ಹಾಸನ

ಹುಟ್ಟೂರಿಗೆ ಶ್ರಮಿಸಿದರೆ ತಕರಾರು ಅರ್ಜಿ!

Published On :

ಕ.ಪ್ರ.ವಾರ್ತೆ ಹೊಳೆನರಸೀಪುರ ನ. 20
ಬಡಜನರ ಸಹಕಾರಕ್ಕಾಗಿ ಪ್ರತಿ ತಾಲೂಕು ಆಸ್ಪತ್ರೆಗಳನ್ನೂ ಮೇಲ್ದರ್ಜೆಗೇರಿಸುವ ಕಾರ್ಯವನ್ನು ತಾವು ಮುಖ್ಯಮಂತ್ರಿಯಾಗಿದ್ದಾಗಲೇ ಜಾರಿಗೆ ತಂದಿದ್ದು, ರಾಜ್ಯದಲ್ಲಿಯೇ ಮೊದಲ ಡಯಾಲಿಸಿಸ್ ಸೇವಾ ಕೇಂದ್ರ ಹೊಂದಿರುವ ತಾಲೂಕು ಆಸ್ಪತ್ರೆಗಳ ಸಾಲಿನಲ್ಲಿ ಹೊಳೆನರಸೀಪುರ ಸಾರ್ವಜನಿಕ ಆಸ್ಪತ್ರೆ ಮೊದಲನೆಯದಾಗಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಿಳಿಸಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಬುಧವಾರ ನೂತನವಾಗಿ 60 ಲಕ್ಷ ರು. ವೆಚ್ಚದಲ್ಲಿ ಆರಂಭಗೊಂಡ ಸುಸಜ್ಜಿತ ಡಯಾಲಿಸಿಸ್ ಸೇವಾ ಕೇಂದ್ರವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.
ತಾವು ಹಾಗೂ ತಮ್ಮ ಕುಟುಂಬದವರು ಬೆಂಗಳೂರು, ಹಾಸನ, ಹೊಳೆನರಸೀಪುರದಲ್ಲಿ ವೈಯಕ್ತಿಕವಾಗಿ ಆಸ್ತಿ ಮಾಡಿಕೊಳ್ಳುವ ಆಸೆ ಹೊಂದಿಲ್ಲ. ತಮ್ಮ ಹುಟ್ಟೂರು ಹಾಗೂ ತಮ್ಮನ್ನು ಬೆಳೆಸಿದ ಜನರ ಸಹಾಯಕ್ಕಾಗಿ ಏನನ್ನೇ ಮಾಡಲು ಮುಂದಾದರೂ ಕೆಲವರು ತಕರಾರು ಅರ್ಜಿ ಬರೆಯುತ್ತಾರೆ ಎಂದು ವಿಷಾದಿಸಿದರು.
ಮೂತ್ರಪಿಂಡ ಕಾಯಿಲೆಯಿಂದ ನರಳುವವರು, ದುಬಾರಿ ಹಣ ನೀಡಿ, ದೊಡ್ಡ ದೊಡ್ಡ ನಗರಗಳಿಗೆ ತೆರಳಿ ಚಿಕಿತ್ಸೆ ಪಡೆಯಬೇಕಿತ್ತು. ಆದರೆ ಎಚ್.ಡಿ.ರೇವಣ್ಣ ಇದನ್ನು ಮನಗಂಡು ಪಟ್ಟುಹಿಡಿದು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಡಯಾಲಿಸಿಸ್ ಘಟಕ ಸ್ಥಾಪಿಸಲು ಮುಂದಾದರೆ, ಅದನ್ನೂ ಸಹಿಸದೇ ಕೆಲವರು ಸರ್ಕಾರಕ್ಕೆ ಅರ್ಜಿ ಬರೆಯುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.
ನದಿ ದಂಡೆಯಲ್ಲಿ ತಡೆಗೋಡೆ ನಿರ್ಮಾಣಕ್ಕೆ ಮುಂದಾದಾಗ, ನಾಲೆಯನ್ನು ಮುಚ್ಚಿ ಕವರ್‌ಡೆಕ್ ನಿರ್ಮಿಸಿದಾಗ ಹೀಗೆ ಪ್ರತಿಯೊಂದಕ್ಕೂ ಅರ್ಜಿ ಬರೆಯುವ ಒಂದು ವರ್ಗವೇ ಇದೆ ಎಂದು ಯಾರ ಹೆಸರನ್ನೂ ಹೇಳಲು ಬಯಸದೇ ತಮ್ಮ ಭಾಷಣದುದ್ದಕ್ಕೂ ಅಭಿವೃದ್ಧಿ ಕಂಡು ಸಹಿಸದೇ ಅರ್ಜಿ ಬರೆಯುತ್ತಾರೆ ಎಂದು ದೇವೇಗೌಡರು ತಮ್ಮ ರಾಜಕೀಯ ವಿರೋಧಿಗಳ ಕುರಿತು ಟೀಕಿಸಿದರು.
