ಹಾಸನ

ನಿಲ್ಲದ ಲಾರಿ ಮಾಲೀಕರ ಪ್ರತಿಭಟನೆ

Published On :

ಕ.ಪ್ರ.ವಾರ್ತೆ ಹಾಸನ ನ.18
ಮರಳು ಸಾಗಿಸಲು ಜಿಲ್ಲಾಡಳಿತ ಪರವಾನಗಿ ನೀಡುವಂತೆ ಆಗ್ರಹಿಸಿ ಜಿಲ್ಲಾ ಮರಳು ಲಾರಿ ಮಾಲೀಕರು ಸಂಘದ ಕಾರ್ಯಕರ್ತರು ಸೋಮವಾರ ಮರಳು ಲಾರಿಗಳ ಸಂಚಾರ ಸ್ಥಗಿತಗೊಳಿಸಿ ಪ್ರತಿಭಟನೆ ಮುಂದುವರಿಸಿದ್ದಾರೆ.
ಲಾರಿ ಮಾಲೀಕರು ಹಾಗೂ ಚಾಲಕರು ನಗರದ ಹೈಟೆಕ್ ಬಸ್‌ನಿಲ್ದಾಣದಲ್ಲಿ ಇರುವ ಲಾರಿ ನಿಲುಗಡೆ ಸ್ಥಳದಲ್ಲಿ ಸುಮಾರು 400 ಕ್ಕೂ ಹೆಚ್ಚು ಲಾರಿಗಳ ಸಂಚಾರ ನಿಲ್ಲಿಸಿ ಆಕ್ರೋಶ ವ್ಯಕ್ತಪಡಿಸಿದರು.
ಪರವಾನಗಿ ನೀಡಿಲ್ಲ: ಹಾಸನ, ಸಕಲೇಶಪುರ, ಆಲೂರು ಮತ್ತು ಬೇಲೂರು ತಾಲೂಕುಗಳಲ್ಲಿ ಜಿಪಿಎಸ್ ಪಡೆದ ಸುಮಾರು 386 ಲಾರಿಗಳಿದ್ದು, ಈ ಲಾರಿಗಳಿಗೆ ಜಿಲ್ಲಾಡಳಿತವೇ ಜಿಪಿಎಸ್ ಅಳವಡಿಸುವ ಮೂಲಕ ಮರಳನ್ನು ಹೊರತುಪಡಿಸುವುದು ಬೇರೆ ಯಾವುದನ್ನು ಸಾಗಣೆ ಮಾಡದಂತೆ ನಿಬಂಧನೆ ಮಾಡಿದ್ದಾರೆ. ಅದಕ್ಕೆ ಲಾರಿ ಮಾಲೀಕರು ಸಹ ಒಪ್ಪಿಕೊಂಡಿದ್ದೇವೆ. ಜಿಪಿಎಸ್ ಅಳವಡಿಸಿರುವ ಲಾರಿಗಳಿಗೆ ಕಳೆದ ನಾಲ್ಕೈದು ತಿಂಗಳಿನಿಂದ ಮರಳು ಸಾಗಿಸಲು ಪರವಾನಗಿ ನೀಡಿಲ್ಲ ಎಂದ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಡಳಿತ ವಿರುದ್ಧ ಆಕ್ರೋಶ: ಮರಳನ್ನು ಸಾಗಿಸಿ ಜೀವನ ನಡೆಸಬೇಕಾದ ಮರಳು ಲಾರಿಗಳಿಗೆ ಕಳೆದ ನಾಲ್ಕೈದು ತಿಂಗಳಿನಿಂದ ಮರಳನ್ನು ಸಾಗಿಸಲು ಜಿಲ್ಲಾಡಳಿತ ಪರವಾನಗಿ ನೀಡುತ್ತಿಲ್ಲ. ಈಗ ಜಿಲ್ಲಾಡಳಿತ ಗುರುತ ಮಾಡಿರುವ ಜಾಗದಲ್ಲಿ ಹೊಳೆಯ ನೀರು ಕಡಿಮೆಯಾಗಿ ಮರಳು ಶೇಖರಣೆ ಆಗಿದೆ. ಆದರೂ ಸಹ ಮರಳನ್ನು ತುಂಬಲು ಜಿಲ್ಲಾಡಳಿತ ಆದೇಶವನ್ನು ಮಾಡಿಲ್ಲ. ಇದರಿಂದ ಲಾರಿ ಮಾಲೀಕರಿಗೆ ತುಂಬ ಕಷ್ಟಕರ ವಾತಾವರಣ ನಿರ್ಮಾಣವಾಗಿದೆ ಈ ಬಗ್ಗೆ ಪ್ರತಿಭಟನೆ ನಡೆಸುತ್ತಿದ್ದರು ಜಿಲ್ಲಾಡಳಿತ ತಮಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲದಂತೆ ವರ್ತಿಸುತ್ತಿದೆ ಎಂದು ಕಿಡಿಕಾರಿದರು.
