ಕಾಡಾನೆ ಸೆರೆ ಕಾರ್ಯಾಚರಣೆ ಸ್ಥಗಿತ
ಹಾಸನ: ಇದೊಂದು ರೀತಿ ರೈತರಿಗೆ ಸಮಾಧಾನಪಡಿಸಲು ಕಾಡಾನೆಯನ್ನು ಹಿಡಿದಂತಾಗಬೇಕು, ಹಿಡಿಯದಂತಾಗಲೂ ಬೇಕು... ಎಂಬ ದ್ವಿಮುಖ ನೀತಿ. ಅರಣ್ಯ ಇಲಾಖೆಯವರು ಜಿಲ್ಲೆಯ ಆಲೂರು ಮತ್ತು ಸಕಲೇಶಪುರ ಗಡಿಭಾಗದ ಕೆರೋಡಿ ಸಮೀಪ ಗಂಡಾನೆಯನ್ನು ಹಿಡಿದ ನಂತರ ಕಾಡಾನೆಗಳ ಸೆರೆ ಕಾರ್ಯಾಚರಣೆ ನಿಲ್ಲಿಸಿರುವುದಕ್ಕೆ ರೈತರು ಹೀಗೆ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈಗ ಹಿಡಿದಿರುವ ಗಂಡಾನೆ ಇನ್ನೂ ವಯಸ್ಸಿಗೆ ಬಂದಿಲ್ಲ. ಅದರ ದಂತ 2 ಅಡಿ ಬೆಳೆದಿರುವುದೇ ಅದಕ್ಕೆ ಸಾಕ್ಷಿಯಾಗಿದೆ. ಅದರಿಂದ ಅಷ್ಟೇನು ಅಪಾಯಕಾರಿಯಾಗಿರಲಿಲ್ಲ. ಆದರೆ ಮಾನವರನ್ನು ಕಂಡರೇ ರಾಕ್ಷಸ ರೂಪ ತಳೆದು ಕೊಲ್ಲುತ್ತಿರುವ ಮಕ್ನಾ(ಗಂಡು ಅಲ್ಲದ ಹೆಣ್ಣು ಅಲ್ಲದ ದಂತವಿಲ್ಲದ ಆನೆ) ಎಂಬ ಒಂಟಿ ಸಲಗ ಮತ್ತು ಮತ್ತೊಂದು ಒಂಟಿ ಸಲಗವನ್ನು ಸೆರೆ ಹಿಡಿಯಬೇಕಿತ್ತು. ಆದರೆ ಇನ್ನೂ ದಂತವೇ ನ್ಯಾಯವಾಗಿ ಬೆಳೆದಿರದ ಗಂಡಾನೆ ಹಿಡಿದು ಕಾರ್ಯಾಚರಣೆ ನಿಲ್ಲಿಸಿರುವುದು ಸರಿಯಲ್ಲ ಎಂದು ಕಾಡಾನೆ ಪೀಡಿತ ಪ್ರದೇಶದ ವ್ಯಾಪ್ತಿಯಲ್ಲಿ ಇರುವ ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಾಡಾನೆಗಳ ದಾಳಿ ಹೆಚ್ಚಾದಂತೆ ಆಗಮಿಸಿದ್ದ ಅರಣ್ಯ ಸಚಿವರು ಹೈಕೋರ್ಟ್ ತೀರ್ಪಿನಂತೆ ಸದ್ಯಕ್ಕೆ ಎರಡು ಕಾಡಾನೆಗಳನ್ನು ಹಿಡಿದು ಸ್ಥಳಾಂತರಿಸಲಾಗುವುದು. ನಂತರದ ದಿನಗಳಲ್ಲಿ ಹಂತ ಹಂತವಾಗಿ ಎಲ್ಲಾ 25 ಆನೆಗಳನ್ನು ಹಿಡಿದು ಸ್ಥಳಾಂತರಿಸಲಾಗುವುದು ಎಂದು ಹೇಳಿದ್ದರು. ಆದರೆ ಈಗ ಮಾಡಿದ್ದೇನು...? ಅಪಾಯಕಾರಿಯಲ್ಲದ ಎಳಸು ಗಂಡಾನೆಯನ್ನು ಹಿಡಿದು ನಂತರ ಕಾರ್ಯಾಚರಣೆಯನ್ನು ನಿಲ್ಲಿಸಲಾಗಿದೆ. ಇದರಿಂದ ಕಾಡಾನೆಗಳ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯವೇ ಎಂದು ಪ್ರಶ್ನಿಸುತ್ತಾರೆ ರೈತ ಮುಖಂಡ ಕಣಗಾಲು ಮೂರ್ತಿ.
