ಲಕ್ಷಗಟ್ಟಲೆ ಹಣ ಕಳೆದುಕೊಂಡ ಮಹಿಳಾ ಸಂಘಟನೆಗಳು
ಕ.ಪ್ರ. ವಾರ್ತೆ ರಾಮನಾಥಪುರ ಅ.1
ಕಡಿಮೆ ಬಡ್ಡಿ ದರದಲ್ಲಿ ಹಣ ನೀಡಲಾಗುವುದು ಎಂಬ ಸುಳ್ಳು ಆಮಿಷಕ್ಕೆ ಬಲಿಯಾಗಿ ತಮ್ಮಲ್ಲಿದ್ದ ಹಣ ಕಳೆದುಕೊಂಡ ಮಹಿಳಾ ಸಂಘ ಹಾಗೂ ಗ್ರಾಮಸ್ಥರು ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ಇತ್ತೀಚೆಗೆ ನಡೆದಿದೆ.
ಸಮೀಪದ ಬಸವಾಪಟ್ಟಣದ ಮುಖ್ಯ ರಸ್ತೆಯ ಸರ್ಕಾರಿ ಆಸ್ಪತ್ರೆ ಎದುರು ಶ್ರೀಲಕ್ಷ್ಮಿ ಸಾಮಾಜಿಕ ಸೇವಾ ಸಂಸ್ಥೆ (ರಿ) ಕಚೇರಿ ತೆರದಿದ್ದು, ಇದರ ಪ್ರಧಾನ ವ್ಯವಸ್ಥಾಪಕ ಚಿತ್ರದುರ್ಗ ಮೂಲದ ತಿಪ್ಪೇಸ್ವಾಮಿ ಎಂಬಾತ.
ಈತ ಇಲ್ಲಿ ಕಚೇರಿ ತೆರದಿರುವ ಬಸವಾಪಟ್ಟಣದ ಮಳಿಗೆ ಮಾಲೀಕರಾದ ಮಣಿಯಮ್ಮ ಹಾಗೂ ಸ್ಥಳೀಯರಾದ ಉಮಾಭಾರತಿ ಎಂಬುವರೊಂದಿಗೆ ಸುತ್ತಮುತ್ತಲ ಗ್ರಾಮಗಳ ಮಹಿಳಾ ಸಂಘಟನೆಗಳನ್ನು ಸಂಪರ್ಕಿಸಿ ಪರಿಚಯಿಸಿ ಕೊಂಡಿದ್ದರು.
ನಂತರ ಅವರೊಂದಿಗೆ ನಮ್ಮ ಸಂಸ್ಥೆ ಬೆಂಗಳೂರು ಮತ್ತು ದಾವಣಗೆರೆಯಲ್ಲಿ ಪ್ರಧಾನ ಕಚೇರಿ ಹೊಂದಿದೆ ಮತ್ತು ಕೇಂದ್ರದಿಂದ ಅನುದಾನ ಹೊಂದಿದ್ದು ನಮ್ಮ ಸಂಸ್ಥೆಯ ಜೊತೆಗೆ ದೇವರಾಜ ಅರಸು ನಿಗಮ ಮಂಡಳಿಯೊಂದಿಗೆ ಟೈಯಪ್ ಮಾಡಿಕೊಂಡಿರುವುದರಿಂದ ನಮ್ಮ ಸಂಸ್ಥೆಗೆ ಹಣ ಕಟ್ಟುವ ಪ್ರತಿ ಮಹಿಳಾ ಸಂಘಟನೆಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಹಣ ನೀಡಲಾಗುವುದು. ಮನೆ ಕಟ್ಟಲು, ಹಸು ಕೊಳ್ಳಲು, ಗುಡಿ ಕೈಗಾರಿಕೆ, ಸಣ್ಣಕೈಗಾರಿಕೆ ಇತ್ಯಾದಿಗಳಿಗೆ ಸಾಲ ನೀಡಲಾಗುವುದು.
