'ಅನ್ನದಾತನ ಅಭಿವೃದ್ಧಿಗೆ ಕಿಸಾನ್ ಸಂಘ ಬದ್ಧ'
ಕ.ಪ್ರ.ವಾರ್ತೆ ಹೊಳೆನರಸೀಪುರ ನ.18
ರೈತ ಸಮುದಾಯದಲ್ಲಿ ಸ್ವಾವಲಂಬಿ ಕೃಷಿ, ಜಲ ಸಂರಕ್ಷಣೆ, ಗೋ-ಸಂರಕ್ಷಣೆ ಮೊದಲಾದ ರಚನಾತ್ಮಕ ಕಾರ್ಯಕ್ರಮಗಳ ಮುಖಾಂತರ ಸ್ವಾವಲಂಬಿ ರೈತನನ್ನಾಗಿಸುವತ್ತ ಭಾರತೀಯ ಕಿಸಾನ್ ಸಂಘವು ಕಾರ್ಯನಿರ್ವಹಿಸುತ್ತಿದ್ದು, ರೈತ ಸಮುದಾಯಕ್ಕೆ ಸಮಸ್ಯೆಗಳು ಬಂದಾಗ ಹೋರಾಟಗಳನ್ನು ಮಾಡುತ್ತಾ ರೈತರಿಗೆ ಮಾರ್ಗದರ್ಶನ ನೀಡುತ್ತಿದೆ ಎಂದು ಭಾರತೀಯ ಕಿಸಾನ್ ಸಂಘದ ದಕ್ಷಿಣ ಪ್ರಾಂತ್ಯ ಸದಸ್ಯ ಸುರೇಶ್ ಅಭಿಪ್ರಾಯಪಟ್ಟಿದ್ದಾರೆ.
ಪಟ್ಟಣದ ಬಸವನಗುಡಿ ಬೀದಿಯ ರೇಣುಕಾಚಾರ್ಯ ದೇವಾಲಯದ ಆವರಣದಲ್ಲಿ ಇತ್ತೀಚೆಗೆ ನಡೆದ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಹಾಗೂ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಭಾರತೀಯ ಕಿಸಾನ್ ಸಂಘವು ಸಾಮೂಹಿಕ ನಾಯಕತ್ವ ಮತ್ತು ಸಾಮೂಹಿಕ ನಿರ್ಣಯದಲ್ಲಿ ಹೊಂದಿರುವ ಸಂಘಟನೆಯಾಗಿದೆ ಎಂದರು.
ದೇಶಾದ್ಯಂತ ಎಲ್ಲಾ ರಾಜ್ಯಗಳಲ್ಲಿ ಕಿಸಾನ್ ಸಂಘವು ಕಾರ್ಯನಿರ್ವಹಿಸುತ್ತಿದ್ದು, ಕೇವಲ ಉಳುಮೆ ಮಾಡಿ ಆಹಾರ ಉತ್ಪಾದನೆ ಮಾಡುವ ವ್ಯಕ್ತಿ ಮಾತ್ರವೇ ರೈತ ಎಂಬುದಲ್ಲ, ಬದಲಿಗೆ ಕೃಷಿ ಚಟುವಟಿಕೆಗಳಿಗೆ ಪೂರಕವಾಗಿರುವ ಬಡಗಿ, ಕಮ್ಮಾರ, ಕೃಷಿ ಕಾರ್ಮಿಕ, ಗೋಪಾಲಕ ಮೊದಲಾದವರೆಲ್ಲರನ್ನೂ ಒಳಗೊಂಡ ಪರಿವಾರ ಕಲ್ಪನೆಯೊಂದಿಗೆ ಕಾರ್ಯನಿರ್ವಹಿಸುತ್ತಿದೆ ಎಂದು ಸುರೇಶ್ ತಿಳಿಸಿದರು. ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ತಮ್ಮಪ್ಪಗೌಡ ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆಯಂತಹ ಅವೈಜ್ಞಾನಿಕ ಯೋಜನೆಗಳಿಂದಾಗಿ ಎಲ್ಲೆಲ್ಲೂ ಕೃಷಿ ಕಾರ್ಮಿಕರ ಸಮಸ್ಯೆ ಉಂಟಾಗಿದ್ದು, ನಗರೀಕರಣ, ಕೈಗಾರಿಕಾಕರಣ, ಜಾಗತೀಕರಣದಿಂದಾಗಿ ಕೃಷಿ ಭೂಮಿ ಕಡಿಮೆಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಪದಾಧಿಕಾರಿಗಳ ಆಯ್ಕೆ: ಭಾರತೀಯ ಕಿಸಾನ್ ಸಂಘದ ಜಿಲ್ಲಾ ಸದಸ್ಯರಾದ ವೈ.ಎಂ.ರಾಜು ದಕ್ಷಿಣ ಪ್ರಾಂತ್ಯದ ಸದಸ್ಯರು ಹಾಗೂ ತಾಲೂಕು ಪದಾಧಿಕಾರಿಗಳನ್ನು ಘೋಷಿಸಿದರು. ಭಾರತೀಯ ಕಿಸಾನ್ ಸಂಘದ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಬಿ.ಆರ್.ತಾರಾನಾಥ್, ಉಪಾಧ್ಯಕ್ಷರಾಗಿ ಹಂಗರಹಳ್ಳಿ ಕೃಷ್ಣೇಗೌಡ, ಕಾರ್ಯದರ್ಶಿಯಾಗಿ ಎಚ್.ಜಿ.ರಾಜೇಗೌಡ, ಖಜಾಂಚಿಯಾಗಿ ಬಸವನಾಯಕನಹಳ್ಳಿ ರಾಮಚಂದ್ರು ಅವರನ್ನು ಹಾಗೂ ನಿರ್ದೇಶಕರನ್ನು ಆಯ್ಕೆ ಮಾಡಲಾಯಿತು.