ಜಾತಿಗಳ ನಡುವೆ ವೈಷಮ್ಯ ಹುಟ್ಟುಹಾಕದಿರಿ:  ಈ ಕ್ಷೇತ್ರ ಹಾಗೂ ಜಿಲ್ಲೆಗೆ ಮತ್ತು ರಾಜಕಾರಣಕ್ಕೆ ದೇವೇಗೌಡ ಮತ್ತು ರೇವಣ್ಣ ಶಾಶ್ವತವಲ್ಲ. ಆದರೆ ಅಧಿಕಾರ ಇರುವಾಗ ಶಾಶ್ವತ ಕೆಲಸ ಮಾಡಬೇಕಿದೆ ಎಂದ ಅವರು, ರಾಜ್ಯ ಸರ್ಕಾರ ಕೂಡ ಜಾತಿ ಜಾತಿಗಳ ನಡುವೆ ವೈಷಮ್ಯ ಹುಟ್ಟುಹಾಕದೇ, ಆಡಳಿತ ನಡೆಸುವ ಸಂದರ್ಭದಲ್ಲಿ ಜಾತಿಗಳ ನಡುವೆ ಸಾಮರಸ್ಯವನ್ನು ಬೆಳೆಸಬೇಕಿದೆ ಎಂದರು.
ಶಾಸಕ ಎಚ್.ಡಿ.ರೇವಣ್ಣ ಮಾತನಾಡಿ, ಜಿಲ್ಲೆಯ ಗ್ರಾಮೀಣ ಭಾಗದಲ್ಲಿನ ಸರ್ಕಾರಿ ಆಸ್ಪತ್ರೆಗಳಲ್ಲಿ 122ಕ್ಕೂ ಹೆಚ್ಚು ವೈದ್ಯರ ಹುದ್ದೆ ಹಾಗೂ ಹೆಚ್ಚಿನ ಸಿಬ್ಬಂದಿ ಹುದ್ದೆ ಖಾಲಿ ಇದ್ದು, ಸರ್ಕಾರ ಕೂಡಲೇ ಖಾಲಿ ಇರುವ ಹುದ್ದೆಗಳ ಭರ್ತಿಗೆ ಮುಂದಾಗುವಂತೆ ಬೆಳಗಾವಿಯಲ್ಲಿ ನಡೆಯಲಿರುವ ಅಧಿವೇಶನದಲ್ಲಿ ರಾಜ್ಯ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದರು.
ಪಟ್ಟಣದ ಆಸ್ಪತ್ರೆಯನ್ನು ದೇವೇಗೌಡರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ 100 ಹಾಸಿಗೆಗಳಿಗೆ ಏರಿಸಿದರೆ, ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ 100 ಹಾಸಿಗೆಯಿಂದ 250 ಹಾಸಿಗೆಗೆ ಮೇಲ್ದರ್ಜೆಗೆ ಏರಿಸಲಾಯಿತು ಎಂದು ನುಡಿದರು.
ಸುಮಾರು 60 ಲಕ್ಷ ರು.ಗಳಿಗೂ ಅಧಿಕ ಅನುದಾನದಲ್ಲಿ ಡಯಾಲಿಸಿಸ್ ಘಟಕವನ್ನು ರಾಜ್ಯದಲ್ಲಿಯೇ ಪ್ರಥಮವಾಗಿ ತಾಲೂಕು ಕೇಂದ್ರ ಆಸ್ಪತ್ರೆಯಲ್ಲಿ ಆರಂಭಿಸಿದ ಕೀರ್ತಿ ಹೊಳೆನರಸೀಪುರಕ್ಕೆ ಸಲ್ಲುತ್ತದೆ ಎಂದ ಶಾಸಕ ಎಚ್.ಡಿ.ರೇವಣ್ಣ ಈ ಕೇಂದ್ರದ ಸ್ಥಾಪನೆಗೆ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಟಿ.ಎಸ್.ಲಕ್ಷ್ಮೀಕಾಂತ್ ಅವರ ಮುತುವರ್ಜಿ ಹಾಗೂ ಎಲ್ಲಾ ವೈದ್ಯಕೀಯ ತಂಡ ಹಾಗೂ ಸಿಬ್ಬಂದಿ ಆಸಕ್ತಿಯೇ ಕಾರಣ ಎಂದು ಶ್ಲಾಘಿಸಿದರು.
