ಹಾಸನ

ಕಾರ್ಖಾನೆ ಪುನಾರಂಭಕ್ಕೆ ಖಂಡನೆ

Published On :

ಕ.ಪ್ರ.ವಾರ್ತೆ  ಹಾಸನ  ನ.28
ನಗರದ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿ ಇರುವ ಓಮ್ಮಿಕಾನ್ ಚೆಂಡು ಹೂ ಸಂಸ್ಕರಣ ಘಟಕದಿಂದ ಹೊರ ಬಿಡುವ ಕಲ್ಮಶದಿಂದ ಪರಿಸರ ಮಾಲಿನ್ಯ ಉಂಟಾಗಿದ್ದು, ರೋಗರುಜಿನಗಳು ಹರಡುತ್ತಿವೆ. ಕೂಡಲೇ ಈ ಕಾರ್ಖಾನೆಯನ್ನು ಮತ್ತೆ ಆರಂಭಿಸಬಾರದು ಎಂದು ಆಗ್ರಹಿಸಿ ಸುತ್ತಮುತ್ತಲಿನ ಗ್ರಾಮಸ್ಥರು ಬುಧವಾರ ಕಾರ್ಖಾನೆ ಬಳಿ ಪ್ರತಿಭಟನೆ ನಡೆಸಿದರು.
ಒಂದು ವೇಳೆ ಮುಚ್ಚಲು ಜಿಲ್ಲಾಡಳಿಕ ಕ್ರಮ ಜರುಗಿಸದಿದ್ದರೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಮಂಜುನಾಥ್, ಈಗ ಇರುವ ಹೂವಿನ ಸಂಸ್ಕರಣೆ ಕಾರ್ಯ ಮುಗಿದ ನಂತರ ಕಾರ್ಖಾನೆ ಮುಚ್ಚುವ ಬಗ್ಗೆ ಚಿಂತಿಸಲಾಗುವುದು ಎಂದು ಹೇಳಿದರು. ಇದಕ್ಕೆ ಒಪ್ಪದ ಗ್ರಾಮಸ್ಥರು, ಕಾರ್ಖಾನೆಯನ್ನು ಮುಚ್ಚದಿದ್ದರೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆವೊಡ್ಡಿದರು.
ಹೂ ಸಂಸ್ಕರಣ ಘಟಕದಿಂದ ಹೊರ ಬಿಡಲಾಗುವ ತ್ಯಾಜ್ಯವು ಕೆರೆ ಹಾಗೂ ಪರಿಸರಕ್ಕೆ ಹಾನಿ ಉಂಟಾಗುತ್ತಿದೆ ದನಕರು ಹಾಗೂ ಮೀನುಗಳು ಸಾವನಪ್ಪುತ್ತಿದೆ. ಕೆಲ ತಿಂಗಳ ಹಿಂದೆ ಪ್ರತಿಭಟನೆ ನಡೆಸಿದ ಪರಿಣಾಮ ಪರಿಸರ ಮಾಲಿನ್ಯ ನಿಯಂತ್ರಣಾ ಮಂಡಳಿ ಅಧಿಕಾರಿಗಳು ಬಂದ್ ಮಾಡಲು ಆದೇಶ ಮಾಡಿದ್ದರು. ಅದರಂತೆ ತಹಸೀಲ್ದಾರ್ ಮಂಜುನಾಥ್ ಸಂಸ್ಕರಣ ಘಟಕವನ್ನು ಲಾಕ್‌ಔಟ್ ಮಾಡಿ ಮೂರು ತಿಂಗಳು ಕಳೆದಿದೆ. ಈಗ ಮತ್ತೆ ತೆರೆಯಲು ಬಂದಿರುವುದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ತೆರೆದರೆ ವಿಷ ಕುಡಿಯುವುದಾಗಿ ಎಚ್ಚರಿಸಿದರು. ಕೆಲ ಸಮಯ ಗ್ರಾಮಸ್ಥರು ಮತ್ತು ಅಧಿಕಾರಿಗಳೊಡನೆ ವಾಗ್ವಾದ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮಸ್ಥ ಸೌದ್ರಳ್ಳಿ ಕುಮಾರ್, ಓಮ್ನಿಕಾನ್ ಚೆಂಡು ಹೂ ಸಂಸ್ಕರಣ ಘಟಕವನ್ನು ಲಾಕ್‌ಔಟ್ ಮಾಡಿ ಮೂರು ತಿಂಗಳು