ಸಹಕಾರ ಬ್ಯಾಂಕ್ # 10 ಕೋಟಿ ಲಾಭ ಗಳಿಸುವ ನಿರೀಕ್ಷೆ
ಚನ್ನರಾಯಪಟ್ಟಣ: ಜಿಲ್ಲಾ ಸಹಕಾರ ಬ್ಯಾಂಕ್ ಪ್ರಸಕ್ತ ಸಾಲಿನಲ್ಲಿ 10 ಕೋಟಿ ಲಾಭ ಗಳಿಸುವ ನಿರೀಕ್ಷೆ ಹೊಂದಲಾಗಿದೆ ಎಂದು ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷ ಹಾಗೂ ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.
ತಾಲೂಕಿನ ಅಕ್ಕನಹಳ್ಳಿ ಕ್ರಾಸ್ನಲ್ಲಿ ಏರ್ಪಡಿಸಿದ್ದ ಸಹಕಾರಿ ಸಪ್ತಾಹ ಉದ್ಘಾಟಿಸಿ ಮಾತನಾಡಿದ ಅವರು ಜಿಲ್ಲಾ ಸಹಕಾರ ಬ್ಯಾಂಕ್ ಈ ಸಾಲಿನಲ್ಲಿ ಅಕ್ಟೋಬರ್ ಅಂತ್ಯಕ್ಕೆ 8 ಕೋಟಿ ರು. ಲಾಭ ಗಳಿಸಿದ್ದು, ಮಾರ್ಚ್ ಅಂತ್ಯಕ್ಕೆ 10 ಕೋಟಿ ಲಾಭ ಗಳಿಸುವ ನಿರೀಕ್ಷೆಯಿದೆ ಎಂದು ತಿಳಿಸಿದರು.
ಕಳೆದ ಸಾಲಿನಲ್ಲಿ 340 ಕೋಟಿ ರು. ವ್ಯವಹರಿಸಿ 4.13 ಕೋಟಿ ಲಾಭ ಗಳಿಸಿದೆ. ಕಳೆದ ಸಾಲಿನಲ್ಲಿ ರೈತರು ಪಡೆದಿದ್ದ ಸಾಲವನ್ನು ಸರ್ಕಾರ ಮನ್ನಾ ಮಾಡಿದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ 160 ಲಕ್ಷ ಸಾಲ ಮನ್ನಾ ಆಗಿದ್ದು, ಸಾಲ ತೆಗೆದುಕೊಂಡಿರುವ ರೈತರು ಸರಿಯಾದ ಸಮಯಕ್ಕೆ ತಮ್ಮ ಸಾಲವನ್ನು ಮರುಪಾವತಿ ಮಾಡಿ ನಂತರ ಸಾಲ ತೆಗೆದುಕೊಳ್ಳುವತ್ತಾ ಮುಂದಾಗಬೇಕು ಎಂದು ತಿಳಿಸಿದರು.
ಕಳೆದ ಸಾಲಿನಲ್ಲಿ ಸಾಲ ಮನ್ನಾ ಆಗಿದೆ. ಸರ್ಕಾರ ಈ ಬಾರಿಯೂ ಮನ್ನಾ ಮಾಡುತ್ತದೆ ಎಂದು ಸಾಲ ತೀರುವಳಿ ಮಾಡದಿದ್ದರೆ ಶೇ.ಶೂನ್ಯದಲ್ಲಿರುವ ಬಡ್ಡಿ ದರ ಶೇ.12 ರಷ್ಟನ್ನು ರೈತರು ನೀಡುವ ಪರಿಸ್ಥಿತಿ ಬರುತ್ತದೆ.ಸಾಲ ಮನ್ನಾ ಆಗಿರುವ ರೈತರು 25ಸಾವಿರ ರು.ಗಳನ್ನು ಕಳೆದು ಉಳಿದಿರುವ ಸಾಲವನ್ನು ಕಟ್ಟಿ ಮರು ಸಾಲ ಪಡೆಯಬಹುದಾಗಿದೆ ಎಂದು ಹೇಳಿದರು.
ತಾಲೂಕಿನಲ್ಲಿ ನಷ್ಟದಲ್ಲಿದ್ದ 15ಕ್ಕೂ ಹೆಚ್ಚು ಕೃಷಿ ಪತ್ತಿನ ಸಹಕಾರಿ ಸಂಘಗಳನ್ನು ಮೇಲೆತ್ತುವ ಸಲುವಾಗಿ ಜಿಲ್ಲಾ ಸಹಕಾರಿ ಬ್ಯಾಂಕ್ ಆರ್ಥಿಕ ಸಹಾಯ ಕಲ್ಪಿಸಲಾಗಿದೆ ಎಂದರು.
ತಾಲೂಕಿನಲ್ಲಿ ಕಳೆದ 8 ವರ್ಷಗಳ ಹಿಂದೆ ಕೇವಲ 30 ಹಾಲು ಉತ್ಪಾದಕರ ಸಹಕಾರ ಸಂಘಗಳಿದ್ದು, ಅವುಗಳನ್ನು 275ಕ್ಕೇರಿಸಿದ್ದು, ಪ್ರತಿ ತಿಂಗಳು ಹಾಲಿನ ಡೈರಿಗಳಿಂದ 112 ಕೋಟಿ ರು. ವ್ಯವಹಾರ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಅದನ್ನು ಹೆಚ್ಚಿಸುವ ಸಲುವಾಗಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಗಳಿಗೆ ಸ್ಟೆಪ್ ಯೋಜನೆಯಿಂದ ಹಲವು ಸೌಲಭ್ಯಗಳನ್ನು ನೀಡಲಾಗುವುದು ಎಂದು ತಿಳಿಸಿದರು.