ಇದರಲ್ಲಿ ಸಬ್ಸಿಡಿ ಹೆಚ್ಚು ಇರುವುದರಿಂದ ಆರಂಭದಲ್ಲಿ 20 ಸಾವಿರ ರು. ನೀಡಿ 18 ತಿಂಗಳು ನೀವು ಹಣ ಕಟ್ಟಿದ ಬಳಿಕ ಮತ್ತೆ ನಿಮಗೆ 40 ಸಾವಿರ ರು. ನೀಡುತ್ತೇವೆ. ಆಗ ಬರಿ 30 ಸಾವಿರ ರು. ಮಾತ್ರ ಕಟ್ಟಿ ಇನ್ನುಳಿದ 10 ಸಾವಿರ ರು. ಸಬ್ಸಿಡಿಯಿದ್ದು, ಕಟ್ಟುವ ಅವಶ್ಯಕತೆ ಇಲ್ಲ. ಇದೇ ರೀತಿ ಮುಂದೆ ನಮ್ಮ ಸಂಸ್ಥೆಯಿಂದ ಲಕ್ಷಗಟ್ಟಲೆ ಹಣದ ಪ್ರಯೋಜನ ಪಡೆದುಕೊಳ್ಳಬಹುದು. ಈ ಸದಾವಕಾಶ ಕಳೆದುಕೊಳ್ಳಬೇಡಿ ಎಂದು ಪುಸಲಾಯಿಸಿದ್ದರು.
ಯಾವುದೇ ಮಹಿಳಾ ಸಂಘಟನೆಯಲ್ಲಿ 20 ಸದಸ್ಯರಿದ್ದು, ಅದೇ ರೀತಿ ಸಮಾರು 80 ಸಂಘಟನೆಗಳಿಂದ ಒಬ್ಬರಿಗೆ ತಲಾ 300, 500, 1000 ರು.ನಂತೆ ಹಣ ವಸೂಲಿ ಮಾಡಲಾಗಿದ್ದು, ಕೊನೆಗೆ ನಿರುದ್ಯೋಗಿ ಪುರುಷರಿಗೆ ಸ್ವಯಂ ಉದ್ಯೋಗ ನಡೆಸಲು ಒಂದು ಲಕ್ಷದಿಂದ 10 ಲಕ್ಷದವರೆಗೂ ಸಬ್ಸಿಡಿ ಸಾಲ ನೀಡುವುದಾಗಿ ತಲಾ ಒಬ್ಬರಿಂದ 100-150 ರು. ವಸೂಲು ಮಾಡಲಾಗಿದೆ. ಹಣ ಪಡೆದವರಿಗೆ ಒಂದು ಕಾರ್ಡ್ ನೀಡಿ ಅದರಲ್ಲಿ ದೂರವಾಣಿ ನಂ 8904440482 ನೀಡಿದ್ದು ಇದುವರೆಗೂ ಹಣ ಕಟ್ಟಿಸಿಕೊಂಡು ಏಳೆಂಟು ತಿಂಗಳಾಗುತ್ತಾ ಬಂದಿದ್ದರೂ ಲಕ್ಷ್ಮಿ ಸಾಮಾಜಿಕ ಸೇವಾ ಸಂಸ್ಥೆ(ರಿ) ಯಿಂದ ಯಾವ ಮಹಿಳಾ ಸಂಘಟನೆಗಳಿಗೂ ಸಾಲ ನೀಡಿಲ್ಲ ಎಂದು ದೂರಲಾಗಿದೆ.
ಒಟ್ಟಿನಲ್ಲಿ ತಿಪ್ಪೇಸ್ವಾಮಿ ಸುಳ್ಳಿನ ಬಲೆಗೆ ಅಮಾಯಕರನ್ನು ಬೀಳಿಸಿ, ಮಹಿಳಾ ಸಂಘಟನೆ, ಗ್ರಾಮಸ್ಥರಿಂದ 8ರಿಂದ 10 ಲಕ್ಷ ರು. ವರೆಗೂ ಹಣ ಕಮಾಯಿಸಿ ಕೊನೆಗೆ ತನ್ನ ಹೆಸರಿಗೆ ತಕ್ಕಂತೆ ಚನ್ನಾಗಿ ತಿಪ್ಪೇ ಸಾರಿಸಿ ಹೋದ ಎಂದು ಸಮೀಪದ ಬೆಳವಾಡಿ ಗ್ರಾಮದ ಹಣ ಕಳೆದುಕೊಂಡಿರುವ ಮಹಿಳಾ ಸಂಘಟನೆ ಹಾಗು ಗ್ರಾಮದ ರಾಜೇಂದ್ರ ಸುರೇಶ್ ಇನ್ನಿತರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ರೀತಿ ಸರ್ಕಾರದ ಅಂಗ ಸಂಸ್ಥೆಗಳೆಂದು ಸುಳ್ಳು ಹೇಳುತ್ತಾ ಹಳ್ಳಿಗಳಿಗೆ ಬಂದು ಅಮಾಯಕರನ್ನು ವಂಚಿಸುತ್ತಿರುವ ತಿಪ್ಪೆಸ್ವಾಮಿಯನ್ನು ಬಂಧಿಸಿ ನಮ್ಮ ಹಣ ಮರಳುವಂತೆ ಮಾಡುವರೇ ಎಂಬ ಆಶಯ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