ನೂತನ ಡಯಾಲಿಸಿಸ್ ಕೇಂದ್ರದಲ್ಲಿ ನಾಲ್ಕು ಡಯಾಲಿಸಿಸ್ ಯಂತ್ರಗಳಿದ್ದು, ಸರ್ಕಾರದ ಸಹಕಾರದೊಂದಿಗೆ ಅತಿ ಕಡಿಮೆ ವೆಚ್ಚದಲ್ಲಿ ತಾಲೂಕು ಕೇಂದ್ರದಲ್ಲಿ ಡಯಾಲಿಸಿಸ್ ಸೇವೆ ಒದಗಲಿದೆ ಎಂದ ಶಾಸಕ ಎಚ್.ಡಿ.ರೇವಣ್ಣ, ಸಾರ್ವಜನಿಕ ಆಸ್ಪತ್ರೆ ಮುಂಭಾಗದಲ್ಲಿನ ಕಣ್ಣಿನ ಆಸ್ಪತ್ರೆ ಆವರಣದಲ್ಲಿ 3.50 ಕೋಟಿ ರು. ವೆಚ್ಚದಲ್ಲಿ ಹೆರಿಗೆ ಆಸ್ಪತ್ರೆ ಹಾಗೂ ಮಕ್ಕಳ ಆಸ್ಪತ್ರೆಯನ್ನು ಪ್ರತ್ಯೇಕವಾಗಿ ನಿರ್ಮಿಸುವ ಕಾಮಗಾರಿ ಶೀಘ್ರದಲ್ಲಿಯೇ ಆರಂಭಗೊಳ್ಳಲಿದೆ ಎಂದು ತಿಳಿಸಿದರು.
ನಂತರ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಡಯಾಲಿಸಿಸ್ ಕೇಂದ್ರ ಹಾಗೂ ಆಸ್ಪತ್ರೆಯ ವಿವಿಧ ವಿಭಾಗಗಳನ್ನು ವೀಕ್ಷಿಸಿ ಅಲ್ಲಿನ ಸೇವೆ ಹಾಗೂ ವೈದ್ಯರು ಹಾಗೂ ಸಿಬ್ಬಂದಿ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಸಾರ್ವಜನಿಕ ಆಸ್ಪತ್ರೆಯಿಂದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಶಾಸಕ ಎಚ್.ಡಿ.ರೇವಣ್ಣರನ್ನು ಗೌರವಿಸಲಾಯಿತು. ಹಾಗೂ ಉತ್ತಮ ಸೇವಾ ಕಾರ್ಯವನ್ನು ಸಲ್ಲಿಸುತ್ತಿರುವ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಟಿ.ಎಸ್.ಲಕ್ಷ್ಮೀಕಾಂತ್ ಅವರನ್ನು ಆಸ್ಪತ್ರೆಯ ಎಲ್ಲಾ ವೈದ್ಯರು ಹಾಗೂ ಸಿಬ್ಬಂದಿ ಪರವಾಗಿ ಶಾಸಕ ಎಚ್.ಡಿ.ರೇವಣ್ಣ ಸನ್ಮಾನಿಸಿದರು.
ತಾಪಂ ಅಧ್ಯಕ್ಷೆ ಪುಷ್ಪಾಗೌಡೇಗೌಡ, ಉಪಾಧ್ಯಕ್ಷ ನಂಜುಂಡಪ್ಪ, ಪುರಸಭಾಧ್ಯಕ್ಷೆ ಎಚ್.ಆರ್.ಕಲಾವತಿ, ಪುರಸಭೆ ಮಾಜಿ ಅಧ್ಯಕ್ಷ ನವಾಬ್‌ಖಾನ್, ಪುರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಟಿ.ಮಲ್ಲೇಶ್, ಜಿಪಂ ಸದಸ್ಯೆ ಗೌರಮ್ಮ, ಆಸ್ಪತ್ರೆಯ ವೈದ್ಯರಾದ ಡಾ.ವಿಜಯಕುಮಾರ್, ಡಾ.ರಾಜೇಶ್, ಡಾ.ದಿನೇಶ್, ಡಾ.ಕೆ.ಶ್ರೀನಿವಾಸಮೂರ್ತಿ, ಡಾ.ಡಿ.ನಟರಾಜ್, ಡಾ.ಮುರಳಿ, ಮಹಿಳಾ ವೈದ್ಯರು, ಸಿಬ್ಬಂದಿ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.