ಹಾಸನ

ಮೂರ್ನಾಲ್ಕು ದಿನದಲ್ಲಿ ಒಂಟಿ ಸಲಗ ಸೆರೆ: ಡಿಎಫ್‌ಓ ಲಕ್ಷ್ಮಣ್

Published On :

ಕ.ಪ್ರ.ವಾರ್ತೆ ಹಾಸನ ನ. 21
ಕಳೆದ ಮೂರು ದಿನಗಳಲ್ಲಿ ಇಬ್ಬರ ಪ್ರಾಣ ತೆಗೆದಿರುವ ಒಂಟಿ ಸಲಗವನ್ನು ಗುರುತಿಸಲಾಗಿದೆ. ಕೇವಲ 2 ಕಿ.ಮೀ ದೂರದಲ್ಲಿ ಸಲಗ ಬೀಡು ಬಿಟ್ಟಿದ್ದು, ಈ ಬಗ್ಗೆ ಸದಾ ನಿಗಾ ಇರಿಸಲಾಗಿದೆ ಎಂದು ಅರಣ್ಯ ಉಪ ಸಂರಕ್ಷಣಾಧಿಕಾರಿ ಲಕ್ಷ್ಮಣ್ ತಿಳಿಸಿದ್ದಾರೆ.
ಹಾಸನ ಮತ್ತು ಕೊಡಗು ಜಿಲ್ಲೆ ಗಡಿಭಾಗದ ಮಾಗಡಿಹಳ್ಳಿ ಗ್ರಾಮ ಸಮೀಪ ಕಾಡಾನೆಗಳನ್ನು ಹಿಡಿಯಲು ಆರಂಭಿಸಿರುವ ಕ್ಯಾಂಪ್ ಪರಿಶೀಲನೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನೂ  ಮೂರ್ನಾಲ್ಕು ದಿನಗಳಲ್ಲಿ ಒಂಟಿ ಸಲಗ ಹಿಡಿಯುವ ನಿರೀಕ್ಷೆ ಇದೆ. ಎಲ್ಲಾ ಆನೆಗಳನ್ನು ಒಂದೇ ಸಲಕ್ಕೆ ಹಿಡಿಯಲು ಸಾಧ್ಯವಿಲ್ಲ. ಮೊದಲು ಒಂಟಿ ಸಲಗಗಳನ್ನು, ಆ ನಂತರ ಕುಟುಂಬವಾಗಿರುವ ಆನೆಗಳನ್ನು ಹಿಡಿದು ಸಾಗಿಸಲಾಗುವುದು ಎಂದು ಹೇಳಿದರು.
ಆನೆಗಳನ್ನು ಹಿಡಿಯಲು ಅರಣ್ಯ ಇಲಾಖೆ ಎಲ್ಲಾ ಸಿದ್ದತೆ ಮಾಡಿಕೊಂಡಿದೆ. ಕಾಡಾನೆಗಳನ್ನು ಹಿಡಿಯಲು ನುರಿತ ಆನೆಗಳನ್ನು ತರಿಸಿಕೊಳ್ಳಲಾಗಿದೆ. ಅರಿವಳಿಕೆ ತಜ್ಞರು, ಶಾರ್ಪ್ ಶೂಟರ್‌ಗಳಿದ್ದು, ಜಿಲ್ಲೆಯ ಆಲೂರು ಮತ್ತು ಸಕಲೇಶಪುರ ತಾಲೂಕಿನಲ್ಲಿ ಬಹು ದೊಡ್ಡ ಸಮಸ್ಯೆಗಳಲ್ಲೊಂದಾಗಿರುವ ಕಾಡಾನೆಗಳನ್ನು ಹಿಡಿದು ಸಾಗಿಸುವ ಕಾರ್ಯಾಚರಣೆ  ಪ್ರಾರಂಭವಾಗಿದೆ. ಹೈಕೋರ್ಟ್ ಆದೇಶ ಮೇರೆಗೆ ಈ ಕಾರ್ಯಾಚರಣೆ ನಡೆಸಲಾಗುತ್ತಿದ್ದು 25ಕ್ಕೂ ಹೆಚ್ಚು ಆನೆಗಳನ್ನು ಇಲ್ಲಿಂದ ಸ್ಥಳಾಂತರಿಸಲಾಗುವುದು ಎಂದು ವಿವರಿಸಿದರು.
ಶಾಸಕ ಎಚ್.ಕೆ. ಕುಮಾರಸ್ವಾಮಿ, ಜಿಲ್ಲಾಧಿಕಾರಿ, ಅನ್ಬುಕುಮಾರ್, ಜಿಲ್ಲಾ ಎಸ್ಪಿ ರವಿ ಚನ್ನಣ್ಣನವರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಲಕ್ಷ್ಮಣ್ ಇತರರು ಆನೆ ಶಿಬಿರಕ್ಕೆ ಭೇಟಿ ನೀಡಿ ಸಿದ್ಧತೆಗಳನ್ನು ಪರಿಶೀಲಿಸಿದರು.
