ಹಾಸನ

ಸಹಕಾರ ಸಪ್ತಾಹ ಕಾರ್ಯಕ್ರಮ

Published On :

ಬೇಲೂರು: ಹಾಲು ಉತ್ಪಾದಕರ ಸಹಕಾರ ಸಂಘ ಹಾಗೂ ಸಹಕಾರ ಬ್ಯಾಂಕ್‌ಗಳು ರೈತರ ಕಷ್ಟದ ಸಮಯದಲ್ಲಿ  ಕೈ ಹಿಡಿದು ಮುನ್ನಡೆಸಿವೆ ಎಂದು ಜಿಲ್ಲಾ ಸಹಕಾರಿ ಬ್ಯಾಂಕ್ ಅಧ್ಯಕ್ಷ, ಶಾಸಕ ಸಿ.ಎನ್.ಬಾಲಕೃಷ್ಣ ಅಭಿಪ್ರಾಯಪಟ್ಟರು.  ಪಟ್ಟಣದ ಕನ್ನಿಕಾ ಪರಮೇಶ್ವರಿ ಕಲ್ಯಾಣ ಮಂಟಪದಲ್ಲಿ  ಹಾಸನ ಜಿಲ್ಲಾ ಸಹಕಾರಿ ಬ್ಯಾಂಕ್, ಹಾಲು ಉತ್ಪಾಧಕರ ಸಂಘ, ಸಹಕಾರ ಆಡಳಿತ ಮತ್ತು ಲೆಕ್ಕ ಪರಿಶೋಧನಾ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ  ಸೋಮವಾರ ನಡೆದ 60  ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಹೈನುಗಾರಿಕೆಯಿಂದ ಜಿಲ್ಲೆಯ ರೈತಾಪಿ ವರ್ಗ ನೆಮ್ಮದಿ ಜೀವನ ಸಾಗಿಸುತ್ತಿದ್ದಾರೆ, ಅಲ್ಲದೆ ಸಹಕಾರಿ ಬ್ಯಾಂಕ್‌ಗಳು ನೀಡುವ ಶೂನ್ಯ ಬಡ್ಡಿ, ಕೃಷಿ ಸಾಲ ಹೀಗೆ ಹತ್ತು ಹಲವು ಮೂಲ ಸೌಲಭ್ಯಗಳನ್ನು ನೀಡಿದ್ದಾರೆ ಎಂದರು. ಜಿಪಂ ಸದಸ್ಯರಾದ ಬಿ.ಡಿ.ಚಂದ್ರೇಗೌಡ, ಹೇಮಾವತಿ ಮಂಜುನಾಥ್, ಜಿಲ್ಲಾ ಸಹಕಾರ ಒಕ್ಕೂಟ ಅಧ್ಯಕ್ಷ ಕಾರ್ಲೆ ಇಂದ್ರೇಶ್, ಕೆ.ಸತೀಶ್. ತಾಪಂ ಮಾಜಿ ಅಧ್ಯಕ್ಷ ಎಂ.ಎ.ನಾಗರಾಜು, ಅರ್ಬನ್ ಬ್ಯಾಂಕ್ ಅಧ್ಯಕ್ಷ ಚಂದ್ರಶೇಖರ್, ಸಹಕಾರಿ ಸಂಘದ ಉಪ ನಿಬಂಧಕ ಇಲ್ಯಾಸ್, ಉಲ್ಲಾ ಷರೀಪ್, ದೇವರಾಜ್ ಮತ್ತಿತರರು ಉಪಸ್ಥಿತರಿದ್ದರು.

ಮಕ್ಕಳ ದಿನಾಚರಣೆ
ಜಾವಗಲ್:
ಇಲ್ಲಿನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಮಕ್ಕಳ ದಿನಾಚರಣೆ ಕಾರ್ಯಕ್ರಮ ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮುಖ್ಯ ಶಿಕ್ಷಕ ಶಿವಣ್ಣ, ಪುಟಾಣಿ ಪ್ರತೀಕ್, ಕುಸುಮ ಮಾತನಾಡಿದರು. ಸುರೇಶ್, ಹಾಲಪ್ಪ, ಸರಸ್ವತಿ, ಸರ್ವಮಂಗಳ ಇದ್ದರು.