ಆಘಾತಕಾರಿ ಅಂಶವೆಂದರೆ, ಅರಣ್ಯ ಇಲಾಖೆ ಸಿಬ್ಬಂದಿ ಗಂಡಾನೆಯನ್ನು ಹಿಡಿದು ಸ್ಥಳಾಂತರಿಸಿದ ನಂತರ ಮಾರನೇ ದಿನದಿಂದಲೇ ಕಾಡಾನೆಗಳು ಜಮೀನುಗಳಿಗೆ ನುಗ್ಗಿ ಮನಸೋ ಇಚ್ಛೆ ಬೆಳೆ ತಿನ್ನುವುದಲ್ಲದೇ ಧ್ವಂಸ ಮಾಡುತ್ತಿವೆ. ಬತ್ತ, ಕಾಫಿ, ಬಾಳೆ, ಕರಿಮೆಣಸು ಮತ್ತಿತರ ಬೆಳೆಗಳು ಮತ್ತೆ ಚಿಗುರಬಾರದು ಎಂಬ ಮಟ್ಟಿಗೆ ನಾಶ ಮಾಡಲಾರಂಭಿಸಿವೆ. ಪರಿಸ್ಥಿತಿ ಈಗಿರುವಾಗ ಅರಣ್ಯ ಇಲಾಖೆ ಒಂದಾನೆಯನ್ನು ಮಾತ್ರ ಹಿಡಿದು ಕಾರ್ಯಾಚರಣೆ ನಿಲ್ಲಿಸುವುದು ಸರ್ವತ ಸರಿಯಲ್ಲ ಎಂಬುದು ರೈತರ ವಾದವಾಗಿದೆ.
ಉಗ್ರ ಪ್ರತಿಭಟನೆ ಎಚ್ಚರಿಕೆ: ಕೂಡಲೇ ಕಾಡಾನೆಗಳನ್ನು ಹಿಡಿದು ಸ್ಥಳಾಂತರ ಮಾಡಲು ಕಾರ್ಯಾಚರಣೆ ಮುಂದುವರಿಸಬೇಕು. ಕಾಡಾನೆಗಳು ಈ ಭಾಗಗಳಲ್ಲಿ 8-10 ಕಡೆ ಗುಂಪು ಗುಂಪಾಗಿ ಓಡಾಡಿಕೊಂಡು ಇಡೀ ಗ್ರಾಮಸ್ಥರ ಜಮೀನಿನಲ್ಲಿ ಬೆಳೆದಿರುವ ಫಸಲುಗಳನ್ನು ತಿಂದು ತುಳಿದು ಲೂಟಿ ಮಾಡುತ್ತಿವೆ. ಈಗಾಗಲೇ ಲಕ್ಷಾಂತರ ರು. ಮೌಲ್ಯದ ಬೆಳೆ ನಾಶವಾಗಿದೆ ಹಾಗೂ ಶೀಘ್ರದಲ್ಲಿಯೇ ಮತ್ತೊಮ್ಮೆ ಜೀವನ ಹಾನಿಯಾಗುವುದು ಖಂಡಿತ. ಇದರಿಂದ ಅರಣ್ಯ ಇಲಾಖೆಯವರು ಕಾಡಾನೆಗಳನ್ನು ಹಿಡಿಯುವಲ್ಲಿ ಮುಂದುವರಿಸುವುದೂ ಸೂಕ್ತ. ಈ ಬಗ್ಗೆ ನಿರ್ಲಕ್ಷ್ಯ ಧೋರಣೆ ತೋರಿದಲ್ಲಿ ಅರಣ್ಯ ಇಲಾಖೆ ಹಾಗೂ ಸರ್ಕಾರದ ವಿರುದ್ಧ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಆಲೂರು ತಾಲೂಕು ಬೆಳೆಗಾರರ ಸಂಘದ ಪದಾಧಿಕಾರಿಗಳಾದ ಎಚ್.ಕೆ. ಚಂದ್ರೇಗೌಡ, ಕೆ.ವಿ. ಚಂದ್ರಶೇಖರ್, ಬಿ.ಎ. ಕಾಂತರಾಜು, ಬಿ. ಲೋಕೇಶ್ ಎಚ್ಚರಿಕೆ ನೀಡಿದ್ದಾರೆ.
