ಕನ್ನಡ ಹಸ್ತಪ್ರತಿ ಸಂರಕ್ಷಣೆಯಾಗಲಿ
ಕಪ್ರ ವಾರ್ತೆ ಚನ್ನರಾಯಪಟ್ಟಣ ನ.26
ಕನ್ನಡ ಭಾಷೆಯ ಹಸ್ತ ಪ್ರತಿಗಳು ವಿದೇಶ ಹಾಗೂ ವಿವಿಧ ರಾಜ್ಯಗಳಲ್ಲಿದ್ದು, ಅವುಗಳನ್ನು ನಮ್ಮ ರಾಜ್ಯಕ್ಕೆ ತರಿಸಿಕೊಳ್ಳುವ ಕಾರ್ಯವನ್ನು ರಾಜ್ಯ ಸರ್ಕಾರ ಮಾಡಬೇಕಾಗಿದೆ ಎಂದು ಮೈಸೂರು ವಿಶ್ವವಿದ್ಯಾಲಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಡಾ.ಎನ್.ಎಂ ತಳವಾರ್ ಒತ್ತಾಯಿಸಿದ್ದಾರೆ.
ತಾಲೂಕಿನ ಶ್ರವಣಬೆಳಗೊಳ ರಾಷ್ಟ್ರೀಯ ಪ್ರಾಕೃತ ಅಧ್ಯಯನ ಸಂಸ್ಥೆ ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾಲಯ ವತಿಯಿಂದ ಏರ್ಪಡಿಸಿದ್ದ ಹಸ್ತಪ್ರತಿ ತರಬೇತಿ ಮತ್ತು ಜಾಗೃತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ತರ್ಜುಮೆಗೆ ಅವಕಾಶವಾಗಲಿ: ಬ್ರಿಟಿಷರು ಹಾಗೂ ವಿವಿಧ ರಾಷ್ಟ್ರದಿಂದ ಆಗಮಿಸಿದ ವಿದ್ವಾಂಸರು ನಮ್ಮ ರಾಜ್ಯದ ಹಸ್ತಪ್ರತಿಗಳನ್ನು ಕೊಂಡೊಯ್ದಿದ್ದಾರೆ.
ಮಾತ್ರವಲ್ಲ, ಹಲವು ರಾಜ್ಯಗಳ ಮ್ಯೂಸಿಯಂಗಳಲ್ಲಿ ಕನ್ನಡದ ಹಸ್ತಪ್ರತಿಗಳಿದ್ದು, ಅವುಗಳನ್ನು ರಾಜ್ಯಕ್ಕೆ ತರಿಸಿಕೊಂಡು ಅವುಗಳನ್ನು ತರ್ಜಿಮೆ ಮಾಡಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.
ಕಳೆದ 20 ವರ್ಷಗಳಿಂದ ರಾಜ್ಯ ಸರ್ಕಾರಕ್ಕೆ ಹಸ್ತಪ್ರತಿಗಳನ್ನು ರಾಜ್ಯಕ್ಕೆ ತರಿಸಿಕೊಳ್ಳುವ ಬಗ್ಗೆ ಒತ್ತಾಯಿಸುತ್ತಿದ್ದರೂ ಸರ್ಕಾರ ಮಾತ್ರ ಈ ನಿಟ್ಚಿನಲ್ಲಿ ಆಸಕ್ತಿ ತೋರದಿರುವುರಿಂದ ಪುರಾತನ ಸಾಹಿತ್ಯವನ್ನು ಇಂದಿನ ಜನತೆಗೆ ನೀಡದೆ ವಂಚಿಸುವಲ್ಲಿ ಸರ್ಕಾರದ ಪಾತ್ರವಿದೆ ಎಂದು ತಿಳಿಸಿದರು.
