ಅರಸೀಕೆರೆ, ಚನ್ನರಾಯಪಟ್ಟಣ 'ಬರ'ಕ್ಕೆ ಸೇರಿಸಲು ಶ್ರಮಿಸಲಿ
ಹಾಸನ: ಜಿಲ್ಲೆಯ ಕಾಂಗ್ರೆಸ್ ಮುಖಂಡರು ಪ್ರಚಾರಕ್ಕಾಗಿ ವ್ಯರ್ಥ ಆರೋಪ ಮಾಡದೇ ಅರಸೀಕೆರೆ, ಚನ್ನರಾಯಪಟ್ಟಣ ತಾಲೂಕುಗಳನ್ನು ಬರ ಪಟ್ಟಿಗೆ ಸೇರ್ಪಡೆ ಮಾಡಿಸುವ ಮೂಲಕ ಜನಪರತೆಯನ್ನು ಪ್ರದರ್ಶಿಸಲಿ. ಹಾಗೆ ಮಾಡದೇ ದೇವೇಗೌಡ, ರೇವಣ್ಣನವರ ವಿರುದ್ಧ ಟೀಕೆ ಮಾಡಿದರೆ ಸ್ವಾರ್ಥ ಸಾಧನೆ ಈಡೇರುವುದಿಲ್ಲ ಎಂದು ಜೆಡಿಎಸ್ ಮುಖಂಡರು ತಿರುಗೇಟು ನೀಡಿದ್ದಾರೆ.
ಜಿಲ್ಲೆಯ ಅಭಿವೃದ್ದಿಗೆ ಕಾಂಗ್ರೆಸ್ ಕೊಡುಗೆ ಏನಿದೆ ಎಂಬುದನ್ನು ಜನತೆಗೆ ತಿಳಿಸಬೇಕಾಗಿದ್ದು, ಜಿಲ್ಲೆಯ ಅಭಿವೃದ್ಧಿ ಬಗ್ಗೆ ಶ್ವೇತಪತ್ರ ಹೊರಡಿಸಲು ಜೆಡಿಎಸ್ ಸಿದ್ಧವಿದೆ. ಆದರೆ ರಾಜ್ಯದ ಅಭಿವೃದ್ಧಿ ಬಗ್ಗೆ ಶ್ವೇತಪತ್ರ ಹೊರಡಿಸಲು ಕಾಂಗ್ರೆಸ್ ಸಿದ್ಧವೇ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಜಾವಗಲ್ ರಾಜಶೇಖರ್, ಕಾರ್ಯಾಧ್ಯಕ್ಷ ಚನ್ನವೀರಪ್ಪ, ಜಿಲ್ಲಾ ವಕ್ತಾರ ತೊ.ಚ. ಅನಂತಸುಬ್ಬರಾವ್ ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಕೆಲ ಕಾಂಗ್ರೆಸ್ ಮುಖಂಡರ ಹೇಳಿಕೆಗೆ ಸವಾಲು ಹಾಕಿದರು.