ಯುನೈಟೆಡ್ ಶಾಲೆಯಲ್ಲಿ  ವೇಷಭೂಷಣ ಸ್ಪರ್ಧೆ
ಬೇಲೂರು:
ಮಕ್ಕಳಲ್ಲಿ ದೇಶದ ಹಿರಿಮೆ ಸಂಸ್ಕೃತಿ ಬಿಂಬಿಸಲು ವೇಷಭೂಷಣದಂತಹ ಸ್ಪರ್ಧೆಗಳು ಸಹಾಯಕವಾಗಿದೆ ಎಂದು ಯುನೈಟೆಡ್ ಅಕಾಡೆಮಿ ಶಾಲೆ ಕಾರ್ಯದರ್ಶಿ ವಿ.ಎಸ್. ಬೋಜೇಗೌಡ ಅಭಿಪ್ರಾಯಪಟ್ಟಿದ್ದಾರೆ.  ಪಟ್ಟಣದ ನಿಡಗೋಡು ಸಮೀಪ ಕುವೆಂಪು ನಗರದ ಯುನೈಟೆಡ್ ಅಕಾಡೆಮಿ ಶಾಲೆಯಲ್ಲಿ ನಡೆದ ವೇಷಭೂಷಣ  ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಕ್ಕಳು ವೇಷಭೂಷಣ ಸ್ಪರ್ಧೆಗೆ ಪ್ರತಿನಿಧಿಸುವಾಗ ತಾವು  ತೊಡುವ ಪೋಷಾಕಿನ ಬಗ್ಗೆ ಹೆಚ್ಚಿನ ಮಾಹಿತಿ ಹಾಗೂ ಆಸಕ್ತಿ ಪಡೆಯುತ್ತಾರೆ. ವೀರಯೋಧರು, ಧಾರ್ಮಿಕ ನಾಯಕರು, ದಾರ್ಶನಿಕರು, ಯೋಗಿಗಳು, ವೀರ ಮಹಿಳೆಯರು, ಪರಿಸರ, ಸ್ವಾತಂತ್ರ್ಯ ಸೇನಾನಿ, ರೈತ,  ಮಹಾಪುರುಷರು ಸೇರಿದಂತೆ ಅನೇಕ ರೀತಿಯ ವೇಷ ತೊಡುವ ಅವಕಾಶ ಇರುವುದರಿಂದ ಅರಿವಿನ ಜೊತೆಗೆ ಸ್ಪರ್ಧೆಯನ್ನು ಎದುರಿಸಬಹುದಾದ ಅವಕಾಶ ಮಕ್ಕಳಿಗೆ ಲಭ್ಯವಾಗುತ್ತದೆ ಎಂದರು. ಕೆಲ ಪೋಷಕರು ಶಾಲೆಗೆ ಮಕ್ಕಳನ್ನು ಸೇರಿಸಿದ ನಂತರ ಮಕ್ಕಳ  ಅವರ ಆಗು-ಹೋಗು ಬಗ್ಗೆ ತಿಳಿಯಲು   ಸಮಯ ಇರುವುದಿಲ್ಲ. ಮಕ್ಕಳು ದಿನದ 8 ಗಂಟೆ ಮಾತ್ರ ಶಾಲಾ ಶಿಕ್ಷಕರ ಜೊತೆ ಇದ್ದರೆ, ಉಳಿದ ಸಮಯ ಪೋಷಕರಲ್ಲಿ ಕಳೆಯುತ್ತಾರೆ. ಇಂತಹ ಸಂದರ್ಭದಲ್ಲಿ  ಪೋಷಕರು ತಮ್ಮ ಮಕ್ಕಳಲ್ಲಿ ಯಾವ ರೀತಿಯಲ್ಲಿ ಕಲಾ ಪ್ರತಿಭೆಯನ್ನು ತೋರಿಸಲು ಛದ್ಮ ವೇಷಭೂಷಣ ಕಾರ್ಯಕ್ರಮ ಅನುವು ಮಾಡುತ್ತದೆ ಎಂದರು. ಶಾಲೆಯಲ್ಲಿ ಮಕ್ಕಳನ್ನು ಕೆವಲ ಪಠ್ಯ ವಿಷಯಕ್ಕೆ ಸೀಮಿತ ಮಾಡದೆ, ಅವರಿಗೆ ಸಮಾಜದಲ್ಲಿ ಜೀವನ ಸಾಗಿಸಲು ಸಾಮನ್ಯ ಜ್ಞಾನ ಮತ್ತು ಮಕ್ಕಳಲ್ಲಿ ಇರುವ ಸುಪ್ತ ಪ್ರತಿಭೆಗಳನ್ನು ಗುರುತಿಸಿ ಕಾರ್ಯಕ್ರಮ ಹೆಚ್ಚಾಗಬೇಕು  ಎಂದರು. ಮುಖ್ಯ ಶಿಕ್ಷಕಿ ದೀಪಾ, ಪ್ರೀತಿ, ಪುನೀತ್, ಆಸ್ಮಾ, ಸಂಶುದ್ದೀನ್ ಉಪಸ್ಥಿತರಿದ್ದರು.

