ಕುಲದ ನೆಲೆಯಾವುದು.. ಬಲ್ಲಿರಾ
ಕ.ಪ್ರ.ವಾರ್ತೆ ಹಾಸನ ನ. 20
ಕುಲದ ನೆಲೆಯಾವುದು.. ಬಲ್ಲಿರಾ ಎಂದು ಪ್ರಶ್ನಿಸುವ ಮೂಲಕ ಮಾನವರನ್ನು ಆತ್ಮಾಲೋಕನಕ್ಕೆ ಹಚ್ಚಿದ ಸಂತ ಶ್ರೇಷ್ಠ ಕನಕದಾಸರ ಜಯಂತಿಯನ್ನು ಬುಧವಾರ ಜಿಲ್ಲಾದ್ಯಂತ ಸಡಗರ, ಸಂಭ್ರಮದಿಂದ ಆಚರಿಸಲಾಯಿತು. ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಮರ್ಪಿಸಲಾಯಿತು.
ಹಾಸನ, ಹೊಳೆನರಸೀಪುರ, ಅರಕಲಗೂಡು, ಚನ್ನರಾಯಪಟ್ಟಣ, ಆಲೂರು, ಬೇಲೂರು, ಸಕಲೇಶಪುರ ಮತ್ತು ಅರಸೀಕೆರೆ ತಾಲೂಕುಗಳಲ್ಲಿ ಕನಕ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕನಕ ಜಯಂತಿ ಆಚರಣಾ ಸಮಿತಿಯ ಸಂಯುಕ್ತಾಶ್ರಯದಲ್ಲಿ ನಡೆದ ಕನಕದಾಸರ ಜಯಂತಿ ಸಮಾರಂಭವನ್ನು ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಅಂಬಿಕಾ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಮಾಜದಲ್ಲಿದ್ದ ಜಾತಿ ಜಾತಿಗಳ ನಡುವಿನ ತಾರತಮ್ಯ ಹಾಗೂ ಜಾತಿ ವ್ಯವಸ್ಥೆಯ ನಿರ್ಮೂಲನೆಗೆ ತಮ್ಮ ಮೊನಚು ಕೀರ್ತನೆಗಳಿಂದ ಅರಿವು ಉಂಟು ಮಾಡಿ ಆ ಮೂಲಕ ಜಾತಿಯತೆ ಹೋಗಲಾಡಿಸಲು ಶ್ರಮಿಸಿದ ಮಹಾನ್ ಸಂತ ಶ್ರೇಷ್ಠ ಕನಕರು ಎಂದು ಬಣ್ಣಿಸಿದರು.
ಕನಕದಾಸರು ಕೆಳವರ್ಗದಲ್ಲಿ ಜನಿಸಿದರೂ ಸಮಾಜದಲ್ಲಿನ ಜಾತಿ ವ್ಯವಸ್ಥೆಯನ್ನು ತೊಡೆದು ಹಾಕಿ ಎಲ್ಲರು ಒಂದೇ ಜಾತಿ ಎಂದು ಸಂದೇಶ ಸಾರುವ ಮೂಲಕ ಕೀಳರಿಮೆಯನ್ನು ತೊಡೆದು ಹಾಕಿ ಸಮಾನತೆಯನ್ನು ಎತ್ತಿ ಹಿಡಿಯಲು ಶ್ರಮಿಸಿದವರು ಎಂದು ಹೇಳಿದರು.
ತತ್ವ ಎಷ್ಟರ ಮಟ್ಟಿಗೆ ಅನುಸರಿಸುತ್ತೇವೆ: ಒಂದೆಡೆ ನೆಲೆ ನಿಲ್ಲದೆ ಎಲ್ಲಾ ಕಡೆಗಳಲ್ಲಿ ಸಂಚರಿಸಿ ತಮ್ಮ ಕೀರ್ತನೆಗಳ ಮೂಲಕ ಜನರನ್ನು ಎಚ್ಚರಿಸುವಂತಹ ಕಾರ್ಯ ಮಾಡಿದರು. ಇಂಥವರ ಆದರ್ಶ ತತ್ವಗಳನ್ನು ನಾವೆಲ್ಲ ಮೈಗೂಡಿಸಿಕೊಳ್ಳಬೇಕು ಎಂದು ನುಡಿದರು.