ಬರಗಾಲ ಪೀಡಿತ: ಜಿಲ್ಲೆಯಲ್ಲಿ ಚನ್ನರಾಯಪಟ್ಟಣ ಮತ್ತು ಅರಸೀಕೆರೆ ತಾಲೂಕುಗಳು ಬರಗಾಲದಿಂದ ಕೂಡಿದ್ದು, ಮಳೆಯಿಲ್ಲದೆ ಕೆರೆಗಳಲ್ಲಿ ಒಂದು ಹನಿಯೂ ನೀರಿಲ್ಲ. ಆದರೆ ಇದನ್ನು ಸರ್ಕಾರ ತಿಳಿದು ಬರಗಾಲ ಪೀಡಿತ ತಾಲೂಕಾಗಿ ಘೋಷಣೆ ಮಾಡುವಂತೆ ಒತ್ತಾಯಿಸುತ್ತಿದ್ದರೂ ಹಿಂದೇಟು ಹಾಕುತ್ತಿದೆ ಎಂದು ಆರೋಪಿಸಿದರು.
ಅರಕಲಗೂಡು ಹಾಗೂ ಬೇಲೂರು ತಾಲೂಕಿನಲ್ಲಿ ಮಳೆಯಾಗಿದ್ದರೂ ಅದನ್ನು ಬರಗಾಲ ಪ್ರದೇಶವೆಂದು ಘೋಷಣೆ ಮಾಡುವಲ್ಲಿ ರಾಜ್ಯ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ತಾರತಮ್ಯವೆಸಗಿದೆ ಎಂದು ಆಪಾದಿಸಿದರು.
ದಂಡ ವಿಧಿಸಬಾರದು: ಜಿಲ್ಲೆಯ ಅರಸೀಕೆರೆ ಹಾಗೂ ಚನ್ನರಾಯಪಟ್ಟಣ ತಾಲೂಕನ್ನು ಕಪ್ಪು ಪಟ್ಟಿಗೆ ಸೇರಿಸಿರುವುದರಿಂದ ತಾಲೂಕಿನಲ್ಲಿನ ಅನಧಿಕೃತ ಕೃಷಿ ಪಂಪ್ಸೆಟ್ಗಳನ್ನು ಅಧಿಕೃತವಾಗಿಸಲು ರೈತರು 10 ಸಾವಿರ ರು. ದಂಡ ಕಟ್ಟಬೇಕಾಗಿದ್ದು, ಇದನ್ನು ಸರ್ಕಾರ ಮಾನ್ಯ ಮಾಡದೆ ಎಲ್ಲಾ ತಾಲೂಕುಗಳಲ್ಲಿ ಕಟ್ಟಿಸಿಕೊಳ್ಳುತ್ತಿರುವ ಹಣವಷ್ಟೇ ಕಟ್ಟಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಬರಗಾಲದಲ್ಲಿ ಕೊಳವೆ ಬಾವಿಗಳು ನೀರಿಲ್ಲದೆ ಬತ್ತುತ್ತಿದ್ದು, ಈ ನಡುವೆ ರೈತರ ಕೃಷಿ ಪಂಪ್ಸೆಟ್ಗಳ ಮೇಲೆ ದಂಡ ವಿಧಿಸಲು ಮುಂದಾಗಿರುವ ಸರ್ಕಾರದ ಕ್ರಮವನ್ನು ಬೆಳಗಾವಿ ಅಧಿವೇಶನದಲ್ಲಿ ಚರ್ಚಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಕಾರ್ಲೆ ಇಂದ್ರೇಶ್, ಮಾಜಿ ಅಧ್ಯಕ್ಷ ವಡ್ಡರರಹಳ್ಳಿ ರಾಜಣ್ಣ, ಜಿಲ್ಲಾ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಲಿಂಗರಾಜು, ತಾಪಂ ಅಧ್ಯಕ್ಷೆ ಹೇಮಾವತಿ ಉಪಾಧ್ಯಕ್ಷೆ ಶಿಲ್ಪಾಶ್ರೀನಿವಾಸ್, ಟಿಎಪಿಸಿಎಂಎಸ್ ಅಧ್ಯಕ್ಷ ಕಾಳೇಗೌಡ, ಮಾಜಿ ಅಧ್ಯಕ್ಷ ಶಿವಣ್ಣ, ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಂಜುನಾಥ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ, ಅಕ್ಕನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವಾಸುದೇವ್ ಉಪಸ್ಥಿತರಿದ್ದರು.
ತಾಲೂಕಿನ ಸಹಕಾರ ಹಿರಿಯ ಸಾಧಕರು ಹಾಗೂ ಸಹಕಾರ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಸಂಘಗಳ ಅಧ್ಯಕ್ಷರನ್ನು ಸನ್ಮಾನಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

