ಸಬಕೋ ಸನ್ಮತಿ ದೇ ಭಗವಾನ್...
ಕ.ಪ್ರ.ವಾರ್ತೆ ಹಾಸನ ಅ.2
ಸಬಕೋ ಸನ್ಮತಿ ದೇ ಭಗವನ್...
ಸರ್ವರಿಗೂ ಸದ್ಬುದ್ಧಿ ನೀಡುವಂತೆ ಭಗವಂತನಲ್ಲಿ ಪ್ರಾರ್ಥಿಸುವ ಮೂಲಕ ದೇಶದ ಪ್ರಜೆಗಳನ್ನು ಬ್ರಿಟಿಷರ ದಾಸ್ಯ ಸಂಕೋಲೆಯಿಂದ ಬಿಡಿಸಿದ ರಾಷ್ಟ್ರಪಿತ ಮಹಾತ್ಮಗಾಂಧಿ ಜನ್ಮ ದಿನಾಚರಣೆಯನ್ನು ಬುಧವಾರ ಜಿಲ್ಲಾದ್ಯಂತ ಆಚರಿಸುವ ಮೂಲಕ ಗೌರವ ಮರ್ಪಿಸಲಾಯಿತು.
ಹಾಸನ ನಗರ ಸೇರಿದಂತೆ ಬೇಲೂರು, ಆಲೂರು, ಚನ್ನರಾಯಪಟ್ಟಣ, ಅರಸೀಕೆರೆ, ಹೊಳೆನರಸೀಪುರ, ಸಕಲೇಶಪುರ ತಾಲೂಕುಗಳಲ್ಲಿ ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಅವರ ತತ್ವಾದರ್ಶಗಳನ್ನು ನೆನಪಿಸಿಕೊಳ್ಳುವ ಮೂಲಕ ಮಹಾತ್ಮರನ್ನು ಸ್ಮರಿಸಿಕೊಳ್ಳಲಾಯಿತು. ಜಿಲ್ಲಾಡಳಿತ ಗಾಂಧೀಜಿ ಜತೆಗೆ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯನ್ನೂ ಅರ್ಥರ್ಪೂಣವಾಗಿ ಆಚರಿಸಿದ್ದು ವಿಶೇಷವಾಗಿತ್ತು.
ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬುಧವಾರ ಜಿಲ್ಲಾಡಳಿತ ಹಾಗೂ ವಾರ್ತಾ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆದ ಗಾಂಧಿ ಜಯಂತಿ ಹಾಗೂ ಲಾಲಬಹದ್ದೂರ್ ಶಾಸ್ತ್ರಿ ದಿನಾಚರಣೆ ಕಾರ್ಯಕ್ರಮದಲ್ಲಿ ಹಿಂದೂ ಕ್ರೈಸ್ತ, ಮುಸ್ಲಿಂ ಧರ್ಮಗುರುಗಳು ಶಾಂತಿ ಸಂದೇಶ ನೀಡಿದರು.
ದೇಶಕ್ಕೆ ಸ್ವಾತಂತ್ರ್ಯ ದೊರಕಿಸಲು ಅಹಿಂಸಾ ಮಾರ್ಗದಲ್ಲಿ ಹೋರಾಟ ಮಾಡಿ ದೇಶಕ್ಕಾಗಿ ದುಡಿದ ಶಾಂತಿದೂತ ಮಹಾತ್ಮ ಗಾಂಧಿ ಅವರ ಸಾಧನೆ ಮಾರ್ಗವನ್ನು ಅನುಸರಿಸುವಂತೆ ಆದಿಚುಂಚನಗಿರಿ ಮಠದ ಶಂಭುನಾಥ ಸ್ವಾಮೀಜಿ ಕರೆ ನೀಡಿದರು.
