ಗೂಂಡಾಗಿರಿ: ಇಬ್ಬರಿಗೆ ಗಾಯ
ರಾಮನಾಥಪುರ: ಸಮೀಪದ ಪ್ರಸಿದ್ಧ ಅರಸೀಕಟ್ಟೆ ಅಮ್ಮನ ದೇವಾಲಯದ ಬಳಿ ಕ್ಷುಲ್ಲಕ ಕಾರಣಕ್ಕೆ ಜಗಳ ಕೆರೆದು ಮಾರಾಮಾರಿ ಹೊಡೆದಾಟ ನಡೆದ ಘಟನೆ ಮಂಗಳವಾರ ಜರುಗಿದೆ.
ಇಲ್ಲಿ ಪ್ರತಿ ಶುಕ್ರವಾರ, ಭಾನುವಾರ, ಮಂಗಳವಾರ ಅರಸೀಕಟ್ಟೆ ದೇವಾಲಯದಲ್ಲಿ ವಿವಿಧೆಡೆಯಿಂದ ಬರುವ ಭಕ್ತರು ತಮ್ಮ ಹರಕೆ ಸಲ್ಲಿಸಿ, ಅಲ್ಲಿಯೇ ಪ್ರಸಾದ ಊಟ ಮಾಡಿ ಉಣಬಡಿಸಿ ತಮ್ಮ ಸ್ವಗ್ರಾಮಗಳಿಗೆ ತೆರಳುವುದು ವಾಡಿಕೆ. ಮಂಗಳವಾರ ಅರಸೀಕಟ್ಟೆ ದೇವಾಲಯಕ್ಕೆ ಪೂಜೆ ಸಲ್ಲಿಸಲು ಬಂದಿದ್ದ ಯಗಟಿ ಗ್ರಾಮದ ಅಪ್ಪಣ್ಣೇಗೌಡ (55) ಮಗ ನಂದಕುಮಾರ್ (31), ನಂದಿನಿ (23) ಇವರು ಪೂಜೆ ಸಲ್ಲಿಸಿ ತಮ್ಮ ಬಂಧುಗಳಿಗೆ ಉಣ ಬಡಿಸುವ ಸಂದರ್ಭದಲ್ಲಿ ಕೊಡಗು ಪ್ರಾಂತ್ಯದ ಕೆಲವರು ಮ್ಯಾಕ್ಸಿ ಕ್ಯಾಬ್ ವಾಹನದಲ್ಲಿ ಬಂದಿದ್ದು, ಸಲ್ಲದ ಕೀಟಲೆ ಜಗಳ ತೆಗೆದು ಅಪ್ಪಣ್ಣೇಗೌಡರಿಗೆ ಹಿಗ್ಗಾ ಮುಗ್ಗ ಹೊಡೆದು ಕೆಳಕ್ಕೆ ಬೀಳಿಸಿದ್ದನ್ನು ಗಮನಿಸಿದ ಪುತ್ರ ನಂದಕುಮಾರ್, ನಂದಿನಿ ಓಡಿ ಬಂದು ಅಂಗಲಾಚಿ ಬೇಡಿಕೊಂಡರೂ ಕರುಣೆ ತೋರದೆ ನಂದಕುಮಾರ್ಗೆ ಸೌದೆಯಿಂದ ತಲೆಗೆ ಹೊಡೆದು ಗಾಯಗೊಳಿಸಿ ಮತ್ತು ನಂದಿನಿಗೆ ಬಲಗೈ ಮಣಿಕಟ್ಟಿಗೆ ಚಾಕುವಿನಿಂದ ಹೊಡೆದು ಗಾಯಗೊಳಿಸಿದ್ದಾರೆ. ಈ ನಿಟ್ಟಿನಲ್ಲಿ ಈ ಇಬ್ಬರ ಪರಿಸ್ಥಿತಿ ಗಂಭೀರವಾಗಿದ್ದು, ಕೊಣನೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಗೂಂಡಾಗಿರಿ ಮಾಡಿದವರು ತಮ್ಮ ವಾಹನದೊಂದಿಗೆ ತಪ್ಪಿಸಿಕೊಂಡಿದ್ದು, ವಿಷಯ ತಿಳಿದ ಸ್ಥಳೀಯ ಪೊಲೀಸರು ಗಲಾಟೆಗೆ ಕಾರಣರಾದವರನ್ನು ಸರಿಯಾಗಿ ತನಿಖೆ ಮಾಡಿ ಕರೆತರದೆ ಬದಲಿಗೆ ಪಿರಿಯಾಪಟ್ಟಣದ ಕ್ಯಾಂಟರ್ ವಾಹನವನ್ನು ತಂದು ಪೊಲೀಸ್ ಠಾಣೆಯ ಬಳಿ ನಿಲ್ಲಿಸಿ ಕ್ಷಣ ಕಾಲ ಗೊಂದಲ ಸೃಷ್ಟಿಯಾಯಿತು. ಗಾಯಾಳುಗಳ ಹೇಳಿಕೆಯಂತೆ ಸದರಿ ಕೆಎ-12 ಎ-3378 ಮ್ಯಾಕ್ಸಿಕ್ಯಾಬ್ ವಾಹನ ಶೋಧದಲ್ಲಿದ್ದು, ಆರೋಪಿಗಳನ್ನು ಬಂಧಿಸುವಂತೆ ಹೋಬಳಿ ರೈತ ಸಂಘದ ಅಧ್ಯಕ್ಷ ಕೃಷ್ಣೇಗೌಡ ಮತ್ತಿತರರು ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