ಜೆಡಿಎಸ್ ಕಡೆ ಒಲವು: ಇತ್ತೀಚೆಗೆ ಜೆಡಿಎಸ್ ಮುಖಂಡರಾದ ಮಾಜಿ ಪಿಎಂ ಎಚ್.ಡಿ. ದೇವೇಗೌಡರು, ಮಾಜಿ ಸಚಿವ ಎಚ್.ಡಿ. ರೇವಣ್ಣನವರ ವಿರುದ್ಧ ಎಚ್.ಎಂ. ವಿಶ್ವನಾಥ್ ಮತ್ತಿತರರು ಮಾಡಿರುವ ಟೀಕೆಗಳಿಗೆ ಉತ್ತರ ನೀಡುವ ಅವಶ್ಯಕತೆ ಇಲ್ಲ. ಬೇಲೂರಿನಲ್ಲಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಜೆಡಿಎಸ್ನಿಂದ ಟಿಕೆಟ್ ಸಿಗದ ಕಾರಣ ವಿಶ್ವನಾಥ್, ಎಚ್.ಕೆ. ಜವರೇಗೌಡ ಅವರು ಪಕ್ಷ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಇಂಥಹ ಸ್ವಾರ್ಥ ರಾಜಕಾರಣಿಗಳಿಗೆ ಜನತೆಗೆಯ ತಕ್ಕ ಉತ್ತರ ನೀಡಲಿದ್ದಾರೆ ಎಂದು ಹೇಳಿದರು. ವಿಶ್ವನಾಥ್ ಪಕ್ಷ ಬಿಟ್ಟ ಮೇಲೆ ಆಲೂರು-ಸಕಲೇಶಪುರ ತಾಲೂಕಿನಲ್ಲಿ ಜೆಡಿಎಸ್ ಕಡೆ ಜನತೆ ಒಲವು ತೋರಿದ್ದರಿಂದ ಭಾರಿ ಅಂತರದಲ್ಲಿ ಎಚ್.ಕೆ. ಕುಮಾರಸ್ವಾಮಿ ಜಯಗಳಿಸಲು ಸಾಧ್ಯವಾಯಿತು. ಜೆಡಿಎಸ್ ಮುಖಂಡರು ಜಿಲ್ಲೆಯ ಸಮಸ್ಯೆಗಳ ಬಗ್ಗೆ ಕೈಲಾದಷ್ಟು ಮಟ್ಟಿಗೆ ಸರ್ಕಾರದ ಗಮನ ಸೆಳೆದಿದ್ದಾರೆ. ಇದನ್ನು ಮರೆತು ಇಲ್ಲಸಲ್ಲದ ಸುಳ್ಳು ಆರೋಪ ಮಾಡುವುದು ಸರಿಯಲ್ಲ ಎಂದು ತಿರುಗೇಟು ನೀಡಿದರು.
ಬಿಜೆಪಿ ಸರ್ಕಾರದಿಂದ ಕಡೆಗಣನೆ: ಜಿಲ್ಲೆಯ ಕೆಲ ತಾಲೂಕಿನ ಭಾಗಗಳಲ್ಲಿ ಗ್ಯಾಸ್ ಲೈನ್ ಹಾದು ಹೋಗಿದ್ದು, ಇದುವರೆಗೂ ಭೂ ಮಾಲೀಕರಿಗೆ ಸರ್ಕಾರ ದರ ನಿಗದಿ ಮಾಡಿಲ್ಲ. ರಾಜ್ಯದ ಕಾಂಗ್ರೆಸ್ ಆಡಳಿತದಲ್ಲಿ ಜಿಲ್ಲೆಯ ಯಾವ ಅಭಿವೃದ್ಧಿ ಕೂಡ ಆಗಿರುವುದಿಲ್ಲ. ಒಂದು ರೀತಿಯಲ್ಲಿ ದೋಷದಿಂದ ಕೂಡಿದ ಆಡಳಿತ ನಡೆಸಲಾಗುತ್ತಿದ್ದು, ದೇವೇಗೌಡ ಅವರು ಜಿಲ್ಲೆಯ ರಸ್ತೆಗಳ ದುರಸ್ತಿ ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಆದರೆ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಹಿಂದೆ ಇದ್ದ ಬಿಜೆಪಿ ಸರ್ಕಾರವು ಜಿಲ್ಲೆಯನ್ನು ಕಡೆಗಣಿಸಿ ರಸ್ತೆ ಈ ದುಸ್ಥಿತಿಗೆ ಬರಲು ಕಾರಣವಾಗಿದೆ ಎಂದು ಆರೋಪಿಸಿದರು. ಜಿಲ್ಲೆಯಲ್ಲಿ ಮರಳು ನೀತಿ ಇರುವುದರಿಂದ ಮಂಗಳೂರು ಹಾಗೂ ಬೆಂಗಳೂರಿನಿಂದ ಮರಳು ಸಾಗಣಿಕೆ ನಡೆಯುತ್ತಿದೆ. ಅರಸೀಕೆರೆಯಲ್ಲಿ ಸಮರ್ಪಕ ಮಳೆ ಬಾರದೆ ಇರುವುದರಿಂದ ಬರಗಾಲ ಇದ್ದರೂ ರಾಜಕೀಯ ದುರುದ್ದೇಶದಲ್ಲಿ ವಂಚಿತವಾಗಿದೆ. ಕೇವಲ ಕಾಂಗ್ರೆಸ್ ಶಾಸಕರು ಇರುವ ಕ್ಷೇತ್ರವನ್ನು ಮಾತ್ರ ಬರಗಾಲ ಎಂದು ಘೋಷಣೆ ಮಾಡುವ ಮೂಲಕ ಸರ್ಕಾರ ತಾರತಮ್ಯ ಧೋರಣೆ ಮನೋಭಾವ ತೋರಿಸುತ್ತಿದೆ ಎಂದು ದೂರಿದರು.