ಮನುಷ್ಯನ ಹುಟ್ಟು-ಸಾವುಗಳ ನಡುವಿನ ಜೀವನ ಸಾರ್ಥಕ ಮಾಡಿಕೊಳ್ಳಲು ಇಂತಹ ಮಹಾನ್ ಪುರುಷರ ಅದರ್ಶಗಳನ್ನು ಮೈಗೂಡಿಸಿಕೊಳ್ಳುವುದರ ಜೊತೆಗೆ ಅವುಗಳನ್ನು ಅನುಷ್ಠಾನಕ್ಕೆ ತರುವ ಮೂಲಕ ಜನ್ಮ ಸಾರ್ಥಕ ಪಡಿಸಿಕೊಳ್ಳಬೇಕೆಂದರು. ಗಾಂಧಿ ಹುಟ್ಟುಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸುವ ಜೊತೆಗೆ ಅವರ ಜೀವನ ಇತಿಹಾಸವನ್ನು ಓದಿ ತಿಳಿದು ಅವರ ಕನಸನ್ನು ಸಾಕಾರಗೊಳಿಸುವ ಮೂಲಕ ಅರ್ಥಪೂರ್ಣವಾಗಿ ಬದುಕಲು ಮುಂದಾಗ ಬೇಕೆಂದರು.
ಇಸ್ಲಾಂ ಧರ್ಮ ಗುರು ರಿಜ್ವಾನ್ ಶಾಂತಿ ಸಂದೇಶ ನೀಡಿ, ಎಲ್ಲಾ ಧರ್ಮದ ಮೊದಲ ಪಾಠ ಶಾಂತಿ ಸಹಬಾಳ್ವೆಯಾಗಿದ್ದು, ಇದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಶಾಂತಿ ಪಾಲನೆಯಿಂದ ಮಹಾತ್ಮ ಗಾಂಧಿ ಇಡೀ ಜಗತ್ತಿನ ಗಮನ ಸೆಳೆದಿದ್ದಾರೆ. ಎಲ್ಲರನ್ನು ಒಂದೇ ಸಮನಾಗಿ ಕಾಣುವುದರ ಜೊತೆಗೆ ಯಾರಿಗೂ ತೊಂದರೆಯಾಗದಂತೆ ನಡೆದುಕೊಳ್ಳುವುದನ್ನು ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಕೈಸ್ತ ಧರ್ಮ ಗುರು ರೆವರೆಂಡ್ ಜಾರ್ಜ್ ಮಾತನಾಡಿ, ಇರುವುದರಲ್ಲೇ ಸಂತೃಪ್ತಿಯಾಗಿರುವುದನ್ನು ಕಲಿತರೆ ಜೀವನದಲ್ಲಿ ಸಂತೋಷವಾಗಿರಲು ಸಾಧ್ಯ. ಇಂದಿನ ದಿನಗಳಲ್ಲಿ ಮನುಷ್ಯ ಹಣದ ವ್ಯಾಮೋಹದಿಂದ ತನ್ನ ಬದುಕನ್ನು ಕಡೆಗಣಿಸುತ್ತಿದ್ದಾನೆ.ಎಲ್ಲರೊಂದಿಗೆ ಪ್ರೀತಿ ಸ್ನೇಹದಿಂದ ಬದುಕುವುದನ್ನು ಬೆಳೆಸಿಕೊಳ್ಳಬೇಕು ಎಂದು ನುಡಿದರು. ಸ್ವಾತಂತ್ರ್ಯ ಹೋರಾಟಗಾರ ಎಚ್.ಎಂ.ಶಿವಣ್ಣ ಮಾತನಾಡಿ, ಇಂದಿನ ದಿನಗಳಲ್ಲಿ ರಾಷ್ಟ್ರ ಪ್ರೇಮ, ರಾಷ್ಟ್ರ ಭಕ್ತಿ ಕಾಣೆಯಾಗುತ್ತಿದೆ.