ಜೇನುಕಲ್ ನಗರಕ್ಕಿಲ್ಲ ಟಾರ್ ರಸ್ತೆ, ಚರಂಡಿ
ಕ.ಪ್ರ.ವಾರ್ತೆ ಅರಸೀಕೆರೆ ನ.27
ಐದಾರು ದಿನಗಳಿಗೊಮ್ಮೆ ಕೊಳವೆಯಲ್ಲಿ ಬರುವ ನೀರಿಗೆ ಬಕಪಕ್ಷಿಯಂತೆ ಕಾಯಬೇಕು. ಟಾರೇ ಕಾಣದ ರಸ್ತೆಗಳ ಮೂಲಕ ಮನೆಗೆ ಸಾಗಬೇಕು. ಚರಂಡಿ ಹಾಗೂ ಒಳಚರಂಡಿ ವ್ಯವಸ್ಥೆಯಂತೂ ಇಲ್ಲವೇ ಇಲ್ಲ. ಈ ಎಲ್ಲಾ ಸಮಸ್ಯೆಗಳನ್ನು ಯಾವುದೋ ಕುಗ್ರಾಮದ ಜನತೆ ಅಲ್ಲ ಇದು ಪಟ್ಟಣದ ಜೇನುಕಲ್ ನಗರ ಬಡಾವಣೆಯಲ್ಲಿ ಜನರು ಎದುರಿಸುತ್ತಿರುವ ಸಮಸ್ಯೆ.
ಕಳೆದ ಎರಡು ದಶಕಗಳ ಹಿಂದೆ ಜೇನುಕಲ್ ನಗರ ಬಡಾವಣೆ ಎಂಬ ಹೆಸರಿನಲ್ಲಿ ಜಿಲ್ಲಾ ಕೇಂದ್ರ ಹಾಸನಕ್ಕೆ ಸಾಗುವ ರಾಜ್ಯ ಹೆದ್ದಾರಿ ಬದಿಯಲ್ಲಿ ರೂಪಗೊಂಡಿರುವ ಈ ಬಡಾವಣೆಗೆ ಮೂಲ ಸಮಸ್ಯೆಗಳು ಬೆಂಬಿಡದ ಭೂತದಂತೆ ಕಾಡುತ್ತಾ ಬಂದಿರುವುದು ಇಲ್ಲಿನ ವಾಸಿಗಳ ದೌರ್ಭಾಗ್ಯವೇ ಸರಿ.
ಈ ಬಡಾವಣೆಯಲ್ಲಿ 700ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿದ್ದು ಸಮರ್ಪಕವಾಗಿ ಪುರಸಭೆ ನೀರು ಸರಬರಾಜು ಮಾಡದೇ ಇರುವುದರಿಂದ ನೀರಿಗಾಗಿ ಪರದಾಡುವುದು ಇಲ್ಲಿನ ವಾಸಿಗಳ ಪ್ರತಿನಿತ್ಯದ ಮಾಮೂಲಿ ಗೋಳು ಆಗಿಬಿಟ್ಟಿದೆ. ಬಡಾವಣೆಯ ಮೂರ್ನಾಲ್ಕು ರಸ್ತೆಗಳು ಡಾಂಬರ್ ಕಂಡಿರುವುದು ಹೊರತುಪಡಿಸಿದರೆ ಬಹುತೇಕ ರಸ್ತೆಗಳ ಗುಂಡಿ ಗೊಟರುಗಳಿಂದಲೇ ಕೂಡಿದೆ. ಇನ್ನು ಚರಂಡಿ ಒಳಚರಂಡಿ ವ್ಯವಸ್ಥೆಯಂತೂ ಇಲ್ಲದೇ ಇರುವುದರಿಂದ ಈ ಬಡಾವಣೆಗೆ ಪ್ರವೇಶಿಸಿದರೆ ಯಾವುದೋ ಒಂದು ಕುಗ್ರಾಮಕ್ಕೆ ಹೋಗುತ್ತಿದ್ದೇವೆ ಎಂದು ಭಾಸವಾಗುವುದರಲ್ಲಿ ಸಂಶಯವೇ ಇಲ್ಲ.
ಬಳ್ಳಾರಿ ಜಾಲಿಮುಳ್ಳು, ಪಾರ್ಥೇನಿಯಂ ಗಿಡ ಹಾಗೂ ಇತರೆ ಗಿಡ, ಗಂಟೆಗಳೇ ಬಡಾವಣೆಯನ್ನು ಆವರಿಸಿದ್ದು ಜೊತೆಗೆ ಮನೆಗಳ ಕಲುಷಿತ ನೀರು ಸಮರ್ಪಕವಾಗಿ ಸಾಗಲು ಸಾಧ್ಯವಾಗದೇ ಅಲ್ಲಲ್ಲೇ ಶೇಖರಣೆಗೊಳ್ಳುವುದರಿಂದ ಸೊಳ್ಳೆಗಳ ಜನ್ಮ ತಾಣವಾಗಿ ಮಾರ್ಪಟ್ಟು ಸಾಂಕ್ರಮಿಕ ರೋಗಗಳು ಹರಡಲು ಕಾರಣವಾಗಿರುವುದರಿಂದ ಮಕ್ಕಳು ವೃದ್ಧರು ಆಗಿಂದಾಗ್ಗೆ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗುವುದು ಸಾಮಾನ್ಯ ಸಂಗತಿಯಾಗಿರುವುದು ವಿಷಾದವೇ ಸರಿ.