ಒಪ್ಪಿಗೆ ನೀಡಬೇಕು: ಈಗಾಗಲೇ ಬೇಲೂರಿನಲ್ಲಿ ಸಂಗ್ರಹಣೆ ಮಾಡಿರುವ ಮರಳು ತುಂಬಲು ಜಿಲ್ಲಾಡಳಿತ ಅನುಮತಿ ನೀಡುತ್ತಿಲ್ಲ. ಆದ್ದರಿಂದ ಕೂಡಲೇ ಶೇಖರಣೆಯಾಗಿರುವ ಮರಳನ್ನು ಸಾಗಿಸಲು ಪರವಾನಗಿ ನೀಡಬೇಕು. ಹೊಳೆಯಲ್ಲಿ ನೀರು ಕಡಿಮೆ ಆಗಿದ್ದು, ಬೇಕಾದಷ್ಟು ಮರಳು ಲಭ್ಯತೆ ಇರುವುದರಿಂದ ಕೂಡಲೇ ಕಾನೂನು ಪ್ರಕಾರದಂತೆ ಮರಳನ್ನು ಸಾಗಣೆ ಮಾಡಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.ಜಿಲ್ಲಾಡಳಿತ ಹೇಳಿದಂತೆ ಮರಳನ್ನು ಈವರೆಗೂ ನಾವು ಜನತಾ ಮನೆಗಳು ಸೇರಿದಂತೆ ಸರ್ಕಾರದ ಕಟ್ಟಡಗಳಿಗೆ ಮರಳನ್ನು ಸಾಗಿಸಿದ್ದೇವೆ. ಇದರಿಂದ ಸಾರ್ವಜನಿಕರಿಗೆ ಮರಳು ಸಿಗದಂತಾಗಿದೆ. ಖಾಸಗಿಯವರಿಗೆ ಮರಳು ಸಿಗದಂತಾಗಿರುವುದರಿಂದ ಲಾರಿ ಮಾಲೀಕರು ಜೀವನ ನಡೆಸಲು ಕಷ್ಟ ಸಾಧ್ಯವಾಗಿದೆ. ಮರಳು ಸರಿಯಾಗಿ ಸಿಗದ ಕಾರಣ ಲಾರಿ ಮಾಲೀಕರಿಗೆ ತೊಂದರೆ ಅನುಭವಿಸುವಂತಾಗಿದೆ. ಜಿಲ್ಲಾಡಳಿತ ಹೇಳಿದಂತೆ ನಾವು ಜಿಪಿಎಸ್ ಅಳವಡಿಸಿಕೊಂಡಿದ್ದರು ಸಹ ಮರಳಿನ ಸಮಸ್ಯೆ ಬಗೆಹರಿಯುತ್ತಿಲ್ಲ. ಮರಳು ಸಾಗಣೆ ಪರವಾನಗಿಯನ್ನು ನೀಡದೆ ಸಂಕಷ್ಟಕ್ಕೆ ಸಿಲುಕಿಸಿದ್ದಾರೆ ಎಂದು ಆರೋಪಿಸಿದರು.
ಮುಟ್ಟುಗೋಲು ಹಾಕಿಕೊಳ್ಳುವ ಸ್ಥಿತಿ: ಮರಳು ಸಾಗಿಸಲು ಕಳೆದ ನಾಲ್ಕೈದು ತಿಂಗಳಿನಿಂದ ಪರವಾನಗಿ ನೀಡದ ಕಾರಣ ಲಾರಿ ಮಾಲೀಕರು ಹಾಗೂ ಚಾಲಕರು, ಕ್ಲೀನರ್ಗ್‌ಳು ಜೀವನ ನಡೆಸಲು ತುಂಬಾ ಕಷ್ಟವಾಗಿದೆ. ಲಾರಿ ಖರೀದಿಗಾಗಿ ಮಾಡಿದಂತಹ ಸಾಲವನ್ನು ವಾಪಸ್ ಪಾವತಿ ಸಲು ಸಾಧ್ಯಗವಾಗದ ಕಾರಣ ಲಾರಿಗಳನ್ನು ಫೈನಾನ್ಸ್‌ನವರು ಲಾರಿಗಳನ್ನು ಮುಟ್ಟುಗೋಲು ಹಾಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಲಾರಿ ಮಾಲೀಕರು ಅಲವತ್ತುಕೊಂಡರು.
ಜಿಪಿಎಸ್ ಅಳವಡಿಕೆಯಿಂದ ತೊಂದರೆ: ಜಿಪಿಎಸ್ ಅಳವಡಿಸಿಕೊಂಡು ಲಾರಿಗಳಲ್ಲಿ ಮರಳನ್ನು ಸಾಗಿಸಲು ಪರವಾನಗಿ ನೀಡದ ಕಾರಣ ಸಾಕಷ್ಟು ತೊಂದರೆ ಉಂಟಾಗಿದೆ. ಆದ್ದರಿಂದ ಕೂಡಲೇ ಶೇಖಕರಣೆಯಾಗಿರುವ ಮರಳನ್ನು ಸಾಗಿಸಲು ಪರವಾನಗಿ ನೀಡಬೇಕು. ಇಲ್ಲವಾದಲ್ಲಿ ಈ ವಿರುದ್ಧ ಹೋರಾಟವನ್ನು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಸಂಘದ ಜಿಲ್ಲಾಧ್ಯಕ್ಷ ಬಾನುಪ್ರಕಾಶ್, ನಿರ್ದೇಶಕ ಕೆ.ಎಸ್.ಮಂಜುನಾಥ್, ರಘು, ಅಣ್ಣರಾಜಪ್ಪ, ಗೋಪಾಲಸ್ವಾಮಿ, ಮಂಜುನಾಥ್, ರವಿ, ಶಿವು, ಪ್ರಸಾದ್, ಕುಮಾರ್, ಪ್ರವೀಣ್‌ಕುಮಾರ್, ಸುರೇಶ್, ನವೀನ್, ಕಿರಣಣ್ಕುಮಾರ್, ರಾಜು, ಸಿದ್ದರಾಜು, ಪುರುಷೋತ್ತಮ್, ರಾಜಣ್ಣ ಹಾಗೂ ಇತರರು ಪ್ರತಿಭಟನೆ ನೇತೃತ್ವ ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.