ಕಾಡಾನೆಗಳ ಹಿಂಡಿನಿಂದ ರಸ್ತೆ ಸಂಚಾರ ಅಸ್ತವ್ಯಸ್ತ
ಕ.ಪ್ರ. ವಾರ್ತೆ, ಸಕಲೇಶಪುರ, ನ.17
ಕಾಡಾನೆ ಹಿಂಡು ರಾಷ್ಟ್ರೀಯ ಹೆದ್ದಾರಿ 78 ರಲ್ಲಿ ಕಾಣಿಸಿಕೊಂಡ ಪರಿಣಾಮ ತಾಲೂಕಿನ ಬಾಗೆ ಗ್ರಾಮ ಸಮೀಪ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಬಾಗೆ ಜಿಪಂ ಸದಸ್ಯೆ ಸುಲೋಚನಾ ರಾಮಕೃಷ್ಣ ಅವರ ಮನೆಯ ತೋಟದ ಮೂಲಕ ಮುಂಜಾನೆ 4 ಗಂಟೆ ಸಮಯದಲ್ಲಿ ಹೆದ್ದಾರಿ ದಾಟಿ ಬೆಳಗೋಡು ಹೋಬಳಿಯಡೆಗೆ ಸಾಗಿದ್ದ 8 ಕಾಡಾನೆ ಹಿಂಡು ಸಂಜೆ 6 ಗಂಟೆಯ ಸಮಯದಲ್ಲಿ ಮತ್ತೆ ರಸ್ತೆ ದಾಟಲು ಗ್ರಾಮದ ಮಲ್ಲೇಶಗೌಡ ಎಂಬುವವರ ತೋಟದ ಮೂಲಕ ಹೆದ್ದಾರಿ ಸಮೀಪ ಆಗಮಿಸಿದ ವೇಳೆ ನೂರಾರು ಗ್ರಾಮಸ್ಥರು ಜಮಾಯಿಸಿದ ಕಾರಣ ಹೆದ್ದಾರಿ ದಾಟಲು ಸಾಧ್ಯವಾಗದೆ ಹೆದ್ದಾರಿ ಸಮೀಪದಲ್ಲೆ ನಿಂತಿದ್ದವು.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಕಾಡಾನೆಗಳ ಹಿಂಡು ಹೆದ್ದಾರಿ ದಾಟಲು ಅನುಕೂಲವಾಗುವಂತೆ ಹೆದ್ದಾರಿ ಸಂಚಾರವನ್ನು ಬಂದ್ ಮಾಡಿ ಕಾಡಾನೆ ಹಿಂಡಿನ ಸಮೀಪ ಪಟಾಕಿ ಸಿಡಿಸಿ ಹೆದ್ದಾರಿ ದಾಟಿಸಲು ಸುಮಾರು ಒಂದು ಗಂಟೆಗೂ ಹೆಚ್ಚಿನ ಕಾಲ ಪ್ರಯತ್ನ ನಡೆಸಿದರಾದರೂ ಕಾಡಾನೆ ಹಿಂಡು ಹೆದ್ದಾರಿ ದಾಟಲು ವಿಫಲಗೊಂಡಿದ್ದರಿಂದಾಗಿ ಅನಿವಾರ್ಯವಾಗಿ ಹೆದ್ದಾರಿ ಸಂಚಾರವನ್ನು ತೆರವುಗೊಳಿಸಲಾಯಿತು.
ಬೆಳಗೋಡು ಹೋಬಳಿಯಲ್ಲಿ ಆತಂಕ: ತಾಲೂಕಿನ ಹೆತ್ತೂರು, ಯಸಳೂರು, ಹಾನುಬಾಳ್ ಹೋಬಳಿಯ ಎಲ್ಲಾ ಗ್ರಾಮಗಳು ಕಾಡಾನೆಗಳ ಹಾವಳಿಗೆ ತುತ್ತಾಗಿದ್ದರೆ, ಕಸಬಾ ಹೋಬಳಿಯಲ್ಲಿ ಅಪರೂಪಕ್ಕೂಮ್ಮೆ ಕಾಡಾನೆಗಳು ಕಾಣಿಸಿಕೊಂಡು ಆತಂಕ ಸೃಷ್ಟಿಸುತ್ತಿದ್ದವು. ಆದರೆ ಬೆಳಗೋಡು ಹೋಬಳಿ ಕಾಡಾನೆ ಹಾವಳಿಯಿಂದ ಮುಕ್ತಗೊಂಡಿತ್ತು.
ಭಾನುವಾರ ಕಸಬಾ ಹೋಬಳಿಯಿಂದ ಹೆದ್ದಾರಿ ದಾಟಿರುವ ಕಾಡಾನೆಗಳ ಹಿಂಡು ಬೆಳಗೋಡು ಹೋಬಳಿಗೆ ಕಾಲಿಟ್ಟಿರುವುದರಿಂದಾಗಿ ಬೆಳಗೋಡು ಹೋಬಳಿಯಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