ಶಾಸಕ ಎಚ್.ಎಸ್. ಪ್ರಕಾಶ್ ಮಾತನಾಡಿ, ಯಾವುದೇ ನಾಯಕರ ಬಗ್ಗೆ ನಾವು ಮಾತನಾಡುವ ಮುನ್ನಾ ಅವರ ತತ್ವ ಸಿದ್ದಾಂತಗಳನ್ನು ಎಷ್ಟರ ಮಟ್ಟಿಗೆ ಅನುಸರಿಸುತ್ತೇವೆ ಎಂದು ಚಿಂತಿಸಿ ನಂತರ ಮಾತನಾಡಬೇಕು. ಕನಕದಾಸರು ಸಮಾಜಕ್ಕೆ ವಿಶಿಷ್ಟ ಕೊಡುಗೆಯನ್ನು ನೀಡಿದ್ದಾರೆ ಎಂದು ಹೇಳಿದರು.
ಬಸವಣ್ಣನವರು ಸಹಾ ಸಮಾಜದಲ್ಲಿನ ಅಂಕುಡೊಂಕುಗಳನ್ನು ಹೋಗಲಾಡಿಸಲು ಶ್ರಮಿಸಿದರು. ಅವರ ಕಲ್ಪನೆಗಳು ಪ್ರಸ್ತುತ ರಾಜಕಾರಣಿಗಳಿಗೆ ಆದರ್ಶವಾಗಿದೆ. ಪ್ರಸ್ತುತ ಮಠಾಧೀಶರು ಪ್ರತಿನಿತ್ಯ ಕಚ್ಚಾಡುತ್ತಿರುವುದು ಎಲ್ಲರಲ್ಲಿ ಬೇಸರ ತಂದಿದೆ. ಮಹಾನ್ ಸಾಧು ಸಂತರ ತತ್ವ ಸಿದ್ದಾಂತಗಳನ್ನು ಸರಿಯಾಗಿ ಪಾಲಿಸಿದರೆ ಸಮಾಜದಲ್ಲಿ ಪೊಲೀಸ್ ಮತ್ತು ನ್ಯಾಯಾಲಯದ ಅವಶ್ಯಕತೆಯೇ ಇರದು ಎಂದು ಪ್ರತಿಪಾದಿಸಿದರು.
ಜಾತಿ ವ್ಯವಸ್ಥೆಯಿಂದ ಹೊರಬರಲು ಸಾಧ್ಯವಾಗಿಲ್ಲ: ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ ಮಾತನಾಡಿ, ಇಂದಿನ ಜಾತಿ ವ್ಯವಸ್ಥೆಯಿಂದ ಸಮಾಜ ಹೊರಬರಲು ಸಾಧ್ಯವಾಗಿಲ್ಲ. ಜಾತಿ ಸಂಘರ್ಷ ಹಲವಾರು ವರ್ಷಗಳು ಮುಂದುವರಿದಿದೆ. ಮೊದಲು ಈ ಜಾತಿ ವ್ಯವಸ್ಥೆಯಿಂದ ಹೊರ ಬರಬೇಕಾದ ಅನಿವಾರ್ಯತೆ ಇದೆ ಎಂದರು.
ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಪಟೇಲ್ ಶಿವಪ್ಪ ಮಾತನಾಡಿ, ಕನಕದಾಸರು ಕೇವಲ ಒಂದು ಸಮುದಾಯಕ್ಕೆ ಸೀಮಿತವಾದವರಲ್ಲ. ಅವರ ಕೀರ್ತನೆಗಳು, ತತ್ವ ಸಿದ್ದಾಂತಗಳು ಎಲ್ಲಾ ಸಮುದಾಯಕ್ಕೆ ಮೀಸಲಾಗಿದೆ. ಆದರೆ ಅವರ ಜಯಂತಿ ಅಚರಣೆ ಮಾತ್ರ ಕೇವಲ ಒಂದೇ ಸಮುದಾಯ ಆಚರಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅದನ್ನು ತೊಡೆದು ಹಾಕಿ ಎಲ್ಲಾ ಸಮುದಾಯಗಳು ಅವರ ಜಯಂತಿ ಆಚರಿಸುವಂತಾಗಬೇಕು ಎಂದು ಹೇಳಿದರು.
