತಮ ಮನುಷ್ಯನಾಗಲು ಪುಸ್ತಕಗಳು, ದೈನಿಕಗಳು ದಾರಿದೀಪ: ಶಾಸಕ ಬಾಲಕೃಷ್ಣ

Published On :

ಚನ್ನರಾಯಪಟ್ಟಣ: ಮನುಷ್ಯ ಜ್ಞಾನಾರ್ಜನೆಗಾಗಿ ಪುಸ್ತಕ ಹಾಗೂ ದೈನಿಕಗಳನ್ನು ಓದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.
ಪಟ್ಟಣದಲ್ಲಿ ನಡೆದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ನಾಗರಿಕರಲ್ಲಿ ಪುಸ್ತಕಗಳನ್ನು ಓದುವ ಹವ್ಯಾಸ ಕುಂಠಿತವಾಗಿದೆ ಎಂದು ತಿಳಿಸಿದರು.
ಬಹುತೇಕ ಶ್ರೀಮಂತರು ಮನೆಗಳಲ್ಲಿ ಮಿನಿ ಬಾರ್‌ಗಳಿಗೆ ಜಾಗ ಮೀಸಲಿಡುತ್ತಾರೆ. ಆದರೆ ಪುಸ್ತಕಗಳಿಗೆ ಜಾಗ ಇಡುವುದಿಲ್ಲ. ಇದು ಸರಿಯಲ್ಲ. ಮನೆಯಲ್ಲಿ ಗ್ರಂಥಗಳನ್ನು ಶೇಖರಿಸಿಡಲು ಅಲ್ಪ ಜಾಗ ಮೀಸಲಿಡಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳು ತಮ್ಮ ಬಿಡುವಿನ ವೇಳೆಯಲ್ಲಿ ಗ್ರಂಥಾಲಯದಲ್ಲಿನ ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಂಡರೆ ಮುಂದಿನ ದಿನಗಳಲ್ಲಿ ಸ್ಪರ್ಧಾತ್ಮಕ ಪರಿಕ್ಷೆಗಳನ್ನು ಎದುರಿಸಲು ಅನುಕೂಲವಾಗುತ್ತದೆ ಎಂದರು.
ಪ್ರತಿಯೊಬ್ಬ ಮನುಷ್ಯ ಕೂಡ ದಿನದಲ್ಲಿ ಒಂದು ಗಂಟೆಯಾದರೂ ಓದುವ ಹವ್ಯಾಸ ರೂಢಿಮಾಡಿಕೊಂಡರೆ ತಾವು ಉತ್ತಮ ಮನುಷ್ಯನಾಗಲು ದಾರಿ ದೀಪವಾಗುತ್ತದೆ. ರಾತ್ರಿ ಮಲಗುವ ಮುನ್ನಾ ಹಲವು ಯೋಚನೆಗಳನ್ನು ತನ್ನ ಮನಸ್ಸಿನಲ್ಲಿಟ್ಟುಕೊಳ್ಳುವ ಬದಲಾಗಿ ಉತ್ತಮ ಗ್ರಂಥಗಳನ್ನು ಓದಿದರೆ ಸುಖನಿದ್ರೆಯಲ್ಲಿ ಜಾರಬಹುದು ಎಂದು ತಿಳಿಸಿದರು.
ತಹಸೀಲ್ದಾರ್ ಡಾ.ನಾಗರಾಜು ಮಾತನಾಡಿ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಸಂದರ್ಭದಲ್ಲಿ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಹಲವು ಪುಸ್ತಕಗಳನ್ನು ತಿರುವು ಹಾಕಬೇಕಾಗುತ್ತದೆ.
ಈ ನಿಟ್ಟಿನಲ್ಲಿ  ಒಂದು ಲಕ್ಷ ರು. ಹಣದಿಂದ ಸ್ಪರ್ಧಾತ್ಮಕ ಪರಿಕ್ಷೆಗಳಿಗೆ ಅಗತ್ಯವಿರುವ ಪುಸ್ತಕಗಳನ್ನು ಖರೀದಿಸಿ ಗ್ರಂಥಾಲಯಕ್ಕೆ ದೇಣಿಗೆಯಾಗಿ ನೀಡುವುದಾಗಿ ಹೇಳಿದರು.
ಐಎಎಸ್, ಐಪಿಎಸ್ ಹಾಗೂ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನ ಎದುರಿಸಲು ಯುವ ಜನತೆ ಬೆಂಗಳೂರು ದೆಹಲಿಗೆ ಹೋಗುವ ಪರಿಸ್ಥಿತಿಯನ್ನು ದೂರು ಮಾಡುವ ಸಲುವಾಗಿ ಚನ್ನರಾಯಪಟ್ಟಣದಲ್ಲಿ ಸ್ಪರ್ಧಾತ್ಮಕ ಪರಿಕ್ಷಾ ತರಬೇತಿ ಕೇಂದ್ರ ತೆರೆಯುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.
ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಎಸ್.ಟಿ ದೇವರಾಜು ಕಾರ್ಯಕ್ರಮ ಉದ್ಘಾಟಿಸಿದರು. ಇದೇ ವೇಳೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಆರ್.ಪಿ ವೆಂಕಟೇಶಮೂರ್ತಿ ಅವರನ್ನು ಸನ್ಮಾನಿಸಲಾಯಿತು. ಸಾಹಿತಿ ಗೊರೂರು ಪಂಕಜ, ಜಿಲ್ಲಾ ಗ್ರಂಥಾಲಯ ಪ್ರಾಧಿಕಾರ ಸದಸ್ಯ ಅನಂತರಾಮು,ಚಂದ್ರಯ್ಯ, ಬೋಜರಾಜ್, ರಾಜಶೇಖರ್ ಉಪಸ್ಥಿತರಿದ್ದರು. ಪತ್ರಕರ್ತ ಪುಟ್ಟಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಂಥಾಲಯ ಸಹಾಯಕ ದೇವರಾಜು ಸ್ವಾಗತಿಸಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.