ಸುದ್ದಿಗಾರರೊಂದಿಗೆ ಜಿಲ್ಲಾಧಿಕಾರಿ ಅನ್ಬುಕುಮಾರ್ ಮಾತನಾಡಿ, ಸುಪ್ರಿಂಕೋರ್ಟ್ ಸೂಚನೆ ಮೇರೆಗೆ ಸಕಲೇಶಪುರ-ಆಲೂರು ಭಾಗದಲ್ಲಿನ ಕಾಡಾನೆಗಳನ್ನು ಹಿಡಿದು ಸಾಕಾನೆ ಶಿಬಿರಕ್ಕೆ ಸಾಗಿಸುವ ಕಾರ್ಯಚರಣೆ ಇಂದಿನಿಂದ ಪ್ರಾರಂಭವಾಗಿದೆ. ಮಾನವ ಪ್ರಾಣ ಹಾನಿ ಮಾಡುತಿರುವ ಒಂಟಿ ಸಲಗ ಹಿಡಿಯಲು ಮೊದಲ ಆದ್ಯತೆ ನೀಡಲಾಗುವುದು. ಆನಂತರ ಹಂತ ಹಂತವಾಗಿ ಇತರ ಆನೆಗಳನ್ನು ಹಿಡಿಯಲಾಗುವುದು ಎಂದು ತಿಳಿಸಿದರು.
ಕಾರ್ಯಾಚರಣೆ ವೇಳೆ ಆನೆಗಳ ಸುರಕ್ಷತೆಯೂ ಮುಖ್ಯವಾಗಿದೆ. ಅದಕ್ಕಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಸುತ್ತ ಮುತ್ತಲ ಗ್ರಾಮಸ್ತರು ಎಚ್ಚರಿಕೆಯಿಂದ ಇರುವುದರ ಜೊತೆಗೆ ಆನೆಗಳಿಗೆ ಯಾವುದೇ ರೀತಿಯಲ್ಲೂ ಗಾಬರಿಯಾಗದಂತೆ ಕಾಳಜಿ ವಹಿಸ ಬೇಕು ಹಾಗೂ ಅರಣ್ಯ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಶಾಸಕ ಎಚ್.ಕೆ.ಕುಮಾರಸ್ವಾಮಿ ಮಾತನಾಡಿ, ಆಲೂರು ಸಕಲೇಶಪುರ ತಾಲೂಕಿನಲ್ಲಿ ಆನೆಗಳ ಹಾವಳಿಯಿಂದ ಜನರು ತತ್ತರಿಸಿ ಹೋಗಿದ್ದಾರೆ. ನಿರಂತರ ಪ್ರಾಣ ಹಾನಿ ಬೆಲೆ ಹಾನಿ ಸ್ಥಳೀಯರ ಬದುಕನ್ನು ದುಸ್ಥರವಾಗಿಸಿದೆ. ಕಳೆದ ಮೂರು ದಿನಗಳಲ್ಲಿ ಇಬ್ಬರು ಆನೆ ದಾಳಿಗೆ ಬಲಿಯಾಗಿದ್ದಾರೆ.ಈಗ ಕಾರ್ಯಾಚರಣೆ ಪ್ರಾರಂಭವಾಗಿದೆ. ಆನೆಗಳು ಸ್ಥಳಾಂತರಗೊಂಡಲ್ಲಿ ಸಮಸ್ಯೆ ಬಗೆಹರಿಯಬಹುದೆಂಬ ನಿರೀಕ್ಷೆ ಇದೆ ಎಂದು ಹೇಳಿದರು.
ಅಪರ ಜಿಲಾಧಿಕಾರಿ ಡಾ.ಗೋಪಾಲಕೃಷ್ಣ, ಉಪ ವಿಭಾಗಾಧಿಕಾರಿ ಶರತ್, ಪ್ರೊಬೇಷನರಿ ಐ.ಎ.ಎಸ್. ಅಧಿಕಾರಿ ರಾಮಚಂದ್ರನ್ ತಹಸೀಲ್ದಾರ್ ಶಾರದಾಂಬ, ಪರಿಸರ ಪ್ರೇಮಿ ಹೆಮ್ಮಿಗೆ ಮೋಹನ್ ಇತರರು ಇದ್ದರು.
ಪ್ರತ್ಯಕ್ಷವಾದ ಮರಿಯೊಂದಿಗೆ ತಾಯಿ ಆನೆ: ಜಿಲ್ಲಾಧಿಕಾರಿ ನೇತೃತ್ವದ ತಂಡ ಮಾಗಡಿಹಳ್ಳಿ ಕ್ಯಾಂಪ್‌ನಲ್ಲಿ ಸಾಕಾನೆಗಳನ್ನು ನೋಡಿ ಮಾಹಿತಿ ಪಡೆದು ಸುದ್ದಿಗಾರರೊಂದಿಗೆ ಮಾತನಾಡಿ ಚಹ ಹಿರುತ್ತಿದ್ದಂತೆ ಅತ್ತ ಉಂಬಳಿ ಬೆಟ್ಟದಿಂದ ತಾಯಿ ಆನೆ ಮರಿಯಾನೆಯೊಂದಿಗೆ ಗಂಭೀರವಾಗಿ ಬಂದು ನೀರು ಕುಡಿದು ಸಾವಕಾಶವಾಗಿ ತೆರಳಿತು. ಒಮ್ಮೆ ಭಯಗೊಂಡು ಹಿಂದಕ್ಕೆ ಓಡಿ ಸ್ವಲ್ಪ ಸಮಯ ಬಿಟ್ಟು ತಾಯಿ ನೀಡಿದ ಧೈರ್ಯದಿಂದ ಬಂದು ನೀರು ಕುಡಿದು ತಾಯಿಯೊಂದಿಗೆ ಸಾಗಿತು. ಶಾಸಕರು, ಅಧಿಕಾರಿಗಳು ಈ ಅಪರೂಪದ ದೃಶ್ಯ ಕಂಡು ಆನಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.