ಸರ್ಕಾರಿ ಕಲಾ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ಹಂಪನಹಳ್ಳಿ ತಿಮ್ಮೇಗೌಡ ವಿಶೇಷ ಉಪನ್ಯಾಸ ನೀಡಿ, ಕನಕದಾಸರು ಲೋಕ ಸುತ್ತಿದ ಮಹಾನ್ ನಾಯಕರು. ಅವರು ರಾಮಧ್ಯಾನ ಚರಿತ್ರೆ ಎಂಬ ಮಹಾಕಾವ್ಯವನ್ನು ರಚಿಸುವ ಮೂಲಕ ಸಮಾಜದಲ್ಲಿನ ಅಜ್ಞಾನ, ಮೌಢ್ಯತೆ ವಿರುದ್ಧ ಬೆಳಕು ಚೆಲ್ಲಿದರು.
ಅವರು ಸಮಾಜದಲ್ಲಿನ ಕೆಳ ಮತ್ತು ಮೇಲ್ವರ್ಗಗಳಲ್ಲಿ ಅಸಮಾನತೆಯನ್ನು ಹೋಗಲಾಡಿಸಲು ತಮ್ಮ ಕೀರ್ತನೆಯನ್ನು ಅಸ್ತ್ರವನ್ನಾಗಿಸಿಕೊಂಡು ಸಂದೇಶ ಸಾರಿದರು. ಬುದ್ದ, ಬಸವಣ್ಣ, ಕನಕದಾಸರು ನಂತರ ಜ್ಯೋತಿಬಾಪುಲೆ, ನಾರಾಯಣ ಗುರು, ರಾಮಸ್ವಾಮಿ, ಗಾಂಧಿಜೀ, ಅಂಬೇಡ್ಕರ್ ಅವರು ಸಹ ಜಾತಿ ವ್ಯವಸ್ಥೆ ಹಾಗೂ ಅಸಮಾನತೆಯ ವಿರುದ್ಧ ಹೋರಾಟ ನಡೆಸಿದಂತಹ ಮಹಾನ್ ನಾಯಕರು ಎಂದು ತಿಳಿಸಿದರು.
ಕಾರ್ಯಕ್ರಮಕ್ಕೂ ಮೊದಲು ಹಾಸನ ಜಿಲ್ಲಾಧಿಕಾರಿ ಕಚೇರಿ ಬಳಿಯಿಂದ ಹಾಸನಾಂಬ ಕಲಾಕ್ಷೇತ್ರದ ವರೆಗೆ ಕನಕದಾಸರ ಭಾವಚಿತ್ರದೊಂದಿಗೆ ಮೆರವಣಿಗೆ ನಡೆಯಿತು.
ಮೆರವಣಿಗೆಯಲ್ಲಿ ಪೂರ್ಣಕುಂಭ, ನಂಧಿ ಧ್ವಜ ಹಾಗೂ ಚಿಟ್ಟ ಮೇಳ ಕಲೆಗಳು ಭಾಗವಹಿಸಿದ್ದವು. ಕನಕದಾಸರ ಜಯಂತಿ ಶಾಲಾ ಕಾಲೇಜುಗಳ ಮಕ್ಕಳಿಗೆ ಆಯೋಜಿಸಲಾಗಿದ್ದ ನಾನಾ ಸರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಬಹುಮಾನ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.
ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್, ಜಿಲ್ಲಾ ಎಸ್ಪಿ ರವಿ ಡಿ. ಚನ್ನಣ್ಣವರ, ಜಿಪಂ ಸಿಇಓ ಉಪೇಂದ್ರ ಪ್ರತಾಪಸಿಂಗ್, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ನವೀಲೆ ಅಣ್ಣಪ್ಪ, ಅಪರ ಜಿಲ್ಲಾಧಿಕಾರಿ ಡಾ. ಎಚ್.ಎನ್. ಗೋಪಾಲಕೃಷ್ಣ, ಹಾಸನ ಉಪ ವಿಭಾಗಾಧಿಕಾರಿ ಶರತ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಶ್ಮಿ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