ಈ ಎಲ್ಲಾ ಸಮಸ್ಯೆಗಳನ್ನು ಎದುರಿಸುತ್ತಿರುವ ಜೇನುಕಲ್ ನಗರ ಜನತೆ ಸಮರ್ಪಕ ಮೂಲ ಸೌಕರ್ಯ ಒದಗಿಸುವಂತೆ ಆಗ್ರಹಿಸಿ ಪುರಸಭೆಗೆ ಮುತ್ತಿಗೆ ಹಾಕುವ ಮುನ್ನವೇ ಚುನಾಯಿತ ಜನಪ್ರತಿನಿಧಿಗಳು ಹಾಗೂ ಪುರಸಭೆ ಆಡಳಿತ ಎಚ್ಚೆತ್ತು ಬಡಾವಣೆಯ ಅಭಿವೃದ್ಧಿಗೆ ಆದ್ಯತೆ ನೀಡಲಿ ಎಂಬುದು ಇಲ್ಲಿನ ನಿವಾಸಿಗಳ ಆಗ್ರಹವಾಗಿದೆ.
ಪ್ರತಿಕ್ರಿಯೆ: ಹೆಸರಿಗೆ ಮಾತ್ರ ಪಟ್ಟಣದ ವಾಸಿಗಳು ಆದರೆ ಇಲ್ಲಿನ ಜನತೆ ಎದುರಿಸುತ್ತಿರುವ ಸಮಸ್ಯೆ ಯಾವುದೇ ಕುಗ್ರಾಮದ ಜನತೆಯೂ ಎದುರಿಸುತ್ತಿಲ್ಲ ಬಡಾವಣೆಯ ಅಲ್ಲೊಂದು ಇಲ್ಲೊಂದು ಇರುವ ಪುರಸಭೆಯ ಕೊಳವೆಯಲ್ಲಿ ನೀರು ಯಾವಾಗ ಬರುವುದೋ ದೇವರಿಗೆ ಗೊತ್ತು. ಇನ್ನು ಚರಂಡಿ ರಸ್ತೆ ಹಾಗೂ ಬೀದಿ ದೀಪಗಳು ವ್ಯಸ್ಥೆಯೂ ಸಹ ಸಮರ್ಪಕವಾಗಿ ಇಲ್ಲದೇ ಇರುವುದರಿಂದ ಇಲ್ಲಿ ವಾಸಿಸುತ್ತಿರುವವರೆಲ್ಲರೂ ಶಾಪಗ್ರಸ್ಥರೇ ಪುರಸಭೆ ಉತ್ತರಿಸಬೇಕಿದೆ.
ನಿಜ ಬಡಾವಣೆಯಲ್ಲಿ ಅನೇಕ ಸಮಸ್ಯೆಗಳಿದ್ದು ಇದನ್ನ ಸರಿಪಡಿಸುವ ನಿಟ್ಟಿನಲ್ಲಿ ಪುರಸಭೆಯ ಗಮನ ಸೆಳೆದು ಹಂತಹಂತವಾಗಿ ಸಮಸ್ಯೆ ಬಗೆಹರಿಸುವ ಮೂಲಕ ವಾರ್ಡ್ನ ಜನತೆ ನನ್ನ ಮೇಲಿಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳಲು ಪ್ರಾಮಾಣಿಕವಾಗಿ ಪ್ರಯತ್ನಿಸುವೆ ಎಂದು ಪುರಸಭೆ ಸದಸ್ಯ ಮಂಜುನಾಥ್ ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಪುರಸಭೆ ಮುಖ್ಯಾಧಿಕಾರಿ ಸತ್ಯನಾರಾಯಣ್, ಪಟ್ಟಣ ದಿನದಿಂದ ದಿನಕ್ಕೆ ವಿಸ್ತಾರಗೊಳ್ಳುತ್ತಿದ್ದು ಸರ್ಕಾರದಿಂದ ಬಿಡುಗಡೆಯಾಗುವ ಅನುದಾನವನ್ನು ಎಲ್ಲಾ ವಾರ್ಡ್ಗಳಿಗೂ ಸಮರ್ಪಕವಾಗಿ ಹಂಚಿಕೆ ಮಾಡುವ ಮೂಲಕ ಅಭಿವೃದ್ಧಿ ಕೆಲಸಗಳನ್ನು ಮಾಡಬೇಕಿದೆ.
ಹೊಸ ಬಡಾವಣೆಯಾಗಿ ರೂಪುಗೊಂಡಿರುವ ಜೇನುಕಲ್ ಬಡಾವಣೆ ಒಳಗೊಂಡಂತೆ ಹೊಸ ಬಡಾವಣೆಗಳಿಗೆ ವಿಶೇಷ ಆದ್ಯತೆ ನೀಡಿ ನೀರು ರಸ್ತೆ ಹಾಗೂ ಚರಂಡಿ ಹೀಗೆ ಮೂಲ ಸಮಸ್ಯೆಗಳನ್ನು ಕಲ್ಪಿಸಲು ಪುರಸಭೆ ಬದ್ಧವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