ಜಿಲ್ಲಾ ಉಪಾಧ್ಯಕ್ಷ ಕುಮಾರಸ್ವಾಮಿ ಸ್ವಾಗತಿಸಿದರು. ಮೊಗಣ್ಣಗೌಡ ಇತರರು ಇದ್ದರು.
ತರಬೇತಿಗೆ ಸಂದರ್ಶನ
ಹಾಸನ: ಬೆಂಗಳೂರಿನ ಬಿಡದಿ ಬಳಿಯಿರುವ ಕೆನರಾ ಬ್ಯಾಂಕ್ ಪ್ರಾಯೋಜಿತ ಕೆಪಿಜೆ ಪ್ರಭು ಕರಕುಶಲ ತರಬೇತಿ ಸಂಸ್ಥೆಯು ನಿರುದ್ಯೋಗಿ ಯುವಕರಿಗೆ ಮರ ಮತ್ತು ಕಲ್ಲು ಕೆತ್ತನೆ ಹಾಗೂ ಲೋಹ ಶಿಲ್ಪ ವಿಭಾಗಗಳಲ್ಲಿ 18 ತಿಂಗಳು ಮತ್ತು ಕುಂಭ ಕಲೆ (ಟೆರ್ರಾಕೋಟಾ)ಯಲ್ಲಿ 6 ತಿಂಗಳಾವಧಿ ಉಚಿತ ತರಬೇತಿ ತರಗತಿ ವ್ಯವಸ್ಥೆಗೊಳಿಸಿದೆ. ಅಭ್ಯರ್ಥಿಗಳು ಕನಿಷ್ಠ 7ನೇತರಗತಿಯಲ್ಲಿ ಉತ್ತೀರ್ಣರಾಗಿದ್ದು, ವಯೋವುತಿ 18 ರಿಂದ 35 ವರ್ಷದೊಳಗಿರಬೇಕು. ತರಬೇತಿ ಅವಧಿಯಲ್ಲಿ ಉಚಿತ ಊಟ, ವಸತಿ, ಸಮವಸ್ತ್ರ, ಉಪಕರಣಗಳು, ಕಚ್ಛಾ ಸಾಮಗ್ರಿ ಒದಗಿಸಲಾಗುವುದು. ಅಭ್ಯರ್ಥಿಗಳಿಗೆ ತರಬೇತಿ ಅಂಗವಾಗಿ ಪ್ರವಾಸ ಏರ್ಪಡಿಸಲಾಗುವುದಲ್ಲದೆ, ನುರಿತ ಶಿಕ್ಷಕರಿಂದ ತರಬೇತಿ ನೀಡಲಾಗುವುದು. ಆಸಕ್ತರುನೇರ ಸಂದರ್ಶಕ್ಕೆ ನ.26 ರಿಂದ 28 ರೊಳಗೆ ಬೆಂಗಳೂರು ಸಮೀಪದ ಜೋಗರದೊಡ್ಡಿ (ಬಿಡದಿ ಹೋಬಳಿ, ರಾಮನಗರ ಜಿಲ್ಲೆ) ಯಲ್ಲಿರುವ ಕೆನರಾ ಬ್ಯಾಂಕ್ ಪ್ರಾಯೋಜಿತ ಕೆಪಿಜೆ ಪ್ರಭು ಕರಕುಶಲ ತರಬೇತಿ ಸಂಸ್ಥೆಯಲ್ಲಿ ಹಾಜರಾಗಬೇಕು. ಆಯ್ಕೆಯಾದ ಅಭ್ಯರ್ಥಿಗಳನ್ನು ಅದೇ ದಿನ ಸ್ಥಳದಲ್ಲೇ ತರಬೇತಿಗೆ ಹಾಜರಿಪಡಿಸಿಕೊಳ್ಳಲಾಗುವುದು. ಹೆಚ್ಚಿನ ವಿವರಕ್ಕೆ ಎಂ ವೆಂಕಟೇಶ ಶೇಷಾದ್ರಿ ಮೊ-99001-58885 ಇಲ್ಲಿಗೆ ಸಂಪರ್ಕಿಸಲು ಕೋರಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

