ಹಾಸನ

ಅನ್ನ ಭಾಗ್ಯ ಅಕ್ಕಿ ಕಾಳಸಂತೆಕೋರರ ಪಾಲು

Published On :

ಕ.ಪ್ರ. ವಾರ್ತೆ೤ ರಾಮನಾಥಪುರ೤ ಅ.3
ಸರ್ಕಾರ ಜನಸಾಮಾನ್ಯರಿಗೆ ಕೈಗೆಟಕುವಂತೆ 1 ರುಪಾಯಿ ಅಕ್ಕಿಯ ಅನ್ನ ಭಾಗ್ಯ ಯೋಜನೆ ಜಾರಿಗೆ ತಂದಿದ್ದು, ಅದು ಜನಸಾಮಾನ್ಯರಿಗೆ ಸರಿಯಾಗಿ ತಲುಪದೆ ಕಾಳಸಂತೆಕೋರರ ಪಾಲಾಗುತ್ತಿದೆ ಎಂದು ರಾಜ್ಯ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಎಚ್.ಇ.ಜಗದೀಶ್ ಹೊನಗಾನಳ್ಳಿ ಆರೋಪಿಸಿದ್ದಾರೆ.
ಈಚೆಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ್ಯಾಯ ಬೆಲೆ ಅಂಗಡಿಗಳತ್ತ ಬೊಟ್ಟು ಮಾಡಿ ತೋರಿಸುವಂತಿಲ್ಲ. ಇಲ್ಲಿ ವಾಸ್ತವವಾಗಿ ನ್ಯಾಯ ಬೆಲೆ ಅಂಗಡಿಗಳಿಗೆ ಸರಿಯಾದ ತೂಕದಲ್ಲಿ ಪಡಿತರ ಆಹಾರ ಪೂರೈಕೆ ಆಗುತ್ತಿಲ್ಲ ಎಂದು ಹೇಳಿದರು.
ಸರ್ಕಾರದಿಂದ ಬರುವಾಗ ಪಡಿತರ ಆಹಾರ ತೂಕ ಸರಿಯಾದ ರೀತಿಯನ್ನೇ ಹೊಂದಿದ್ದು, ಆಯಾ ಊರಿನ ಆಹಾರ ದಾಸ್ತಾನು ಮಳಿಗೆ ತಲುಪಿದ ನಂತರ ತೂಕದಲ್ಲಿ ಸಿಕ್ಕಾಪಟ್ಟೆ ವ್ಯತ್ಯಯವಾಗಿ ನ್ಯಾಯಬೆಲೆ ಅಂಗಡಿಗಳನ್ನು ತಲುಪುತ್ತಿರುವುದರಿಂದ ನ್ಯಾಯ ಬೆಲೆ ಅಂಗಡಿಯವರು ಜನಸಾಮಾನ್ಯರಿಗೆ ಸರಿಯಾಗಿ ವಿತರಿಸಲು ಸಾಧ್ಯವಾಗದೆ ಹೈರಾಣಾಗುತ್ತಿದ್ದಾರೆ ಎಂದು ತಿಳಿಸಿದರು.
ಮುಖ್ಯಮಂತ್ರಿ, ಆಹಾರ ಸಚಿವರು ಪಡಿತರ ಅನ್ನ ಭಾಗ್ಯದ ಅಕ್ಕಿಯನ್ನು ಒಂದು ಕೆ.ಜಿ ಕೂಡಾ ಮಾರುವಂತಿಲ್ಲ, ಅಂತವರಿಗೆ ಕಠಿಣ ಸಜೆ ಎಂತೆಲ್ಲಾ ಎಷ್ಟೇ ಹೇಳುತ್ತಿದ್ದರೂ ಅಧಿಕಾರಿಗಳು ಮಾತ್ರ ಎಂದಿನಂತೆ ವರ್ತಿಸುತ್ತಿದ್ದಾರೆ.  ಸರ್ಕಾರ ಇನ್ನೂ ಮುಂದಾದರು ಅನ್ನ ಭಾಗ್ಯದ ಅಕ್ಕಿ ಮತ್ತು ಪಡಿತರ ಆಹಾರ ಸೋರಿಕೆಯನ್ನು ತಡೆಗಟ್ಟಲು ಸಲುವಾಗಿ ಪ್ರತಿ ಗ್ರಾಮದ ಆಹಾರ ದಾಸ್ತಾನು ಮಳಿಗೆಗಳಲ್ಲಿ 24 ಗಂಟೆ ಕಾರ್ಯನಿರತ ಸಿಸಿ ಟಿವಿ ಅಳವಡಿಕೆ, ಪ್ರತಿ ನ್ಯಾಯ ಬೆಲೆ ಅಂಗಡಿಗಳಿಗೆ ಎಷ್ಟು ಆಹಾರ ಪೂರೈಸಲಾಗುತ್ತಿದೆ ಮತ್ತು ಇಲ್ಲಿಗೆ ಬರುವ ಆಹಾರದ ಬಗ್ಗೆ ಹೊರಗೆ ವಿವರ ನಾಮಫಲಕ ಇರಬೇಕು ಎಂದು ತಿಳಿಸಿದರು.
ತಹಸೀಲ್ದಾರ್ ಸಮಕ್ಷಮ ಆಹಾರ ದಾಸ್ತಾನು ಮಳಿಗೆಗಳಿಂದ ಪ್ರತಿ ನ್ಯಾಯ ಬೆಲೆ ಅಂಗಡಿಗಳಿಗೆ ನಿಗದಿ ತೂಕದಲ್ಲಿ ಪಡಿತರ ಆಹಾರ ಪೂರೈಸಬೇಕು. ಪಡಿತರ ಅನ್ನ ಭಾಗ್ಯ ಅಕ್ಕಿ ಇನ್ನಿತರೆ ಆಹಾರ ಪದಾರ್ಥವನ್ನು ಕದಿಯುವಾಗ  ಸಿಕ್ಕಿಬೀಳುವ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸ ಬೇಕು ಎಂದು ಒತ್ತಾಯಿಸಿದರು. ಈ ನಿಯಮಗಳನ್ನು ಸರ್ಕಾರ ಶೀಘ್ರ  ಜಾರಿಗೆ ತಂದಲ್ಲಿ ಮಾತ್ರ ಈ ರೀತಿಯ ಪಡಿತರ ಆಹಾರ ಸೋರಿಕೆ ತಡೆಯಲು ಸಾಧ್ಯ. ರಾಜ್ಯ ರೈತ ಸಂಘ ಮುಖ್ಯಮಂತ್ರಿ, ಆಹಾರ ಸಚಿವರಿಗೆ ಮನವಿ ಪತ್ರ ಸಲ್ಲಿಸಲಾಗುವುದು. ಇದನ್ನು ನಿರ್ಲಕ್ಷಿಸಿದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.