ಅಕ್ರಮ ಮದ್ಯ; ವ್ಯಕ್ತಿ ಬಂಧನ
ಹಾಸನ:
ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿರುವ ಘಟನೆ ಬೇಲೂರಿನಲ್ಲಿ ಭಾನುವಾರ ನಡೆದಿದೆ. ಬೇಲೂರು ತಾಲೂಕಿನ ಸೋಂಪುರ ಗ್ರಾಮದ ಹಾಲಪ್ಪ (24) ರವರು ತಮ್ಮ ಮನೆಯ ಮುಂಭಾಗ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದಾಗ ಪಟ್ಟಣ ಠಾಣೆಯ ಪಿಎಸ್‌ಐ ಅಶ್ವಿನ್‌ಕುಮಾರ್ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದು, ಮದ್ಯ ಮಾರಾಟಕ್ಕಿಟ್ಟಿದ್ದ ರು.1932 ಬೆಲೆಯ ಮದ್ಯ ವಶಪಡಿಸಿಕೊಂಡಿದ್ದಾರೆ. ಬೇಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯುವಕ ನಾಪತ್ತೆ
ಹಾಸನ:
ಶಾಂತಿನಗರ ವಾಸಿ ರಾಘವೇಂದ್ರ(27) ಮನೆಯಿಂದ ಹೊರಗೆ ಹೋದವರು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿದ್ದಾರೆ. 5 ಅಡಿ ಎತ್ತರ, ಕೋಲುಮುಖ, ಸಾಧಾರಣ ಮೈಕಟ್ಟು, ಕನ್ನಡ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ನೀಲಿ ಬಣ್ಣದ ಶರ್ಟ್ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ.

