ಕೀಟನಾಶಕ ಬಳಕೆ ಮುನ್ನ ಎಚ್ಚರಿಕೆ ಅಗತ್ಯ: ಡೀನ್ ಡಾ. ತ್ಯಾಗರಾಜ್
ಕನ್ನಡಪ್ರಭ ವಾರ್ತೆ, ಹಾಸನ, ನ.25
ಕೀಟನಾಶಕ ಮತ್ತು ರೋಗನಾಶಕಗಳನ್ನು ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡುತ್ತಿದ್ದು, ರೈತರು ಇದರ ಬಗ್ಗೆ ಹೆಚ್ಚಿನ ಗಮನವಹಿಸಬೇಕು ಎಂದು ಕೃಷಿ ಕಾಲೇಜಿನ ಪ್ರಭಾರ ಡೀನ್ ಹಾಗೂ ಪ್ರಾಧ್ಯಾಪಕರಾದ ಡಾ. ತ್ಯಾಗರಾಜ್ ತಿಳಿಸಿದರು.
ಕಂದಲಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಸುರಕ್ಷಿತ ಕೀಟನಾಶಕ ಬಳಕೆ ಮತ್ತು ಸಮಗ್ರ ಪೀಡೆ ನಿರ್ವಹಣೆ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೈತರು ಕೀಟನಾಶಕಗಳನ್ನು ಬಳಕೆ ಮಾಡುವ ಮುನ್ನ ಕೃಷಿ ವಿಜ್ಞಾನಿಗಳು ಅಥವಾ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕ ಮಾಡಿ ಸ್ಪಷ್ಟ ಮಾಹಿತಿಯೊಂದಿಗೆ ನಿಗದಿತ ಪ್ರಮಾಣದಲ್ಲಿ, ನಿಗದಿತ ಸಮಯದಲ್ಲಿ ಬಳಕೆ ಮಾಡಬೇಕು. ಕೀಟನಾಶಕಗಳನ್ನು ಕನಿಷ್ಠ 10 ದಿನಗಳ ಅಂತರದಲ್ಲಿ ಸಿಂಪರಣೆ ಮಾಡಬೇಕೆಂದು ತಿಳಿಸಿದರು.
ಕೃಷಿ ನಿರ್ದೇಶಕ ಎಚ್. ಕೆಂಪೇಗೌಡ ಮಾತನಾಡಿ, ಇತ್ತೀಚೆಗೆ ದಿನಗಳಲ್ಲಿ ಆಧುನಿಕ ಕೃಷಿಯಲ್ಲಿ ರಾಸಾಯನಿಕಗಳನ್ನು ಯಥೇಚ್ಛವಾಗಿ ಬಳಕೆಯಿಂದ ಭೂಮಿಯಲ್ಲಿ ಉತ್ಪಾಧನೆಯ ಚೈತನ್ಯ ಕಡಿಮೆಯಾಗುತ್ತಿದೆ. ಸಾವಯವ ಗೊಬ್ಬರಗಳ ಬಳಕೆಯನ್ನು ತೋಟಗಾರಿಕಾ ಬೆಳೆಗಳಿಗೆ ಬಳಸುತ್ತಿದ್ದು, ಆಹಾರ ಬೆಳೆಗಳಲ್ಲಿ ಬಳಸುತ್ತಿಲ್ಲ. ರೈತರು ಆಹಾರ ಬೆಳೆಗಳ ಉತ್ಪಾದನೆಯಲ್ಲಿ ಸಾವಯವ ಗೊಬ್ಬರಗಳನ್ನು ಬಳಕೆ ಮಾಡುವಂತೆ ತಿಳಿಸಿದರು.
ಕೃಷಿ ಉತ್ಪಾದನೆ ವೆಚ್ಚವನ್ನು ಕಡಿಮೆ ಮಾಡಿ ಲಾಭದಾಯಕ ಇಳುವರಿ ಪಡೆಯಲು ಮಾಗಿ ಉಳುಮೆ, ಬೀಜೋಪಚಾರ ಕ್ರಮಗಳನ್ನು ಅಳವಡಿಸಿಕೊಳ್ಳಲು ತಿಳಿಸಿದರು. ಔಷಧಿಗಳನ್ನು ಅವಶ್ಯಕತೆಗಿಂತ ಹೆಚ್ಚು ಬಳಸುತ್ತಿರುವುದರಿಂದ ಆಗುವ ದುಷ್ಪರಿಣಾಮದ ಬಗ್ಗೆ ರೈತರಿಗೆ ಅರಿವು ಮೂಡಿಸಿದರು.
ಕೃಷಿ ಕಾಲೇಜಿನ ರೋಗಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ನಾಗರಾಜ್ ಮಾತನಾಡಿ, ಹಾಸನ ತಾಲೂಕಿನ ಮುಖ್ಯ ಬೆಳೆಗಳಾದ ಮುಸುಕಿನ ಜೋಳ, ಆಲೂಗಡ್ಡೆ, ತೆಂಗು, ಶುಂಠಿ ಬೆಳೆಗಳಲ್ಲಿ ಬರುವ ರೋಗಗಳ ನಿರ್ವಹಣೆ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದರು. ರೋಗಗಳ ನಿಯಂತ್ರಣಕ್ಕಾಗಿ ಒಂದು ಬೆಳೆಯಿಂದ ಇನ್ನೊಂದು ಬೆಳೆಗೆ ಕನಿಷ್ಠ 15-20 ದಿನ ಅಂತರ ನೀಡಬೇಕೆಂದು ತಿಳಿಸಿದರು.
ಇಂಡೋಫಿಲ್ ಕಂಪನಿಯ ಮುಖೇಶ್ ಮಾತನಾಡಿ, ಸುರಕ್ಷಿತ ಕೀಟನಾಶಕಗಳ ಬಗ್ಗೆ ಮಾಹಿತಿ ನೀಡಿ ಸಿಂಪರಣೆ ಮಾಡುವ ಅನುಸರಿಸುವ ಕ್ರಮಗಳನ್ನು ಪ್ರಾತ್ಯಕ್ಷತೆ ಮೂಲಕ ನಡೆಸಿಕೊಟ್ಟರು. ತಾಪಂ ಅಧ್ಯಕ್ಷೆ ರತ್ನ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯ ವಿ.ಎ. ನಂಜುಂಡಸ್ವಾಮಿ ಉದ್ಘಾಟಿಸಿದರು. ತಾಪಂ ಉಪಾಧ್ಯಕ್ಷ ದೇವೇಗೌಡ, ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು, ಕೃಷಿ ಇಲಾಖೆಯ ಅಧಿಕಾರಿಗಳು, ಪ್ರಗತಿಪರ ರೈತರಾದ ರಾಮೇಗೌಡ, ಹನುಮೇಗೌಡ ಇದ್ದರು. ಸಹಾಯಕ ಕೃಷಿ ನಿರ್ದೇಶಕಿ ಕೋಕಿಲ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