ಸಮಾಜದ ಒಳಿತಿಗಾಗಿ ಕೆಲಸ ಮಾಡುವುದನ್ನು ರೂಢಿಸಿಕೊಳ್ಳಬೇಕು ಎಂದರು. ಇದೇ ವೇಳೆ ವಾರ್ತಾ ಇಲಾಖೆ ಹೊರ ತಂದಿರುವ ಮಹಾತ್ಮ ಗಾಂಧೀಜಿ ಅವರ ಕುರಿತು ಹಲವು ಗಣ್ಯ ಲೇಖಕರು ಬರೆದಿರುವ ಬಾಪು ನುಡಿನಮನ ಜನಪದ ಪುಸ್ತಕ, ಗಾಂಧೀಜಿ ಅವರ ಸಂಕ್ಷಿಪ್ತ ಜೀವನ ಚರಿತ್ರೆಯನ್ನು ಒಳಗೊಂಡ ನಮ್ಮ ಗಾಂಧಿ ತಾತ, ಗಾಂಧಿ ಎಂಬ ದಾರಿದೀಪಕ್ಕೆ ನಮನ ಎಂಬ ಕಿರು ಹೊತ್ತಿಗೆ, ಗಾಂಧಿ ಅವರ ಜೀವನ ಚರಿತ್ರೆ ಕುರಿತ ಸಿ.ಡಿ.ಯನ್ನು ಸಹ ಬಿಡುಗಡೆ ಮಾಡಲಾಯಿತು. ಶಾಸಕ ಎಚ್.ಎಸ್.ಪ್ರಕಾಶ್, ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ, ಜಿಪಂ ಅಧ್ಯಕ್ಷೆ ಬಿ.ಡಿ.ಅಂಬಿಕಾ ರಾಮಣ್ಣ, ನಗರಸಭೆ ಅಧ್ಯಕ್ಷೆ ಶ್ರೀವಿದ್ಯಾ, ಜಿಲ್ಲಾಧಿಕಾರಿ ವಿ.ಅನ್ಬುಕುಮಾರ್, ಜಿಲ್ಲಾ ಎಸ್ಪಿ ರವಿ ಚನ್ನಣ್ಣನವರ್, ಜಿಪಂ ಸಿಇಓ ಉಪೇಂದ್ರ ಪ್ರತಾಪಸಿಂಗ್, ಅಪರ ಜಿಲ್ಲಾಧಿಕಾರಿ ಡಾಗೋಪಾಲಕೃಷ್ಣ, ಐಎಎಸ್ ಅಧಿಕಾರಿ ರಾಮಚಂದ್ರ, ಉಪ ವಿಭಾಗಾಧಿಕಾರಿ ಶರತ್, ತಹಸೀಲ್ದಾರ್ ಮಂಜುನಾಥ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶ್ಯಾಮಲಾದೇವಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಶಂಕರ್, ನಗರಸಭೆ ಆಯುಕ್ತ ನಾಗಭೂಷಣ್, ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತ ರಮೇಶ್ ಹಾಗೂ ಮತ್ತಿತರ ಅಧಿಕಾರಿಗಳು ಮಹಾತ್ಮ ಗಾಂಧಿ ಅವರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿಗಳಿಂದ ಭಜನೆ ನಡೆಯಿತು. ಡಾ.ಗೋಪಾಲಕೃಷ್ಣ ಸ್ವಾಗತಿಸಿದರು. ರಮೇಶ್ ನಿರೂಪಿಸಿದರು. ಭೂ ದಾಖಲೆ ಉಪ ನಿರ್ದೇಶಕ ಬಿ.ಎಸ್.ವೇಣುಗೋಪಾಲ್ ವಂದಿಸಿದರು. ಕಾರ್ಯಕ್ರಮದ ನಂತರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಾರ್ತಾ ಇಲಾಖೆಯಿಂದ ಮಹಾತ್ಮ ಗಾಂಧಿ ಅವರ ಜೀವನ ಚರಿತ್ರೆ ಕುರಿತ ಸಾಕ್ಷ್ಯ ಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