ಹುಚ್ಚು ನಾಯಿ ಕಡಿತ: 11 ಜನರಿಗೆ ಗಾಯ
ಅರಕಲಗೂಡು:
ಹುಚ್ಚುನಾಯಿ ಕಡಿತದಿಂದಾಗಿ 11 ಜನ ಗಾಯಗೊಂಡಿರುವ ಘಟನೆ ಸೋಮವಾರ ನಡೆದಿದೆ. ಪಟ್ಟಣದ ಮುಖ್ಯ ರಸ್ತೆಗಳಲ್ಲಿ ತಮ್ಮ ಕೆಲಸ ಕಾರ್ಯಗಳನ್ನು ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಸಾರ್ವಜನಿಕರ ಮೇಲೆ ಸಂಜೆ 4.30ರ ಸಮಯದಲ್ಲಿ ಪೇಟೆ ಮುಖ್ಯರಸ್ತೆ, ಅನಕೃ ವೃತ್ತ, ಬಸ್‌ನಿಲ್ದಾಣ, ದೊಡ್ಡಮ್ಮ ವೃತ್ತ, ಹಾಗೂ ತಾಲೂಕು ಕಚೇರಿ ಮತ್ತು ಪೊಲೀಸ್ ಠಾಣೆ ಮುಂದೆಯೂ ಹುಚ್ಚು ನಾಯಿ ಏಕಾಏಕಿ ಎರಗಿ ಹಲವರಿಗರ ಕೈ ಮತ್ತು ಕಾಲುಗಳಿಗೆ ಗಾಯ ಗೊಳಿಸಿರುವ ಘಟನೆ ನಡೆದಿದೆ. ಗಾಯಾಳುಗಳು ಅರಕಲಗೂಡು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಹಲಿಂಗ ಎಂಬ ತುಮಕೂರು ಜಿಲ್ಲೆಯ ವ್ಯಕ್ತಿಯೊಬ್ಬ ಬಸ್ ನಿಲ್ದಾಣಕ್ಕೆ ತೆರಳುವ ಸಂದರ್ಭದಲ್ಲಿ ಆತನ ಮೇಲೆ ಎರಗಿದ ಹುಚ್ಚುನಾಯಿ ಆತನ ಎಡಗೈಗೆ 5 ರಿಂದ 6 ಸ್ಥಳಗಳಲ್ಲಿ ಗಾಯಗೊಳಿಸಿದ್ದು, ಆತ ತೀವ್ರವಾಗಿ ಗಾಯಗೊಂಡಿದ್ದಾನೆ. ಉಳಿದ ಸಂಕೇಗೌಡ, ಶ್ರೀನಿವಾಸ್, ಅಕ್ಕಯ್ಯಮ್ಮ, ಲಕ್ಷ್ಮಿ, ದ್ಯಾವಯ್ಯ, ಇನ್ನು ಮೊದಲಾದವರಿಗೆ ಕೈ ಮತ್ತು ಕಾಲುಗಳಿಗೆ ಗಾಯಗೊಳಿಸಿದೆ. ಕೋತಿ ಕಾಟ: ಇನ್ನೊಂದೆಡೆ ಪಟ್ಟಣದ ಹೆಂಟಗೆರೆ ರಸ್ತೆಯೂ ಸೇರಿದಂತೆಪಟ್ಟಣದಲ್ಲಿ ಕೋತಿಯೊಂದು ಕಾಣಿಸಿಕೊಂಡಿದ್ದು,  ಶಾಲೆಗೆ ತೆರಳುವ ವಿದ್ಯಾರ್ಥಿಗಳ ಮೇಲೆ ಎರಗುತ್ತಿದೆ. ಇದರಿಂದ ಮಕ್ಕಳು ಶಾಲೆಗೆ ತೆರಳಲು ಭಯಭೀತರಾಗಿದ್ದಾರೆ.