ಅಮೆರಿಕಕ್ಕಿಂತ ಭಾರತ ಶ್ರೇಷ್ಠ: ಅಮೆರಿಕ ವಿಶ್ವದ ದೊಡ್ಡಣ್ಣ ಎನಿಸಿಕೊಂಡಿದ್ದರೂ ಅದಕ್ಕೆ 500 ವರ್ಷಗಳ ಇತಿಹಾಸವಿಲ್ಲ. ಆದರೆ ತಮ್ಮ ರಾಷ್ಟ್ರಕ್ಕೆ ಸಾವಿರಾರು ವರ್ಷಗಳ ಇತಿಹಾಸವಿರುವುದು ಶಾಸನಗಳು ಹಾಗೂ ಹಸ್ತಪ್ರತಿಗಳಿಂದ ದೊರೆಯುತ್ತದೆ.
ಇಂತಹ ಇತಿಹಾಸ ತಿಳಿಸುವ ಸಾಹಿತ್ಯ ಸಂರಕ್ಷಿಸಿಡಲು ಶ್ರಮಿಸಬೇಕಾಗಿದೆ ಎಂದು ಕಿವಿಮಾತು ಹೇಳಿದರು.
ಇಂದು ತಮ್ಮ ಸಾಹಿತ್ಯ ಕಾಗದದ ಮೇಲೆ ನಡೆಯುತ್ತಿದೆ. ಇದು ಬೇಗ ಹಾಳಾಗುತ್ತದೆ.ಆದರೆ ಹಿಂದಿನ ಕಾಲದಲ್ಲಿ ವಿದ್ವಾಂಸರು ತಮ್ಮ ಸಾಹಿತ್ಯವನ್ನು ಸಾವಿರಾರು ವರ್ಷಗಳು ಸಂದರೂ ಅವುಗಳು ಹಾಳಾಗದಂತೆ ಓಲೆ ಗರಿಗಳು ಹಾಗೂ ತಾಮ್ರದ ಹಾಳೆಗಳ ಮೇಲೆ ಬರೆದಿರುವುದರಿಂದ ತಮಗೆ ಹಿಂದಿನ ಸಾಹಿತ್ಯ ತಿಳಿಯಲು ಅನುಕೂಲಕರವಾಗಿದೆ ಎಂದು ತಿಳಿಸಿದರು.
ಪ್ರತಿಕಾರರು ಮುಖ್ಯ: ಇಂದು ಮುದ್ರಣ ಮಾಧ್ಯಮ ಮುಂದುವರಿದಿದ್ದು, ಕ್ಷಣಾರ್ಧದಲ್ಲಿ ಹಲವು ಪುಟಗಳನ್ನು ಮುದ್ರಿಸುವ ಕಾರ್ಯ ಮಾಡುತ್ತಿದೆ. ಹಿಂದೆ ಸಾಹಿತಿಗಳು ಒಂದು ಪ್ರತಿಯನ್ನು ಮಾತ್ರ ರಚಿಸುತ್ತಿದ್ದರೆ, ಅವುಗಳನ್ನು ಜನತೆಗೆ ತಿಳಿಸುವ ನಿಟ್ಟಿನಲ್ಲಿ ರಾಜ-ಮಹಾರಾಜರು ತಮ್ಮ ಆಸ್ಥಾನದಲ್ಲಿ ಪ್ರತಿಕಾರರನ್ನು ನೇಮಿಸಿಕೊಂಡು ವಿದ್ವಾಂಸರು ರಚಿಸಿದ ಸಾಹಿತ್ಯವನ್ನು ಹಲವು ಪ್ರತಿಗಳಾಗಿ ರಚಿಸಿ ಅವುಗಳನ್ನು ಜನತೆಗೆ ನೀಡುತ್ತಿದ್ದರು. ಆದ್ದರಿಂದಲೇ ಇಂದು ತಾವು ಹಲವು ವಿದ್ವಾಂಸರ ಸಾಹಿತ್ಯವನ್ನು ತಿಳಿಯಲು ಸಾಧ್ಯವಾಗಿದೆ ಎಂದು ತಿಳಿಸಿದರು.
