ಹಾಸನ

ಎಚ್.ಎಂ. ವಿಶ್ವನಾಥ್‌ಗೆ ಬುದ್ಧಿ ಭ್ರಮಣೆ: ನಾಗರಾಜ್

Published On :

ಕ.ಪ್ರ.ವಾರ್ತೆ  ಹಾಸನ  ನ.28
ಜಿಲ್ಲೆಯ ಜನತೆ ಮಾಜಿ ಶಾಸಕ ಎಚ್.ಎಂ. ವಿಶ್ವನಾಥ್ ಅವರಂಥ ಕ್ಷುಲ್ಲಕ ರಾಜಕಾರಣಿಗಳ ಚಾರ್ಜ್‌ಶೀಟ್‌ಗಳಿಗೆ ಈಗಾಗಲೇ ವಿಧಾನಸಭೆ ಚುನಾವಣೆಯಲ್ಲಿ ಉತ್ತರ ನೀಡಿದ್ದಾರೆ ಎಂದು ಸಕಲೇಶಪುರ ತಾಪಂ ಮಾಜಿ ಅಧ್ಯಕ್ಷ ಬೆಕ್ಕನಹಳ್ಳಿ ನಾಗರಾಜ್ ತಿರುಗೇಟು ನೀಡಿದ್ದಾರೆ.
ವಿಶ್ವನಾಥ್ ಮತ್ತಿತರ ಕಾಂಗ್ರೆಸ್ ಮುಖಂಡರು, ಮಾಜಿ ಪಿಎಂ ದೇವೇಗೌಡ, ಎಚ್.ಡಿ. ರೇವಣ್ಣನವರ ವಿರುದ್ಧ ಟೀಕೆ ಮಾಡಿದ್ದ ಹಿನ್ನೆಲೆಯಲ್ಲಿ ಹೇಳಿಕೆ ನೀಡಿರುವ ನಾಗರಾಜ್ ಅವರು, ಪತ್ರಿಕೆಗಳ ಮೂಲಕ ಸುಳ್ಳು ಸುದ್ದಿ ಹೇಳುತ್ತಿರುವ ವಿಶ್ವನಾಥ್ ಅವರಿಗೆ ಬುದ್ಧಿ ಭ್ರಮಣೆಯಾಗಿದೆ. ವಿಶ್ವನಾಥ್ ಅವರು ಶಾಸಕರಾಗಿದ್ದಾಗ ಸಕಲೇಶಪುರ ಕ್ಷೇತ್ರಕ್ಕೆ ಮಾಡಿದ ಸಾಧನೆ ಏನು ಎಂದು ಪ್ರಶ್ನಿಸಿದ್ದಾರೆ.
ಹಿಂದೆ ರೇವಣ್ಣ ಅವರು ಕ್ಷೇತ್ರಕ್ಕೆ ಬಿಡುಗಡೆಗೊಳಿಸಿದ ಹಣವನ್ನೆಲ್ಲ ರಸ್ತೆ ಅಗಲೀಕರಣ ಮತ್ತಿತರ ಕಾಮಗಾರಿಗಳ ನೆಪದಲ್ಲಿ ಹಣ ದುರುಪಯೋಗ ಮಾಡಿಕೊಂಡಿದ್ದು ಜನತೆಗೆ ಗೊತ್ತಿದೆ. ಅವರಿಗೆ ಆಗ ಕಾಫಿ, ಏಲಕ್ಕಿ ಬೆಳೆಗಾರರ ಬಗ್ಗೆ ಜ್ಞಾನವಿರಲಿಲ್ಲವೇ ಈ ಬಗ್ಗೆ ಶಾಸನಸಭೆಗಳಲ್ಲಿ ಚರ್ಚಿಸಲಿಲ್ಲ.