ಅರವಳಿಕೆ ಚುಚ್ಚುಮದ್ದು ಖಾಲಿ: ಮೂಲಗಳ ಪ್ರಕಾರ, ಅರಣ್ಯ ಇಲಾಖೆ ಒಂದಾನೆಯನ್ನು ಮಾತ್ರ ಹಿಡಿದು ಕಾರ್ಯಾಚರಣೆ ಸ್ಧಗಿತಗೊಳಿಸಲು ಕಾರಣ ಕಾಡಾನೆಗಳ ಪ್ರಜ್ಞೆ ತಪ್ಪಿಸಲು ನೀಡುವ ಅರವಳಿಕೆ ಚುಚ್ಚುಮದ್ದು ಮುಗಿದಿದ್ದು. ಈ ಅರವಳಿಕೆ ಚುಚ್ಚುಮದ್ದನ್ನು ಲಂಡನ್ನಿಂದ ದೆಹಲಿಯ ವನ್ಯಜೀವಿ ನಿರ್ದೇಶನಾಲಯ ತರಿಸಿ, ಆಯಾ ರಾಜ್ಯಗಳಿಗೆ ಸಮಯಕ್ಕೆ ತಕ್ಕಂತೆ ನೀಡಬೇಕು. ಆದರೆ ಅಗತ್ಯದಷ್ಟು ಚುಚ್ಚುಮದ್ದು ಇಲ್ಲದ ಕಾರಣ ಬೇರೆ ದಾರಿ ಕಾಣದೇ ಕಾಡಾನೆಗಳ ಸೆರೆ ಕಾರ್ಯಾಚರಣೆ ನಿಲ್ಲಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಅರಣ್ಯ ಇಲಾಖೆ ಅಧಿಕಾರಿಗಳನ್ನು ಇದನ್ನು ಒಪ್ಪುವುದಿಲ್ಲ. ಚುಚ್ಚುಮದ್ದಿನ ಕೊರತೆಯೇನು ಇಲ್ಲ. ಹೈಕೋರ್ಟ್ ಈಗ ಒಂದಾನೆ ಹಿಡಿಯಲು ಮಾತ್ರ ಅನುಮತಿ ನೀಡಿದೆ. ಮತ್ತೊಂದನ್ನು ಹಿಡಿಯಲು ಅನುಮತಿ ಕೊಟ್ಟ ಕೂಡಲೇ ಕಾರ್ಯಾಚರಣೆ ಆರಂಭಿಸಲಾಗುವುದು ಎಂದು ಹೇಳುತ್ತಾರೆ. ಆದರೆ ಸಚಿವರು, ಅರಣ್ಯ ಇಲಾಖೆ ಪ್ರಧಾನ ಸಂರಕ್ಷಣಾಧಿಕಾರಿಗಳು, ಈಗ ಎರಡಾನೆಗಳನ್ನು ಹಿಡಿಯಲಾಗುವುದು ಎಂದು ಹೇಳಿದ್ದು ಸುಳ್ಳೇ
ಟಿ ರೈತ ಚುಂಚೇಗೌಡ
ದಯಾಶಂಕರ ಮೈಲಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

