ಹಿರಿಯ ನಾಗರಿಕರಿಗೆ ತಾತ್ಕಾಲಿಕ ಭತ್ಯೆ
ಕನ್ನಡಪ್ರಭ ವಾರ್ತೆ ಹಾಸನ ಅ.1
ತಂದೆತಾಯಿ ಬಳಿ ಮಕ್ಕಳು ಆಸ್ತಿಯನ್ನು ಬರೆಸಿಕೊಂಡು ಅವರನ್ನು ಹೊರಹಾಕಿದಲ್ಲಿ ಅಥವಾ ಸರಿಯಾಗಿ ನೋಡಿಕೊಳ್ಳದೆ ಇದ್ದಲ್ಲಿ ಅದನ್ನು ರದ್ದುಪಡಿಸಿ ತಾತ್ಕಾಲಿಕ ನಿರ್ವಹಣೆ ಭತ್ಯೆಯನ್ನು ಒದಗಿಸುವ ಅಧಿಕಾರವನ್ನು ಉಪವಿಭಾಗಾಧಿಕಾರಿಗೆ ನೀಡಲಾಗಿದೆ. 90 ದಿನಗಳೊಳಗೆ ಈ ಬಗ್ಗೆ ತೀರ್ಪು ನೀಡಲಾಗುತ್ತದೆ ಎಂದು ಜಿಲ್ಲಾ ಪ್ರಧಾನ ನ್ಯಾಯಾಧೀಶ ಜೆ.ಎಸ್. ಸೋಮಶೇಖರ್ ತಿಳಿಸಿದರು.
ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯ್ತಿ, ವಿಕಲ ಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಇತರೆ ಸಂಘ ಸಂಸ್ಥೆಗಳ ಆಶ್ರಯದಲ್ಲಿ ನಗರದ ಗವೇನಹಳ್ಳಿಯಲ್ಲಿರುವ ಚೈತನ್ಯ ಮಂದಿರ ವೃದ್ಧಾಶ್ರಮದಲ್ಲಿ ಮಂಗಳವಾರ ನಡೆದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ತಂದೆ ತಾಯಿಯರನ್ನು ಸಾಕುವುದು ಪ್ರತಿ ಮಕ್ಕಳ ಜವಾಬ್ದಾರಿ, ನಿರ್ಲಕ್ಷ್ಯಕ್ಕೆ ಒಳಗಾಗುವ ಎಲ್ಲ ಹಿರಿಯ ನಾಗರಿಕರಿಗೂ ಕಾನೂನಿನಲ್ಲಿ ಸಾಕಷ್ಟು ರಕ್ಷಣೆಗಳಿದ್ದು, ಇದಕ್ಕಾಗಿಯೇ ಉಪವಿಭಾಗಾಧಿಕಾರಿಗೆ ಅಧಿಕಾರ ನೀಡಲಾಗಿದೆ. ದತ್ತು ಮಕ್ಕಳಿಂದ ಅಥವಾ ಅಣ್ಣತಮ್ಮಂದಿರ ಮಕ್ಕಳಿಂದ ಈ ರೀತಿ ತೊಂದರೆಗೆ ಒಳಗಾಗಿದ್ದರೂ ನ್ಯಾಯ ಪಡೆಯಬಹುದು ಎಂದು ಹೇಳಿದರು.
ಯಾವುದೇ ಸಂಕಷ್ಟದ ಪರಿಸ್ಥಿತಿಯಲ್ಲಿ ಹಿರಿಯ ನಾಗರಿಕರು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಅಥವಾ ತಾಲ್ಲೂಕು ಕಾನೂನು ಸೇವಾ ಪ್ರಾಧಿಕಾರದ ನೆರವು ಪಡೆಯಬಹುದು. ಶೀಘ್ರವಾಗಿ ನ್ಯಾಯ ಕೊಡಿಸಲು ಶ್ರಮಿಸಲಾಗುವುದು. ಪರಿಹಾರ ಕೊಡಲು ನಿರಾಕರಿಸಿದವರಿಂದ ಬಲತ್ಕಾರದಿಂದಲೂ ಪಡೆಯಲು ಕಾನೂನಿಲ್ಲಿ ಅವಕಾಶವಿದೆ ಎಂದು ಅವರು ಹೇಳಿದರು.