17 ಗ್ರಾಮಗಳ ಶೀತಪೀಡಿತ ಪ್ರದೇಶಗಳ ಪುನರ್ವಸತಿ ಬಗ್ಗೆ ಜನರಿಂದ ಭಾವನಾತ್ಮಕ ವಿಶ್ವಾಸ ಗಳಿಸಲು ಶಾಸಕರಾಗುವ ಮೊದಲು ಪಾದಯಾತ್ರೆ ಮಾಡಿದ ಅವರು ಶಾಸಕರಾದ ಮೇಲೆ ಮಾಡಿದ ಕೆಲಸಗಳೇನು? ಕ್ಷೇತ್ರದಲ್ಲಿ ಹೊಸ ಯೋಜನೆಗಳೇನಾದರೂ ಪ್ರಾರಂಭಿಸಿದ್ದರೆ ಅವರನ್ನು ನಾವು ಒಪ್ಪಬಹುದಿತ್ತು ಎಂದು ಹೇಳಿದ್ದಾರೆ.
ವಿಶ್ವನಾಥ್ ಅವರಿಗೆ ಮರ ಕಡಿಯುವವರ ಸಂಘದ ಅಧ್ಯಕ್ಷರು, ಪ್ರಗತಿಪರ ಎಂದು ಹೇಳಿಕೊಳ್ಳುತ್ತಲೇ ಒಕ್ಕಲಿಗರ ಸಂಘದ ಅಧ್ಯಕ್ಷರಾದರು. ಈ ರೀತಿ ತಮ್ಮ ಸ್ವಾರ್ಥಗಳನ್ನು ಪೂರೈಸಿಕೊಳ್ಳುತ್ತಾ, ಏನೂ ಕೆಲಸ ಮಾಡದೇ ಕೋಟ್ಯಧಿಪತಿಗಳಾಗುವ ಕೆಲಸ ಮಾತ್ರ ಮಾಡಿದ್ದಾರೆ ಅಷ್ಟೇ ಎಂದು ಟೀಕಿಸಿದ್ದಾರೆ.
ಕಾಡಾನೆ ಸಮಸ್ಯೆ ಇದು ನಿನ್ನೆಯದ್ದಲ್ಲ. ಇದರ ಬಗ್ಗೆ ತಮ್ಮ ಸಾಧನೆ ಏನು ಎಂಬುದನ್ನು ಜನತೆಗೆ ತಿಳಿಸಲಿ, ಈಗ 25 ಆನೆಗಳನ್ನು ಹಿಡಿಯಲು ಕೇಂದ್ರ ಸರ್ಕಾರ ಮತ್ತು ಹೈಕೋರ್ಟ್ ಅನುಮತಿ ದೊರಕಿರುವುದು. ವಿಶ್ವನಾಥ್ ನನ್ನ ಭಾಷಣದಿಂದ ಎಂದು ಭಾವಿಸಿರುವುದು ಹಾಸ್ಯಾಸ್ಪದ ಎಂದು ವ್ಯಂಗ್ಯವಾಡಿದ್ದಾರೆ.
ಪುಟ್ಟೇಗೌಡರು ಶ್ರವಣಬೆಳಗೊಳದಿಂದ ರಾಜಕಾರಣಕ್ಕೆ ಬಂದಿದ್ದು ಯಾರೊಂದಿಗೆ ಎಂಬುದು ಗೊತ್ತೇ? ದೇವೇಗೌಡರ ಭಾವಚಿತ್ರವನ್ನು ತಲೆಯ ಮೇಲೆ ಹೊತ್ತು ಶ್ರೀಕಂಠಯ್ಯನವರು ಮತ್ತು ಕಾಂಗ್ರೆಸ್ ಅವರನ್ನು ಟೀಕಿಸುತ್ತಾ, ಬೈಯುತ ದೇವೇಗೌಡರನ್ನು ಹೊಗಳುತ್ತಾ ಎಲ್ಲ ಅಧಿಕಾರವನ್ನು ಸಂಪಾದಿಸಿ, ಅಧಿಕಾರ ವಂಚಿತರಾದ ಈಗ ಬಹಳ ಬುದ್ಧಿಜೀವಿಗಳಂತೆ ದೇವೇಗೌಡ ಮತ್ತು ಅವರ ಕುಟುಂಬವನ್ನು ಟೀಕಿಸುವ ನೈತಿಕತೆ ಅವರಿಗೆ ಇಲ್ಲ ಎಂದು ಟೀಕಿಸಿದ್ದಾರೆ.