ಕಳೆದಿದ್ದರೂ ತಹಸೀಲ್ದಾರ್ ಮಂಜುನಾಥ್ ಈಗ ಪರಿಶೀಲನೆ ಮಾಡಿ ತೆರೆಯಲು ಮುಂದೆ ಬರುತ್ತಿದ್ದಾರೆ. ಇದರಿಂದ ಮತ್ತೆ ಗ್ರಾಮದ ಕೆರೆಕಟ್ಟೆ ನೀರು ಹಾಳಾಗುತ್ತದೆ. ಈಗ ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದು, ಶೇಖರಣೆ ಆಗಿರುವ ಚೆಂಡು ಹೂ ಕೆಲಸ ಮಾಡುವವರಿಗೂ ಅವಕಾಶ ನೀಡುವಂತೆ ಕೇಳಿ ಗ್ರಾಮಸ್ಥರಿಗೆ ತಹಸೀಲ್ದಾರ್ ವಂಚಿಸುವ ಹುನ್ನಾರ ಮಾಡುತ್ತಿದ್ದಾರೆ ಎಂದು ದೂರಿದರು.
ಯಾವುದೇ ಕಾರಣಕ್ಕೂ ಮತ್ತೆ ಈ ಘಟಕ ಪ್ರಾರಂಭಿಸಲು ಅವಕಾಶ ನೀಡುವುದಿಲ್ಲ. ಮುಂದುವರೆದರೆ ಕೂಡಲೇ ಸಾಮೂಹಿಕವಾಗಿ ವಿಷ ಸೇವನೆ ಮಾಡುವುದಾಗಿ ಗ್ರಾಮಸ್ಥರು ಎಚ್ಚರಿಸಿದರು. ಬೇಕಾದರೆ ಇರುವ ಹೂವನ್ನು ಒಣಗಿಸಿ ಸಂರಕ್ಷಿಸಬಹುದು. ಅದನ್ನು ನಾವುಗಳೆ ನಮ್ಮ ಹಣದಲ್ಲಿ ಉಚಿತವಾಗಿ ಕೆಲಸ ಮಾಡಿ ಕೊಡುವ ಭರವಸೆಯನ್ನು ಗ್ರಾಮಸ್ಥರು ನೀಡಿದರು.
ತಹಸೀಲ್ದಾರ್ ಮಂಜುನಾಥ್ ಹೇಳಿಕೆ: ಚೆಂಡು ಹೂ ಸಂಸ್ಕರಣ ಘಟಕವನ್ನು ಮುಚ್ಚಿ ಮೂರು ತಿಂಗಳು ಕಳೆದಿದೆ. ಈ ವಿಚಾರವಾಗಿ ಬೆಂಗಳೂರಿನಲ್ಲಿ ಗ್ರಾಮಸ್ಥರ ಎದುರು ಸಭೆ ಮಾಡಲಾಯಿತು. ಎಲ್ಲರ ಅಭಿಪ್ರಾಯ ಕೇಳಿದರು. ಕಂಪನಿ ಮುಚ್ಚ ಬೇಕೇ ಬೇಡವೇ ಎಂಬುದಕ್ಕೆ ಈಗ ಪರಿಶೀಲನೆಗಾಗಿ ಆಗಮಿಸಿದ್ದು, ಈ ಘಟಕದ ಒಳಗೆ ಇನ್ನು 6 ಸಾವಿರ ಟನ್ ಲೋಡ್ ಹೂ ಇದ್ದು, ಪೂರೈಸಲು ಮಾತ್ರ ಅವಕಾಶ ನೀಡಬೇಕು ನಂತರ ಮುಚ್ಚಲಾಗುವುದು ಎಂದು ತಹಸೀಲ್ದಾರ್ ಹೇಳಿದರು.
ಇದಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದರು. ನಂತರ ತಹಸೀಲ್ದಾರ್ ಅವರು, ಗ್ರಾಮಸ್ಥರ ಹಿತದೃಷ್ಟಿಯನ್ನು ಗಮನಿಸಿ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಯಿತು.
ಗ್ರಾಮಾಂತರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ವೀರೇಂದ್ರ ಪ್ರಸಾದ್, ಗ್ರಾಮಸ್ಥರಾದ ಸೌದ್ರಳ್ಳಿ ಸುರೇಶ್, ಮಧು, ಚನ್ನೇಗೌಡ, ಸಂತೋಷ್, ನಾಗವಳ್ಳಿ ರಾಮು ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.