ಇದೇ ವೇಳೆ ಅಸಹಾಯಕ ವೃದ್ಧರ ಪಾಲನೆ ಹಾಗೂ ಅನಾಥ ಮಕ್ಕಳ ಸೇವೆ ಸಲ್ಲಿಸುತ್ತಿರುವ ಚೈತನ್ಯ ಮಂದಿರ ಮತ್ತು ಅದರ ಮೇಲ್ವಿಚಾರಣೆ ನೋಡಿಕೊಳ್ಳುತ್ತಿರುವ ಡಾ.ಹೆಬ್ಬಾರ್ ಹಾಗೂ ತಂಡದವರ ಸೇವೆಯನ್ನು ಪ್ರಧಾನ ಜಿಲ್ಲಾ ನ್ಯಾಯಾಧೀಶರು ಶ್ಲಾಘಿಸಿದರು.
ಹಿರಿಯ ನಾಗರಿಕರ ನೆರವಿಗಾಗಿ ಸಹಾಯವಾಣಿ ಇದ್ದು ದೂರವಾಣಿ ಕರೆ ಮಾಡಿ ತಿಳಿಸಿದರೂ ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ನೆರವಿಗೆ ಧಾವಿಸುತ್ತಾರೆ ಎಂದು ತಿಳಿಸಿದರು.
ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಎ.ಮುಸ್ತಫಾ ಹುಸೇನ್ ಮಾತನಾಡಿ, ಹಿರಿಯ ನಾಗರಿಕರ ಸೇವೆಗೆ ಕಾನೂನು ಸೇವಾ ಪ್ರಾಧಿಕಾರ ಸದಾ ಸಿದ್ಧವಿದೆ ಎಂದರು.
ಹಿರಿಯ ನಾಗರಿಕರ ತೊಂದರೆಗಳ ವಿಚಾರದಲ್ಲಿ ಮಧ್ಯವರ್ತಿಗಳ ಬಳಕೆಗೂ ಅವಕಾಶವಿಲ್ಲ. ಯಾರಿಗೆ ಅನ್ಯಾಯವಾಗಿದೆಯೋ ಅವರೇ ನೇರವಾಗಿ ಉಪವಿಭಾಗಾಧಿಕಾರಿಗೆ ಅರ್ಜಿ ಸಲ್ಲಿಸಬಹುದು. ತ್ವರಿತವಾಗಿ ವಿಚಾರಣೆ ನಡೆದು ನ್ಯಾಯ ದೊರಲಿದೆ ಯಾವುದೇ ವಕೀಲರ ಬಳಕೆ ಅಗತ್ಯವಿರುವುದಿಲ್ಲ ಎಂದು ಅವರು ಮಾಹಿತಿ ನೀಡಿದರು.
ಜಿಲ್ಲಾ ಎಸ್ಪಿ ರವಿ ಚನ್ನಣ್ಣನವರ್ ಮಾತನಾಡಿ, ದೇಶದಲ್ಲಿ ವೃದ್ಧಾಶ್ರಮ, ಅನಾಥಾಶ್ರಮಗಳು ಹೆಚ್ಚಾಗುವುದು ಸಾಂತ್ವನದ ವಿಚಾರದಲ್ಲಿ ಮಾನವೀಯ ಸಂಬಂಧಗಳಲ್ಲಿನ ಕೊರತೆಯೇ ಇದಕ್ಕೆ ಕಾರಣ. ಹಡೆದ ಮಗುವನ್ನು ಬೀದಿಗೆ ಬಿಡುವುದು, ಜನ್ಮ ಕೊಟ್ಟು ಸಾಕಿ ಸಲಹಿದ ತಂದೆ ತಾಯಿಗಳನ್ನು ಹೊರಗಟ್ಟುವುದು ಸಂಸ್ಕೃತಿಯಲ್ಲ ಎಂದು ಹೇಳಿದರು.
ಡಾ.ಹೆಬ್ಬಾರ್ ನೇತೃತ್ವದ ಚೈತನ್ಯ ಮಂದಿರಕ್ಕೆ ಹಾಗೂ ಎಲ್ಲಾ ಹಿರಿಯ ನಾಗರಿಕರಿಗೆ ತಮ್ಮ ಇಲಾಖೆ ವತಿಯಿಂದ ಹಾಗೂ ವೈಯಕ್ತಿವಾಗಿ ಅಗತ್ಯವಿರುವ ಎಲ್ಲಾ ನೆರವನ್ನು ನೀಡಲು ಸಿದ್ಧ ಎಂದು ಅವರು ತಿಳಿಸಿದ್ದಾರೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಚ್.ಸಿ. ಚಿದಾನಂದ್ ಮಾತನಾಡಿ, ವಿಶ್ವ ಹಿರಿಯ ನಾಗರಿಕರ ದಿನಾಚರಣೆಯ ಉದ್ದೇಶ ಹಿರಿಯ ನಾಗರಿಕರಿಗಾಗಿ ಹೊಸದಾಗಿ ಬಂದಿರುವ ಕಾನೂನಿನ ರಕ್ಷಣೆಗಳ ಬಗ್ಗೆ ವಿವರಿಸಿದರು.
ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ಮೂಲಕ 7.15 ಲಕ್ಷ ರು. ವೆಚ್ಚದಲ್ಲಿ ಹಿರಿಯ ನಾಗರಿಕರ ಸಹಾಯವಾಣಿ ತೆರೆಯಲಾಗುತ್ತಿದ್ದು, ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಇದರ ಕಾರ್ಯ ನಿರ್ವಹಣೆ ನಡೆಯಲಿದೆ. ಅಲ್ಲದೆ ಇದರ ಮೂಲಕವೇ ಹಿರಿಯ ನಾಗರಿಕರಿಗೆ ಗುರುತಿನ ಚೀಟಿಯನ್ನು ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಕಲಾ ಕಾಲೇಜು ಸಮಾಜ ಶಾಸ್ತ್ರ ಅಧ್ಯಯನ ವಿಭಾಗದ ಸಂಯೋಜಕ ಡಿ.ಜಿ.ಕೃಷ್ಣೇಗೌಡ ಮಾತನಾಡಿ, ವೃದ್ಧಾಶ್ರಮ ಸಂಖ್ಯೆ ಕಡಿಮೆಯಾಗಬೇಕಾದರೆ ಹಿರಿಯರ ಬಗೆಗಿನ ಭಾವನಾತ್ಮಕ ಬಾಂಧವ್ಯ ಹೆಚ್ಚಬೇಕು ಈ ಬಗ್ಗೆ ಹಿರಿಯರಿಗೆ ಅರಿವು ಮೂಡಿಸಬೇಕು, ಶಾಲಾ ಕಾಲೇಜುಗಳ ಪಠ್ಯದಲ್ಲಿ ಇದನ್ನು ಅಳವಡಿಸಬೇಕು ಎಂದರು.
ಲಯನ್ಸ್ ಅಧ್ಯಕ್ಷ ಗಿರೀಶ್ಕುಮಾರ್ ಮಾತನಾಡಿ, ತಮ್ಮ ಸಂಸ್ಥೆಯೂ ಸಹ ಸೇವಾ ಕಾರ್ಯದಲ್ಲಿ ತೊಡಗಿದ್ದು, ಹಿರಿಯರ ಸಮಸ್ಯೆಗಳಿಗೆ ಸ್ಪಂದಿಸಲು ಸಹ ಸಿದ್ಧವಿದೆ ಎಂದರು. ವಕೀಲರ ಸಂಘದ ಅಧ್ಯಕ್ಷ ದೇವರಾಜೇಗೌಡ ಮಾತನಾಡಿದರು.
ಡಾ. ಲೋಕೇಶ್ ಚೈತನ್ಯ ಮಂದಿರ ವೃದ್ಧಾಶ್ರಮಕ್ಕೆ 1 ಲಕ್ಷ ಹಾಗೂ ಅನಾಥ ಮಕ್ಕಳ ಬಾಲಮಂದಿರಕ್ಕೆ 25 ಸಾವಿರ ರು ದೇಣಿಗೆ ನೀಡಿದ್ದನ್ನು ಡಾ.ಹೆಬ್ಬಾರ್ ಅವರಿಗೆ ಹಸ್ತಾಂತರಿಸಲಾಯಿತು. ಇದೇ ವೇಳೆ ವೃದ್ಧಾಶ್ರಮ ಹಾಗೂ ಬಾಲ ಮಂದಿರದಲ್ಲಿನ ಸೇವೆಗಾಗಿ ವೈದ್ಯರನ್ನು ಗೌರವಿಸಲಾಯಿತು ಮತ್ತು ಹಿರಿಯ ನಾಗರಿಕರನ್ನು ಸನ್ಮಾನಿಸಲಾಯಿತು.
ಜಿಲ್ಲಾ ವಿಕಲ ಚೇತನರ ಮತ್ತು ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಎ.ಜಿ.ಮಲ್ಲೇಶ್ ವಂದಿಸಿದರು. ಹಿರಿಯ ನಾಗರಿಕರಿಗಾಗಿ ನಡೆದ ನಾನಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