ಈ ಕೂಡಲೇ ಈ ದಂದ್ವ ನೀತಿ ಬಿಟ್ಟು ಜಿಲ್ಲೆಯ ಇತರೆ ತಾಲೂಕುಗಳನ್ನು ಬರಗಾಲ ಎಂದು ಘೋಷಣೆ ಮಾಡಲು ಕಾಂಗ್ರೆಸಿಗರು ಮುಂದಾಗಬೇಕು. ಜಿಲ್ಲೆಯಲ್ಲಿ ಜೆಡಿಎಸ್ನಿಂದ ಒಂದು ಕೋರ್ ಕಮಿಟಿ ಮಾಡಲಾಗುತ್ತದೆ. ಇದರಲ್ಲಿ ಪ್ರತಿ ಎರಡು ತಿಂಗಳಿಗೊಮ್ಮೆ ಸಭೆ ಮಾಡಲಾಗುವುದು. ಜಿಲ್ಲೆಯ ಸಾರ್ವಜನಿಕರ ದೂರನ್ನು ಸ್ವೀಕರಿಸಿ ಸಭೆಯಲ್ಲಿ ಚರ್ಚೆ ಮಾಡಿ ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದಾಗಿ ಹೇಳಿದರು.
ಶೀಘ್ರದಲ್ಲಿ ಪದಾಧಿಕಾರಿಗಳ ಆಯ್ಕೆ: ಜೆಡಿಎಸ್ ಕಾರ್ಯಾಧ್ಯಕ್ಷ ಚನ್ನವೀರಪ್ಪ ಮಾತನಾಡಿ, ಜಿಲ್ಲೆಯ ಜೆಡಿಎಸ್ ಪಕ್ಷದ ಅಧ್ಯಕ್ಷರು ತೆರವಾದ ಹಿನ್ನೆಲೆಯಲ್ಲಿ ಆ ಸ್ಥಾನವನ್ನು ಈಗಾಗಲೇ ತುಂಬಲಾಗಿದೆ. ಜಿಲ್ಲಾಧ್ಯಕ್ಷರಾಗಿ ಜಾವಗಲ್ ರಾಜಶೇಖರ್, ಕಾರ್ಯಾಧ್ಯಕ್ಷರಾಗಿ ಚನ್ನವೀರಪ್ಪ ಅವರನ್ನು ಆಯ್ಕೆ ಮಾಡಲಾಗಿದೆ ಉಳಿದಂತೆ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಇನ್ನು ಮೂರು ದಿವಸಗಳಲ್ಲಿ ಪಟ್ಟಿ ಬಿಡುಗಡೆ ಆಗಲಿದೆ ಎಂದರು.
ತುರ್ತಾಗಿ ನಗರ ರಸ್ತೆಗೆ ಡಾಂಬರೀಕರಣ ಮಾಡಲು ಅಧ್ಯಕ್ಷರಿಗೆ ತಿಳಿಸಲಾಗಿದೆ. ಅಭಿವೃದ್ಧಿ ಯೋಜನೆಯಡಿ 30 ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣವಾಗಲಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಜಿಪಂ ಮಾಜಿ ಉಪಾಧ್ಯಕ್ಷ ಎಸ್. ದ್ಯಾವೇಗೌಡ, ಮಂಜೇಗೌಡ, ನಾಗರಾಜ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