ಅಪ್ಪ ಕಾಂಗ್ರೆಸ್, ಮಗ ಜೆಡಿಎಸ್: ಪುಟ್ಟೇಗೌಡರ ಪುತ್ರ ಪ್ರಸ್ತುತ ಯಾವ ಪಕ್ಷದ ಜಿಲ್ಲಾ ಪಂಚಾಯ್ತಿ ಸದಸ್ಯರು ಎಂಬುದು ತಿಳಿದಿಲ್ಲವಂತಾಗಿದೆ. ಪುತ್ರ ಜೆಡಿಎಸ್ ಸದಸ್ಯರಾಗಿರುವ ಬಗ್ಗೆ ಒಂದು ದಿನ ದೇವೇಗೌಡ ಅಥವಾ ರೇವಣ್ಣ ಅವರಾಗಲೀ ಈ ಬಗ್ಗೆ ಮಾತನಾಡಿಲ್ಲ ಎಂಬುದನ್ನು ಪುಟ್ಟೇಗೌಡರು ಅರ್ಥ ಮಾಡಿಕೊಳ್ಳಲಿ ಎಂದು ಅವರು ಸಲಹೆ ಮಾಡಿದ್ದಾರೆ.
ಎಚ್.ಕೆ. ಜವರೇಗೌಡ ಅವರನ್ನು ರಾಜ್ಯಸಭೆ ಸದಸ್ಯರನ್ನಾಗಿ ಮಾಡಲು ದೇವೇಗೌಡರು ಪಟ್ಟ ಶ್ರಮವನ್ನು ನೆನಪಿಸಿಕೊಳ್ಳಬೇಕಾಗಿದೆ. ನೈತಿಕತೆ ಇದ್ದರೆ ದೇವೇಗೌಡರ ಹಂಗಿನ ನಿವೃತ್ತಿ ವೇತನ ತಿರಸ್ಕರಿಸಲಿ. ಅವರ 6 ವರ್ಷದ ರಾಜ್ಯಸಭೆ ಸದಸ್ಯರ ಸಾಧನೆಯಾದರೂ ಏನು ಈ ಜಿಲ್ಲೆಯ ಹೊಸ ಯೋಜನೆಗಳ ಬಗ್ಗೆ ಒಂದನ್ನಾದರೂ ಗಮನಹರಿಸಿ ಕಾರ್ಯಗತಗೊಳಿಸಿದ್ದರೆ ಇವರು ಒಬ್ಬ ರಾಜಕಾರಣಿ, ಸಾಮಾಜಿಕ ಕಳಕಳಿಯುಳ್ಳವರು ಎಂದು ಭಾವಿಸಬಹುದಿತ್ತು ಎಂದು ಹೇಳಿದ್ದಾರೆ.
ಇಂತಹ ಸುಳ್ಳು ಪ್ರಚಾರ ಪ್ರಿಯರಿಂದ ಜಾರ್ಚ್‌ಶೀಟ್ ಸಲ್ಲಿಕೆ ಪಡೆಯುವ ಅವಶ್ಯಕತೆ ಜೆಡಿಎಸ್‌ಗಾಗಲಿ, ದೇವೇಗೌಡ ಮತ್ತು ರೇವಣ್ಣ ಅವರಿಗಾಗಲೀ ಅವಶ್ಯಕತೆ ಇಲ್ಲ ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.