ತಾಲೂಕು ಕಾಂಗ್ರೆಸ್ ಕಾರ್ಯಕರ್ತರ ಸಭೆ
ಅರಸೀಕೆರೆ:
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಭದ್ರಕೋಟೆಯನ್ನು ಭಗ್ನ ಮಾಡಿ ಕಾಂಗ್ರೆಸ್ ಅಭ್ಯರ್ಥಿ ಹೆಚ್ಚು ಮತಗಳಿಂದ ಜಯಭೇರಿ ಬಾರಿಸಲು ಅನುಕೂಲವಾಗುವಂತೆ ಕಾರ್ಯಕರ್ತರು ತಳ ಹಂತದಿಂದ ಪಕ್ಷವನ್ನು ಬಲಪಡಿಸಲು ಸನ್ನದ್ಧರಾಗಬೇಕೆಂದು ಎಐಸಿಸಿ ಕಾರ್ಯದರ್ಶಿ ಚೆಲ್ವಕುಮಾರ್ ಕರೆ ನೀಡಿದರು.ಪಟ್ಟಣದ ಕೃಷ್ಣ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅನೇಕ ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು ಅದರ ಫಲವಾಗಿ 28 ಲೋಕಸಭಾ ಕ್ಷೇತ್ರಗಳನ್ನು ಕಾಂಗ್ರೆಸ್ ತನ್ನ ತೆಕ್ಕೆಗೆ ತೆಗೆದುಕೊಳ್ಳುವುದರಲ್ಲಿ ಸಂಶಯವಿಲ್ಲ ಎಂದರು.ಕೇಂದ್ರ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಪ್ರತಿಪಕ್ಷ ಮುಖಂಡರು ಮೊದಲು ತಮ್ಮ ತಪ್ಪುಗಳ ಬಗ್ಗೆ ಪರಾಮರ್ಶಿಸಲಿ ಎಂದು ತಿರುಗೇಟು ನೀಡಿದ ಅವರು, ಗುಜರಾತ್‌ನಲ್ಲಿ ನರೇಂದ್ರ ಮೋದಿಯವರಿಗೆ ಟಾಟಾ ಕಂಪನಿ ಯಾವ ರೀತಿ ಸಹಾಯ ಮಾಡಿದೆ ಎಂಬುದನ್ನು ದೇಶದ ಜನತೆ ತಿಳಿದಿದೆ. 2014ರ ಲೋಕಸಭಾ ಚುನಾವಣೆ ಕಾಂಗ್ರೆಸ್‌ಗೆ ಸವಾಲಾಗಿದೆ. ಕಾರ್ಯಕರ್ತರು ಎದೆಗುಂದದೆ ಮುನ್ನುಗ್ಗಬೇಕು ಎಂದರು.ಮಾಜಿ ಸಚಿವ ಬಿ ಶಿವರಾಂ, ಹಾಸನ ಉಸ್ತುವಾರಿಗಳಾದ ಮಲ್ಲಿಗೆ ವೀರೇಶ್, ಅಶ್ವಿನಿಕುಮಾರ್, ಕೆಪಿಸಿಸಿ ಸದಸ್ಯ ಪಟೇಲ್ ಶಿವಪ್ಪ, ಹಿರಿಯೂರು ರೇವಣ್ಣ, ಗೀಜಿಹಳ್ಳಿ ಗುರುಸಿದ್ದಪ್ಪ ಇತರರು ಮಾತನಾಡಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್ ಸ್ವಾಗತಿಸಿದರು. ವಿಜಯಕುಮಾರ್ ವಂದಿಸಿದರು. ವೇದಿಕೆಯಲ್ಲಿ ಮಾಜಿ ಶಾಸಕ ಎಸ್.ಎಂ.ಆನಂದ್, ಕೆ.ಕೆ.ಹಸನ್‌ಖಾನ್, ಕೆಪಿಸಿಸಿ ಕಾರ್ಯದರ್ಶಿ ಅಜ್ಜನಹಳ್ಳಿ ಬಸವರಾಜ್, ವಿನಯಾಗಾಂಧಿ, ಉಮಾಶಂಕರ್, ಕಲ್ಲಹಳ್ಳಿ ನಾಗರಾಜ್, ಕಬ್ಬಳ್ಳಿ ರಂಗೇಗೌಡ ಗೋಪಾಲಸ್ವಾಮಿ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನಕುಮಾರ್, ಜಿಪಂ ಮಾಜಿ ಸದಸ್ಯೆ ಸುಲೋಚನಾಬಾಯಿ, ಆನಂದಮೂರ್ತಿ ಇದ್ದರು.

ಸಚಿವರಿಗೆ ಸನ್ಮಾನ
ಅರಸೀಕೆರೆ:
ಗ್ರಾಮಾಂತರ ಪ್ರದೇಶದಲ್ಲಿ ಪಕ್ಷವನ್ನು ಕಟ್ಟಲು ಕಾರ್ಯಕರ್ತರು ಮತ್ತು ಮುಖಂಡರು ಶ್ರಮಿಸಬೇಕೆಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಕರೆ ನೀಡಿದರು. ಕಾಂಗ್ರೆಸ್ ಕಾರ್ಯಕರ್ತರು ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಹಳ್ಳಿ ಹಳ್ಳಿಗೆ ತೆರಳಿ ಪಕ್ಷವನ್ನು ತಳಮಟ್ಟದಿಂದ ಸುಭದ್ರಗೊಳಿಸಲು ಕಾರ್ಯಕರ್ತರು ಇಂದಿನಿಂದಲೇ ಕಾರ್ಯೋನ್ಮುಖರಾಗಬೇಕು. ಸರ್ಕಾರ ಬಡಜನರ ಕಲ್ಯಾಣಕ್ಕಾಗಿ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು ಅವುಗಳನ್ನು ಜನರಿಗೆ ತಲುಪಿಸುವ ಕಾರ್ಯದಲ್ಲಿ ತೊಡಗಬೇಕೆಂದರು.ಮುಖಂಡ ಪಟೇಲ್ ಶಿವಪ್ಪ, ಗಂಜೀಗೆರೆ ಚಂದ್ರಶೇಖರ್, ವಿಜಯಕುಮಾರ್, ಮಂಜುರಾಜ್, ಉಮಾಶಂಕರ್, ಸಂಕೋಡನಹಳ್ಳಿ ಮಂಜುನಾಥ್, ಮಾದನಹಳ್ಳಿ ಶಿವಣ್ಣ, ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.