ಕಾನೂನು ಪರಿಪಾಲನೆ ಅತ್ಯಗತ್ಯ'
ಹೊಳೆನರಸೀಪುರ: ಕಾನೂನಿನ ಪಾಲನೆ ಕೇವಲ ಇಂದಿನ ನಮ್ಮ ಸಮಾಜಕ್ಕಷ್ಟೇ ಅಲ್ಲ, ಮುಂದಿನ ಪೀಳಿಗೆಯ ನೆಮ್ಮದಿಗಾಗಿಯೂ ಕಾನೂನಿನ ಪರಿಪಾಲನೆಯ ಅಗತ್ಯವಿದೆ. ಕಾನೂನು ಗೌರವಿಸುವವರನ್ನು ಕಾನೂನು ರಕ್ಷಿಸುತ್ತದೆ ಎಂದು ಇಲ್ಲಿನ ಜೆಎಂಎಫ್ಸಿ ನ್ಯಾಯಾಲಯದ ಹಿರಿಯ ನ್ಯಾಯಾಧೀಶ ಡಿ.ಕಂಬೇಗೌಡ ತಿಳಿಸಿದರು.
ತಾಲೂಕಿನ ಪಡುವಲಹಿಪ್ಪೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವತಿಯಿಂದ ಚಾಕೇನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿರುವ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ವಾರ್ಷಿಕ ಶಿಬಿರದಲ್ಲಿ ಮಕ್ಕಳ ದಿನಾಚರಣೆ ಮತ್ತು ಕಾನೂನು ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದುರ್ಬಲರ ನ್ಯಾಯ ರಕ್ಷೆಯು ಕಾನೂನು ಸೇವಾ ಪ್ರಾಧಿಕಾರದ ಮೊದಲ ಆದ್ಯತೆಯಾಗಿದ್ದು, ಪ್ರಾಧಿಕಾರದ ಮೂಲಕ ಉಚಿತ ಕಾನೂನು ಸೇವೆಯು ಅಬಲರನ್ನು ಸಬಲರನ್ನಾಗಿ ಮಾಡುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ ಎಂದ ಅವರು, ಜನತಾ ನ್ಯಾಯಾಲಯಗಳ ಮೂಲಕ ಅರ್ಹರು ನ್ಯಾಯವನ್ನು ಅತ್ಯಂತ ಕಡಿಮೆ ಖರ್ಚಿನಲ್ಲಿ, ಕಡಿಮೆ ಸಮಯದಲ್ಲಿ ಮತ್ತು ಸುಲಭವಾಗಿ ಪಡೆಯಬಹುದಾಗಿದೆ ಎಂದರಲ್ಲದೇ, ತಪ್ಪು ಮಾಡಿ ತನಗೆ ಕಾನೂನಿನ ಅರಿವಿಲ್ಲ ಎಂದರೆ, ದೇಶದ ಯಾವ ಕಾನೂನು ತಪ್ಪಿತಸ್ಥನನ್ನು ರಕ್ಷಿಸಲಾರದು ಎಂದು ಹೇಳಿದರು.
ಪರಿಸರ ಸಂರಕ್ಷಣೆಯ ಕಾಯ್ದೆಯ ಬಗ್ಗೆ ಮಾಹಿತಿ ನೀಡಿದ ವಕೀಲರಾದ ಎಚ್.ಎಸ್.ಅರುಣಕುಮಾರ್ ಅವರು ಸಾಮಾಜಿಕ ಪರಿಸರ ಮತ್ತು ನೆಲ-ಜಲ ಸಂರಕ್ಷಿಸುವುದು ನಮ್ಮೆಲ್ಲರ ಗುರುತರವಾದ ಹೊಣೆಯಾಗಿದ್ದು, ಪರಿಸರದ ಮೇಲಿನ ಯಾವುದೇ ಹಾನಿಯನ್ನೂ ಕಾನೂನು ಕ್ಷಮಿಸಲಾರದು, ಅಲ್ಲದೇ ನಮ್ಮ ಪರಿಸರವನ್ನು ಮುಂದಿನ ಜನಾಂಗಕ್ಕೂ ಕಲುಷಿತಮುಕ್ತವಾಗಿ ಉಳಿಸಬೇಕಾಗಿರುವ ಕಾರಣದಿಂದಾಗಿಯೇ ಕಾನೂನಿನಲ್ಲಿ ಪರಿಸರ ಸಂರಕ್ಷಣೆಯ ಕುರಿತಂತೆ ಪ್ರಬಲವಾದ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ ಎಂದರು.
2010ರ ಶೈಕ್ಷಣಿಕ ಹಕ್ಕು ಕಾಯ್ದೆಯ ಕುರಿತಂತೆ ಮಾತನಾಡಿದ ವಕೀಲ ಕೆ.ಆರ್.ಜಯಪ್ರಕಾಶ್ ಅವರು, ಭಾರತದ 5ರಿಂದ 14 ವರ್ಷದ ವಯಸ್ಸಿನ ಎಲ್ಲಾ ಮಕ್ಕಳಿಗೂ ತಾರತಮ್ಯವಿಲ್ಲದೇ ಗುಣಾತ್ಮಕ ಶಿಕ್ಷಣ ನೀಡಬೇಕು ಎಂಬುದರ ಕುರಿತಂತೆ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ ಎಂದರು.