ಅಂದು ರಾಜ-ಮಹಾರಾಜರು ಮಾಡುತ್ತಿದ್ದ ಕೆಲಸವನ್ನು ಹಂಪಿ ವಿಶ್ವವಿದ್ಯಾನಿಲಯ ಹಾಗೂ ಶ್ರವಣಬೆಳಗೊಳದ ಪ್ರಾಕೃತ ಅಧ್ಯಯನ ಹಾಗೂ ಸಂಶೋಧನಾ ಸಂಸ್ಥೆ ಮಾಡುತ್ತಿದ್ದು, ಇಂತಹ ಕಾರ್ಯ ಮಾಡುತ್ತಿರುವ ಸಂಸ್ಥೆಗಳಿಗೆ ಸರ್ಕಾರ ಎಲ್ಲ ರೀತಿಯ ಸಹಕಾರ ನೀಡಬೇಕಾಗಿದೆ ಎಂದು ಒತ್ತಾಯಿಸಿದರು.
ಬ್ರಿಟಿಷರನ್ನು ಮೆಚ್ಚಬೇಕು!: ಹಲವು ಮನೆಗಳು, ಅರಮನೆಗಳು ಗುರುಕುಲಗಳಲ್ಲಿದ್ದ ಹಸ್ತಪ್ರತಿಗಳನ್ನು ಸಂಗ್ರಹಿಸಿ ಅವುಗಳಲ್ಲಿನ ಸಾರವನ್ನು ಬ್ರಿಟಿಷ್ ವಿದ್ವಾಂಸರು ನಾಡಿಗೆ ನೀಡುವ ಕಾರ್ಯವನ್ನು ಮಾಡಿದ್ದಾರೆ.
ಮಾತ್ರವಲ್ಲ, ಈ ನಿಟ್ಟಿನಲ್ಲಿ ಅವುಗಳ ಸಂರಕ್ಷಣೆಗೆ ಹೆಚ್ಚು ಒತ್ತು ನೀಡಿದರ ಹಿನ್ನಲೆಯಲ್ಲಿ ತಾವಿಂದು ಹಲವು ಸಾಹಿತ್ಯದ ಹಸ್ತಪ್ರತಿಗಳನ್ನು ನೋಡಬಹುದಾಗಿದೆ ಎಂದು ತಿಳಿಸಿದರು.
ಸರ್ಕಾರ ಶ್ರಮಿಸಲಿ: ಇಂತಹ ಕಾರ್ಯ ಮಾಡುವ ಸಂದರ್ಭದಲ್ಲಿ ಬ್ರಿಟಿಷರು ಸಾವಿರಾರು ಹಸ್ತಪ್ರತಿಗಳನ್ನು ತಮ್ಮ ನಾಡಿಗೆ ಕೊಂಡೊಯ್ದಿದ್ದು, ಅವುಗಳನ್ನು ತಮ್ಮ ರಾಷ್ಟ್ರಕ್ಕೆ ವಾಪಸ್ ತರಿಸಿಕೊಳ್ಳಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಮುಂದಾಗಬೇಕಿದೆ ಎಂದು ಅವರು ಈ ಸಂದರ್ಭದಲ್ಲಿ ಕಿವಿಮಾತು ಹೇಳಿದರು.
ರಾಷ್ಟ್ರೀಯ ಪ್ರಾಕೃತ ಅಧ್ಯಯನ ಹಾಗೂ ಸಂಶೋಧನಾ ಸಂಸ್ಥೆ ಪ್ರಭಾರ ನಿರ್ದೇಶಕ ಪ್ರೊ.ಬಿ ಸಣ್ಣಯ್ಯ, ಹಂಪಿ ವಿಶ್ವವಿದ್ಯಾನಿಲಯದ ಹಸ್ತ ಪ್ರತಿ ವಿಭಾಗದ ನಿರ್ದೇಶಕ ಡಾ.ಕೆ. ರವೀಂದ್ರನಾಥ್, ಶ್ರವಣಬೆಳಗೊಳದ ಎರ್.ಒ ಮಂಜಯ್ಯ ಸೇರಿದಂತೆ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