ಅಧ್ಯಕ್ಷತೆ ಕಾಲೇಜಿನ ಪ್ರಾಂಶುಪಾಲ ಕೆ.ಎಚ್.ಯೋಗಣ್ಣ ವಹಿಸಿದ್ದರು. ಶಿಬಿರಾಧಿಕಾರಿ ಕೆ.ಸಿ.ಸತೀಶ್ ಸ್ವಾಗತಿಸಿದರು. ಶಿಬಿರ ವಿದ್ಯಾರ್ಥಿ ಜಿ.ಬಿ.ಪುರುಷೋತ್ತಮ ವಂದಿಸಿದರು.
ಚಾಕೇನಹಳ್ಳಿಯಲ್ಲಿ ಆರೋಗ್ಯ ಉಚಿತ ತಪಾಸಣಾ ಶಿಬಿರ
ಕ.ಪ್ರ.ವಾರ್ತೆ ಹೊಳೆನರಸೀಪುರ ನ. 20
ತಾಲೂಕಿನ ಚಾಕೇನಹಳ್ಳಿ ಗ್ರಾಮದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕ, ಸರ್ಕಾರಿ ಪದವಿ ಪೂರ್ವ ಕಾಲೇಜು ಪಡುವಲಹಿಪ್ಪೆ ಹಾಗೂ ಹೊಳೆನರಸೀಪುರ ರೋಟರಿ ಸಂಸ್ಥೆಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿತ್ತು.
ಹೊಳೆನರಸೀಪುರ ರೋಟರಿ ಸಂಸ್ಥೆ ಅಧ್ಯಕ್ಷ ಆರ್.ಬಿ.ಪುಟ್ಟೇಗೌಡ ಅಧ್ಯಕ್ಷತೆ ವಹಿಸಿದ್ದು, ಗ್ರಾಮೀಣ ಪ್ರದೇಶ ಚಾಕೇನಹಳ್ಳಿ ಗ್ರಾಮ ಪಟ್ಟಣದಿಂದ ದೂರವಿದ್ದರೂ ಪ್ರಸ್ತುತ ಅಪರಾಧಗಳನ್ನು ತಡೆಗಟ್ಟುವಲ್ಲಿ ಸಾರ್ವಜನಿಕರು ಮತ್ತು ಪೊಲೀಸ್ ಇಲಾಖೆಯ ಪಾತ್ರ, ಪರಿಸರ ರಕ್ಷಣೆ ಕಾಯ್ದೆ, ಶೈಕ್ಷಣಿಕ ಹಕ್ಕು ಕಾಯ್ದೆ, ಅರಣ್ಯ ರಕ್ಷಣೆಯಲ್ಲಿ ಸಾರ್ವಜನಿಕರ ಪಾತ್ರ, ಹೀಗೆ ಅನೇಕ ವಿಷಯಗಳ ಬಗ್ಗೆ ಅರಿವು ಮೂಡಿಸುವ ಪ್ರಯತ್ನವನ್ನು ರಾಷ್ಟ್ರೀಯ ಸೇವಾ ಯೋಜನೆ ಘಟಕ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.
ಭಾರತೀಯ ರೆಡ್ಕ್ರಾಸ್ ತಾಲೂಕು ಘಟಕ ಅಧ್ಯಕ್ಷ ರೊ ಡಾ.ಕೆ.ಸಿ.ಮರಿಯಪ್ಪ ಮಾತನಾಡಿ ಇಂತಹ ಶಿಬಿರದ ಉಪಯೋಗವನ್ನು ಇನ್ನೂ ಹೆಚ್ಚು ಜನರು ಪಡೆಯಬೇಕೆಂದರು.
ಸಮಾರಂಭದಲ್ಲಿ ಚಾಕೇನಹಳ್ಳಿ ಪ್ರಾ.ಆ.ಕೇಂದ್ರದ ವೈದ್ಯಾಧಿಕಾರಿ ಡಾ.ಜಿ.ಆರ್.ಚಂದ್ರಶೇಖರ್ ಆರೋಗ್ಯ ತಪಾಸಣೆ ಮಾಡಿದರು. ಪಟ್ಟಣದ ಬಾಲಾಜಿ ಮೆಡಿಕಲ್ಸ್ ಹಾಗೂ ರೋ ಎನ್.ಆರ್. ವಿಜಯಕುಮಾರ್ ಶಿಬಿರದ ಉಪಯೋಗಕ್ಕಾಗಿ ಔಷಧಿಗಳನ್ನು ಉಚಿತವಾಗಿ ನೀಡಿದರು.
ಶಿಕ್ಷಕ ಬಾ.ನಂ.ಲೋಕೇಶ್ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

